ನಾಳೆ ಕೆಂಪೇಗೌಡ ಜಯಂತ್ಯುತ್ಸವ
ಮಾಗಡಿ: ಕೆಂಪೇಗೌಡ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಫೆ.1 ರಂದು ಬೆಳಿಗ್ಗೆ 10 ಗಂಟೆಗೆ ಸರ್ವಧರ್ಮ ಪ್ರಿಯ ನಾಡ ಪ್ರಭು ಕೆಂಪೇಗೌಡರ 503ನೇ ಜಯಂತ್ಯುತ್ಸವ ಸಮಾರಂಭ ಇಲ್ಲಿನ ಐತಿಹಾಸಿಕ ಕೆಂಪೇಗೌಡ ಕೋಟೆ ಮೈದಾನದಲ್ಲಿ ನಡೆಯಲಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್.ಎಂ.ಕೃಷ್ಣಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೋವಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿ ಸಭೆ
ಕನಕಪುರ: ಕನಕಪುರದ ರೋಟರಿ ಭವನದಲ್ಲಿ ಕರ್ನಾಟಕ ಪ್ರದೇಶ ಬೋವಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಮಾವೇಶದ ಉದ್ಘಾಟನೆಯನ್ನು ರಾಜ್ಯ ಉಪಾಧ್ಯಕ್ಷ ಗಂಗರಾಜು ನೆರವೇರಿಸಿದರು. ರಾಜ್ಯಾಧ್ಯಕ್ಷ ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬೋವಿ ಸಮುದಾಯದ ಕನಕಪುರ ತಾಲೂಕು ಘಟಕದ ರಚನೆಯನ್ನು ನೆರವೇರಿಸಿ ಅಲ್ಪ ಸಂಖ್ಯೆಯಲ್ಲಿರುವ ಬೋವಿ ಜನರನ್ನು ಸಂಘಟಿಸಿ,ಸಮುದಾಯದ ಅಭಿವೃದ್ಧಿಗೆ ಒಮ್ಮತದಿಂದ ಶ್ರಮಿಸಬೇಕು, ಎಂದು ಚಿನ್ನಸ್ವಾಮಿ ಕರೆ ನೀಡಿದರು. ಕನಕಪುರ ಶಾಖೆಯ ಹಂಗಾಮಿ ಅಧ್ಯಕ್ಷರಾಗಿ ಕನಕರಾಜು, ಉಸ್ತುವಾರಿ ಪದಾಧಿಕಾರಿಗಳಾಗಿ ಗೋವಿಂದರಾಜುರವರನ್ನು ನೇಮಿಸಲಾಯಿತು. ರಾಜ್ಯ ಉಪಾಧ್ಯಕ್ಷ ಕಳವಂಚಿ ವೆಂಕಟೇಶ್, ಕೆ.ಸಿ.ಮುನಿಯಪ್ಪ, ರಾಜ್ಯಸಂಘಟನಾ ಕಾರ್ಯದರ್ಶಿ ಶಾಂತರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ನಾಗರಾಜು, ಗ್ರಾಪಂಅಧ್ಯಕ್ಷ ಅಂಜನಪ್ಪ, ಮರಿಯಮ್ಮ,ದೊಡ್ಡಯ್ಯ, ರಾಜು, ರಾಮಚಂದ್ರಯ್ಯ, ಪಟೇಲಪ್ಪ ಪಾಲ್ಗೊಂಡಿದ್ದರು.
ಕ್ರೀಡಾ ಸಾಧಕರಿಗೆ ಗೌರವಕ್ಕೆ ನಿರ್ಧಾರ
ರಾಮನಗರ: 2012-13ನೇ ಸಾಲಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಕ್ರೀಡಾ ಸಾಧಕರನ್ನು ಗೌರವಿಸಲು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ನಿರ್ಧರಿಸಿದೆ. 2012ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಲಾಗುವುದು. ಕ್ರೀಡಾ ಪಟುಗಳು ತಮ್ಮ ವೈಯುಕ್ತಿಕ ವಿವರ, ಕ್ರೀಡಾ ಸಾಧನೆಗೆ ಸಂಬಂಧಿಸಿದ ಮಾಹಿತಿಗಳೊಂದಿಗೆ ಅರ್ಜಿಯನ್ನು ಫೆ.2ರೊಳಗಾಗಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ರಾಮನಗರ. ಇಲ್ಲಿಗೆ ತಲುಪಿಸುವುದು. ಮಾಹಿತಿಗೆ ದೂ080-2724655 ಸಂಪರ್ಕಿಸಿ.
ಇಂದು ಉಪನ್ಯಾಸ
ಕನಕಪುರ: ಕರ್ನಾಟಕ ಗಮಕ ಕಲಾ ಪರಿಷತ್ತು, ವಚನ ಸಾಹಿತ್ಯ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ವರಕವಿ ಡಾ.ದ.ರಾ.ಬೇಂದ್ರೆ ಮತ್ತು ಕೋ.ಚನ್ನಬಸಪ್ಪ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜ.31 ರಂದು ಸಂಜೆ 6 ಗಂಟೆಗೆ ಕನಕಪುರದ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಡಾ.ಮಲ್ಲಿಕಾರ್ಜುನ ಛನಬ್ಬಿ ಯವರಿಂದ ಕೋ.ಚೆ.ಕುರಿತು ಉಪನ್ಯಾಸ, ಎಲ್ಲೇಗೌಡರಿಂದ ಡಾ.ದ.ರಾ.ಬೇಂದ್ರೆ ಕುರಿತು ಉಪನ್ಯಾಸ ಹಾಗೂ ಗಮಕಿ ವಿಜಯಾಶಂಕರ್ ತಂಡದವರಿಂದ ಬೇಂದ್ರೆ ಗೀತಗಾಯನ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರಾಜ್ಯಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಕೋರಿದ್ದಾರೆ.
ಕಾವ್ಯವಾಚನ ಕಾರ್ಯಕ್ರಮ
ಕನಕಪುರ: ಕರ್ನಾಟಕ ಗಮಕಕಲಾ ಪರಿಷತ್ತು ರಾಮನಗರ ಜಿಲ್ಲಾಘಟಕ ವತಿಯಿಂದ ಶಂಕರ ವಿಜಯ ಕಾವ್ಯವಾಚನ ಕಾರ್ಯಕ್ರಮ ಕನಕಪುರದ ಕೋಟೆ ಶ್ರೀಶಂಕರ ಮಠದ ಸಭಾಂಗಣದಲ್ಲಿ ನಡೆಯಿತು. ವಿದೂಷಿ ಕಮಲಾ ಶ್ರೀನಿವಾಸ್ ಗಮಕವಾಚನ ನೆರವೇರಿಸಿದರು. ಸಾವಿತ್ರಿ ಜಾಗೀರ್ದಾರ್ ಕಾವ್ಯವ್ಯಾಖ್ಯಾನ ಮಾಡಿದರು. ಜಿಲ್ಲಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾವ್ಯವಾಚನದಲ್ಲಿ ಶಂಕರಾಚಾರ್ಯರ ಜೀವನದ ಆಯ್ದ ಭಾಗಗಳ ಕಾವ್ಯವಾಚನ ವ್ಯಾಖ್ಯಾನ ನಡೆಯಿತು. ರಾಜ್ಯಾಧ್ಯಕ್ಷ ಎಲ್ಲೇಗೌಡ ಮಾತನಾಡಿ, ವಿಶ್ವಸಾಹಿತ್ಯದಲ್ಲಿ ಮಹಾಕಾವ್ಯ ಪರಂಪರೆಯೇ ನಶಿಸಿ ಹೋಗುತ್ತಿರಬೇಕಾದರೆ, ಕನ್ನಡ ಭಾಷೆಯಲ್ಲಿ ಇಂದಿಗೂ ಹಲವಾರು ಮಹಾಕಾವ್ಯಗಳು ಸೃಷ್ಟಿಯಾಗುತ್ತಿವೆ. ಇತ್ತೀಚೆಗೆ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಕುರಿತು ಮಹಾಕಾವ್ಯ ರಚನೆಯಾಗಿದೆ, ಎಂದು ಹೇಳಿದರು. ಶ್ರೀಮಠದ ಪ್ರಕಾಶಮೂರ್ತಿ ವಂದನೆಗಳನ್ನು ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಧರಣಿ
ದೊಡ್ಡಬಳ್ಳಾಪುರ: ಸರ್ಕಾರದ ಬಂಡವಾಳಶಾಹಿ ಪರ ನೀತಿಯನ್ನು ವಿರೋಧಿಸಿ, ದಲಿತ-ಹಿಂದುಳಿದ ವರ್ಗಗಳಿಗೆ ವ್ಯವಸ್ಥಿತವಾಗಿ ವಂಚಿಸುತ್ತಿರುವ ಹುನ್ನಾರಗಳ ವಿರುದ್ಧ ಜ.31ರ ಗುರುವಾರ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ರಾಜು ಸಣ್ಣಕ್ಕಿ ಮತ್ತು ಮಹೇಶ್ ಹೇಳಿದ್ದಾರೆ.
ಗಿರಿಜನರ ಸ್ಥಿತಿ ಶೋಚನೀಯ: ಜಿಪಂ ಮಾಜಿ ಉಪಾಧ್ಯಕ್ಷೆಮಾದೇವಿ ವಿಷಾದ
ಕನಕಪುರ: ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಗಿರಿಜನರ ಸ್ಥಿತಿ ಶೋಚನೀಯವಾಗಿದೆ. ಇಂದಿಗೂ ಅನೇಕ ಹಾಡಿಗಳಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಮೂಲಭೂತ ಸವಲತ್ತುಗಳನ್ನೇ ತಲುಪಿಸಲಾಗಿಲ್ಲ ಎಂದು ಜಿಪಂ ಮಾಜಿ ಉಪಾಧ್ಯಕ್ಷೆ ಮಾದೇವಿ ವಿಶಾದ ವ್ಯಕ್ತಪಡಿಸಿದ್ದಾರೆ. ಅವರು ಕನಕಪುರ ತಾಲೂಕು ಕೂತಗಾನಹಳ್ಳಿ ಗ್ರಾಮದಲ್ಲಿ ಗಿರಿಜನ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಗಿರಿಜನರ ಜಾಗೃತಿ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಕಾಡಂಚಿನಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಅನುಕೂಲವಾಗುವಂತೆ ಅರಣ್ಯಹಕ್ಕು ಅಧಿನಿಯಮವನ್ನು ರಾಜ್ಯಸರ್ಕಾರ ಅನುಷ್ಠಾನ ಗೊಳಿಸಬೇಕು, ಅವರಿಗೆ ಆರೋಗ್ಯ ಶಿಕ್ಷಣ ಉದ್ಯೋಗಗಳ ಸವಲತ್ತುಗಳನ್ನು ಕಲ್ಪಿಸಿಕೊಡಬೇಕು, ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಅಭಿವೃದ್ಧಿ ಫಥದಲ್ಲಿ ಮುನ್ನಡೆಯಲು ಸಹಕರಿಸಬೇಕು ಎಂದು ಮಾದೇವಿ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಮಾಜಸೇವಕ ಮರಸಪ್ಪರವಿ ಮಾತನಾಡಿದರು. ಜಿಲ್ಲಾಧ್ಯಕ್ಷ ಶಿವಣ್ಣ, ಶ್ರೀನಿವಾಸ್, ಯುವಮುಖಂಡ ಕೃಷ್ಣಮೂರ್ತಿ, ತಾ.ಅಧ್ಯಕ್ಷ ದೊಡ್ಡಮಾದೇ ಗೌಡ, ತಾಪಂ ಸದಸ್ಯೆ ಸರೋಜಮ್ಮ, ಗ್ರಾಪಂ ಸದಸ್ಯೆ ಮಂಜಮ್ಮ,ಚಿಕ್ಕವೀರಯ್ಯ, ಪುಟ್ಟಮಾದಯ್ಯ, ಬೋರೇಗೌಡ, ಕೃಷ್ಣಪ್ಪ ಪಾಲ್ಗೊಂಡಿದ್ದರು.
ಶ್ರೀಗಾಯತ್ರಿ ನೇಕಾರರ ಸಹಕಾರ ಸಂಘ ಅಸ್ತಿತ್ವಕ್ಕೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಭುವನೇಶ್ವರಿ ನಗರ, ಸಂಜಯನಗರ, ವಿವೇಕಾನಂದ ನಗರ ಬಡಾವಣೆ ವ್ಯಾಪ್ತಿಯಲ್ಲಿ ಸಹಕಾರ ಸಂಘಗಳ ನಿಯಮಾವಳಿ ಅನ್ವಯ ಶ್ರೀಗಾಯತ್ರಿ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಸಹಕಾರ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ. ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನಿರ್ದೇಶಕ ಮಂಡಲಿ ಕೂಡ ರಚನೆಯಾಗಿದ್ದು ಎನ್.ಅಶ್ವತ್ಥ್ (ಅಧ್ಯಕ್ಷ), ದಾಮೋಜಿ (ಉಪಾಧ್ಯಕ್ಷ), ನಿರ್ದೇಶಕರಾಗಿ ಭೀಮರಾಜು, ಡೇಕಪ್ಪ, ಹನುಮಂತ, ಈರಪ್ಪ, ಪ್ರೇಮಾಬಾಯಿ (ಮಹಿಳಾ ಮೀಸಲು), ಕೆ.ಎನ್. ತಿಪ್ಪೇಶಿ, ಗೋವಿಂದರಾಜು (ಪರಿಶಿಷ್ಟ ಮೀಸಲು). ಡಿ.ವಿ.ನಾಗರತ್ನ (ಕಾರ್ಯನಿರ್ವಾಹಕ ಅಧಿಕಾರಿ) ಆಯ್ಕೆಯಾಗಿದ್ದಾರೆ.
ರಾಮನಗರ: ಕಾಂಗ್ರೆಸ್ ಟಿಕೆಟ್ ಬಯಸಿ ಮರಿದೇವರು ಅರ್ಜಿ
ರಾಮನಗರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಟಿಕೆಟ್ ಬಯಸಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮರಿದೇವರು ಅರ್ಜಿ ಸಲ್ಲಿಸಿದ್ದು, ಸದ್ಯದ ಮಟ್ಟಿಗೆ ರಾಮನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇವರೊಬ್ಬರೇ. ಅರ್ಜಿ ಸಲ್ಲಿಕೆ ವೇಳೆ ಜಿ.ಪಂ. ಮಾಜಿ ಸದಸ್ಯ ವಿ.ಎಚ್. ರಾಜು, ತಾ.ಪಂ. ಮಾಜಿ ಅಧ್ಯಕ್ಷ ಕಾಂತರಾಜ್ ಪಟೇಲ್, ಚಂದ್ರಶೇಖರ್, ಆರಿಫ್ ಖುರೇಷಿ, ಜಯಣ್ಣ, ಬಾಬು ಸೇಠ್, ಅಮ್ಜದ್ ಸಾಹುಕಾರ್, ನಾಗರಾಜು, ಪಾರ್ವತಮ್ಮ, ಫೈರೋಜ್ ಪಾಷ, ಬಾಷಿರ್, ರಾಮಯ್ಯ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

