ತಮಗಾಗದ ಅಧಿಕಾರಿಗಳ ಎತ್ತಂಗಡಿಗೆ 'ಕೈ' ಪಟ್ಟಿ
ಕ.ಪ್ರ.ವಾರ್ತೆ ರಾಮನಗರ ಜು.4
ರಾಜ್ಯದಲ್ಲಿ ಕಾಂಗ್ರೆಸ್ ಪಟಾಲಂ ತಮಗಾಗದ ಅಧಿಕಾರಿಗಳ ಪಟ್ಟಿ ಮಾಡಿಕೊಂಡು, ಅವರನ್ನು ಎತ್ತಂಗಡಿ ಮಾಡಿಸಲು ಸರ್ಕಾರದ ಮುಂದೆ ನಿಂತಿದೆ. ಇಂತಹ ಪ್ರಕರಣ ಪ್ರತಿಪಕ್ಷಗಳ ಶಾಸಕರಿರುವ ಕ್ಷೇತ್ರಗಳಲ್ಲೇ ಹೆಚ್ಚಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ತಾವು ಪ್ರತಿನಿಧಿಸುತ್ತಿರುವ ರಾಮನಗರ ಕ್ಷೇತ್ರದಲ್ಲೂ ಇಂತಹ ಕೆಲಸಕ್ಕೆ ಪರಾಜಿತ ಅಭ್ಯರ್ಥಿ ಸಹಿತ ಕಾಂಗ್ರೆಸ್ ಪಟಾಲಂ ಇಳಿದಿದೆ. ಇದೆಲ್ಲವನ್ನೂ ತಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸರ್ಕಾರದ ಕ್ರಮ ನೋಡಿಕೊಂಡು ಸೂಕ್ತ ಹೋರಾಟ ರೂಪಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದರು.
ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡುವುದಕ್ಕೆ ಬಹುತೇಕ ಕಡೆ ಕಾಂಗ್ರೆಸಿಗರು ಬಿಡುತ್ತಿಲ್ಲ. ಇದೆಲ್ಲವನ್ನೂ ನೋಡಿಕೊಂಡು ಸುಮ್ಮನಿರುವ ಜಾಯಮಾನ ತಮ್ಮದಲ್ಲ. ಸರ್ಕಾರವು ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳ ಬಗ್ಗೆ ತಾರತಮ್ಯ ನಡೆಸುವುದಕ್ಕೆ ತಾವು ಅವಕಾಶ ನೀಡುವುದಿಲ್ಲ ಎಂದರು.
ಅದೇ ಜಾಯಮಾನ: ಕನಕಪುರದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ದುರ್ಬಳಕೆ, ಆಡಳಿತ ಯಂತ್ರದ ದುರುಪಯೋಗದ ಮೂಲಕ ಜೆಡಿಎಸ್ ಮುಖಂಡರನ್ನು ಹಣಿಯುವ ಕೆಲಸವನ್ನು ಮೊದಲಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಅದು ಅವರ ಜಾಯಮಾನ. ಪ್ರಸ್ತುತ ಕೋಡಿಹಳ್ಳಿಯಲ್ಲಿ ಜೆಡಿಎಸ್ ಮುಖಂಡನ ಮನೆ ಮುಂದೆ ಹೊಂಡ ತೋಡಿ ತೊಂದರೆ ನೀಡಿರುವುದು ಹೊಸದಲ್ಲ ಎಂದು ಛೇಡಿಸಿದರು.
ಚುನಾವಣೆಯ ಸಂದರ್ಭದಲ್ಲಿ ರಾಜಕಾರಣ ಇರಬೇಕೇ ಹೊರತು ಜನಪ್ರತಿನಿಧಿಯಾಗಿ ಕೆಲಸ ಮಾಡುವಾಗ ಅಲ್ಲ. ರಾಮನಗರ ಕ್ಷೇತ್ರದಲ್ಲಿ ತಾವೆಂದೂ ಪಕ್ಷಪಾತ ಮಾಡಿಯೇ ಇಲ್ಲ. ಆದರೆ, ಕನಕಪುರದಲ್ಲಿ ಸರ್ಕಾರದ ಪ್ರತಿಯೊಂದು ಕೆಲಸಕ್ಕೂ ಪಕ್ಷಪಾತ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಟೀಕಿಸಿದರು.
ದಾಖಲೆ ಇದ್ದೇ ಆರೋಪ: ರಾಜ್ಯದಲ್ಲಿ ಅಗ್ಗದ ದರದ ಮದ್ಯ ಜಾರಿಗೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ ಷಡ್ಯಂತ್ರದ ಬಗ್ಗೆ ಸ್ಪಷ್ಟ ಮಾಹಿತಿ ಮತ್ತು ಅಗತ್ಯ ದಾಖಲೆ ಇಟ್ಟುಕೊಂಡೇ ತಾವು ಆರೋಪ ಮಾಡಿದ್ದು, ಸೂಕ್ತ ಸಂದರ್ಭದಲ್ಲಿ ಅವನ್ನೆಲ್ಲ ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದರು.
ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾಗೆಲ್ಲಾ ಹಿಡನ್ ಅಜೆಂಡಾ ಇಟ್ಟುಕೊಂಡೇ ಕೆಲಸ ಮಾಡುವ ಜಾಯಮಾನದವರು. ಅಗ್ಗದ ದರದ ಮದ್ಯ ಜಾರಿಗೆ ಸನ್ನಾಹ, ಆಡಳಿತಾತ್ಮಕವಾಗಿ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುವುದನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದರು.
ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ತಮ್ಮದೇ ಆದ ನೀತಿ ಜಾರಿಗೆ ಸನ್ನದ್ಧರಾಗಿದ್ದಾರೆ. ಅಗ್ಗದ ದರದ ಮದ್ಯ ಸಹಿತ ಹಲವಾರು ವಿಷಯಗಳಲ್ಲಿ ಅವರು ಪ್ರಸ್ತಾಪ ಮಾಡಿಯೂ ಪಲಾಯನ ವಾದ ನಡೆಸುತ್ತಿದ್ದಾರೆ. ಏಕಪಕ್ಷೀಯ ನಿಲುವುಗಳನ್ನು ಕೈಗೊಳ್ಳುವುದು ಒಳಿತಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

