ಬೆಂಗಳೂರು ಗ್ರಾಮಾಂತರ

ತುಳಸಿಯಾನ್ ಕಾರ್ಮಿಕರ ಬೇಡಿಕೆ ಈಡೇರಿಸಲು ಗಡುವು

Published On :

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ತುಳಸಿಯಾನ್  ಕಾರ್ಖಾನೆಯ ಮಾಲೀಕರು ತಮ್ಮ  ಕಾರ್ಮಿಕರ ಬೇಡಿಕೆಗಳನ್ನು ಫೆ.15ರೊಳಗಾಗಿ ಈಡೇರಿಸಬೇಕು ಎಂದು ಶಾಸಕ ಜೆ.ನರಸಿಂಹಸ್ವಾಮಿ ಗಡುವು ನೀಡಿದ್ದಾರೆ.
ಕಾರ್ಖಾನೆಗೆ ಬೀಗಮುದ್ರೆ ಹಾಕಿ ಕಾರ್ಖಾನೆಯನ್ನು ಮುಚ್ಚುವುದಾಗಿ ಹೇಳಿರುವ  ಕಾರ್ಖಾನೆಯ ಆಡಳಿತ ವರ್ಗ ಮತ್ತು ಮುಷ್ಕರ ನಿರತ ಕಾರ್ಮಿಕರೊಂದಿಗೆ ಮಾತನಾಡಿರುವ ಅವರು ತುಳಸಿಯಾನ್ ಕಾರ್ಖಾನೆ ಲಾಕ್‌ಔಟ್ ಮಾಡುವ ಮೂಲಕ ನೂರಾರು ಕಾರ್ಮಿಕರ ಬದುಕು ಬೀದಿಗೆ ಬಿದ್ದಿರುವುದು ನೋವಿನ ಸಂಗತಿ. ಹಲವು ತಿಂಗಳಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತಿರುವ ಕಾರ್ಮಿಕರ ಸಂಕಟ ಕೇಳದ ಆಡಳಿತ ಮಂಡಳಿ ಧೋರಣೆ ಸರಿಯಲ್ಲ ಎಂದಿದ್ದಾರೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ  ನಡೆದ ತುಳಸಿಯಾನ್ ಕಾರ್ಮಿಕರು ಮತ್ತು ಆಡಳಿತ ವರ್ಗ ಸಂಧಾನ ಮಾತುಕತೆ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಕೊತ್ತೂರಪ್ಪ, ಕಾರ್ಖಾನೆ ಕಳೆದ 27 ವರ್ಷಗಳಿಂದ ನಡೆಯುತ್ತಿದೆ. ಆದರೆ ಕಳೆದ 10 ತಿಂಗಳಿಂದ ತಾವು ವೇತನ ಪರಿಷ್ಕರಣೆ ಬಗ್ಗೆ ಆಡಳಿತ ಮಂಡಲಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಕಾರ್ಖಾನೆಗೆ ಬೀಗಮುದ್ರೆ ಹಾಕಿ ಕಾರ್ಮಿಕರನ್ನು ಬೀದಿಪಾಲು ಮಾಡಿದ್ದಾರೆ. ಕಾರ್ಖಾನೆಯಲ್ಲಿ ಈಗಲೂ ಕಡಿಮೆ ಸಂಬಳ  ದುಡಿಯುವರಿದ್ದಾರೆ.   ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನ, ಮೂಲ ಸೌಲಭ್ಯ, ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಬೇಕಾಗಿದೆ. ಕಾರ್ಖಾನೆಯಲ್ಲಿ ಕಾರ್ಮಿಕರ ಮೇಲೆ ನಿರಂತರ ದೌರ್ಜನ್ಯ, ಮಹಿಳಾ ಕಾರ್ಮಿಕರನ್ನು ನಿಯಮಬಾಹಿರವಾಗಿ ನಡೆಸಿಕೊಳ್ಳುವುದು ಮೊದಲಾದ ದೂರುಗಳನ್ನು ಕಾರ್ಮಿಕ ಸಂಘದಿಂದ ಇಲಾಖೆಗೆ ನೀಡಿತ್ತು. ಇದೆಲ್ಲವನ್ನು ಮನಸಿನಲ್ಲಿಟ್ಟುಕೊಂಡ ಆಡಳಿತ ಮಂಡಲಿ ಇಂದು ಕಾರ್ಖಾನೆಯನ್ನು ಮುಚ್ಚಿ ನೂರಾರು ಕಾರ್ಮಿಕರನ್ನು ಬೀದಿ ಪಾಲು ಮಾಡಿದೆ ಎಂದರು.
ಕಾರ್ಖಾನೆಯ ಆಡಳಿತ ವರ್ಗದ ಪರವಾಗಿ ಮಾತನಾಡಿದ ಹರೀಶ್,  ಕಾರ್ಮಿಕರು ಆಡಳಿತ ಮಂಡಳಿಯವರೊಂದಿಗೆ ಸಹಕರಿಸುತ್ತಿಲ್ಲ. ಇದರಿಂದ  ಉತ್ಪಾದನಾ ಸಾಮರ್ಥ್ಯ ಕುಸಿದಿದೆ.  ಕಳೆದ ಎರಡು ವರ್ಷಗಳಿಂದ ನಮ್ಮ ಕಾರ್ಖಾನೆ ಉತ್ಪನ್ನಗಳಿಗೆ ಬೇಡಿಕೆ ಇಲ್ಲದೆ ವಹಿವಾಟು ಸರಿಯಾಗಿ ನಡೆಯುತ್ತಿಲ್ಲ.  ಆಡಳಿತ ಮಂಡಲಿ ಯೊಂದಿಗೆ ನಿಯಮಬಾಹಿರವಾಗಿ ವರ್ತಿಸಿ ಕಾರ್ಖಾನೆಯಲ್ಲಿ ಭಯದ ವಾತಾವರಣ ಮೂಡಿಸುತ್ತಿದ್ದಾರೆ. ಈಗಾಗಲೇ ಕಾರ್ಮಿಕರ ಬೇಡಿಕೆಗಳ ಪ್ರಕರಣ ಕಾರ್ಮಿಕ ಆಯುಕ್ತರ ಬಳಿ ನಡೆದಿದೆ.  ಕಾರ್ಖಾನೆಯಲ್ಲಿ ಕಾರ್ಮಿಕರು ಮತ್ತು ಆಡಳಿತ ಮಂಡಲಿ ಮಧ್ಯೆ ಸೌಹಾರ್ದತೆಯ ವಾತಾವರಣವಿಲ್ಲ ಎಂದರು.
ವೇತನ ಹೆಚ್ಚಳ ಅನಿವಾರ್ಯ: ಕಾರ್ಮಿಕರು ಮತ್ತು ಆಡಳಿತ ವರ್ಗದ ದೂರುಗಳನ್ನು ಆಲಿಸಿದ ಶಾಸಕ ಜೆ.ನರಸಿಂಹಸ್ವಾಮಿ,  ಕಾರ್ಖಾನೆಯಲ್ಲಿ ಕಾರ್ಮಿಕರು ಕಡಿಮೆ ವೇತನಕ್ಕೆ ದುಡಿಯುತ್ತಿರುವ ಕಂಡು ಬಂದಿದೆ. ಬದಲಾಗುತ್ತಿರುವ ಜೀವನ ನಿರ್ವಹಣೆಗೆ ವೇತನ ಹೆಚ್ಚಳ ಅನಿವಾರ್ಯವಾಗಿದೆ. ಕಾರ್ಮಿಕರು ಆಡಳಿತ ಮಂಡಳಿಯೊಂದಿಗೆ ಸಹಕಾರ ನೀಡಿದಾಗ ಮಾತ್ರ  ಉತ್ಪನ್ನ ಹೆಚ್ಚಳವಾಗುತ್ತದೆ. ಇಲ್ಲವಾದರೆ ಹಲವಾರು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.  ಆಡಳಿತ ಮಂಡಳಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು. ಸಭೆಯಲ್ಲಿ ಎಪಿಎಂಸಿ ಉಪಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ನಿರ್ದೇಶಕ ಪ್ರೇಮಕುಮಾರ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೋಪಾಲನಾಯಕ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಸಿ. ನಾರಾಯಣಸ್ವಾಮಿ, ಟಿಎಪಿಎಂಸಿಎಸ್ ಅಧ್ಯಕ್ಷ ವಿ.ಆಂಜಿನಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಗೌರವ ಅಧ್ಯಕ್ಷ ಟಿ.ಜಿ.ಮಂಜುನಾಥ್,  ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.