ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್ ಬಿ ಫಾರಂಗೆ ಯೋಗೇಶ್ವರ್ ಬೆಂಬಲಿಗರ ಅರ್ಜಿ!

Published On :

ರಾಮನಗರ/ಚನ್ನಪಟ್ಟಣ:     ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಮುಂದಿನ ರಾಜಕೀಯ ನಡೆ ನಿರ್ಧಾರಕ್ಕೆ ಮುನ್ನವೇ ಅವರ ಬೆಂಬಲಿಗರಾದ ಚನ್ನಪಟ್ಟಣ ನಗರಸಭೆ ಅಧ್ಯಕ್ಷೆ ರೇಷ್ಮಾಬಾನು, ಉಪಾಧ್ಯಕ್ಷ ಕೆ.ಎಲ್.ಕುಮಾರ್ ಸಹಿತ 8 ಮಂದಿ ಪುರಪಿತೃಗಳು ಕಾಂಗ್ರೆಸ್ ಬಿ ಫಾರಂಗಾಗಿ ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.  
ಯೋಗೇಶ್ವರ್ ಚಿತ್ತ ಕಾಂಗ್ರೆಸ್‌ನತ್ತ ನೆಟ್ಟಿದ್ದು, ಪಕ್ಷ ಸೇರ್ಪಡೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಸಚಿವ ಮತ್ತು ಶಾಸಕ ಸ್ಥಾನ ತ್ಯಜಿಸಿ, ಕಾಂಗ್ರೆಸ್ ಸೇರ್ಪಡೆಗೊಳ್ಳಲು ಬಯಸಿರುವ ಯೋಗೇಶ್ವರ್ ನಾಳೆ(ಫೆ.20) ಹೊಂಗನೂರು ಬಳಿ ಬೆಂಬಲಿಗರ ಸಭೆ ಕರೆದಿದ್ದಾರೆ.
ಇತ್ತ, ಸಚಿವರ ಕಟ್ಟಾ ಬೆಂಬಲಿಗರು ಈಗಾಗಲೇ ಕಾಂಗ್ರೆಸ್ ಬಿ ಫಾರಂಗಾಗಿ ಅರ್ಜಿ ಸಲ್ಲಿಸಿರುವುದನ್ನು ಗಮನಿಸಿದರೆ ಸಭೆಯ ತೀರ್ಮಾನ ಸಾಂಕೇತಿಕವಷ್ಟೇ. ಮುಂದಿನ ರಾಜಕೀಯ ನಡೆ ಬಗ್ಗೆ ಯೋಗೇಶ್ವರ್ ಮೊದಲೇ ನಿರ್ಧರಿಸಿಕೊಂಡಿದ್ದಾರೆ ಎನ್ನುವ ಅಂಶ ಸ್ಪಷ್ಟವಾಗಲಿದೆ.
ಅನೂರ್ಜಿತದ ತೂಗುಕತ್ತಿ: ಚನ್ನಪಟ್ಟಣ ಪುರಸಭೆಯಲ್ಲಿ ಬಿಜೆಪಿ ಖಾತೆಯನ್ನೇ ತೆರೆದಿರಲಿಲ್ಲ. ಕಾಂಗ್ರೆಸ್ 14 ಸದಸ್ಯ ಪೈಕಿ 7 ಮಂದಿ ಯೋಗೇಶ್ವರ್ ಅವರನ್ನು ಹಿಂಬಾಲಿಸಿದ್ದರು. ಜೆಡಿಎಸ್ ಸದಸ್ಯೆ ರೇಷ್ಮಾಬಾನು ಸಹಿತ ಇಬ್ಬರು ಸದಸ್ಯರು ಯೋಗೇಶ್ವರ್ ಜತೆ ಗುರುತಿಸಿಕೊಂಡರೆ, ಮತ್ತಿಬ್ಬರು ಚುನಾವಣೆಯಲ್ಲಿ ಗೈರಾಗಿ ಪರೋಕ್ಷ ಬೆಂಬಲ ನೀಡಿದ್ದರು.
ಯೋಗೇಶ್ವರ್ ಬೆಂಬಲಕ್ಕೆ ನಿಂತ ಪುರಪಿತೃಗಳ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸದಸ್ಯತ್ವ ಅನೂರ್ಜಿತ ಪ್ರಕರಣ ದಾಖಲಿಸಿದ್ದವು. ಇನ್ನೇನು ನಗರಸಭೆ ಆಡಳಿತಾವಧಿಯೇ ಮುಕ್ತಾಯವಾಗುತ್ತಿದ್ದರೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣವೇ ಇತ್ಯರ್ಥಗೊಂಡಿಲ್ಲ.
ಜೆಡಿಎಸ್ ಚಿಹ್ನೆಯಡಿ ಕಳೆದ ಬಾರಿ ಗೆದ್ದಿದ್ದ ರೇಷ್ಮಾಬಾನು ಹಾಲಿ ಅಧ್ಯಕ್ಷೆ ಮತ್ತು ಸದಸ್ಯೆಯಾಗಿದ್ದುಕೊಂಡೇ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ. ಕಾಂಗ್ರೆಸ್ ಬಿ ಫಾರಂ ಬಯಸಿರುವ ಯೋಗೇಶ್ವರ್ ಬೆಂಬಲಿತ ಉಪಾಧ್ಯಕ್ಷ ಕುಮಾರ್ ಸಹಿತ 7 ಮಂದಿ  ಪುರಪಿತೃಗಳು ಕಾಂಗ್ರೆಸ್‌ಗೆ ಕೈ ಕೊಟ್ಟಿದ್ದವರೇ.
ಬೆಂಬಲಿಗರ ಗೌಪ್ಯ ಸಭೆ: ಯೋಗೇಶ್ವರ್ ಅವರಿಗೆ ಒಂದೊಮ್ಮೆ ಕಾಂಗ್ರೆಸ್ ಕದ ಮುಚ್ಚಿ, ತಮ್ಮೆಲ್ಲರಿಗೆ ಟಿಕೆಟ್ ನಿರಾಕರಿಸಿದರೆ ಮುಂದೇನು ಎನ್ನುವ ಚಿಂತೆಯು ಸಚಿವರ ಬೆಂಬಲಿಗರನ್ನು ಕಾಡುತ್ತಿದೆ. ಈ ಕಾರಣದಿಂದಲೇ ಯೋಗೇಶ್ವರ್ ಬೆಂಬಲಿತ ಪುರಪಿತೃಗಳು ಗೌಪ್ಯ ಸಭೆ ನಡೆಸಿ, ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಮುಂದಿನ ರಾಜಕಾರಣದ ಸಾಧ್ಯಾಸಾಧ್ಯತೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದೆ. ಕಾಂಗ್ರೆಸ್ ಟಿಕೆಟ್ ಲಭ್ಯವಾಗದಿದ್ದಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ಇಳಿಯುವುದೋ ಅಥವಾ ಯೋಗೇಶ್ವರ್ ಬ್ಯಾನರ್‌ನಡಿ ಪಕ್ಷೇತರರಾಗಿ ಹೋರಾಟ ನಡೆಸುವುದೋ ಎನ್ನುವ ಕುರಿತು ಅಭಿಪ್ರಾಯಗಳು ಮೂಡಿವೆ ಎನ್ನಲಾಗಿದೆ.

112 ವಾರ್ಡ್‌ಗಳಿಗೆ ಕೆಜೆಪಿ ಅಭ್ಯರ್ಥಿಗಳು
ರಾಮನಗರ: ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ 112 ವಾರ್ಡ್‌ಗಳಿಗೆ ಕರ್ನಾಟಕ ಜನತಾ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಫೆ. 21ರಂದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ಪಕ್ಷದ ಮುಖಂಡ ಎಂ. ರುದ್ರೇಶ್ ಹೇಳಿದರು.
ಮಾಗಡಿ ಪುರಸಭೆ ಮತ್ತು ರಾಮನಗರ ನಗರಸಭೆಯ ಎಲ್ಲ ವಾರ್ಡ್‌ಗಳ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಚನ್ನಪಟ್ಟಣ ಮತ್ತು ಕನಕಪುರದಲ್ಲೂ ಎಲ್ಲ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  
ಅಭ್ಯರ್ಥಿಗಳ ಆಯ್ಕೆ ಅಧಿಕಾರವನ್ನು ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಕಿಜರ್ ಪಾಷ ಮತ್ತು ಜಿಲ್ಲಾಧ್ಯಕ್ಷ ಎಸ್.ಆರ್. ನಾಗರಾಜ್ ಅವರಿಗೆ ವಹಿಸಲಾಗಿದೆ. ಪಕ್ಷವು ಈ ಜಿಲ್ಲೆಯ ಉಸ್ತುವಾರಿಯನ್ನು ತಮಗೆ ವಹಿಸಿದೆ ಎಂದು ಹೇಳಿದರು.  
ಪಕ್ಷ ಸೇರ್ಪಡೆ ಸಂಭವ: ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಹಲವು ಮುಖಂಡರು ಕೆಜೆಪಿ ಸೇರ್ಪಡೆಗೆ ಒಲವು ತೋರಿದ್ದಾರೆ. ಮಾಗಡಿ ಪುರಸಭೆಯ ನಾಲ್ವರು ಜೆಡಿಎಸ್ ಪುರಪಿತೃಗಳು ಕೆಜೆಪಿಯಿಂದ ಸ್ಪರ್ಧೆ ಬಯಸಿದ್ದು, ಅಲ್ಪ ಸಂಖ್ಯಾತರು ತಮ್ಮ ಪಕ್ಷದತ್ತ ಮುಖ ಮಾಡಿದ್ದಾರೆ ಎಂದು ರುದ್ರೇಶ್ ತಿಳಿಸಿದರು.
ಪದಾಧಿಕಾರಿಗಳ ಪಟ್ಟಿ: ಕೆಜೆಪಿ ಜಿಲ್ಲಾಧ್ಯಕ್ಷರಾಗಿ ಎಸ್.ಆರ್. ನಾಗರಾಜ್ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಕನಕಪುರದ ಶಿವಲಿಂಗಯ್ಯ, ಅಂಜನಾಪುರದ ಚಂದ್ರಶೇಖರ್, ನೇರಳೂರು ನಾಗರಾಜ್, ಪ್ರಧಾನ ಕಾರ್ಯದರ್ಶಿಗಳಾಗಿ ಮಾಗಡಿಯ ಮಹೇಶಯ್ಯ ಮತ್ತು ಕನಕಪುರದ ಶ್ರೀನಿವಾಸ್, ಹಾರೋಹಳ್ಳಿಯ ನಾಗರಾಜ್ ಆಯ್ಕೆಯಾಗಿದ್ದಾರೆ ಎಂದರು. ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಕಿಜರ್ ಪಾಷ, ಜಿಲ್ಲಾಧ್ಯಕ್ಷ ಎಸ್.ಆರ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಹೇಶಯ್ಯ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.