ಬೆಂಗಳೂರು ಗ್ರಾಮಾಂತರ

ಅಭಿವೃದ್ಧಿ ಯೋಜನೆ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್

Published On :

ಕ.ಪ್ರ.ವಾರ್ತೆ , ರಾಮನಗರ , ಜು.6
ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ, ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ವಿಚಾರವಾದಿ ಡಾ. ಕೃಷ್ಣಮೂರ್ತಿ ಚಮರಂ ತಿಳಿಸಿದರು.
ನಗರದ ಸ್ಫೂರ್ತಿ ಭವನದಲ್ಲಿ ಪ್ರಬುದ್ಧ ಬಳಗ ಶನಿವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಯೋಜನೆಗಳನ್ನು ಬೇರೆಯವರ ಹೆಸರಿನಲ್ಲಿ ಗುರುತಿಸುವ ಮೂಲಕ ಚರಿತ್ರೆಯನ್ನು ತಿರುಚುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ವಿಷಾದಿಸಿದರು.
ಹಳೆ ಮೈಸೂರು ಭಾಗದ ರೈತರಿಗೆ ನೀರೊದಗಿಸುವುದು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನರಿಗೆ ಕುಡಿಯುವ ನೀರೊದಗಿಸುತ್ತಿರುವ ಕೆಆರ್‌ಎಸ್ ನಿರ್ಮಿಸಿದ್ದಾರೆ. ಇಂತಹ ಮಹತ್ಕಾರ್ಯ ಮಾಡಿರುವ ಅವರ ಬಗ್ಗೆ ಇಂದಿಗೂ ಕೂಡ ಸಂಶೋಧನಾ ಕೃತಿಗಳು ರಚನೆಯಾಗಿಲ್ಲ ಎಂದರು.
ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಾರಿಗೆ ತಂದ ಜನಪರ ಯೋಜನೆಗಳೇ ಕಾರಣ. ಮಿಲ್ಲರ್ ಆಯೋಗದ ಮೂಲಕ ಮೊದಲ ಬಾರಿಗೆ ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡಿಸಿ, ವಿಶೇಷ ಸೌಲಭ್ಯಗಳು ದೊರಕುವಂತೆ ಮಾಡಿದರು ಎಂದರು. ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣಬದ್ಧರಾಗಿದ್ದರು. ಇವರು ರಾಜಮನೆತನದಿಂದ ಬಂದವರಾಗಿದ್ದರೂ ಜನರು ಆಡಳಿತದಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ಜನಪ್ರತಿನಿಧಿ ಸಭೆಯನ್ನು ಜಾರಿಗೆ ತಂದರು. ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿಯಾದ ಸಂಸ್ಥೆಯಾಗಿ ಕಾರ್ಯನಿರ್ವಹಿಸಿತು ಎಂದು ಹೇಳಿದರು.
ಅಧಿಕಾರ ವಿಕೇಂದ್ರೀಕರಣ: ಸ್ಥಳೀಯ ಸಂಸ್ಥೆಗಳನ್ನು ರಚಿಸುವ ಮೂಲಕ ಆಡಳಿತ ವಿಕೇಂದ್ರಿಕರಣಕ್ಕೆ ಅನುವು ಮಾಡಿಕೊಟ್ಟರು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸಲು ಪ್ರಾರಂಭ ಮಾಡಿದ್ದರಿಂದ ಗ್ರಾಮೀಣ ಪ್ರದೇಶಗಳ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡಲಾಯಿತು ಎಂದು ತಿಳಿಸಿದರು.
ಶೇಕಡಾ 30ರಷ್ಟಿರುವ ಯುವ ಸಮುದಾಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ಲಕ್ಷಾಂತರ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಉದ್ಯೋಗ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕೇವಲ ಗುಟ್ಕಾ ನಿಷೇಧದಿಂದ ಯುವ ಸಮುದಾಯ ಅಭಿವೃದ್ಧಿಯಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ವೀರಶೈವ ಸಮುದಾಯದ ರಾಜಶೇಖರ್, ರಜಪೂತ ಸಮುದಾಯದ ಬಿ. ಅಶೋಕ್‌ಕುಮಾರ್, ಕುರುಬ ಸಮುದಾಯ ಬೀರಯ್ಯ, ತಿಗಳ ಸಮುದಾಯದ ಎಚ್.ಜಿ. ಗುರುವೇಗೌಡ, ಕುಂಬಾರ ಸಮುದಾಯದ ಟಿ.ವಿ. ನಾರಾಯಣ, ದಲಿತ ಸಮುದಾಯದ ರಾ.ಸಿ.ದೇವರಾಜ್, ಒಕ್ಕಲಿಗ ಸಮುದಾಯದ ಸುಜೀವಯ್ಯ, ಕ್ರೈಸ್ತ ಸಮುದಾಯದ ಸ್ಟೆಲ್ಲಾ ಮೇರಿ, ಪ್ರಬುದ್ಧ ಬಳಗದ ಕೆ.ಎಲ್.ಕಿರಣ್, ಸುಂದರೇಶ್, ಡಿ.ಆರ್.ರಾಣಿ, ಉಮೇಶ್, ಜೀವನ್, ಪ್ರಕಾಶ್, ಸುರೇಂದ್ರ, ಜೆ.ಭೂಷಣ್, ಗೋವಿಂದರಾಜು, ಜಗದೀಶ್ ಮೂರ್ತಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.