ಬೆಂಗಳೂರು ಗ್ರಾಮಾಂತರ

ಬಿಡದಿಯಲ್ಲಿ ಗುರುಪೂರ್ಣಿಮೆ ಆಚರಿಸಿಕೊಂಡ ನಿತ್ಯಾನಂದ

Published On :

ಕ.ಪ್ರ. ವಾರ್ತೆ ರಾಮನಗರ ಜು.22
ಕಳೆದ ವರ್ಷ ವಿವಾದ ಹಿನ್ನೆಲೆಯಲ್ಲಿ ಬಿಡದಿಯ ಧ್ಯಾನಪೀಠಂ ತೊರೆದಿದ್ದ ಸ್ವಘೋಷಿತ ದೇವಮಾನವ ನಿತ್ಯಾನಂದ ಈ ಬಾರಿ ಧ್ಯಾನಪೀಠಂನಲ್ಲೇ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಸೋಮವಾರ ಸಹಸ್ರಾರು ಅನುಯಾಯಿ ವೃಂದದೊಂದಿಗೆ ವೈಭವೋಪೇತವಾಗಿ ಆಚರಿಸಿಕೊಂಡಿದ್ದಾರೆ.
ಪ್ರತಿವರ್ಷ ಧ್ಯಾನಪೀಠಂದಲ್ಲಿ ನಿತ್ಯಾನಂದ ಗುರು ಪೂರ್ಣಿಮೆ ಆಚರಿಸಿಕೊಂಡು ಬಂದಿದ್ದರು. ಕಳೆದ ಬಾರಿ ಧಾರ್ಮಿಕ ಸಹಿತ ಯಾವ ಆಚರಣೆ ನಡೆಸುವುದಿಲ್ಲ, ಶಾಂತಿಭಂಗ ಉಂಟು ಮಾಡುವುದಿಲ್ಲವೆಂದು ಜಿಲ್ಲಾಡಳಿತಕ್ಕೆ ಮುಚ್ಚಳಿಕೆ ಬರೆದುಕೊಟ್ಟು ಆಶ್ರಮ ತೊರೆದಿದ್ದರು.
ಆಗ ತನ್ನ ಹುಟ್ಟೂರಾದ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಗುರು ಪೂರ್ಣಿಮೆ ಆಚರಿಸಿಕೊಂಡು, ಸಂಭ್ರಮಿಸಿದ್ದರು. ಈಗ ವಿವಾದವೆಲ್ಲಾ ತಣ್ಣಗಾಗಿದ್ದು, ಆಶ್ರಮದಲ್ಲೇ ತನ್ನ ಮಾಮೂಲು ಆಚರಣೆಗಳ ಸಮೇತ ಅನುಯಾಯಿಗಳೊಂದಿಗೆ ಗುರು ಪೂರ್ಣಿಮೆಯಲ್ಲಿ ವಿಜೃಂಭಿಸಿದ್ದಾರೆ.
ನಡೆದ ಆಚರಣೆಯಿದು: ಗುರು ಪೂರ್ಣಿಮೆಯಂದು ಭಕ್ತ ಸಮೂಹವು ನಿತ್ಯಾನಂದರನ್ನು ಗುರು ಮಾತ್ರವಲ್ಲದೆ ಸಾಕ್ಷಾತ್ ದೇವರಂತೆ ಪೂಜಿಸುವುದು ಇಲ್ಲಿ ನಡೆದು ಬಂದಿದೆ. ಒಂದೊಂದು ಪೂಜೆಗೂ ಭಿನ್ನವಾದ ಪೋಷಾಕಿನೊಂದಿಗೆ ನಿತ್ಯಾನಂದ ಕಾಣಿಸಿಕೊಳ್ಳುತ್ತಾರೆ.
ನಿತ್ಯಾನಂದರ ಪಾದಗಳಷ್ಟೇ ಅಲ್ಲದೆ ಅವರ ಪಾದುಕೆಗಳಿಗೂ ಇಲ್ಲಿ ಪೂಜೆ ನಡೆಸಲಾಗಿದೆ. ನಿತ್ಯಾನಂದರಿಗೆ ವಿಶೇಷ ಪೂಜೆ ಮತ್ತು ಮಹಾ ಮಂಗಳಾರತಿ, ಪಲ್ಲಕ್ಕಿ ಉತ್ಸವ ನಡೆದಿದೆ. 1008 ಶಿವಲಿಂಗಳಿಂದ ಸುತ್ತುವರಿದ 21 ಅಡಿ ಎತ್ತರದ ಆತ್ಮಲಿಂಗಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿತು.  
ಹಿಂದೆಲ್ಲಾ ಈ ಆಚರಣೆ ವೇಳೆ ನಿತ್ಯಾನಂದ ಉಪದೇಶದಿಂದ ಪ್ರಭಾವಿತರಾದ ಅನುಯಾಯಿಗಳು ಕುಣಿದು ಕುಪ್ಪಳಿಸುತ್ತಿದ್ದರು. ಈ ಬಾರಿ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸದೆ ನಡೆಸಿರುವ ಗುರುಪೂರ್ಣಿಮೆಯಲ್ಲಿ ಆ ಕಾರ್ಯಕ್ರಮದ ಬಗ್ಗೆ ಖಚಿತ ಮಾಹಿತಿ ಇಲ್ಲ.
ಸಂದೇಶ ರವಾನೆ: ವಿಶ್ವದ ನಾನಾ ಕಡೆ ಇರುವ ನಿತ್ಯಾನಂದರ ಆಶ್ರಮ ಶಾಖೆಗಳಲ್ಲೂ ಗುರು ಪೂರ್ಣಿಮಾ ಆಚರಣೆ ನಡೆದಿದೆ. ಅಲ್ಲಿನ ಕಾರ್ಯಕ್ರಮದ ಪ್ರಸಾರವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಿದ ನಿತ್ಯಾನಂದ ಇಲ್ಲಿಂದಲೇ ಅಲ್ಲಿನ ಅನುಯಾಯಿಗಳಿಗೂ ಸಂದೇಶ ರವಾನಿಸಿದ್ದಾರೆ.
ತಮ್ಮ ಆಧ್ಯಾತ್ಮಕ ಕರ್ಮವೆಲ್ಲವೂ ಜಗತ್ತಿನ ಶಾಂತಿಗಾಗಿಯೇ ಎಂದು ಹೇಳಿಕೊಂಡಿರುವ ನಿತ್ಯಾನಂದ, ಗುರು ಮತ್ತು ಶಿಷ್ಯರ ಸಂಬಂಧದ ಬಗ್ಗೆ ತಮ್ಮ ಸಂದೇಶದಲ್ಲಿ ವಿಸ್ತೃತ ವಿವರಣೆ ನೀಡಿದ್ದಾರೆ ಎನ್ನುವ ಮಾಹಿತಿಯನ್ನು ಧ್ಯಾನಪೀಠಂ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.