ಜಿಲ್ಲಾ ಪಂಚಾಯಿತಿಗೆ ರಾಜು ಸಾರಥಿ
ಕ.ಪ್ರ.ವಾರ್ತೆ, ರಾಮನಗರ, ಜು.20
ನಿರೀಕ್ಷೆಯಂತೆಯೇ ಕೈಲಾಂಚ ಕ್ಷೇತ್ರದ ಜೆಡಿಎಸ್ ಸದಸ್ಯ ಎಚ್.ಸಿ. ರಾಜು ಅವರು ರಾಮನಗರ ಜಿಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಜಿಪಂ ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವಲ್ಲಿ ಜೆಡಿಎಸ್ ಸಫಲವಾಗಿದೆ.
ಅಧಿಕಾರ ಒಡಂಬಡಿಕೆ ಸೂತ್ರದಂತೆ ಮುದ್ದುರಾಜ್ ಯಾದವ್ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಎಚ್.ಸಿ. ರಾಜು ಅವರು 12 ಮತ ಪಡೆದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಇಕ್ಬಾಲ್ ಹುಸೇನ್ 10 ಮತ ಗಳಿಸಿದರು.
22 ಸದಸ್ಯ ಬಲದ ಜಿಪಂನಲ್ಲಿ ಜೆಡಿಎಸ್ 12 ಹಾಗೂ ಕಾಂಗ್ರೆಸ್ 10 ಸದಸ್ಯರನ್ನು ಹೊಂದಿವೆ. ಸರಳ ಬಹುಮತ ಹೊಂದಿರುವ ಜೆಡಿಎಸ್ ಪಕ್ಷದಲ್ಲಿ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿದ್ದು, ಚುನಾವಣೆ ಸಂಬಂಧ ವರಿಷ್ಠರಲ್ಲಿ ಮೂಡಿದ್ದ ಆತಂಕ ನಿವಾರಿಸಿದ್ದಾರೆ.
ಅಧಿಕಾರ ಹಸ್ತಾಂತರ: ಚುನಾವಣಾಧಿಕಾರಿಯಾಗಿದ್ದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಂ.ಎಸ್. ರವಿಶಂಕರ್, ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ ಜಿಪಂ ಸಿಇಒ ಡಾ. ವೆಂಕಟೇಶ್ ಅವರು ನೂತನ ಅಧ್ಯಕ್ಷ ಎಚ್.ಸಿ. ರಾಜು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಟಿ.ವೆಂಕಟೇಶ್ ಹಾಜರಿದ್ದರು.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಜೆಡಿಎಸ್ ಸದಸ್ಯರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಜಿಪಂ ಭವನದ ಹೊರಗೆ ಜೆಡಿಎಸ್ ಕಾರ್ಯಕರ್ತರು ಮತ್ತು ರಾಜು ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ರಾಜು ನಿವಾಸಕ್ಕೆ ದಂಡು: ಚುನಾವಣೆ ಮುಗಿದು, ಫಲಿತಾಂಶ ಪ್ರಕಟದ ತರುವಾಯ ನೂತನ ಅಧ್ಯಕ್ಷ ಎಚ್.ಸಿ. ರಾಜು ಮತ್ತು ಜೆಡಿಎಸ್ ಸದಸ್ಯರ ದಂಡು ಪಕ್ಷದ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ.ರಾಜು ಅವರ ನಿವಾಸಕ್ಕೆ ತೆರಳಿತು. ಅಲ್ಲಿ ನೂತನ ಅಧ್ಯಕ್ಷರನ್ನು ಶಾಸಕ ಎಚ್.ಸಿ. ಬಾಲಕೃಷ್ಣ, ರಾಜು ಅಭಿನಂದಿಸಿದರು. ಲೋಕಸಭೆ ಮರು ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಪರಿಣಾಮ ನೂತನ ಅಧ್ಯಕ್ಷರನ್ನು ಅಭಿನಂದಿಸಲು ಜಿಪಂ ಸಭಾಂಗಣದತ್ತ ಶಾಸಕ, ಮಾಜಿ ಶಾಸಕರು ಆಗಮಿಸಲಿಲ್ಲ. ತಾವಿದ್ದಲ್ಲಿಗೆ ಕರೆಸಿಕೊಂಡು, ಅಭಿನಂದಿಸಿದ್ದಾರೆ ಎಂದು ಹೇಳಲಾಗಿದೆ.
ಕಡೆಯವರೆಗೆ ಪ್ರಯತ್ನ: ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಎಚ್.ಸಿ. ರಾಜು ಮತ್ತು ಕಾಂಗ್ರೆಸ್ ಪಕ್ಷದಿಂದ ಇಕ್ಬಾಲ್ ಹುಸೇನ್ ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆ ಬಳಿಕ ಎರಡೂ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದರು. ನಂತರ ವಾಪಸ್ಸಾತಿಗೆ 10 ನಿಮಿಷ ಅವಕಾಶ ನೀಡಲಾಯಿತು.
ಈ ಅವಧಿಯಲ್ಲಿ ನಾಮಪತ್ರ ವಾಪಸ್ ತೆಗೆದುಕೊಂಡು, ಅವಿರೋಧ ಆಯ್ಕೆಗೆ ಅವಕಾಶ ಕಲ್ಪಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರನ್ನು ಜೆಡಿಎಸ್ ಅಭ್ಯರ್ಥಿ ರಾಜು ಸಹಿತ ಕೆಲ ಸದಸ್ಯರು ಮನವಿ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ಕಡೆಗೆ, ಚುನಾವಣೆ ಅನಿವಾರ್ಯವಾಯಿತು.
ಶತಾಯ ಗತಾಯ ಅಧ್ಯಕ್ಷರಾಗಬೇಕೆಂದು ಪ್ರಯತ್ನ ನಡೆಸಿದ್ದ ಗಣಿ ಉದ್ಯಮಿಯೂ ಆದ ಇಕ್ಬಾಲ್ ಹುಸೇನ್ ಈ ನಿಟ್ಟಿನಲ್ಲಿ ಸಾಕಷ್ಟು ಹೋರಾಟ ನಡೆಸಿದ್ದರು. ಕಡೆ ಕ್ಷಣದಲ್ಲಿ ಪವಾಡ ನಡೆಸಿಯಾದರೂ ಗೆಲ್ಲಬೇಕೆನ್ನುವ ನಿಟ್ಟಿನಲ್ಲಿ ಅವರು ನಡೆಸಿದ ಪ್ರಯತ್ನಕ್ಕೆ ಜೆಡಿಎಸ್ ಸದಸ್ಯರು ತಣ್ಣೀರೆರೆಚಿದರು.
ಏಟು- ತಿರುಗೇಟು
ಜೆಡಿಎಸ್ ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರ ರೂಪಿಸಿಕೊಂಡು, ಐದಾರು ತಿಂಗಳಿಗೆಲ್ಲಾ ಒಬ್ಬೊಬ್ಬ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಬದಲಿಸುತ್ತಿರುವುದರ ಪರಿಣಾಮ ಜಿಪಂನಲ್ಲಿ ಅಭಿವೃದ್ಧಿ ಕೆಲಸಕ್ಕೆ ಮಾರಕವಾಗಿದೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು, ಕನಕಪುರ ತಾಪಂನಲ್ಲಿ ಸ್ವತಃ ಕಾಂಗ್ರೆಸ್ ಪಕ್ಷವು 3- 4 ತಿಂಗಳಿಗೆಲ್ಲಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಬದಲಿಸುತ್ತಿದೆ. ಆ ಪಕ್ಷದವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದು ತಿರುಗೇಟು ನೀಡಿದ್ದಾರೆ.
ಎಚ್ಡಿಕೆಗೆ ಕೃತಜ್ಞತೆ
ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಜಿಪಂ ಸದಸ್ಯ ಸ್ಥಾನ ನೀಡಿ, ಇದೀಗ ಅಧ್ಯಕ್ಷ ಸ್ಥಾನವನ್ನೂ ಕಲ್ಪಿಸಿರುವುದಕ್ಕಾಗಿ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನೂತನ ಅಧ್ಯಕ್ಷ ಎಚ್.ಸಿ.ರಾಜು ತಿಳಿಸಿದರು. ಚುನಾವಣೆ ಬಳಿಕ ಖಾಸಗಿ ಹೋಟೆಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಎಚ್.ಸಿ. ಬಾಲಕೃಷ್ಣ, ಪಕ್ಷದ ಜಿಲ್ಲಾಧ್ಯಕ್ಷ ಕೆ.ರಾಜು ಮತ್ತು ಜಿಪಂನ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸುವುದಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಯಿತು. ಅದೇ ಕಾರಣಕ್ಕಾಗಿ ಈಗಲೂ ತಾವು ಅಭಿವೃದ್ಧಿ ವಿಷಯದ ಬಗ್ಗೆ ಪ್ರಸ್ತಾಪಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

