ಬೆಂಗಳೂರು ಗ್ರಾಮಾಂತರ

ಗುರು ನಮನ: ನಿವೃತ್ತ ಶಿಕ್ಷಕರಿಗೆ ವಂದನೆ

Published On :

ಕ.ಪ್ರ.ವಾರ್ತೆ   ಆನೇಕಲ್   ಜು. 15
ಅಕ್ಕರೆಯಿಂದ ಅಕ್ಷರ ಕಲಿಸಿದವನು ಅನ್ನವಿಟ್ಟವನ ಸಮಾನವೆಂದು ದಾಸ ಶ್ರೇಷ್ಠರು ಬಹಳ ಹಿಂದೆಯೇ ತಿಳಿಸಿದ್ದಾರೆ. ಆನೇಕಲ್ಲಿನ ಸಂಕ್ರಮಣ ಬಳಗದ ಸದಸ್ಯರು (ಹಳೆಯ ವಿದ್ಯಾರ್ಥಿಗಳು) ಇಂದು ಸಮಾಜದ ವಿವಿಧ
ಸ್ಥರಗಳಲ್ಲಿ ಉದ್ಯೋಗ, ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರೂ ಕುಟುಂಬತ ಸಹಿತ ಸೇರಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳ ನಿವೃತ್ತ ಶಿಕ್ಷಕರನ್ನು ಕರೆದು ವೇದಿಕೆಯಲ್ಲಿ ಸನ್ಮಾನ ನೀಡುತ್ತಿರುವುದು ಉತ್ತಮ ಸಂಸ್ಕಾರ ಎಂದು ನಾವಿಕ ಬಳಗದ ಕೃಷ್ಣಮೂರ್ತಿ ತಿಳಿಸಿದರು.
ಅವರು ಆನೇಕಲ್ಲಿನ ಹಳೆಯ ಮಾಧ್ಯಮಿಕ ಶಾಲಾ ಆವರಣದ, ಮುನಿಸ್ವಾಮಪ್ಪ ಸಭಾಂಗಣದಲ್ಲಿ ಸಂಕ್ರಮಣ ಬಳಗದ ಸದಸ್ಯರು ಹಮ್ಮಿಕೊಂಡಿದ್ದ ಗುರು ನಮನ ಕಾರ್ಯಕ್ರಮದಲ್ಲಿ ಮಾತನಾಡಿ ಮಕ್ಕಳಲ್ಲಿ ಹಿರಿಯರನ್ನು ಗೌರವಿಸುವ ಸಂಪ್ರದಾಯ ಹಾಗೂ ಸಂಸ್ಕಾರವನ್ನು ಬಾಲ್ಯದಲ್ಲೇ ಬೆಳೆಸಿರುವುದು ಈ ಸಭೆಯಲ್ಲಿ ತಿಳಿಯುತ್ತಿದ್ದು ಸಮಾಜದ ಏಳಿಗೆಗಾಗಿ ಶ್ರಮಿಸಿದ ನಿಸ್ವಾರ್ಥ ಸೇವೆ ನೀಡಿದ ಎಲ್ಲ ಮಹನೀಯರನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕೆಂದರು.
ಹೆಮ್ಮೆ ಇದೆ: ಅಮೆರಿಕದಲ್ಲಿ ಅಕ್ಕ ಬಳಗ ರಚಿಸಿಕೊಂಡು ಸಾಗರೋತ್ತರ ಪ್ರದೇಶದಲ್ಲಿ ಕನ್ನಡ ನಾಡು, ಭಾಷೆ, ಸಂಸ್ಕೃತಿಯನ್ನು ಪರಿಚಯಿಸಿದ ಹೆಮ್ಮೆ ನನಗಿದೆ ಎಂದ ಅವರು ಕೆಲ ಕಾರಣಗಳಿಗಾಗಿ ರಚಿತವಾದ ನಾವಿಕ ಬಳಗ ಸಹ ಅದೇ ಕೆಲಸದಲ್ಲಿ ನಿರತವಾಗಿದ್ದು ನಾಡಿನ ಕವಿಗಳು, ಪತ್ರಕರ್ತರು, ಸಮಾಜ ಸೇವಕರು, ಕಲಾವಿದರು ಸೇರಿದಂತೆ ಶ್ರೇಷ್ಠ ಕಾರ್ಯ ಮಾಡಿದವರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದೇವೆ. ಆನೇಕಲ್ಲಿನ ಮಣ್ಣಿನಲ್ಲಿ ಬೆಳೆದು ವಿದೇಶಗಳಲ್ಲಿ ಅಂತಾರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು ಅಕ್ಕ, ನಾವಿಕ ಬಳಗದ ಮೂಲಕ ಪರಿಚಯಿಸಿದ ಕೀರ್ತಿ ಅಜರಾಮರ ಎಂದರು.
ಸಂತಸದ ಸಂಗತಿ: ನಿವೃತ್ತ ಶಿಕ್ಷಕ ಕೆ. ಮಾದಪ್ಪ ಮಾತನಾಡಿ ಮಕ್ಕಳಿಗೆ ಅಕ್ಷರ ಕಲಿಸುವಾಗ ಮುಂದೆ ಆತ, ಆಕೆ ಕಲಿತು ರಾಷ್ಟ್ರದ ಹೆಮ್ಮೆಯಾಗಿ ತಾನು ಓದಿದ ಶಾಲೆ, ಊರು ಹಾಗೂ ಮನೆಗೆ ಕೀರ್ತಿ ತರಲೆಂದು ಹಾರೈಸುತ್ತೇವೆ. ನಿವೃತ್ತಿ ನಂತರ ಆರೋಗ್ಯವಂತ ಸಮಾಜ ಕಟ್ಟುವ ಕಾಯಕದಲ್ಲಿ ತೊಡಗುತ್ತೇವೆ. ಸಂಕ್ರಮಣ ಬಳಗದ ಸನ್ಮಾನ ಸಂತಸ ತಂದಿದ್ದು ನಿವೃತ್ತಿ ನಂತರವೂ ಶಿಷ್ಯ ಸಮೂಹದ ಜೊತೆ ಬೆರೆತಿರುವುದು ಮನೆ ಮದುವೆ ಸಂಭ್ರಮಕ್ಕಿಂತಲೂ ಮಿಗಿಲಾಗಿದೆ ಎಂದರು.
ಸಂಕ್ರಮಣ ಬಳಗದ ಗುರುನಾಗೇಶ್ ಮಾತನಾಡಿ ಬಾಲ್ಯದಲ್ಲಿ ಮುಂದಾಲೋಚನೆ ಇಲ್ಲದೇ ವಿದ್ಯೆ, ಉದ್ಯೋಗ, ಮನೆ, ಸಂಸಾರ ಎಂದು ಯಾಂತ್ರಿಕ ಬದುಕು ನಡೆಸುವ ಕಾಲದಲ್ಲಿ ಬಾಲ್ಯದ ಗೆಳೆಯರ ಒಂದು ಕೂಟ ರಚಿಸಿಕೊಂಡು ಗುರುನಮನ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಂದು ಗೃಹಸ್ಥರಾದ ಕೆಲ ಗೆಳೆಯರು ಉನ್ನತ ಉದ್ಯೋಗದಲ್ಲಿ ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರ ಸಂಪರ್ಕದಿಂದ ನಮ್ಮ ಊರಿಗೆ ಆಧುನಿಕ ಶಿಕ್ಷಣ, ಉದ್ಯೋಗ ಮಾಹಿತಿ  ಜೊತೆಗ ಶಾಲಾ ಆವರಣದಲ್ಲಿ ಗಿಡ ನೆಡುವುದು, ಶಾಲೆಗೆ ಸುಣ್ಣ-ಬಣ್ಣ, ಕಂಪ್ಯೂಟರ್ ಶಿಕ್ಷಣ ನೀಡುವ ಧ್ಯೇಯ ಹೊಂದಿದ್ದೇವೆ. ಆನೇಕಲ್ಲಿನಲ್ಲಿ ಬದುಕಿ ಬಾಳಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸುವ ಕಾಯಕ ಮುಂದಿನ ಗುರಿಯಾಗಿದೆ ಎಂದರು.
 ನಿವೃತ್ತ ಶಿಕ್ಷಕ ಆರ್. ಕಲ್ಯಾಣ ಸುಂದರರಾಜು, ಸಾಹಿತಿ ತಾ.ಸಿ. ತಿಮ್ಮಯ್ಯ, ನಿವೃತ್ತ ಶಿಕ್ಷಕರಾದ ಚೆಲುವಯ್ಯ, ಜಿ.ಎ.ಕುಮಾರ್, ಸಚ್ಚಿದಾನಂದ, ಬಸವರಾಜು, ಶರಣಪ್ಪ ಕಂಬಳಿ, ಸತ್ಯಾದೇವಿ, ಮುನಿರತ್ನಮ್ಮ, ಕೆಂಪಯ್ಯ, ರೇವಣ್ಣ, ಚೌಡರೆಡ್ಡಿ,  ನರಸಿಂಹಯ್ಯ, ಸತ್ಯನಾರಾಯಣ, ತಿಪ್ಪಣ್ಣ, ಚೂಡಾಮಣಿ ರವರನ್ನು ಗೌರವಿಸಲಾಯಿತು. ಸಮಿತಿಯ ನರಸಿಂಹಮೂರ್ತಿ ಸ್ವಾಗತ ಕೋರಿದರು. ಗುರುನಾಗೇಶ್ ನಿರೂಪಣೆ ಹಾಗೂ ವಂದನೆ ಸಲ್ಲಿಸಿದರು. ಕುಟುಂಬ ಸದಸ್ಯರು ಹಾಗೂ ಮಕ್ಕಳ ಪರಸ್ಪರ ಪರಿಚಯ ಕಾರ್ಯಕ್ರಮ ವಿಶಿಷ್ಟ ಸನ್ನಿವೇಶವಾಗಿತ್ತು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.