ಫುಟ್ಪಾತ್ ವ್ಯಾಪಾರಿಗಳ ತೆರವು
ಕ.ಪ್ರ.ವಾರ್ತೆ ಕನಕಪುರ,ಜುಲೈ 12.
ಕನಕಪುರದ ಮಹಾತ್ಮಾಗಾಂಧಿ ರಸ್ತೆಯನ್ನು ಅತಿಕ್ರಮಿಸಿಕೊಂಡು ನಡೆಸುತ್ತಿದ್ದವರು ಹಾಗೂ ರಸ್ತೆಬದಿಯ ಚರಂಡಿಗಳನ್ನು ಸೇರಿಸಿ ನಿರ್ಮಾಣ ಮಾಡಿದ ಅಂಗಡಿ, ಮಳಿಗೆಗಳ ಹೆಚ್ಚುವರಿ ನಿರ್ಮಾಣಗಳನ್ನು ತೆರವುಗೊಳಿಸುವ ದಿಟ್ಟ ಕಾರ್ಯವನ್ನು ಕನಕಪುರದ ಪುರಸಭೆ ಶುಕ್ರವಾರ ನಡೆಸಿತು.
ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾಲ್, ವೃತ್ತನಿರೀಕ್ಷಕ ಧನಂಜಯ, ಪುರಸಭಾ ಮುಖ್ಯಾಧಿಕಾರಿ ಮಾಯಣ್ಣಗೌಡ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸ್ಸಿಬ್ಬಂದಿಯ ಸರ್ಪ ಕಾವಲಿನಲ್ಲಿ, ಐವತ್ತು ಮಂದಿ ಪೌರ ಕಾರ್ಮಿಕರ ಎರಡು ತಂಡಗಳು ನಾಲ್ಕು ಜೆಸಿಬಿ ಯಂತ್ರಗಳನ್ನು ಬಳಸಿ ಕ್ಷಿಪ್ರ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಅವರು ಕಬ್ಬಾಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕನಕಪುರದ ಮುಖ್ಯರಸ್ತೆಯ ಅಗಲೀಕರಣವಾಗಿದ್ದರೂ ಅದರ ಸದ್ಬಳಕೆಯಾಗುತ್ತಿಲ್ಲ, ಬೀದಿಬದಿಯ ವ್ಯಾಪಾರಿಗಳು,
ತಳ್ಳುಗಾಡಿಗಳು, ಹೂವಿನ ಅಂಗಡಿಗಳು ರಾ.ಹೆ. 209 ಅನ್ನು ಅತಿಕ್ರಮಿಸಿಕೊಂಡ ಕಾರಣ ಸಂಚಾರಕ್ಕೆ ಅಡೆತಡೆಯುಂಟಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾರ್ವಜನಿಕ ಸಭೆಯಲ್ಲಿಯೇ ತಕ್ಷಣವೇ ಪ್ರತಿಕ್ರಿಯಿಸಿದ ಶಾಸಕ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ವ್ಯಾಪಕ ಬಂದೋಬಸ್ತ್ ಕೈಗೊಂಡು ತಕ್ಷಣವೇ ತೆರವು ಕಾರ್ಯಾಚರಣೆ ನಡೆಸಬೇಕೆಂದು ಆದೇಶಿಸಿದ್ದರು. ಕೇವಲ ಎರಡೇ ದಿನಗಳಲ್ಲಿ ಕಾರ್ಯಾಚರಣೆಯ ರೂಪುರೇಷೆಗಳು ಸಿದ್ಧಗೊಂಡು ಬೀದಿಬದಿಯ ಅಂಗಡಿಗಳನ್ನು ತೆರವು ಮಾಡಲಾಯಿತು.
ಆಕ್ರೋಶ, ಧರಣಿ: ಯಾವುದೇ ಮುನ್ಸೂಚನೆ ನೀಡದೆ, ವ್ಯಾಪಾರಿಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ಬೀದಿಬದಿಯಲ್ಲಿ ವ್ಯವಹಾರ ನಡೆಸುತ್ತಿದ್ದವರನ್ನು ಅಕ್ಷರಶಃ ಬೀದಿಪಾಲು ಮಾಡಿದ ಪುರಸಭೆ ಹಾಗೂ ಜಿಲ್ಲಾಡಳಿತದ ವಿರುದ್ಧ ವ್ಯಾಪಾರಿಗಳು ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ಕೆಲವು ಕಡೆಗಳಲ್ಲಿ ಅಧಿಕಾರಿಗಳೊಂದಿಗೆ ಬಿಸಿಬಿಸಿ ವಾಗ್ವಾದ ನಡೆಸುತ್ತಿದ್ದ ಸಂಗತಿಗಳು ಗೋಚರಿಸಿದವು. ಇಡೀ ದಿನ ನಡೆದ ಕಾರ್ಯಾಚರಣೆಯಲ್ಲಿ ಹೌಸಿಂಗ್ಬೋರ್ಡ್ ಕಾಲೋನಿಯಿಂದ ಮೊದಲುಗೊಂಡು ಅಯ್ಯಪ್ಪಸ್ವಾಮಿ ದೇವಾಲಯದವರೆಗೆ 3 ಕಿಮೀ ರಸ್ತೆ ಬದಿಯ ಅತಿಕ್ರಮಣವನ್ನು ತೆರವು ಗೊಳಿಸಲಾಯಿತು. ಸಂಜೆಯ ನಂತರ ಕಾರ್ಯಾಚರಣೆ ಕೆಂಗಲ್ ಹನುಮಂತಯ್ಯ ವೃತ್ತದಿಂದ ಕೋಡಿಹಳ್ಳಿ-ಸಂಗಮ ರಸ್ತೆಗೆ ವರ್ಗಾವಣೆಗೊಂಡಿತು. ಕಾರ್ಯಾಚರಣೆಯ ಬಗ್ಗೆ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿದೆ. ಬಹುಪಾಲು ಜನರು ಬೀದಿಬದಿಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿದ್ದನ್ನು ಸ್ವಾಗತಿಸಿದರೆ, ಇನ್ನು ಮಿಕ್ಕವರು ಬಡ ವ್ಯಾಪಾರಿಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ, ಬೇರೆ ಸ್ಥಳವನ್ನು ಸೂಚಿಸದೆ ಗದಾಪ್ರಹಾರ ನಡೆಸಿ ಅವರ ಬದುಕಿನ ಜೊತೆಗೆ ಆಟವಾಡುತ್ತಿರುವುದನ್ನು ಖಂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

