ಬೆಂಗಳೂರು ಗ್ರಾಮಾಂತರ

'ನಿತ್ಯಾ' ಆಶ್ರಮದ 47 ಮಕ್ಕಳ ರಕ್ಷಣೆಗೆ ಜಿಲ್ಲಾಡಳಿತಕ್ಕೆ ಸೂಚನೆ

Published On :

ಕ.ಪ್ರ.ವಾರ್ತೆ, ರಾಮನಗರ, ಜು.24
ಬಿಡದಿಯ ನಿತ್ಯಾನಂದ ಧ್ಯಾನಪೀಠ ಆಶ್ರಮದಲ್ಲಿರುವ 47 ಮಕ್ಕಳನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯು ರಾಮನಗರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಧ್ಯಾನಪೀಠದಲ್ಲಿ ಅಕ್ರಮ ಮತ್ತು ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳುವಂತೆ ಸರ್ಕಾರದ ಅಂಗಸಂಸ್ಥೆಯಾಗಿರುವ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಗುರ್ನೀತ್ ತೇಜ್ ಅವರು ಇದೇ ತಿಂಗಳ 2ರಂದು ಪತ್ರ ರವಾನಿಸಿದ್ದಾರೆ.
ಒಳಾಡಳಿತ ಸಚಿವಾಲಯದಿಂದ ಸ್ವೀಕೃತವಾದ ಟಿಪ್ಪಣಿ ಪತ್ರವನ್ನಾಧರಿಸಿ ಮಕ್ಕಳ ರಕ್ಷಣೆಗೆ ಸೂಚನೆ ನೀಡಲಾಗಿದೆ. ಈ ಕುರಿತು ಜರೂರಾಗಿ ಸಕಾರಾತ್ಮಕ ತೀರ್ಮಾನ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಪತ್ರದಲ್ಲಿ ನಿರ್ದೇಶನ ನೀಡಲಾಗಿದೆ.
ಸದರಿ ವಿಷಯವಾಗಿ ಮಕ್ಕಳ ರಕ್ಷಣಾಧಿಕಾರಿಗಳ ವರದಿ ಕೋರಲಾಗಿತ್ತಾದರೂ ಇಲ್ಲಿವರೆಗೆ ಸಲ್ಲಿಕೆಯಾಗಿಲ್ಲ. ಹೀಗಾಗಿ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಿ, ನಿತ್ಯಾನಂದ ಆಶ್ರಮದಲ್ಲಿರುವ 47 ಮಕ್ಕಳನ್ನು ರಕ್ಷಿಸಬೇಕು ಎಂದು ಗುರ್ನೀತ್ ತೇಜ್ ಳಿಸಿದ್ದಾರೆ.
ತಂಡದ ಭೇಟಿಗೆ ಅಡ್ಡಿ: ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಹಾಗೂ ರಾಮನಗರ ಡಿಸಿ ಶ್ರೀರಾಮರೆಡ್ಡಿ ಸೂಚನೆಯಂತೆ ಬುಧವಾರ ಧ್ಯಾನಪೀಠಕ್ಕೆ ತೆರಳಿದ್ದ ತಮಗೆ ನಿತ್ಯಾನಂದ ಅನುಯಾಯಿಗಳು ಅಡ್ಡಿಪಡಿಸಿದ್ದಾರೆ ಎಂದು ತಂಡದಲ್ಲಿದ್ದ ಮಕ್ಕಳ ರಕ್ಷಣಾಧಿಕಾರಿ ರಾಧಾ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಎಡ್ವರ್ಡ್ ಥಾಮಸ್, ಶಿವರಾಜೇಗೌಡ ಆರೋಪಿಸಿದರು.
ಪ್ರಾರಂಭದಲ್ಲಿ ಧ್ಯಾನಪೀಠ ಪ್ರವೇಶಕ್ಕೆ ಅಡೆತಡೆಯಾಯಿತು. ನಿತ್ಯಾನಂದ ಅನುಯಾಯಿಗಳು ತಮ್ಮೊಂದಿಗೆ ಮಾತಿನ ಚಕಮಕಿಗೆ ಇಳಿದು, ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಪೊಲೀಸ್ ದೂರು ದಾಖಲಿಸುವುದಾಗಿ ಎಚ್ಚರಿಸಿದ ನಂತರವಷ್ಟೇ ಪ್ರವೇಶಾವಕಾಶ ಕಲ್ಪಿಸಲಾಯಿತು ಎಂದು ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಧ್ಯಾನಪೀಠಕ್ಕೆ ತೆರಳಿದ ತಾವು ಅಲ್ಲಿರುವ ಮಕ್ಕಳೊಂದಿಗೆ ಮಾತುಕತೆ ನಡೆಸಲು ಆಸ್ಪದ ನೀಡಲಿಲ್ಲ. ಧ್ಯಾನಪೀಠದಲ್ಲಿರುವವರು ಸಂತೋಷದಿಂದ ಇದ್ದಾರೆಯೇ, ಬಲವಂತಕ್ಕೆ ಅಲ್ಲಿದ್ದಾರೆಯೇ, ಅಲ್ಲಿ ಏನೆಲ್ಲಾ ಸವಲತ್ತುಗಳು ಸಿಗುತ್ತಿವೆ ಎನ್ನುವುದನ್ನು ತಿಳಿಯಲು ಸಾಧ್ಯವಾಗಲೇ ಇಲ್ಲ ಎಂದು ಅವರು ದೂರಿದರು.
ಆಯೋಗದಿಂದ ನೋಟಿಸ್: ಒಂದು ಶಾಲೆ ನಡೆಸಲು ಅನುಮತಿ ಕಡ್ಡಾಯ. ಧ್ಯಾನಪೀಠದಲ್ಲಿ ವ್ಯಾಸಂಗ ಮಾಡಿಸುತ್ತಿದ್ದೇವೆ ಎಂದು ಹೇಳಲಾಗುತ್ತಿರುವ 47 ಮಕ್ಕಳಿಗೆ ಯಾವುದೇ ಪರೀಕ್ಷೆ, ಸರ್ಟಿಫಿಕೇಟ್ ಕೂಡ ಇಲ್ಲ. ಹೀಗಾಗಿ ಅಲ್ಲಿ ಮಕ್ಕಳನ್ನು ಏಕೆ ಇರಿಸಿಕೊಳ್ಳಲಾಗಿದೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ರಾಧಾ, ಎಡ್ವರ್ಡ್ ಥಾಮಸ್, ಶಿವರಾಜೇಗೌಡ ತಿಳಿಸಿದರು.  
ತಮ್ಮ ಈ ಭೇಟಿಗೆ ಅಡ್ಡಿಪಡಿಸಿರುವ ಸಂಬಂಧ ಧ್ಯಾನಪೀಠಕ್ಕೆ ಮಕ್ಕಳ ರಕ್ಷಣಾ ಆಯೋಗದಿಂದ ನೋಟಿಸ್ ೃ ಜಾರಿಗೊಳಿಸಲಾಗುವುದು. ಅಲ್ಲಿರುವ ಮಕ್ಕಳ ಹಿತದೃಷ್ಟಿಯಿಂದ ಆಯೋಗವು ತನ್ನೆಲ್ಲಾ ಅಧಿಕಾರವನ್ನು ಬಳಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಇಒ ಮುನಿಕೆಂಪೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.