ಇಂದು ಪ್ರಚಾರದ ಹುಚ್ಚಿಗಾಗಿ ನಡೆಯುವ ಹೋರಾಟಗಳೇ ಹೆಚ್ಚು
ಚನ್ನಪಟ್ಟಣ: ಇತ್ತೀಚಿನ ದಿನಗಳಲ್ಲಿ ವೈಚಾರಿಕ ತಳಹದಿಯ ಮೇಲೆ ನಡೆಯುವ ಹೋರಾಟಗಳಿಗಿಂತ ಪ್ರಚಾರದ ಹುಚ್ಚಿಗಾಗಿ ನಡೆಯುವ ಹೋರಾಟಗಳು ಹೆಚ್ಚಾಗಿದ್ದು ಇದರಿಂದಾಗಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ರೈತಸಂಘದ ಹಿರಿಯ ಹೋರಾಟಗಾರ ಸಿ.ಪುಟ್ಟಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಕೊಲ್ಲಾಪುರದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ಕರ್ನಾಟಕ ಸಮತಾ ಸೈನಿಕದಳ ಜಿಲ್ಲಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಭಗವಾನ್ ಬುದ್ಧರ ಹಾಗೂ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿ, ಇಂತಹ ನಕಲಿ ಹೋರಾಟಗಾರರಿಂದ ಸಮಾಜದ ಪ್ರಜ್ಞಾವಂತ ಸಮುದಾಯ ನಿರೀಕ್ಷೆ ಮಾಡುತ್ತಿರುವ ಮೌಲ್ಯಯುತ ಆಶೋತ್ತರಗಳು ಕಣ್ಮರೆಯಾಗುತ್ತಿವೆ ಎಂದರು.
ಇತ್ತ ಕೆಲ ಮಾಧ್ಯಮಗಳು ನಕಲಿ ಹೋರಾಟಗಾರರನ್ನು ಅಸಲಿ ಹೋರಾಟಗಾರರಂತೆ ಬಿಂಬಿಸುತ್ತಿದ್ದು, ಸ್ವಾರ್ಥಸಾಧನೆಗಾಗಿ ದಿನಕ್ಕೊಂದು ಹೋರಾಟ ನಡೆಸುವ ಮೂಲಕ ಚಳವಳಿಯನ್ನು ತಮ್ಮ ಹೊಟ್ಟೆಹೊರೆಯುವ ವೃತ್ತಿಯಾಗಿಸಿ ಕೊಂಡಿರುವ ಮಂದಿಯ ಬಗ್ಗೆ ಯುವ ಸಮುದಾಯ ಎಚ್ಚರವಾಗಿರಬೇಕೆಂದು ಕರೆ ನೀಡಿದರು.
ಸಾಧಾರಣ ಸಮಸ್ಯೆಗಳನ್ನು ಕೂಡ ದೊಡ್ಡದೆಂದು ಬಿಂಬಿಸಿ ತಮ್ಮ ಸ್ವಾರ್ಥಸಾಧನೆ ಮಾಡಿಕೊಳ್ಳುತ್ತಿರುವ ಮಂದಿಯ ಕೈಯಲ್ಲಿ ಚಳವಳಿಗಳು ಸಿಲುಕಿ ನಲುಗುತ್ತಿರುವುದು ದುರ್ದೈವದ ಸಂಗತಿ ಎಂದು ವಿಷಾದಿಸಿದರು.
ರೈತ ಹೋರಾಟಕ್ಕೆ ಬುದ್ದನೇ ಪ್ರೇರಣೆ: ಈ ನಾಡಿನಲ್ಲಿ ಹುಟ್ಟಿದ ರೈತ ಚಳವಳಿಗೆ ಬುದ್ಧನ ಮಾನವೀಯ ಮೌಲ್ಯಗಳೇ ಕಾರಣವಾಗಿದೆ.
ಬುದ್ಧ ಯಾರನ್ನೂ ಕೊಲ್ಲುವ ಹಕ್ಕು ನಮಗಿಲ್ಲ ಎಂದು ಹೇಳಿದ್ದನ್ನೇ ಡಾ. ಅಂಬೇಡ್ಕರ್ ಸಂವಿಧಾನದಲ್ಲಿ ಬದುಕುವ ಹಕ್ಕನ್ನು ನೀಡಿದರು. ಬುದ್ಧನ ಸ್ವಾಭಿಮಾನಿ ಚಿಂತನೆಗಳು ರೈತ ಹೋರಾಟದ ತಳಹದಿಯಾಗಿದೆ ಎಂದರು.
ಅಂಬೇಡ್ಕರ್ ವಿಶ್ವಮಾನ್ಯ ಸಂವಿಧಾನ ನೀಡಿದ್ದು ಬುದ್ಧನ ದಿಗ್ದರ್ಶನವಾದ ಫಲ, ಸಾಧಕನಿಗೆ ಜಾತಿ , ಮತಗಳ ಕಟ್ಟುಪಾಡು ಮುಖ್ಯವಲ್ಲ, ಜ್ಞಾನದಿಂದ ಎಂತಹ ವ್ಯಕ್ತಿಯಾದರೂ ಮೇರು ಮಟ್ಟಕ್ಕೆ ಬೆಳೆಯಬಹುದೆಂಬುದನ್ನು ಸಾಧಿಸಿ ತೋರಿಸಿದ ಮಾಹಾನ್ ಚೇತನ ಅಂಬೇಡ್ಕರ್ ಎಂದು ಅವರು ತಿಳಿಸಿದರು.
ಭೂಮಿಯಲ್ಲಿ ನಡೆದಾಡುವ ದೇವರು ಎಂದು ಕಂಡಿದ್ದರೆ ಅದು ಬುದ್ಧ ಮಾತ್ರ ಎಂದು ದೇಶಕಂಡ ಶ್ರೇಷ್ಠದಾರ್ಶನಿಕ ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಅವರು ತಿಳಿಸಿ ಹೋಗಿರುವ ಈ ಸತ್ಯವನ್ನು ನಾವೆಲ್ಲ ಅನುಸರಿಸ ಬೇಕಿದ್ದು ಬುದ್ಧನ ಕರುಣೆ, ಮಮತೆ, ಪ್ರೀತಿ ವಾತ್ಸಲ್ಯ ನಮ್ಮೆಲ್ಲರಲ್ಲಿ ಬೆಳೆದು ಬರಬೇಕಿದೆ ಎಂದರು.
ಮಾನವೀಯ ಮೌಲ್ಯಗಳು: ಜಗತ್ತಿನ ಇತಿಹಾಸದಲ್ಲಿ ಮರೆ ಯಲಾಗದ ಮಾನವೀಯ ಮೌಲ್ಯ ಪ್ರತಿಭೆಗಳು ಗೌತಮ ಬುದ್ಧರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ಡಿ.ಎಸ್.ಎಸ್. ಅಂಬೇಡ್ಕರ್ ವಾದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.
ಡಿವೈ.ಎಸ್.ಪಿ. ಧರಣೇಂದ್ರ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿ ಈ ದೇಶದಲ್ಲಿ ಶೋಷಣೆಯಲ್ಲೇ ಬದುಕು ಸಾಗಿಸುತ್ತಿರುವ ಹಿಂದುಳಿದವರ ದಲಿತರ ಬಡವರ ಅಭಿವೃದ್ಧಿಗಾಗಿ ದುಡಿದವರು ಅಂತಹ ಮಹಾನ್ ನಾಯಕರ ಆದರ್ಶ ತತ್ವಗಳನ್ನು ಇಂದಿನ ದಲಿತ ಸಮುದಾಯದ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕೆಂದರು.
ಸಮಾಜವಾದಿ ಪಕ್ಷದ ಮುಖಂಡ ಎಸ್.ಸಿ. ಶೇಖರ್, ಪತ್ರಕರ್ತ ಸ್ವಾಮಿ, ಕೆ.ಎಸ್ಎಸ್ಡಿ ಜಿಲ್ಲಾಧ್ಯಕ್ಷ ಚಕ್ಕಲೂರು ಚೌಡಯ್ಯ, ಜಿಲ್ಲಾ ಸಂಚಾಲಕ ಪಿ. ಸೋಮಶೇಖರ್, ಜಿಲ್ಲಾ ಸಂಘಟನಾ ಸಂಚಾಲಕ ಗಂಗಾಧರ್, ಜಿಲ್ಲಾ ಉಪಾಧ್ಯಕ್ಷ ಎಂ.ಪಿ. ಮರಿಸ್ವಾಮಿ ಮತ್ತಿತರರು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವದಲ್ಲಿಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

