ಬೆಂಗಳೂರು ಗ್ರಾಮಾಂತರ

ಮನೆ ಕರ ವಸೂಲಿ ಗ್ರಾಪಂಗಳು ಹಿಂದೆ

Published On :

ಚನ್ನಪಟ್ಟಣ: ಮನೆ ಕಂದಾಯ ವಸೂಲಿ ಮಾಡುವಲ್ಲಿ ತಾಲೂಕಿನ ಗ್ರಾ.ಪಂಗಳು ಹಿಂದುಳಿದಿದ್ದು ಇದರಿಂದಾಗಿ ಗ್ರಾಮೀಣಾಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಹಿನ್ನೆಡೆಯಾಗಿದೆ.
ತಾಲೂಕಿನ 32 ಗ್ರಾ.ಪಂ ವತಿಯಿಂದ ಮನೆ ಕಂದಾಯ, ನೀರಿನ ಕಂದಾಯ ಸೇರಿದಂತೆ 8.45 ಕೋಟಿ ರೂ. ಹಣ ಬಾಕಿ ಉಳಿದಿದ್ದು ತಾ.ಪಂ ಮತ್ತು ಜಿ.ಪಂ ಗಳಿಗೆ ಇದು ತಲೆ ನೋವಾಗಿ ಪರಿಣಮಿಸಿದೆ.
7.75 ಕೋಟಿ ರೂ. ಮನೆ ಕಂದಾಯ, 70 ಲಕ್ಷ ರೂ. ನೀರಿನ ಕಂದಾಯ ಬಾಕಿ ಉಳಿದಿದ್ದು ಈ ಮೊತ್ತವನ್ನು ವಸೂಲಿ ಮಾಡಲು ಪಂಚಾಯಿತಿ ನೌಕರರು ಮನಸ್ಸು ಮಾಡುತ್ತಿಲ್ಲ ಎಂಬ ಆಪಾದನೆಗಳು ಹಲವರದ್ದಾಗಿದೆ.
ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ: ಗ್ರಾ.ಪಂ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿರುವ ಸಿಬ್ಬಂದಿಗಳಿಗೆ ವೇತನ, ಗ್ರಾಮದಲ್ಲಿ ಬೀದಿ ದೀಪ, ನೀರಿನ ಸೌಕರ್ಯ ಸೇರಿದಂತೆ ತ್ವರಿತವಾಗಿ ಕೈಗೊಳ್ಳಬೇಕಿರುವ ಕಾಮಗಾರಿಗಳಿಗೆ ಈ ಹಣ ವಿನಿಯೋಗವಾಗುತ್ತಿದ್ದು ಆಯಾ ಗ್ರಾ.ಪಂಗಳಲ್ಲಿ ಸಂಗ್ರಹಿಸಿದ ಹಣವನ್ನು ಆಯಾ ಪಂಚಾಯಿತಿಗಳ ಖಾತೆಯಲ್ಲೇ ಇರಿಸಲಾಗುವುದು.
ವಸೂಲಿಗೆ ಕುಂಟು ನೆಪ: ಕಂದಾಯ ವಸೂಲಿ ಮಾಡಲು ಸುಳ್ಳು ಸುಳ್ಳೇ ನೆಪ ಹೂಡುತ್ತಿರುವ ಗ್ರಾ.ಪಂ ಸಿಬ್ಬಂದಿ ಕರವಸೂಲಿ ಮಾಡದಿದ್ದು ಇದರಿಂದಾಗಿ ಪ್ರತಿಯೊಂದು ಪಂಚಾಯಿತಿಯಲ್ಲೂ ಹತ್ತಾರು ಲಕ್ಷ ರು.  ಕಂದಾಯ ಬಾಕಿ ಉಳಿದಿದೆ.
ಕೆಲ ಗ್ರಾ.ಪಂ ವ್ಯಾಪ್ತಿಯಲ್ಲಿ 10ರಿಂದ 15 ವರ್ಷಗಳ ವರೆಗೆ ಕಂದಾಯ ಪಾವತಿ ಮಾಡದೆ ಇರುವ ವ್ಯಕ್ತಿಗಳಿರುವುದಾಗಿ ಪಂಚಾಯತ್‌ರಾಜ್ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಾರಾದರೂ ಕಂದಾಯ ವಸೂಲಿಗೆ ಮಾತ್ರ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಹಳ್ಳಿಯ ಜನ ಕಟ್ಟುತ್ತಿಲ್ಲ, ಬರ, ಜನರನ್ನು ಒತ್ತಾಯ ಮಾಡಿ ಕಂದಾಯ ವಸೂಲಿ ಮಾಡಲು ಸಾಧಯವಿಲ್ಲ ಎಂಬಿತ್ಯಾದಿ ನೆಪಗಳು ಕರವಸೂಲಿ ಗಾರರು ಮತ್ತು ಪಂಚಾಯಿತಿ ಅಧಿಕಾರಿಗಳದ್ದಾಗಿದೆಯಾದರೂ ಬಹುತೇಕ ಕರವಸೂಲಿಗಾರರು ಪಂಚಾಯಿತಿ ಕೇಂದ್ರದಿಂದ ಹೊರ ನಡೆಯದೇ ಇರುವುದೇ ಇದಕ್ಕೆ ಮೂಲಕಾರಣವಾಗಿದೆ.
ಪ್ರಬಲರೇ ಕಟ್ಟುತ್ತಿಲ್ಲ: ಬಹುತೇಕ ಗ್ರಾ.ಪಂ ಗಳಲ್ಲಿ ಶ್ರೀಸಾಮನ್ಯರು ಕಂದಾಯ ಕಟ್ಟುತ್ತಿದ್ದು, ಆಶ್ರಯ ಯೋಜನೆ, ವಿದ್ಯುತ್‌ಚ್ಛಕ್ತಿ ಸಂಪರ್ಕ, ಪಡಿತರ ಚೀಟಿ ಹೀಗೆ ಪಂಚಾಯಿತಿಯಿಂದ ಅನುಮೋದನೆ ಪಡೆಯಲು, ಗ್ರಾ.ಪಂ ಯೋಜನೆಗಳನ್ನು ಪಡೆಯಬೇಕಾದಾಗ ಶ್ರೀಸಾಮಾನ್ಯ ಕಂದಾಯ ಪಾವತಿ ಮಾಡುತ್ತಿದ್ದಾನಾದರೂ ಗ್ರಾಮದ ಕೆಲ ಬಲಾಢ್ಯರು, ರಾಜಕೀಯ ಧುರೀಣರು ಬಾಕಿ ಉಳಿಸಿಕೊಂಡಿದ್ದು ಇವರ ಬಳಿ ಹಣ ವಸೂಲಿ ಮಾಡಲು ಮುಲಾಜಿಗೆ ಸಿಲುಕಿರುವ ಗ್ರಾ.ಪಂ ಸಿಬ್ಬಂದಿ ಸುಳ್ಳು ನೆಪ ಹೂಡಿ ಬಾಕಿ ಉಳಿಸಿ ಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಗಿ ಕ್ರಮ: ಬಾಕಿ ಉಳಿದಿರುವ ಕಂದಾಯ ವಸೂಲಿ ಬಗ್ಗೆ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶೇಷ ಆಸಕ್ತಿ ವಹಿಸಿದ್ದು ಈ ಬಗ್ಗೆ ಒಂದು ಸುತ್ತಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿರುವ ಅವರು ಕರ ವಸೂಲಿ ಬಗ್ಗೆ ತಾಕೀತು ಮಾಡಿರುವುದಾಗಿ ತಿಳಿದು ಬಂದಿದೆ.
ಪಂಚಾಯಿತಿ ವಾರು  ಮಾಹಿತಿ ಸಂಗ್ರಹಿಸಿ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿರುವ ಸಿಇಒ ಪ್ರತಿಯೊಂದು ಪಂಚಾಯಿತಿಯೂ ಕನಿಷ್ಠ 5 ಲಕ್ಷ ರು. ಕರ ವಸೂಲಿ ಮಾಡುವಂತೆ ತಾಕೀತು ಮಾಡಿದ್ದು ಸಿಇಒ ಮಾತಿಗಾದರೂ ಗ್ರಾ.ಪಂ ಸಿಬ್ಬಂದಿ ಬೆಲೆ ನೀಡಿಯಾರೇ ಎಂದು ಕಾಯ್ದು ನೋಡಬೇಕಿದೆ.

-ಸು.ನಾ.ನಂದಕುಮಾರ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.