ಬೆಂಗಳೂರು ಗ್ರಾಮಾಂತರ

ಕಾನೂನು ಯಶಸ್ವಿ ಅನುಷ್ಠಾನ ಅಗತ್ಯ

Published On :

ಕ.ಪ್ರ.ವಾರ್ತೆ  ರಾಮನಗರ  ಜು. 16
ಕಾನೂನುಗಳನ್ನು ರೂಪಿಸಿದರಷ್ಟೇ ಸಾಲದು. ಅವುಗಳ ಯಶಸ್ವಿ ಅನುಷ್ಠಾನವಾಗಬೇಕಾದರೆ ಜನರಲ್ಲಿ ಕಾನೂನಿನ ಅರಿವು ಇದ್ದರಷ್ಟೇ ಸಾಧ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಕೋಮಲ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ತಾ.ಪಂ. ವತಿಯಿಂದ ಮಂಗಳವಾರ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಾಯದ ಮೇಲೆ ಬರೆ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಬೆಲೆ ಏರಿಕೆ ಪರಿಣಾಮ ಜನ ಜೀವನಕ್ಕೆ ತೊಂದರೆಯಾಗಿದ್ದು, ಬಡ ಜನರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಕೂಲಿಗೆ ಕಳುಹಿಸುತ್ತಿದ್ದಾರೆ ಎಂದು ಕೋಮಲ ವಿಷಾದಿಸಿದರು.
ಕಾರ್ಮಿಕರ ಹಿತ ರಕ್ಷಿಸಿ: ಎಲ್ಲ ಗಾರ್ಮೆಂಟ್  ಕಾರ್ಖಾನೆಗಳಿಗೂ ವೇತನ ನೀತಿ ಜಾರಿಯಲ್ಲಿರುತ್ತದೆ. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ, ಆರೋಗ್ಯ ವಿಮೆ, ಭವಿಷ್ಯ ನಿಧಿ ಸಹಿತ ಸಕಲ ಸವಲತ್ತುಗಳನ್ನೂ ಕಾರ್ಮಿಕರಿಗೆ ಒದಗಿಸಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗರಾಜು ತಿಳಿಸಿದರು.
ಆಡಳಿತ ಮಂಡಳಿ ಇಲ್ಲವೇ ಮಾಲೀಕರು ಸವಲತ್ತುಗಳನ್ನು ನೀಡದಿದ್ದ ಪಕ್ಷದಲ್ಲಿ ಕಾರ್ಮಿಕರು ತಮ್ಮ ಇಲಾಖೆಗೆ ದೂರು ದಾಖಲಿಸಬಹುದು. ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿ ಸೂಕ್ತ ಪರಿಹಾರದೊಂದಿಗೆ ನ್ಯಾಯ ಒದಗಿಸಲು ಇಲಾಖೆ ಬದ್ಧವಾಗಿದೆ ಎಂದು ಅವರು ಹೇಳಿದರು.
ವ್ಯವಸ್ಥಾಪಕರ ವಿರುದ್ಧ ಕಿಡಿ: ಕಾರ್ಖಾನೆಯಲ್ಲೇ ಇಂಥದ್ದೊಂದು ಮಹತ್ವದ ಕಾರ್ಯಕ್ರಮ ನಡೆಯುತ್ತಿದ್ದಾಗ ಆ ಕಾರ್ಖಾನೆ ವ್ಯವಸ್ಥಾಪಕ ತಮ್ಮ ಕೊಠಡಿಯಲ್ಲೇ ಕುಳಿತಿದ್ದರು. ಈ ಮಾಹಿತಿ ತಿಳಿದ ಕಾರ್ಮಿಕ ಅಧಿಕಾರಿ ನಾಗರಾಜು ಕೆಂಡಾಮಂಡಲರಾದರು.
ಕಾನೂನಿನ ಅರಿವು ಕಾರ್ಮಿಕರಿಗಷ್ಟೇ ಅಲ್ಲದೆ ಆಡಳಿತ ವರ್ಗಕ್ಕೂ ಬೇಕಿದೆ. ಸರ್ಕಾರ ಕಾರ್ಖಾನೆ ಬಾಗಿಲಿಗೆ ಬಂದು ಕಾರ್ಯಕ್ರಮ ಆಯೋಜಿಸಿದ್ದರೂ ಪಾಲ್ಗೊಳ್ಳದೆ ನಿರ್ಲಕ್ಷ್ಯ ವಹಿಸಿದ ವ್ಯವಸ್ಥಾಪಕರ ಧೋರಣೆ ಬಗ್ಗೆ ಅವರು ಕಿಡಿ ಕಾರಿದರು.
ಖುದ್ದು ನ್ಯಾಯಾಧೀಶರೇ ಇಲ್ಲಿದ್ದರೂ ದೂರ ಉಳಿದ ಬಗ್ಗೆ ತರಾಟೆಗೆ ತೆಗೆದುಕೊಂಡರು. ಆ ಬಳಿಕ ತಪ್ಪಿನ ಅರಿವಾಗಿ ಗಾರ್ಮೆಂಟ್ ವ್ಯವಸ್ಥಾಪಕ ಕ್ಷಮೆಯಾಚಿಸಿದರು. ನಂತರ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಕಾರ್ಮಿಕ ನಿರೀಕ್ಷಕ ಬಿ.ಎಚ್.ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ಶಾಂತಪ್ಪ, ಕಾರ್ಯದರ್ಶಿ ಮಹೇಶ್, ಉಪಾಧ್ಯಕ್ಷ ಚಿಕ್ಕಪ್ಪಾಜಿ, ಖಜಾಂಚಿ ಟಿ.ಎಂ.ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.