ಜಿಲ್ಲಾಡಳಿತದಿಂದಲೇ ನೀತಿ ಸಂಹಿತೆ ಉಲ್ಲಂಘನೆ
ರಾಮನಗರ: ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಮಾತ್ರವೇ ಪಾಲಿಸಬೇಕೇ, ನೀತಿ ಸಂಹಿತೆ ಜಿಲ್ಲಾಡಳಿತ ಮತ್ತು ಅಧಿಕಾರಿಗಳಿಗೆ ಅನ್ವಯವಲ್ಲವೇ...
ಹೀಗೊಂದು ಪ್ರಶ್ನೆ ರಾಮನಗರ ಜಿಲ್ಲಾಡಳಿತ ಕಚೇರಿಯ ಒಳ ಮತ್ತು ಹೊರಾಂಗಣದಲ್ಲಿ ರಾರಾಜಿಸುವ ಪ್ರಚಾರ ಸಾಮಗ್ರಿಗಳನ್ನು ಗಮನಿಸಿದವರಿಗೆ ಸಹಜವಾಗಿಯೇ ಎದುರಾಗುತ್ತದೆ. ಜಿಲ್ಲಾಡಳಿತವೇ ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಕರಣ ಇಲ್ಲಿದೆ.
ಪೌರ ಸಂಸ್ಥೆಗಳ ಚುನಾವಣೆ ಅಧಿಸೂಚನೆ ಹೊರ ಬೀಳುತ್ತಿದ್ದಂತೆಯೇ ರಾಮನಗರ, ಚನ್ನಪಟ್ಟಣ ನಗರಸಭೆಗಳು, ಕನಕಪುರ ಮತ್ತು ಮಾಗಡಿ ಪುರಸಭೆಗಳ ವ್ಯಾಪ್ತಿಯ ಎಲ್ಲ ಪ್ರಚಾರ ಸಾಮಗ್ರಿಗಳನ್ನು ಅಧಿಕಾರಿಗಳು ಕಿತ್ತೊಗೆದು, ಕಸದೊಟ್ಟಿಗೆ ವಿಲೇವಾರಿ ಮಾಡಿದ್ದಾರೆ.
ಆದರೆ, ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭಾವಚಿತ್ರದೊಂದಿಗೆ ಅಟಲ್ ಜೀ ಜನಸ್ನೇಹಿ ಕೇಂದ್ರದ ಲೋಕಾರ್ಪಣೆಯ ಫ್ಲೆಕ್ಸ್ ಮತ್ತು ಜಗದೀಶ್ ಶೆಟ್ಟರ್ ಜತೆಗೆ ಸಚಿವ ಸುರೇಶ್‌ಕುಮಾರ್ ಭಾವಚಿತ್ರವಿರುವ ಸಕಾಲದ ಪ್ರಚಾರ ಸಾಮಗ್ರಿ ಈಗಲೂ ರಾರಾಜಿಸುತ್ತಿವೆ.
ಇಷ್ಟು ಮಾತ್ರವಲ್ಲದೆ, ಜಿಲ್ಲಾಡಳಿತ ಕಚೇರಿಯ ಮುಖ್ಯದ್ವಾರ ಪ್ರವೇಶದ ಎಡ ಭಾಗದಲ್ಲೇ ಇರುವ ಸಕಾಲ ಸಹಾಯವಾಣಿ ಮತ್ತು ಸ್ವೀಕೃತಿ ಕೌಂಟರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಭಾವಚಿತ್ರದೊಂದಿಗೆ ಪ್ರಚಾರ ಫಲಕವಿದೆ. ಅದರಲ್ಲಿನ್ನೂ ಸದಾನಂದಗೌಡ ಅವರೇ ಮುಖ್ಯಮಂತ್ರಿ ಎಂಬುದಾಗಿದೆ.
ಮುಖ್ಯಮಂತ್ರಿ ಬದಲಾಗಿ ಆರೇಳು ತಿಂಗಳು ಕಳೆದರೂ ಫಲಕ ಬದಲಿಸುವ ಗೋಜಿಗೆ ಜಿಲ್ಲಾಡಳಿತ ಮುಂದಾಗಿಯೇ ಇಲ್ಲ.
ಕಡೇಪಕ್ಷ ಚುನಾವಣೆ ಕಾಲದಲ್ಲಾದರೂ ಪ್ರಚಾರ ಸಾಮಗ್ರಿಗಳನ್ನು ತೆರೆದಿಟ್ಟು ನೀತಿ ಸಂಹಿತೆ ಪಾಲಿಸುವ ಗೋಜಿಗೂ ಹೋಗಿಲ್ಲ. ಇದು, ರಾಮನಗರದ ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಕೈಗನ್ನಡಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

