ಕೆಟ್ಟ ಬೋರ್ವೆಲ್ಗಳಿಗೂ ಬಂತು ಲಕ್ಷ ಕರೆಂಟ್ ಬಿಲ್!
ಬೆಂಗಳೂರು: ರಾಜ್ಯದಲ್ಲಿ ಸಾವಿರಾರು ಕೊಳವೆ ಬಾವಿಗಳು ಕೆಟ್ಟಿದ್ದರೂ ವಿದ್ಯುತ್ ಬಿಲ್ ಬರುವುದು ಮಾತ್ರ ನಿಂತಿಲ್ಲ.
ಬಳಕೆಯಲ್ಲಿ ಇಲ್ಲದ ಬೋರ್ವೆಲ್ಗಳಿಗೆ ಬಿಲ್ ಬರುತ್ತಿರುವುದರಿಂದ ಒಂದೊಂದು ಕೊಳವೆ ಬಾವಿಗೂ 1 ಲಕ್ಷಕ್ಕೂ ಅಧಿಕ ಬಾಕಿ ಉಳಿದುಕೊಂಡಿದೆ. ಕೊಳವೆ ಬಾವಿಗಳು ಕೆಟ್ಟಿದ್ದರೂ ಅವು ಬಳಕೆಯಾಗುತ್ತಿವೆ ಎಂದು ತಪ್ಪಾಗಿ ಭಾವಿಸಿ ವಿದ್ಯುತ್ ಸರಬರಾಜು ಕಂಪನಿಗಳು 2 ವರ್ಷಗಳಿಂದ ತಪ್ಪದೆ ಬಿಲ್ ನೀಡುತ್ತಿವೆ. ಬೋರ್ವೆಲ್ಗಳು ಕೆಟ್ಟು ನಿಂತಿದ್ದು, ವಿದ್ಯುತ್ ಬಳಕೆಯಾಗುತ್ತಿಲ್ಲ ಎಂದು ಕಂಪನಿಗಳಿಗೆ ಮಾಹಿತಿ ನೀಡುವ ಗೋಜಿಗೆ ಯಾರೂ ಹೋಗಿಲ್ಲ. ಹೀಗಾಗಿ ಅನೇಕ ಬೋರ್ವೆಲ್ಗಳ ವಿದ್ಯುತ್ ಬಾಕಿ 20 ಲಕ್ಷವನ್ನೂ ಮೀರಿ ಹೋಗಿದೆ.
ಇದಕ್ಕೆ ತಾಜಾ ಉದಾಹರಣೆ ಎಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೋರ್ವೆಲ್ಗಳು. ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ 17 ಬೋರ್ವೆಲ್ಗಳು ಬಂದ್ ಆಗಿ 2 ವರ್ಷವೇ ಆಗಿದೆ. ಆದರೆ, ಬೆಸ್ಕಾಂ ಮಾತ್ರ ಬಿಲ್ ನೀಡುತ್ತಿದೆ. ಹೀಗಾಗಿ ವಿದ್ಯುತ್ ಬಾಕಿ 65 ಲಕ್ಷಕ್ಕೇರಿದೆ. ಅಷ್ಟೇ ಅಲ್ಲ. ಅದರ ಬಡ್ಡಿ 20ಲಕ್ಷ. ಒಟ್ಟಾರೆ ಇಲ್ಲಿನ ಬೋರ್ವೆಲ್ಗಳ ಬಾಕಿ ರು. 85 ಲಕ್ಷಕ್ಕೂ ಅಧಿಕವಾಗಿದೆ. ಇಷ್ಟಾದರೂ ಸ್ಥಳೀಯ ಅಧಿಕಾರಿಗಳು ಬೆಸ್ಕಾಂಗೆ ಮಾಹಿತಿ ನೀಡಿ ತಿಳಿಸಿ ಬಿಲ್ ನೀಡುವುದನ್ನು ತಡೆದಿಲ್ಲ. ಇದೇ ರೀತಿ ಪಕ್ಕದ ದೇವನನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ತಲಾ 150 ಬೋರ್ವೆಲ್ಗಳು ಲಕ್ಷಾಂತರ ರುಪಾಯಿ ವಿದ್ಯುತ್ ಬಾಕಿ ಹೊತ್ತುಕೊಂಡಿವೆ.
ಆದರೆ, ಅಧಿಕಾರಿಗಳು ಇದನ್ನು ಸರ್ಕಾರಕ್ಕಾಗಲಿ, ಬೆಸ್ಕಾಂ ಗಮನಕ್ಕಾಗಲಿ ತರುವ ಪ್ರಯತ್ನ ಮಾಡಿಲ್ಲ. ಇದು ಕೇವಲ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಾತ್ರ ಸೀಮಿತವಾದ ಸಮಸ್ಯೆ ಅಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಹೇಳಿದರು.
ಸಿಇಒ ಹೊಣೆ: ಗ್ರಾಮಪಂಚಾಯಿತಿಗಳ ಪಿಡಿಎ ಮತ್ತು ಕಾರ್ಯದರ್ಶಿಗಳ ಬೇಜವಾಬ್ದಾರಿಯಿಂದ ಹೀಗಾಗಿದ್ದು, ಇದು ಮತ್ತೆ ಮುಂದುವರಿದರೆ ಜಿಲ್ಲಾಪಂಚಾಯಿತಿ ಸಿಇಒಗಳನ್ನೇ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ಕೆಟ್ಟು ನಿಂತ ಬೋರ್ವೆಲ್ಗಳು ವಿದ್ಯುತ್ ಬಿಲ್ ಹೊರೆ ಉಂಟು ಮಾಡುತ್ತಿರುವುದನ್ನು ಪತ್ತೆ ಮಾಡಿ ಸರಿಪಡಿಸುವ ಕಾರ್ಯವನ್ನು ಸದ್ಯಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರಂಭಿಸಿದ್ದೇವೆ. ಅಲ್ಲದೆ, ಈ ಬೋರ್ವೆಲ್ಗಳಲ್ಲಿರುವ ಪೈಪ್, ಪ್ಯಾನಲ್ಬೋರ್ಡ್, ತಂತಿ ತೆಗೆದು ಹೊಸ ಕೊಳವೆ ಬಾವಿಗಳಿಗೆ ಬಳಸಿಕೊಳ್ಳಲಾಗುತ್ತದೆ.
ಇದರಿಂದ ಹಣವೂ ಉಳಿತಾಯ ಆಗುತ್ತದೆ ಎಂದರು. ಈ ಪ್ರಯೋಗ ಯಶಸ್ವಿಯಾದ ನಂತರ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು.
ಅಕ್ಕಿ ಜತೆ ರಾಗಿ, ಜೋಳ ಸದ್ಯಕ್ಕಿಲ್ಲ
ರಾಜ್ಯ ಸರ್ಕಾರ ಒಂದು ರುಪಾಯಿಗೆ ಅಕ್ಕಿ ಜತೆ ರಾಗಿ ಮತ್ತು ಜೋಳ ನೀಡಿದರೆ ರೈತರಿಗೇ ತೊಂದರೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಸರ್ಕಾರವೆನೋ ರಾಗಿ, ಜೋಳ ನೀಡಬಹುದು. ಆದರೆ, ಈ ಧಾನ್ಯಗಳು ಕೆಲವೇ ಪ್ರದೇಶಕ್ಕೆ ಸೀಮಿತವಾಗಿರುವುದರಿಂದ ಕಡಿಮೆ ಬೆಲೆಯಲ್ಲಿ ಹಂಚಿಕೆ ಮಾಡುವಷ್ಟು ಪ್ರಮಾಣದ ರಾಗಿ, ಜೋಳ ಸಿಗುವುದಿಲ್ಲ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಅಗತ್ಯ ಇರುವ ರೈತರು ರಾಗಿ, ಜೋಳ ಬೆಳೆದು ತಮ್ಮ ಬಳಕೆಗೆ ಇಟ್ಟುಕೊಳ್ಳುತ್ತಾರೆ. ಹೆಚ್ಚುವರಿ ಮಾತ್ರ ಮಾರಾಟ ಮಾಡುತ್ತಾರೆ. ಸರ್ಕಾರ ರಾಗಿ ಮತ್ತು ಜೋಳ ಖರೀದಿಸಲು ಮುಂದಾದರೆ ಅಕ್ಕಿ, ರಾಗಿ ಬೆಲೆಯಲ್ಲಿ ಏರುಪೇರಾಗುತ್ತದೆ. ಅಂತಿಮವಾಗಿ ರೈತರು ದಿಕ್ಕುತಪ್ಪುತ್ತಾರೆ ಎಂದರು.
ಅಕ್ರಮಗಳ ಬಗ್ಗೆ ತನಿಖೆಯಾಗಲಿ
ಸುವರ್ಣ ಗ್ರಾಮ ಯೋಜನೆ ಕಾಮಗಾರಿಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಯೋಜನೆಯಲ್ಲಿ ಇಡೀ ಗ್ರಾಮದ ಕಾಮಗಾರಿಗಳಿಗೆ ಒಂದೇ ಟೆಂಡರ್ ಕರೆಯಬೇಕು. ಆದರೆ, ಇಲ್ಲಿ ಪ್ರತ್ಯೇಕಗೊಳಿಸಿ ಏಕೆ ಟೆಂಡರ್ ಕರೆದಿದ್ದೀರಿ. ಇದಕ್ಕೆ ನಿಮಗೆ ಅಧಿಕಾರ ನೀಡಿದವರು ಯಾರು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆದರೆ, ಕೆಲವು ಅಧಿಕಾರಿಗಳು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಅವರತ್ತ ಬೊಟ್ಟು ಮಾಡಿದರು. ಆಗ ಸಿಟ್ಟಾದ ಸಚಿವರು, ಇದನ್ನು ತನಿಖೆ ಮಾಡಿ ಸರಿಪಡಿಸಿ ಇಲ್ಲವಾದರೆ ನಿಮ್ಮನ್ನು ಹೊಣೆ ಮಾಡುತ್ತೇನೆ ಕೃಷ್ಣಪ್ಪ ವಿರುದ್ಧ ಗುಡುಗಿದರು. ಕೆಲವು ಕಾಮಗಾರಿಗಳಿಗೆ ಟೆಂಡರ್ ಕರೆದು ಉಳಿದ ಕೆಲಸಗಳನ್ನು ಟೆಂಡರ್ ಇಲ್ಲದೆ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಅಂದರೆ, ಇದು ಗುತ್ತಿಗೆದಾರರ ಐಡಿಯಾ. ಇದಕ್ಕೆ ಶಾಸಕರ ಶಿಫಾರಸು ಬಳಸಿಕೊಂಡು ಅವರನ್ನೂ ದಿಕ್ಕು ತಪ್ಪಿಸಿದ್ದೀರಿ ಎಂದು ಅಧಿಕಾರಿಯೊಬ್ಬರ ಮೇಲೆ ರೇಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

