ಉತ್ತಮ ಶಿಕ್ಷಣ ನೀಡಲು ಶಿಕ್ಷಕರನ್ನು ಸಜ್ಜುಗೊಳಿಸಿ
ಕ.ಪ್ರ.ವಾರ್ತೆ ಆನೇಕಲ್ಲು ಜು. 4
ಶಿಕ್ಷಣ ಎಲ್ಲರ ಹಕ್ಕು. ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಬೇಕಿದೆ. ಅಂತೆಯೇ ಉತ್ತಮ ಶಿಕ್ಷಣ ನೀಡಲು ಶಿಕ್ಷಕರನ್ನು ಸಜ್ಜುಗೊಳಿಸಬೇಕಿದೆ ಎಂದು ನಾಡೋಜ ಪ್ರೊ. ಹಂಪನಾಗರಾಜಯ್ಯ ತಿಳಿಸಿದ್ದಾರೆ.
ಅವರು ಆನೇಕಲ್ಲಿನ ವಿಧಾತ ವಿದ್ಯಾ ಟ್ರಸ್ಟ್ ಮಹಾದ್ವಾರದಲ್ಲಿ ರಾಷ್ಟ್ರಕವಿ ಕುವೆಂಪರವರ ಪುತ್ಥಳಿ ಅನಾವರಣ ಹಾಗೂ ಸಾಹಿತಿ ತಾನಂ ಕುಮಾರಸ್ವಾಮಿ ವಿರಚಿತ ತಿಮ್ಮರಾಯ ವಚನಗಳು ಹಾಗೂ ಮರಳುಗಾಡಿನಲ್ಲಿ ಒಂಟಿ ಸಲಗ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿ ಕಲಿಕೆ ಮಕ್ಕಳ ಹಕ್ಕು ಮಾತ್ರವಲ್ಲ ಎಲ್ಲರೂ ಎಲ್ಲ ವಯಸ್ಸಿನಲ್ಲೂ ಕಲಿತು ಅಕ್ಷರ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದರು. ಮಕ್ಕಳ ಹಕ್ಕಿನಂತೆಯೇ ಶಿಕ್ಷಣ ಪೋಷಕರ ಕರ್ತವ್ಯ ಹಾಗೂ ಸಮಾಜದ ಜವಾಬ್ದಾರಿ. ಬಾಲ ಕಾರ್ಮಿಕರ ಶೋಷಣೆ, ಭ್ರೂಣ ಹತ್ಯೆ ಸಾಮಾಜಿಕ ಅನಿಷ್ಠಗಳು. ಇವೆಲ್ಲವನ್ನೂ ನಿರ್ಮೂಲನೆ ಮಾಡಬೇಕಾದ ಕರ್ತವ್ಯ ಎಲ್ಲರೂ ತಮ್ಮದೆಂದು ಅರಿಯಬೇಕು. ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳು ಆಧುನಿಕ ಶಿಕ್ಷಣ ಪದ್ಧತಿ ಹಾಗೂ ದೈನಂದಿನ ಆಗುಹೋಗುಗಳ ಬಗ್ಗೆ ಶಿಕ್ಷಕರಿಗೆ ಮನವರಿಕೆ ಮಾಡಿಕೊಟ್ಟು ನೂತನ ಬೋಧನಾ ಕ್ರಮಕ್ಕೆ ಶಿಕ್ಷಕರನ್ನು ಸಜ್ಜುಗೊಳಿಸಬೇಕೆಂದರು.
ಸಮಾಜಕ್ಕೆ ಒಳಿತು: ಪ್ರೊ. ಕಮಲಾ ಹಂಪನಾ ಮಾತನಾಡಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಕುಟುಂಬ ಹಾಗೂ ಸಮಾಜಕ್ಕೆ ಒಳಿತಾಗುತ್ತದೆ. ಮಕ್ಕಳು ತಂದೆ ತಾಯಿಯರನ್ನು ಗೌರವಿಸಬೇಕು. ಪಕ್ವ ಹೊಂದದ ಮನಸ್ಸು ಹಾಗೂ ವಯಸ್ಸಿನಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳಬಾರದು. ಉತ್ತಮ ಪರಿಸರದಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡುವ ಯುವ ಉತ್ಸಾಹಿ ಸಾಹಿತಿಗಳು ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ, ಕಾರ್ನಾಡ್, ಅನಂತಮೂರ್ತಿ, ಕಂಬಾರ, ಭೈರಪ್ಪ ಅವರ ಕೃತಿಗಳನ್ನು ಒಮ್ಮೆ ಅಧ್ಯಯನ ಮಾಡಬೇಕೆಂದರು.
ವಿಶಿಷ್ಟ ಕೃತಿ: ವಿಮರ್ಷಕ ನರಹಳ್ಳಿ ಬಾಲಸುಬ್ರಹ್ಮಣ್ಯ ಕೃತಿಗಳ ಬಗ್ಗೆ ವಿಮರ್ಶೆ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ಮರಳುಗಾಡಿನಲ್ಲಿ ಒಂಟಿ ಸಲಗ ಒಂದು ವಿಶಿಷ್ಟಕೃತಿ. ಮಾನವನ ಬದುಕಿನಲ್ಲಿ ಬರುವ ಕಷ್ಠ ಕಾರ್ಪಣ್ಯ, ಸಾಧನೆಯ ಮಾರ್ಗದಲ್ಲಿ ಎದುರಾಗುವ ಸವಾಲುಗಳು, ಸವಾಲುಗಳನ್ನು ಎದುರಿಸಿ ಸಾಧನೆ ಸಿಕ್ಕಾಗ ಸಿಗುವ ತೃಪ್ತಿಯನ್ನು ಸಾಂದರ್ಭಿಕವಾಗಿ ನಿರೂಪಿಸಲಾಗಿದೆ. ವಚನ ಸಾಹಿತ್ಯದಲ್ಲಿ ತಾನಂ ಕುಮಾರಸ್ವಾಮಿರವರ ಪ್ರಯತ್ನ ತುಂಬಾ ಶ್ಲಾಘನೀಯ. ಅನುಭವಾಮೃತದ ಪದಗಳ ಪುಂಜ ಆಧುನಿಕ ಜಗತ್ತಿನ ಓರೆ ಕೋರೆಗಳನ್ನು ತಿದ್ದಿ ತೀಡುತ್ತದೆ. ಇಂತಹ ಪ್ರಯತ್ನ ಮತ್ತು ಪ್ರಯೋಗ ನಿರಂತರ ನಡೆಯಬೇಕೆಂದರು. ಪತ್ರ ಕರ್ತ ಲಕ್ಷ್ಮ ಣ ಕೊಡಸೆ ಡಾ. ಗೋಪಾಲರಾಜು ವಿರಚಿತ ನನ್ನ ಬದುಕು ಕೃತಿಯ ಬಗ್ಗೆ ಮಾತನಾಡಿ ಕಗ್ಗಾಡು ಆನೇಕಲ್ಲಿನಿಂದ ಅಮೆರಿಕಕ್ಕೆ ಪಯಣ ಮಾಡಿ ಹುಟ್ಟೂರಿನಲ್ಲಿ ಪದವಿ ಕಾಲೇಜು ಸ್ಥಾಪನೆ, ಸಹಸ್ರಾರು ರೋಗಿಗಳ ಶುಶ್ರೂಷೆಯಂತಹ ಸಂದರ್ಭಗಳನ್ನು ಮನಕಲಕುವಂತೆ ಬರೆದಿದ್ದಾರೆ. ಅಂತೆಯೇ ವಿದೇಶದಲ್ಲಿ ನೆಲೆಸಿದರೂ ಸ್ವಂತ ನಾಡಿಗೆ ಏನನ್ನಾದರೂ ಮಾಡಬೇಕೆಂದು ಆದರ್ಶವನ್ನು ನೀಡುವ ವ್ಯಕ್ತಿಯಾಗಿದ್ದಾರೆ ಎಂದರು. ಆದಿ ಚುಂಚನಗಿರಿ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು. ವಿಧಾತ ಕನ್ನಡ ಕಲಾ ಸಂಘ ವತಿಯಿಂದ ಕುವೆಂಪು ವಿರಚಿತ ಬೊಮ್ಮನಹಳ್ಳಿಯ ಕಿಂದರಿಜೋಗಿ ನಾಟಕ ಪ್ರದರ್ಶನ ಆಕರ್ಷಕವಾಗಿ ಮೂಡಿಬಂತು. ನಾವಿಕ ಕನ್ನಡ ಬಳಗದ ಕೃಷ್ಣಮೂರ್ತಿ, ಗಜಲಕ್ಷ್ಮಿ, ವಿದ್ಯಾ ಟ್ರಸ್ಟ್ ಕಾರ್ಯದರ್ಶಿ ವಿಧಾತ, ಕನಕ, ಛಾಯಾ ಗೋಪಾಲರಾಜು, ಡಾ. ಬಾನಂದೂರು ಕೆಂಪಯ್ಯ, ಪಾನ್ಯಂ ನಟರಾಜು, ಮಂಜುನಾಥ ದೇವ, ಕಾಟಿ ಕೃಷ್ಣಮೂರ್ತಿ, ಪ್ರಕಾಶಮೂರ್ತಿ, ಸಿ.ವಿ. ವೆಂಕಟೇಶರೆಡ್ಡಿ, ಡಾ. ವಿಜ್ಞಾನ್ ಸೇರಿದಂತೆ ಅನೇಕ ಗಣ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

