ಬೆಂಗಳೂರು ಗ್ರಾಮಾಂತರ

ಅಮ್ಮನ ಕರೆ ಕೇಳದೇ ಪಾಂಡುರಂಗ

Published On :

ತಿರುಮಲೆ ಶ್ರೀನಿವಾಸ್
ಮಾಗಡಿ: ಮಗನ ಬರುವಿಕೆಗಾಗಿ ಹಂಬಲಿಸುತ್ತಿರುವ ಹೆತ್ತ ತಾಯಿ ಲಿಂಗಮ್ಮ. ಈಕೆ ಮೂಲತಃ ಶಿರಾ ತಾಲೂಕಿನ ಬರಗೂರು ಗ್ರಾಮದವರು. ಕಳೆದ 40 ವರ್ಷಗಳ ಹಿಂದೆ ಗಂಡ ಮಲ್ಲಯ್ಯ ಮತ್ತು ಲಿಂಗಮ್ಮ ಇಬ್ಬರು ಮಾಗಡಿಗೆ ವಲಸೆ ಬಂದಿದ್ದಾರೆ.
ಮಾಗಡಿ ತಾಲೂಕಿನ ಮಾಡಬಾಳ್ ಗ್ರಾಮದ ಶಿವಬೀರಯ್ಯ ಎಂಬುವರ ಮನೆಯನ್ನು ಬಾಡಿಗೆ ಪಡೆದು, ಕುರಿ ಕಂಬಳಿ ನೇಯ್ಗೆ ಮಾಡಿಕೊಂಡಿದ್ದು, ನೇಯ್ಗೆ ಮಾಡಿದ ಕುರಿ ಕಂಬಳಿಗಳನ್ನು ತಾಲೂಕಿನ ಸುತ್ತಮುತ್ತಲ ಗ್ರಾಮಗಳಿಗೆ ಹೊತ್ತು ಮಾರಾಟ ಮಾಡಿಕೊಂಡು ಬದುಕಿನ ಬಂಡಿ ಎಳೆಯುತ್ತಿದ್ದರು. ಈಕೆಗೊಬ್ಬ ಮಗನೂ ಇದ್ದ. ಕೂಲಿ ಮಾಡಿದರು ಸಹ ಪರವಾಗಿಲ್ಲ, ನಮ್ಮ ಕಷ್ಟ ಮಗನಿಗೆ ಬೇಡ ಎಂದು ಮಗನನ್ನು ಮಾಗಡಿ ತಾಲೂಕಿನ ಚಿಕ್ಕಮುದಿಗೆರೆ ಮತ್ತು ಮಾಗಡಿ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿಸಿದರು.
10 ಸಾವಿರ ರು. ಖರ್ಚು ಮಾಡಿ ಪೊಲೀಸ್ ಇಲಾಖೆಯಲ್ಲಿ ಮಗನಿಗೊಂದು ನೌಕರಿಯೂ ಕೊಡಿಸಿದರು. ಪೊಲೀಸ್ ನೌಕರಿಯಲ್ಲಿದ್ದ ಮಗನಿಗೆ ಮದುವೆಯೂ ಮಾಡಿದರು. ಮನೆಗೆ ಸೊಸೆಯೂ ಬಂದಾಯಿತು. ಇನ್ನೇನು ನಮ್ಮ ಕಷ್ಟ ದೂರವಾಯಿತು, ಮಗ ತಮ್ಮನ್ನು ಸುಖದಿಂದ ಸಾಕುತ್ತಾನೆ ಎಂದುಕೊಂಡಿದ್ದ ಹೆತ್ತ ತಾಯಿಯ ಕನಸು ಒಡೆದ ಕನ್ನಡಿಯಂತೆ ಈಗ ನುಚ್ಚು ನೂರಾಗಿದೆ.
ಕಳೆದ 15 ವರ್ಷಗಳ ಹಿಂದೆ ಲಿಂಗಮ್ಮನ ಗಂಡ ಮಲ್ಲಯ್ಯ ಅನಾರೋಗ್ಯದಿಂದ ತೀರಿಕೊಂಡರು. ಮಗ ಪೊಲೀಸ್ ಪಾಂಡುರಂಗ ತಂದೆಯ ಶವ ಸಂಸ್ಕಾರಕ್ಕೆ ಬಂದವನು ಶವ ಸಂಸ್ಕಾರ ನಂತರ ಪತ್ನಿಯೊಂದಿಗೆ ಬೆಂಗಳೂರಿಗೆ ತೆರಳಿದ. ಮತ್ತೆ ಉತ್ತಾರಾದಿ ಕ್ರಿಯೆಗೆ ಬಂದು ಕಾರ್ಯ ಮುಗಿಸಿ ಬೆಂಗಳೂರಿಗೆ ಹೋದವನು ಇಲ್ಲಿಯವರೆಗೂ ಹೆತ್ತ ತಾಯಿ ಲಿಂಗಮ್ಮನ ಯೋಗಕ್ಷೇವುವಿರಲಿ ಮುಖ ನೋಡಲು ಸಹ ಬಂದಿಲ್ಲ.
ನನ್ನ ಮಗ ಈಗ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಧಪ್ಪೇದಾರನಾಗಿದ್ದಾನಂತೆ, ಯಾವ ಠಾಣೆಯಲ್ಲಿದ್ದಾನೋ ಗೊತ್ತಿಲ್ಲ ಎನ್ನುತ್ತಾರೆ ಲಿಂಗಮ್ಮ.
ಒಬ್ಬಂಟಿಯಾಗಿರುವ ಲಿಂಗಮ್ಮನಿಗೆ ಈಗ 90 ವರ್ಷ. ಸರ್ಕಾರ ನೀಡುವ ವಯೋವೃದ್ಧ ಮಾಸಾಶನದಿಂದಲೇ ಬದುಕಿನ ಬಂಡಿ ಎಳೆಯುತ್ತಿದ್ದಾಳೆ. ಮಾಡಬಾಳ್ ಗ್ರಾಪಂ ಮಾಜಿ ಅಧ್ಯಕ್ಷ ಶಿವಬೀರಯ್ಯ ಅವರು, ಮಾನವೀಯತೆಯಿಂದ  ಉಚಿತವಾಗಿ ವಾಸಿಸಲು ಮನೆಯ ಕೊಠಡಿ ನೀಡಿದ್ದಾರೆ. 90 ರ ವಯೋವೃದ್ಧೆ ನಿಂಗಮ್ಮನೇ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಜೀವಿಸುತ್ತಿದ್ದಾರೆ.
ಆದರೂ ಹೆತ್ತ ಕರಳು, ಸಂಕಟ, ನೋವು ಇದರ ನಡುವೆಯೂ ಕೊನೆಗಳಿಗೆಯಲ್ಲಾದರೂ ಒಮ್ಮೆ ನನ್ನ ಮಗನ ಮುಖ ನೋಡಿ, ಕಣ್ಮುಚ್ಚಿಕೊಳ್ಳಬೇಕು ಎಂಬ ಹಂಬಲ ಆಕೆಯದು. ಮಗನ ಬರುವಿಕೆಗಾಗಿ ಹಂಬಲಿಸತ್ತಿರುವ ಲಿಂಗಮ್ಮನ ಆಸೆ ಈಡೇರಿಸುವವನೇ ಕುಲಪುತ್ರ ಪೊಲೀಸ್ ಪಾಂಡುರಂಗ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.