ಜೆಡಿಎಸ್ನಲ್ಲಿ ಅಸಮಾಧಾನದ ಹೊಗೆ
ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜು. 16
ಇಲ್ಲಿನ ತಾ.ಪಂ.ನಲ್ಲಿ ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರ ಜಾರಿಯಾಗದೆ ಆಡಳಿತಾರೂಢ ಜೆಡಿಎಸ್ನಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಮಿತಿ ಮೀರಿದ ಗುಂಪುಗಾರಿಕೆ ಪರಿಣಾಮ ಆಡಳಿತ ಹಳಿ ತಪ್ಪಿದ್ದು, ರು.2 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲು ಸಾಧ್ಯವಾಗಿಲ್ಲ.
16 ಸದಸ್ಯ ಬಲದ ತಾ.ಪಂ.ನಲ್ಲಿ ಜೆಡಿಎಸ್ 9 ಮತ್ತು ಕಾಂಗ್ರೆಸ್ 7 ಸದಸ್ಯರನ್ನು ಹೊಂದಿವೆ. ಸರಳ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಜೆಡಿಎಸ್ ಪಕ್ಷದಲ್ಲಿ ಗುಂಪುಗಾರಿಕೆ ಪ್ರಬಲವಾಗಿದೆ. ಈ ಕಾರಣಕ್ಕಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ವರಿಷ್ಠರೇ ಮಧ್ಯಸ್ಥಿಕೆ ವಹಿಸಬೇಕಾಗಿತ್ತು.
ಇಷ್ಟಾಗಿಯೂ ಎರಡನೇ 20 ತಿಂಗಳ ಅವಧಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಸದಸ್ಯರೊಬ್ಬರು ರಾಜಿನಾಮೆ ಬೆದರಿಕೆ ಒಡ್ಡಿ ರಂಪಾಟ ಸೃಷ್ಟಿಸಿದ್ದರು. ಕೆಲ ಸದಸ್ಯರು ಅಧ್ಯಕ್ಷ ಸ್ಥಾನದ ಆಯ್ಕೆ ವಿಷಯದಲ್ಲಿ ಪಟ್ಟು ಹಿಡಿದು, ಗೊಂದಲ ಉಂಟು ಮಾಡಿದ್ದರು.
ಜಾರಿಗೆ ಬರದ ಸೂತ್ರ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ 9 ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ವರಿಷ್ಠರು ಸಂಧಾನ ಸೂತ್ರ ರೂಪಿಸಿದ್ದರು. ಅದರಂತೆ ಉಭಯ ಸ್ಥಾನಗಳು ತಲಾ ಇಬ್ಬರಿಗೆ ಹಂಚಿಕೆಯಾಗಿದ್ದವು. ಈಗಾಗಲೇ ಉಭಯ ಸ್ಥಾನಗಳಿಗೆ ನಿಗದಿಪಡಿಸಿದ್ದ ಅವಧಿ ಮೀರಿದ್ದರೂ ಬದಲಾವಣೆ ಮಾತ್ರ ಆಗಿಲ್ಲ.
ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲು ಪುನರಾವರ್ತನೆ ಆಗಿದೆ. ಜೆಡಿಎಸ್ನಲ್ಲಿ ಇರುವ ಇಬ್ಬರಿಗೆ
ಸ್ಥಾನವನ್ನು ಹಂಚಿಕೆ ಮಾಡಲಾಗಿದೆ. ಅದರಂತೆ ಪ್ರಸ್ತುತ ಅಧ್ಯಕ್ಷೆಯಾಗಿರುವ ಭಾನುಮತಿ ಚಿಕ್ಕಬೋರೇಗೌಡ ಅವರಿಗೆ 8 ತಿಂಗಳ ಅವಧಿಯನ್ನು ಸೀಮಿತಗೊಳಿಸಲಾಗಿದೆ.
ಇವರ ಬಳಿಕ ಅಧ್ಯಕ್ಷ ಸ್ಥಾನಕ್ಕೇರಲು ಸುಜಾತ ಶಿವಲಿಂಗಪ್ಪ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನು, ಉಪಾಧ್ಯಕ್ಷ ಸ್ಥಾನವನ್ನು ಭದ್ರಯ್ಯ ಅವರಿಗೆ 4 ತಿಂಗಳ ಮಟ್ಟಿಗಷ್ಟೇ ನೀಡಲಾಗಿತ್ತು. ನಂತರದ ಅವಧಿಯನ್ನು ಎಚ್.ಎಸ್.ಶಿವಪ್ರಸಾದ್ ಅವರಿಗೆಂದು ತಿಳಿಸಲಾಗಿತ್ತು. ಈ ಬದಲಾವಣೆ ಇನ್ನೂ ನಡೆದಿಲ್ಲ.
ಹಕ್ಕೊತ್ತಾಯ ಮಂಡನೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನದ ಬದಲಾವಣೆ ನಡೆದಿರಲಿಲ್ಲ.
ಇದೀಗ ಒಡಂಬಡಿಕೆ ಸೂತ್ರವನ್ನು ಜಾರಿಗೊಳಿಸುವಂತೆ ಶಿವಪ್ರಸಾದ್ ಮತ್ತು ಗುಂಪಿನ ಸದಸ್ಯರು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು, ಶಾಸಕ ಎಚ್.ಸಿ.ಬಾಲಕೃಷ್ಣ ಮೇಲೆ ಒತ್ತಡ ಹೇರುತ್ತಿದ್ದಾರೆ.
ಈ ಬೆನ್ನಲ್ಲೇ ಅಧ್ಯಕ್ಷ ಸ್ಥಾನದ ಅವಧಿಯೂ ಮೀರಿದೆ. ಸರದಿಯಂತೆ ಸುಜಾತ ಅವರಿಗೆ ಅಧಿಕಾರ ನೀಡಬೇಕೆಂದು ಆಕಾಂಕ್ಷಿಯ ಪತಿ ಶಿವಲಿಂಗಪ್ಪ, ಬೆಂಬಲಿತ ಸದಸ್ಯರೂ ಹಕ್ಕೊತ್ತಾಯ ಮಂಡಿಸಿದ್ದಾರೆ. ಏಕ ಕಾಲಕ್ಕೆ ಉಭಯ ಸ್ಥಾನಗಳ ಬದಲಾವಣೆ ಬೇಡಿಕೆಯು ವರಿಷ್ಠರನ್ನು ಕಂಗೆಡಿಸಿದೆ.
ಉಭಯ ಗುಂಪಿನವರ ಬೇಡಿಕೆ ಆಲಿಸಿರುವ ಕೆ.ರಾಜು ಮತ್ತು ಬಾಲಕೃಷ್ಣ ಅವರೀಗ ವಿಷಯವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ. ಚೆಂಡು ಈಗ ಕುಮಾರಸ್ವಾಮಿ ಅಂಗಳದಲ್ಲಿದ್ದು, ಯಾವ ತೀರ್ಮಾನ ಹೊರ ಬೀಳುವುದೋ ಗೊತ್ತಿಲ್ಲ.
ಬಿಸಿ ತುಪ್ಪವಾಗಿದೆ: ಉಪಾಧ್ಯಕ್ಷ ಸ್ಥಾನಾಕಾಂಕ್ಷಿ ಶಿವಪ್ರಸಾದ್ ಅವರು ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಜಾಲಮಂಗಲ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ವೀರಶೈವ ಸಮುದಾಯಕ್ಕೆ ಸೇರಿದ ಅವರು ಕಳೆದ ಚುನಾವಣೆಯಲ್ಲಿ ಬಾಲಕೃಷ್ಣ ಅವರ ಗೆಲವಿಗೆ ಶ್ರಮಿಸಿದ್ದರು.
ಇದೀಗ ಶಿವಪ್ರಸಾದ್ ಅವರಿಗೆ ಅಧಿಕಾರ ದಕ್ಕಿಸಿಕೊಡಬೇಕು ಎನ್ನುವ ಇರಾದೆ ಬಾಲಕೃಷ್ಣ ಅವರಲ್ಲಿದೆ. ಬದಲಾವಣೆ ವಿಷಯದಲ್ಲಿ ವರಿಷ್ಠರು ದಿಟ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ. ಹಾಗೆಂದು ಅಸಮಾಧಾನಿತ ಸದಸ್ಯರು ವರಿಷ್ಠರನ್ನು ಧಿಕ್ಕರಿಸಿ ನಿಲ್ಲುವ ಧೈರ್ಯವನ್ನೂ ತೋರುತ್ತಿಲ್ಲ.
ಹೈಕಮಾಂಡ್ ನಿಲುವಿಗಾಗಿ ಸ್ಥಾನಾಕಾಂಕ್ಷಿಗಳು ಮತ್ತು ಅತೃಪ್ತ ಸದಸ್ಯರು ಕಾಯುತ್ತಿದ್ದಾರೆ. ಕಾಂಗ್ರೆಸ್ ಜತೆಗೂಡಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಪದಚ್ಯುತಗೊಳಿಸುವಂತಹ ಸ್ಥಿತಿ ಎದುರಾಗುವ ಮುನ್ನವೇ ಜೆಡಿಎಸ್ ವರಿಷ್ಠರು ಸೂಕ್ತ ನಿರ್ಧಾರ ತಳೆಯುವುದು ಅಗತ್ಯ ಎಂಬುದು ಜೆಡಿಎಸ್ ಕೆಲ ಮುಖಂಡರ ಅಂಬೋಣ.
ಆಡಳಿತಕ್ಕೆ ಗ್ರಹಣ: ಅಧಿಕಾರ ಹಸ್ತಾಂತರ ವಚನ ಪಾಲನೆ ಆಗದ ಜತೆಗೆ ಗುಂಪುಗಾರಿಕೆ ಪರಿಣಾಮ ರಾಮನಗರ ತಾಲೂಕು ಪಂಚಾಯಿತಿ ಆಡಳಿತಕ್ಕೆ ಗ್ರಹಣ ಹಿಡಿದಿದೆ. ಪ್ರತಿ ಸಭೆಯಲ್ಲೂ ಕೂಗಾಟ, ಮಾತಿನ ಚಕಮಕಿ ಇದ್ದದ್ದೇ. ಸಾರಮಸ್ಯದ ಕೊರತೆಯಿಂದ ಇಲ್ಲಿ ಸುಸೂತ್ರ ಆಡಳಿತ ಇಲ್ಲದಾಗಿದೆ.
ರಾಜ್ಯ ಸರ್ಕಾರದಿಂದ ಮಂಜೂರಾಗಿರುವ ರು.1 ಕೋಟಿ ವಿಶೇಷ ಅನುದಾನ, 13ನೇ ಹಣಕಾಸು ಆಯೋಗದ ಅನುದಾನ ಮತ್ತು ಲಿಂಕ್ ಡಾಕ್ಯುಮೆಂಟ್ ಅನುದಾನವೂ ಸಹಿತ ಸುಮಾರು ರು.2 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಿಲ್ಲ ಎಂದು ಸ್ವತಃ ತಾ.ಪಂ. ಸದಸ್ಯರೇ ದೂರುತ್ತಿದ್ದಾರೆ.
ಸಮಾಲೋಚಿಸಿ ತೀರ್ಮಾನ
ರಾಮನಗರ ತಾ.ಪಂ.ನಲ್ಲಿ ಆಗಿರುವ ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರವನ್ನು ಜಾರಿಗೊಳಿಸುವ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಟ್ಟಿಗೆ ಚರ್ಚಿಸಲಾಗಿದೆ. ಕರಗ ಮಹೋತ್ಸವದ ಬಳಿಕ ಮತ್ತೊಮ್ಮೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

