ಬಿಜೆಪಿಗೆ ಸೈನಿಕ 'ಕೈ' ಕೊಡ್ತಾರಾ?
ರಾಮನಗರ: ಬೊಂಬೆಯ ನಾಡು ಚನ್ನಪಟ್ಟಣದ ವಲಸೆ ಹಕ್ಕಿ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಗೂಡಿಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅವರು ಪೌರ ಸಂಸ್ಥೆಗಳ ಚುನಾವಣೆ ಉಮೇದುವಾರಿಕೆ ಅಂತ್ಯಕ್ಕೆ ಮುನ್ನವೇ ಸಚಿವ ಮತ್ತು ಶಾಸಕತ್ವ ತ್ಯಜಿಸಿ, ಬಿಜೆಪಿಗೆ ಗುಡ್ ಬೈ ಹೇಳುವ ಸಾಧ್ಯತೆ ನಿಚ್ಚಳವಾಗಿದೆ.
ಕಾಂಗ್ರೆಸ್ ನಾಯಕರೊಟ್ಟಿಗೆ ಯೋಗೇಶ್ವರ್ ನಡೆಸಿರುವ ಮಾತುಕತೆ ಫಲಪ್ರದವಾಗಿದೆ. ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ದೊರೆತಿದೆ. ಫೆ.20ಕ್ಕೆ ಕರೆದಿರುವ ಬೆಂಬಲಿಗರ ಸಭೆಯಲ್ಲಿ ಅವರು ನಿಲುವು ಪ್ರಕಟಿಸಲಿದ್ದು, ನಗರಸಭೆ ಚುನಾವಣೆಗೆ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್ ಚಿಹ್ನೆಯಡಿಯೇ ಕಣಕ್ಕೆ ಇಳಿಸಲಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಅನಿವಾರ್ಯ ಪರಿಸ್ಥಿತಿ: ರಾಜಕೀಯವಾಗಿ ತಾತ್ಕಾಲಿಕ ನಿವೃತ್ತಿ ಘೋಷಿಸಿದ್ದ ಯೋಗೇಶ್ವರ್ ಮುಂಬರುವ ವಿಧಾನಸಭೆಗೆ ಸ್ಪರ್ಧೆ ಇಲ್ಲ ಎನ್ನುವ ಘೋಷಣೆ ಮಾಡಿದ್ದರು. ಅವರ ಈ ನಿಲುವನ್ನು ಪ್ರತಿಪಕ್ಷಗಳು ಮಾತ್ರವಲ್ಲದೆ ಆಪ್ತೇಷ್ಟರೇ ಅನುಮಾನಿಸಿದ್ದರು. ಏತನ್ಮಧ್ಯೆ, ಅವರು ಕಾಂಗ್ರೆಸ್ ಸೇರ್ಪಡೆಗೆ ಅವಿರತ ಯತ್ನ ನಡೆಸುತ್ತಲೇ ಬಂದಿದ್ದಾರೆ.
ಇದ್ದಷ್ಟು ದಿನ ಅಧಿಕಾರ ಅನುಭವಿಸಿ, ವಿಧಾನಸಭೆ ಚುನಾವಣೆ ಘೋಷಣೆ ಸಂದರ್ಭ ಕಾಂಗ್ರೆಸ್ ಸೇರುವ ಇರಾದೆ ಹೊಂದಿದ್ದರು. ಅನಿರೀಕ್ಷಿತವಾಗಿ ಎದುರಾಗಿರುವ ಪೌರ ಸಂಸ್ಥೆಗಳ ಚುನಾವಣೆಯು ಯೋಗೇಶ್ವರ್ ಪಾಲಿಗೆ ಶೀಘ್ರ ಸ್ಪಷ್ಟ ನಿರ್ಧಾರ ತಳೆಯಬೇಕಾದ ಅನಿವಾರ್ಯತೆ ತಂದೊಡ್ಡಿದೆ.
ಪಕ್ಷಾಂತರದ್ದೇ ಚರ್ಚೆ: ಚನ್ನಪಟ್ಟಣದಲ್ಲೀಗ ಯೋಗೇಶ್ವರ್ ಪಕ್ಷಾಂತರದ ವಿಷಯ ಚರ್ಚೆಗೆ ಗ್ರಾಸವಾಗಿದೆ. ಸಚಿವರ ನಿಕಟವರ್ತಿಗಳು ಮತ್ತು ಬೆಂಬಲಿಗರ ಮಾತಿನ ವರಸೆಯನ್ನು ಗಮನಿಸಿದರೆ ಫೆ.20ಕ್ಕೆ ಕರೆಯಲಾಗಿರುವ ಸಭೆಗೆ ಮೊದಲೇ ಸಚಿವ ಮತ್ತು ಶಾಸಕ ಸ್ಥಾನಕ್ಕೆ ಯೋಗೇಶ್ವರ್ ರಾಜಿನಾಮೆ ಸಲ್ಲಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಸ್ವಕ್ಷೇತ್ರದ ನಗರಸಭೆಯ ಬಹುತೇಕ ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಯೋಗೇಶ್ವರ್ ಅಖೈರುಗೊಳಿಸಿದ್ದಾರೆ. ವಾರ್ಡ್ನಲ್ಲಿ ಪ್ರಚಾರನಿರತರಾಗಿರುವ ಸ್ಪರ್ಧಾಕಾಂಕ್ಷಿಗಳಿಗೆ ಯೋಗೇಶ್ವರ್ ಕಾಂಗ್ರೆಸ್ ಟಿಕೆಟ್ನ ಅಭಯ ನೀಡಿದ್ದಾರೆ. ಪ್ರಚಾರದಲ್ಲಿ ತೊಡಗಿದವರು ಇನ್ನೂ ಕಾಂಗ್ರೆಸ್ ಧ್ವಜ ಹಿಡಿಯದಿದ್ದರೂ ಆ ಪಕ್ಷದ ಹೆಸರು ಜಪಿಸುತ್ತಿದ್ದಾರೆ.
ಮೂಡಿದೆ ತಳಮಳ: ಯೋಗೇಶ್ವರ್ ತ್ಯಜಿಸಿದ ಬಳಿಕ ಕಾಂಗ್ರೆಸ್ ಮೂರಾಬಟ್ಟೆಯಾಗಿತ್ತು. ಇಷ್ಟಾಗಿಯೂ ಹಲವು ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದಲ್ಲೇ ಉಳಿದಿದ್ದರು. ಯೋಗೇಶ್ವರ್ ಕಾಂಗ್ರೆಸ್ಗೆ ಮರಳುತ್ತಿರುವ ಸುದ್ದಿಯು ನಾಲ್ಕು ವರ್ಷದಿಂದ ಪಕ್ಷ ನಿಷ್ಠೆ ಮೆರೆದಿದ್ದವರಿಗೆ ಬರಸಿಡಿಲಿನಂತೆ ಬಂದೆರಗಿದ್ದು, ಅವರಿಗೆ ತಳಮಳ ಮೂಡಿದೆ.
ಅನಿತಾ ಕುಮಾರಸ್ವಾಮಿ ಆಗಮನ ಬಳಿಕ ಚನ್ನಪಟ್ಟಣದಲ್ಲಿ ಜೆಡಿಎಸ್ ಮೈ ಕೊಡವಿ ಮೇಲೆದ್ದಿದೆ. ಗೆಲುವಿನ ಆಶಾ ಗೋಪುರ ಕಟ್ಟಿಕೊಂಡಿರುವ ದಳಪತಿಗಳು ಯೋಗೇಶ್ವರ್ ರಾಜಕೀಯ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಕ್ಷೇತ್ರದೆಲ್ಲೆಡೆ ನಡೆಯುತ್ತಲೇ ಇದೆ.
- ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

