ಆರು ಪಟ್ಟಣಗಳ ಸಮಸ್ಯೆ ಕೇಳುವವರಾರು?
ಕೆ.ಎನ್. ರವಿ
ಟಿ ಮತ್ತಿಕೆರೆ ಜಯರಾಮ್
ಮಂಡ್ಯ/ ರಾಮನಗರ: ಬೆಂಗಳೂರು-ಮೈಸೂರು ರಸ್ತೆ ಸಂಚಾರ ಸುಗಮ ಸೌಧ ಕಟ್ಟಲು ಮಂಡ್ಯ-ರಾಮನಗರ ಜಿಲ್ಲೆಯ ಆರು ಪಟ್ಟಣಗಳಲ್ಲಿ ಮೇಲು ಸೇತುವೆ ನಿರ್ಮಾಣಕ್ಕೆ ಹೊಸ ಯೋಜನೆ ರೂಪಿಸಲು ಬಜೆಟ್ನಲ್ಲಿ ಒಪ್ಪಿಗೆ ನೀಡುವುದರ ಮೂಲಕ ಸರ್ಕಾರ ಈ ಆರು ಪಟ್ಟಣಗಳ ಅಭಿವೃದ್ಧಿಗೆ ಸಮಾಧಿ ಕಟ್ಟಿದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಹೇಳಿಕೊಳ್ಳುವಂತೆ ಯಾವುದೇ ಕೊಡುಗೆ ನೀಡಿಲ್ಲ. ಮಾತ್ರವಲ್ಲ, ಈ ಉಭಯ ಜಿಲ್ಲೆಗಳ ಅಭಿವೃದ್ಧಿಗೆ ಮಾರಕವಾಗಲಿರುವ ಮೇಲು ಸೇತುವೆ ನಿರ್ಮಾಣ ಮಾಡುವ ನಿರ್ಧಾರ ಬಜೆಟ್ನಲ್ಲಿ ಪ್ರಕಟಿಸಿ ಉಭಯ ಜಿಲ್ಲೆಗಳ ಜನರ ಮನಸ್ಸನ್ನು ಘಾಸಿಗೊಳಿಸಿದ್ದಾರೆ.
2006ರಲ್ಲಿ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ರಾಮನಗರ-ಚನ್ನಪಟ್ಟಣ ಹಾಗೂ ಬಿಡದಿಗಳಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಒಪ್ಪಿಕೊಂಡ ಸರ್ಕಾರ ನಿಗದಿತ ಅವಧಿಗೆ ಯೋಜನೆ
ಅನುಷ್ಠಾನಗೊಳಿಸುವಲ್ಲಿ ವಿಫಲವಾಯಿತು.ಈಗ ಮೇಲು ಸೇತುವೆ ನಿರ್ಮಾಣಕ್ಕೆ ಒಲವು ತೋರಿ ಬಜೆಟ್ನಲ್ಲಿ ಹಸಿರು ನಿಶಾನೆ ತೋರುವ ಮೂಲಕ ಈ ಆರು ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಕೊನೆ ಮೊಳೆ ಹೊಡದಂತಾಗಿದೆ.
ಆರು ಪಟ್ಟಣಗಳಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡುವುದರ ಮೂಲಕ ಆಯಾ ನಗರ, ಪಟ್ಟಣಗಳ ಅಭಿವೃದ್ಧಿಗೆ ಚಿಂತನೆ ಮಾಡಬೇಕಿತ್ತು. ಆದರೆ, ಈಗ ಕೇವಲ ಬೆಂಗಳೂರು, ಮೈಸೂರು ರಸ್ತೆ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಫ್ಲೈ ಓವರ್ ನಿರ್ಮಾಣದ ಯೋಜನೆ ರೂಪಿಸಲು ನಿರ್ಧಾರ ಮಾಡುವುದರ ಮೂಲಕ ಆರು ಪಟ್ಟಣಗಳ ಅಭಿವೃದ್ಧಿಗೆ ಮಾರಕವಾಗುವಂತಹ ನಿರ್ಧಾರವು ಈ ಭಾಗದ ಜನರ ವಿರೋಧಕ್ಕೆ ಕಾರಣವಾಗಿದೆ.
ಬೈಪಾಸ್ ನಿರ್ಮಾಣವಾದರೆ ನಗರ, ಪಟ್ಟಣಗಳ ಅಭಿವೃದ್ಧಿಗೆ ಪೂಕರವಾಗುತ್ತದೆ. ಆದರೆ, ಎಲ್ಲಾ ನಗರ ಮತ್ತು ಪಟ್ಟಣಗಳಲ್ಲಿ ಫಲವತ್ತಾದ ಭೂಮಿ ಇದೆ. ರೈತರು ಜಮೀನು ಕೊಡುವುದಿಲ್ಲ ಎಂಬ ಕುಂಟು ನೆಪ ಹೇಳಿ, ಎಲ್ಲಾ ಆರು ಪಟ್ಟಣಗಳಲ್ಲಿ ಮೇಲು ಸೇತುವೆ ನಿರ್ಮಾಣ ಮಾಡಿದರೆ ಪಟ್ಟಣಗಳ ಗತಿ ಏನಾಗಬಾರದು ಎಂಬುದನ್ನು ಯಾರಾದರೂ ಚಿಂತನೆ ಮಾಡಿದ್ದಾರೆಯೇ ಮೇಲು ಸೇತುವೆ ನಿರ್ಮಾಣ ಆರಂಭಿಸಿದರೆ ಕನಿಷ್ಠ ಎರಡು ವರ್ಷ ಕಾಲಾವಕಾಶ ಬೇಕು. ಅಲ್ಲಿಯವರೆಗೆ ಈ ಎಲ್ಲಾ ಪಟ್ಟಣಗಳಲ್ಲಿನ ಹಾಯ್ದು ಹೋಗುವ ವಾಹನಗಳ ಸಂಚಾರಕ್ಕೆ ಎಲ್ಲಿ ರಸ್ತೆ ಕಲ್ಪಿಸಿಕೊಡುತ್ತಾರೆ ಎಂಬುದು ಪ್ರಶ್ನೆಯಾಗಿದೆ.
ಅಧಿಕಾರಿಗಳಿಗೆ ಮಾತಿಗೆ ಮಣೆ: ಸಿದ್ದರಾಮಯ್ಯ ಅವರು ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ರೈತರು ಬೈಪಾಸ್ಗೆ ಅಗತ್ಯವಾದ ಭೂಮಿ ಸಿಗುವುದಿಲ್ಲ ಮತ್ತು ರೈತರು ಭೂಮಿಯನ್ನೂ ಕೊಡುವುದಿಲ್ಲ ಎಂಬ ಅಧಿಕಾರಿಗಳ ವರ್ಗಗಳ ಮಾತು ಕೇಳಿಕೊಂಡು ಮೇಲು ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ. ಆದರೆ ಯಾವುದೇ ಅಧಿಕಾರಿ ಅಥವಾ ಜನಪ್ರತಿನಿಧಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಜಮೀನು ಕೊಡಿ ಎಂದು ಯಾರನ್ನೂ ಕೇಳದೆ ಭೂಮಿಯನ್ನು ರೈತರ ಹೇಗೆ ಕೊಡುತ್ತಾರೆಂಬ ಸರಳ ಪ್ರಶ್ನೆ ಎದುರಾಗಿದೆ.
ಜನಮನ ಅರಿತರೆ ಸಾಕು: ಕೊನೆಯ ಪಕ್ಷ ಬೈಪಾಸ್ ರಸ್ತೆಗೆ ಅನುಮತಿ ಕೊಡದೆ, ಹೋದರೂ ಮೇಲು ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲು ಬಜೆಟ್ನಲ್ಲಿ ಚಾಲನೆ ನೀಡಿರುವುದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೂ ಕಾಲ ಮಿಂಚಿಲ್ಲ. ಜನಾಭಿಪ್ರಾಯ ಪಡೆದು ಜನಪ್ರತಿನಿಧಿಗಳ ಸಲಹೆಯಂತೆ ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಆರು ಪಟ್ಟಣಗಳಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಾದರೆ ಸರ್ಕಾರದ ಮರ್ಯಾದೆ ದ್ವಿಗುಣಗೊಳ್ಳುತ್ತದೆ ಇಲ್ಲದೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಬೆಲೆ ತೆತ್ತಬೇಕಾಗುತ್ತದೆ ಎನ್ನುವುದನ್ನು ಅರಿತರೆ ಸಾಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

