ಬೆಂಗಳೂರು ಗ್ರಾಮಾಂತರ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ರಾಮನಗರ ಜು.3
ವಿವಿಧ ಬೇಡಿಕೆಗಳ  ಈಡೇರಿಕೆಗೆ ಒತ್ತಾಯಿಸಿ ರಾಮನಗರ ಜಿಲ್ಲಾ ವಿಕಲಚೇತನರ ಒಕ್ಕೂಟದ ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿವರೆಗೆ  ಮೆರವಣಿಗೆಯಲ್ಲಿ ತೆರಳಿ, ಕೆಲಕಾಲ ಧರಣಿ ನಡೆಸಿದರು. ನಂತರ ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸುಮಾರು 18 ಲಕ್ಷದಷ್ಟಿರುವ ವಿಕಲಚೇತನರನ್ನು ಸರ್ಕಾರ ಕಡೆಗಣಿಸಿದೆ. ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಈ ಸಮುದಾಯದ ಅಭ್ಯುದಯಕ್ಕಾಗಿ ಮುಂದಿನ ಬಜೆಟ್‌ನಲ್ಲಿ ಸೂಕ್ತ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.   
ವಿಕಲಚೇತನರಿಗೆ ಬರುತ್ತಿದ್ದ ಮಾಸಾಶನವನ್ನು ಒಂದೂವರೆ ವರ್ಷದಿಂದ ತಡೆ ಹಿಡಿಯಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿ, ಮಂಜೂರಾಗಿರುವವರಿಗೂ ಮಾಸಾಶನ ನೀಡುತ್ತಿಲ್ಲ. ಗ್ರಾ.ಪಂ. ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಶೇ.3ರಷ್ಟು ಅನುದಾನವನ್ನು ವಿಕಲಚೇತನರ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ನಿಯಮವಿದ್ದರೂ ಇದನ್ನು ಪಾಲಿಸುತ್ತಿಲ್ಲ ಎಂದು ದೂರಿದರು.
ಪ್ರಮುಖ ಬೇಡಿಕೆಗಳು : ಅಂಗವಿಕಲರ ನಿರ್ದೇಶನಾಲಯವನ್ನು ಪ್ರತ್ಯೇಕ ನಿಗಮ ಮಂಡಳಿಯಾಗಿ ಪರವರ್ತಿಸಬೇಕು.  ವಿಕಲಚೇತನರಿಗೆ ಹಾಲಿ ಇರುವ ಶೇಕಡಾ 3ರಷ್ಟು ಮೀಸಲಾತಿಯನ್ನು ಶೇಕಡಾ 5ಕ್ಕೇರಿಸಬೇಕು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಗೌರವ ಧನವನ್ನು ರು.10 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ವಿಕಲಚೇತನರಿಗೆ ರಾಜಕೀಯ ಮೀಸಲಾತಿ ಜಾರಿಗೆ ತರಬೇಕು. ಸ್ಥಳೀಯ ಸಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಹಾಗೂ ಸ್ಥಾಯಿ ಸಮಿತಿಗಳಿಗೆ ಅರ್ಹ ವಿಕಲಚೇತನರನ್ನು ನೇಮಿಸಿಕೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿಯೂ ವಿಕಲಚೇತನರ ಪುನರ್ವಸತಿ ಕೇಂದ್ರ ತೆರೆಯಬೇಕು ಎಂದರು.
ವಿಕಲಚೇತನರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ಜತೆಗೆ ವಸತಿ ವ್ಯವಸ್ಥೆ, ವಿದ್ಯಾರ್ಥಿ ವೇತನ ಹಾಗೂ ಆರೋಗ್ಯಕ್ಕೆ ಒತ್ತು ನೀಡಬೇಕು. ತಾರತಮ್ಯ ರಹಿತ ಮತ್ತು ಏಕರೂಪದ ಮಾಸಾಶನ ವ್ಯವಸ್ಥೆ ಜಾರಿಗೊಳಿಸಬೇಕು. ಅವಿವಾಹಿತ ವಿಕಲಚೇತನರ ಪುರುಷ ಮತ್ತು ಮಹಿಳೆಯರಿಗೆ ಪೋಷಣಾ ಭತ್ಯೆ ನೀಡಬೇಕು ಎಂದು ತಿಳಿಸಿದರು.
ವಸತಿ ರಹಿತ ವಿಕಲಚೇತನರಿಗೆ ನಿವೇಶನ ಅಥವಾ ಮನೆಗಳನ್ನು ನಿರ್ಮಿಸಿಕೊಡಬೇಕು. ವಿವಿಧ ಇಲಾಖೆಗಳಿಂದ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಮೂಲಕ ಪಡೆದಿರುವ ಸಾಲ ಮನ್ನಾ ಮಾಡಬೇಕು. ರಿಯಾಯ್ತಿ ಬಸ್ ಪಾಸ್‌ನ ಸೌಲಭ್ಯವನ್ನು 250 ಕಿಲೋ ಮೀಟರ್ ಹೆಚ್ಚಿಸಬೇಕು. ಬುದ್ಧಿ ಮಾಂದ್ಯ ಮಕ್ಕಳಿಗೆ ಪೋಷಣಾ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.
ವಿಕಲಚೇತರನ್ನು ಸಾಮಾನ್ಯ ವ್ಯಕ್ತಿಗಳೂ ವಿವಾಹವಾದರೆ ರು.1ಲಕ್ಷ ಪ್ರೋತ್ಸಾಹ ಧನ ವಿತರಿಸಬೇಕು. ಅವಶ್ಯವಿರುವವರಿಗೆ ವೈದ್ಯಕೀಯ ಕಿಟ್‌ಗಳನ್ನು ನೀಡಬೇಕು. ತಾಲೂಕು ಮಟ್ಟದ ವಿಕಲಚೇತನರ ಒಕ್ಕೂಟಗಳಿಗೆ ವಿಶೇಷ ಅನುದಾನ ನೀಡಬೇಕು ಹಾಗೂ ಭವನ ನಿರ್ಮಾಣಕ್ಕೆ ಉಚಿತ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ರಾಮಚಂದ್ರ, ಶಿವಬೀರಯ್ಯ, ಜಯರತ್ನಮ್ಮ, ಚಂದ್ರು, ನಾರಾಯಣ, ಮಹದೇವು, ಮಂಜುಳಾ, ಕುಮಾರ, ಪುಟ್ಟಮಾಧು, ಅಸ್ಲಂಪಾಷ, ರಮೇಶ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.