ವಿನಾಶದಂಚಿಗೆ ತಲುಪಿರುವ ಜಾನಪದ ಕಲೆ ಪುನರುತ್ಥಾನ ಅಗತ್ಯ
ರಾಮನಗರ: ವಿನಾಶದಂಚಿಗೆ ತಲುಪಿರುವ ಜಾನಪದ ಕಲೆಗಳ ಪುನುರತ್ಥಾನದ ಜತೆಗೆ ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯ ಎಂದು ಶಾಸಕ ಕೆ.ರಾಜು ಅಭಿಪ್ರಾಯಪಟ್ಟರು.
ನಗರದ ಹೊರ ವಲಯದಲ್ಲಿರುವ ಜಾನಪದ ಲೋಕದಲ್ಲಿ ಧಾರವಾಡದ ರಾಜ್ಯ ಬಾಲವಿಕಾಸ ಅಕಾಡೆಮಿ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗುರುವಾರ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ ವಿಕಾಸ ಅಕಾಡೆಮಿಯು ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಈ ಹಿಂದೆಯೂ ಆಯೋಜಿಸಿತ್ತು. ಎರಡನೇ ಹಬ್ಬವಾದ ಈ ಕಾರ್ಯಕ್ರಮ ವೈವಿಧ್ಯಮಯವಾಗಿದೆ. ಕಲೆಗಳನ್ನು ಉಳಿಸಲು ಮತ್ತು ಮಕ್ಕಳನ್ನು ಪ್ರೋತ್ಸಾಹಿಸಲು ಇದು ಸೂಕ್ತ ವೇದಿಕೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿನ್ನೂ ಜಾನಪದ ಕಲೆ ಹಾಸುಹೊಕ್ಕಾಗಿದ್ದು, ಈ ಕಲೆಯನ್ನು ಮೈಗೂಡಿಸಿಕೊಂಡ ಮಕ್ಕಳು ನಮ್ಮಲ್ಲಿ ಅನೇಕರಿದ್ದಾರೆ. ನಗರ ಮತ್ತು ಪಟ್ಟಣದ ಮಕ್ಕಳಿಗಿಂತ ಪ್ರತಿಭಾವಂತರಾಗಿರುವ ಗ್ರಾಮೀಣ ಮಕ್ಕಳಿಗೆ ಸೂಕ್ತ ಉತ್ತೇಜನ ನೀಡಿದಲ್ಲಿ ಅವರು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸುವರು ಎಂದು ರಾಜು ತಿಳಿಸಿದರು.
ರಾಜ್ಯಾದ್ಯಂತ ಹಬ್ಬ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿ, ಪ್ರೋತ್ಸಾಹ ನೀಡಲು ಕಳೆದ ಒಂದು ವರ್ಷದಿಂದ ಈ ಮಕ್ಕಳ ಹಬ್ಬವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. 15 ವರ್ಷದೊಳಗಿನ ಒಂದು ಕೋಟಿಗೂ ಅಧಿಕ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ್ ಟೆಂಗಿನಕಾಯಿ ವಿವರಿಸಿದರು.
ಮಕ್ಕಳ ಹಬ್ಬ ಕಾರ್ಯಕ್ರಮಕ್ಕೆ ಬಹುತೇಕ ಜಿಲ್ಲೆಗಳಲ್ಲಿ ಸೂಕ್ತ ಸಹಕಾರ, ಪ್ರೋತ್ಸಾಹ ದೊರೆತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳು ಮತ್ತಷ್ಟು ಸಹಕಾರ ನೀಡಿದ್ದೇ ಆದಲ್ಲಿ ಈ ಕಾರ್ಯಕ್ರಮವನ್ನು ಇನ್ನೂ ವಿಶಿಷ್ಟವಾಗಿ ಆಚರಿಸಲಾಗುವುದು ಎಂದು ಅವರು ಹೇಳಿದರು.
ಜಿ.ಪಂ. ಪ್ರಭಾರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಿ.ಸಿದ್ದರಾಮಯ್ಯ ಮಾತನಾಡಿ, ಮಕ್ಕಳ ಪ್ರತಿಭೆ ಹೊರ ಹೊಮ್ಮಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಉತ್ತಮ ಕಲಾವಿದರನ್ನು ರೂಪಿಸಲು ಸಾಧ್ಯವಿದೆ. ಅಂತೆಯೇ ನಮ್ಮ ಕಲೆಗಳನ್ನು ಉಳಿಸಿ, ಬೆಳೆಸುವ ಕೆಲಸವೂ ಆಗಲಿದೆ ಎಂದು ತಿಳಿಸಿದರು. ಧಾರವಾಡದ ರಾಜ್ಯ ಬಾಲ ವಿಕಾಸ ಅಕಾಡೆಮಿ ಸದಸ್ಯ ಡಾ.ಪ್ರದೀಪ್ ಭೂಸನೂರ್ಮಠ್, ಮಹಿಳಾ ಮತ್ತು ಮಕ್ಕಳ ರಕ್ಷಣಾಧಿಕಾರಿ ಕೆ.ರಾಧಾ ಜನಪದ ಲೋಕದ ಕ್ಯುರೇಟರ್ ಡಾ.ಕುರುವ ಬಸವರಾಜು ಭಾಗವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಸ್.ಎಂ.ಚಂದ್ರ ಸ್ವಾಗತಿಸಿದರು.
ಪೋಷಕರಿಗೆ ಕಿವಿಮಾತು
ಐದರಿಂದ ಹದಿನೈದು ವರ್ಷದೊಳಗಿನ ಮಕ್ಕಳ ಎಳೆಯ ಮನಸ್ಸನ್ನು ಅರ್ಥೈಸಿಕೊಂಡು, ಅವರ ಅಭಿರುಚಿಗೆ ಅನುಗುಣವಾಗಿ ಬೆಳೆಸುವುದು ಪೋಷಕರ ಕರ್ತವ್ಯವಾಗಿದೆ. ಅಂತೆಯೇ ಶಿಕ್ಷಕರೂ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ನಗರಸಭೆ ಉಪಾಧ್ಯಕ್ಷ ಬಿ.ಉಮೇಶ್ ಕಿವಿಮಾತು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

