ಅಣೆದೊಡ್ಡಿಯಲ್ಲಿ ಡೆಂಘೀ, ಚಿಕೂನ್ಗುನ್ಯಾ; ಬಾಲಕಿ ಸಾವು
ಕ.ಪ್ರ.ವಾರ್ತೆ, ರಾಮನಗರ, ಜು.24
ಕನಕಪುರ ತಾಲೂಕಿನ ಅಣೆದೊಡ್ಡಿಯಲ್ಲಿ ಕಳೆದ ಒಂದು ತಿಂಗಳಿಂದ 150ಕ್ಕೂ ಹೆಚ್ಚು ಮಂದಿಗೆ ಜ್ವರ ಬಾಧೆ ತಲೆದೋರಿದ್ದು, 40 ಮಂದಿಗೆ ಡೆಂಘೀ ಎಂದು ಶಂಕಿಸಲಾಗಿದೆ. ತಲಾ 8 ಮಂದಿಗೆ ಡೆಂಘೀ ಮತ್ತು ಚಿಕೂನ್ ಗುನ್ಯಾ ಇರುವುದು ದೃಢಪಟ್ಟಿದೆ. ಬುಧವಾರ ಡೆಂಘೀ ಪೀಡಿತ ನಾಲ್ಕು ವರ್ಷದ ಬಾಲಕಿಯೊಬ್ಬಳು ಅಸುನೀಗಿದ್ದು, ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ.
ಜ್ವರ ಪೀಡಿತರ ರಕ್ತ ಮಾದರಿಯನ್ನು ತೆಗೆದುಕೊಂಡು, ಪರೀಕ್ಷೆಗೊಳಪಡಿಸಲಾಗಿದೆ. ಸ್ನೇಹಾ(4) ಸಾವನ್ನಪ್ಪಿರುವ ದುರ್ದೈವಿ. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಅಸುನೀಗಿದ್ದಾಳೆ.
ಈ ಸಾವಿನ ಬೆನ್ನಲ್ಲೇ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದೀಗ ಅಣೆದೊಡ್ಡಿಯ ಹಾದಿ ಹುಡುಕಿಕೊಂಡು ಹೋಗಿದ್ದಾರೆ. ಅಲ್ಲೀಗ ಜ್ವರಬಾಧೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿಪರೀತ ಜ್ವರಬಾಧೆ: ದೊಂಬರದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಣೆದೊಡ್ಡಿ ಪುಟ್ಟ ಹಳ್ಳಿ. ಅಲ್ಲಿ ಕಳೆದ ಒಂದು ತಿಂಗಳಿಂದಲೇ ಗ್ರಾಮದ ನೂರಾರು ಮಂದಿಗೆ ವಿಪರೀತ ಜ್ವರಬಾಧೆ ಕಾಣಿಸಿಕೊಂಡಿದೆ. ಹಲವರು ಚೇತರಿಸಿಕೊಂಡಿದ್ದು, ಕೆಲವರಿಗೆ ಡೆಂಘೀ ದೃಢಪಟ್ಟಿದೆ. ಜ್ವರಬಾಧೆ ಇದೀಗ ವ್ಯಾಪಿಸಿದೆ.
ಸಾಕಷ್ಟು ಮಂದಿಗೆ ಜ್ವರ ಕಾಣಿಸಿಕೊಂಡ ಮಾಹಿತಿ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ವಾರದ ಹಿಂದಷ್ಟೇ ಶಿಬಿರ ನಡೆಸಿದ್ದರು. ಜ್ವರಪೀಡಿತರಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ನೀಡಿ, ರೋಗಿಗಳ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು.
ರಕ್ತ ಮಾದರಿಯಲ್ಲಿ 40 ಮಂದಿಗೆ ಡೆಂಘೀ ಶಂಕೆ, ತಲಾ 8 ಮಂದಿಗೆ ಡೆಂಘೀ ಮತ್ತು ಚಿಕೂನ್ಗುನ್ಯಾ ದೃಢಪಟ್ಟಿದೆ. ಬಾಲಕಿ ಸ್ನೇಹಾ ಸಾವಿನ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷ ಎಚ್.ಸಿ.ರಾಜು, ಸಿಇಒ ಡಾ.ಎಂ.ವಿ.ವೆಂಕಟೇಶ್ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮತ್ತೆ ವೈದ್ಯರ ತಂಡ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಘುನಾಥ್ ನೇತೃತ್ವದ ವೈದ್ಯರ ತಂಡವು ಅಣೆದೊಡ್ಡಿ ಗ್ರಾಮದಲ್ಲಿ ಮತ್ತೆ ಶಿಬಿರ ಪ್ರಾರಂಭಿಸಿದೆ. ಜ್ವರ ಹತೋಟಿಗೆ ಬರುವವರೆಗೂ ಗ್ರಾಮದಲ್ಲೇ ಕ್ಯಾಂಪ್ ಮುಂದುವರಿಕೆಗೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಗ್ರಾಮಸ್ಥರನ್ನು ಸಮಗ್ರವಾಗಿ ತಪಾಸಣೆ ನಡೆಸಿದ್ದು, ಡೆಂಘೀ ಅನುಮಾನವಿರುವ ಮತ್ತಷ್ಟು ಮಂದಿಯ ರಕ್ತ ಮಾದರಿ ಪಡೆದು ಪರೀಕ್ಷೆ ಕಳುಹಿಸಲಾಗುತ್ತಿದೆ.
ಅರಿವು ಕಾರ್ಯಕ್ರಮ: ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ಮಾತ್ರವಲ್ಲದೆ ಗ್ರಾಮದ ಮನೆ ಮನೆಗೆ ತೆರಳಿ ಡೆಂಘೀ ಹರಡುವ ಸೊಳ್ಳೆಗಳ ನಿಯಂತ್ರಣ ಸಂಬಂಧ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲೂ ತೊಡಗಿದ್ದಾರೆ.
ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲು, ಬಾಲಕಿ ಗಂಭೀರ
ರಾಮನಗರ: ಕನಕಪುರ ತಾಲೂಕಿನ ಅಣೆದೊಡ್ಡಿಯಲ್ಲಿ ತೀವ್ರ ಜ್ವರಬಾಧೆಗೆ ಒಳಗಾದವರು, ಡೆಂಘೀ ಮತ್ತು ಚಿಕೂನ್ಗುನ್ಯಾ ಪೀಡಿತರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಡೆಂಘೀ ದೃಢಪಡದವರನ್ನು ಸ್ಥಳೀಯ ಶಿಬಿರದಲ್ಲೇ ಚಿಕಿತ್ಸೆಗೆ ಒಳಪಡಿಸಲಾಗಿದೆ. ಗ್ರಾಮದ 40ಕ್ಕೂ ಹೆಚ್ಚು ಮಂದಿ ಈಗ ನಾನಾ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಬಡ ಕುಟುಂಬಕ್ಕೆ ಸೇರಿದ ಬಾಲಕಿ ಕಾವ್ಯ ಸ್ಥಿತಿ ಗಂಭೀರವಾಗಿದೆ.
ಎರಡನೇ ಸಾವು: ಈ ಗ್ರಾಮದಲ್ಲಿ ಡೆಂಘೀಯಿಂದ ಕಳೆದ ವರ್ಷ ಯುವತಿ ದುಂಡಮ್ಮ ಸಾವನ್ನಪ್ಪಿದ್ದಳು. ಇದೀಗ ಮೃತಪಟ್ಟಿರುವ ಸ್ನೇಹಾ ಸಾವು 2ನೇ ಪ್ರಕರಣವಾಗಿದೆ. ಗ್ರಾಮದಲ್ಲಿ ತಾಂಡವಾಡುತ್ತಿರುವ ಅನೈರ್ಮಲ್ಯವೇ ಮಾರಕ ಸಾಂಕ್ರಾಮಿಕ ರೋಗಕ್ಕೆ ಕಾರಣವೆನ್ನುವ ಆರೋಪ ಕೇಳಿ ಬಂದಿದೆ.
5 ವರ್ಷದ ಮಗು ಬಲಿ
ನೆಲಮಂಗಲ: ಪಟ್ಟಣದ ಅಡೇಪೇಟೆಯ ದರ್ಗಾ ಮೊಹಲ್ಲಾದಲ್ಲಿ 5 ವರ್ಷದ ಮಗುವೊಂದು ಡೆಂಘೀಯಿಂದ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಕಳೆದ 8 ದಿನಗಳಿಂದಲೂ ಜ್ವರದಿಂದ ಬಳಲುತ್ತಿದ್ದ ತಸ್ಮಿಯಾ ಬಾನು (5) ಮೃತ ನತದೃಷ್ಟೆ. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಸಾವಿಗೀಡಾಗಿದ್ದಾಳೆ. ಇದೇ ದರ್ಗಾ ಮೊಹಲ್ಲಾದ ಮೂರು ಮಕ್ಕಳು ಕೂಡ ಜ್ವರದಿಂದ ಬಳಲುತ್ತಿದ್ದಾರೆ. ಸ್ವಚ್ಛತೆ ಕಾಪಾಡದ ಸ್ಥಳೀಯ ಪುರಸಭಾ ಅಧಿಕಾರಿ ಹಾಛಗೂ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಜಾಗ್ರತಾ ಕ್ರಮ
ಕನಕಪುರ ತಾಲೂಕಿನ ಅಣೆದೊಡ್ಡಿಯಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಜ್ವರಬಾಧೆ ಕಾಣಿಸಿಕೊಂಡಿದ್ದು, ಈ ಪೈಕಿ ತಲಾ 8 ಮಂದಿಗೆ ಡೆಂಘೀ ಮತ್ತು ಚಿಕೂನ್ ಗುನ್ಯ ದೃಢವಾಗಿದೆ. 40 ಮಂದಿಗೆ ಡೆಂಘೀ ಶಂಕೆಯಿದೆ. ತುರ್ತು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ವೈದ್ಯರ ತಂಡ ಗ್ರಾಮದಲ್ಲೇ ವಾಸ್ತವ್ಯ ಹೂಡಿದೆ.
- ಡಾ.ರಘುನಾಥ್, ಡಿಎಚ್ಒ, ರಾಮನಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

