ಹಳೇ ಮೈಸೂರಲ್ಲಿ ಎಸ್ಪಿ ಬಲವರ್ಧನೆ
ಚನ್ನಪಟ್ಟಣ: ಹಳೇ ಮೈಸೂರು ಭಾಗದಲ್ಲಿ ಸಮಾಜವಾದಿ ಪಕ್ಷದ ಬಲವರ್ಧನೆಗೆ ನಮ್ಮ ಪಕ್ಷದ ಮುಖಂಡರು ಮುಂದಾಗಿದ್ದು ಕ್ಷೇತ್ರದಲ್ಲಿ ಜೂ. 14 ರಂದು ನಡೆಯಲಿರುವ ಸಮಾವೇಶ ಇದಕ್ಕೆ ವೇದಿಕೆಯಾಗಲಿದೆ ಎಂದು ಸಮಾಜವಾದಿ ಪಕ್ಷದ ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಜೂ. 14 ರಂದು ಪಕ್ಷದ ವತಿಯಿಂದ ಹಮ್ಮಿ ಕೊಂಡಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರಾಜ್ಯಕ್ಕೆ ಆಗಮಿಸುತ್ತಿದ್ದು, ಬೆಂ-ಮೈ ಹೆದ್ದಾರಿಯುದ್ದಕ್ಕೂ ರೋಡ್ ಶೋ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಯಾವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಬೇಕು, ಯಾವ್ಯಾವ ಕ್ಷೇತ್ರದಲ್ಲಿ ಯಾರಿಗೆ ಬೆಂಬಲಿಸಬೇಕು ಎಂಬುದನ್ನು ನಮ್ಮ ಪಕ್ಷ ನಿರ್ಧರಿಸಲಿರುವುದಾಗಿ ಅವರು ತಿಳಿಸಿದರು.
ಬಂಗಾರಪ್ಪ ಸಮಾಜವಾದಿ ಪಕ್ಷಕ್ಕೆ ಬಂದಾಗ ನಮ್ಮ ಪಕ್ಷವನ್ನು ಬಲಪಡಿಸಲು ಚಿಂತನೆ ನಡೆಸಲಾಯತಾದರೂ ಕಾರಣಾಂತರಗಳಿಂದ ಪಕ್ಷ ಸಂಘಟನೆ ಮಾಡಲಾಗಲಿಲ್ಲ. ಆದರೆ ಈಗ ಕರ್ನಾಟಕದಲ್ಲಿ ಪಕ್ಷವನ್ನು ಬಲಾಢ್ಯ ಗೊಳಿಸಲು ಅಖಿಲೇಶ್ ಯಾದವ್ ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.
30 ಸಾವಿರ ಮಂದಿ : ಜೂ.14ರಂದು ನಡೆಯಲಿರುವ ತಾಲೂಕಿನ ಮತದಾರರ ಅಭಿನಂದನಾ ಸಮಾರಂಭಕ್ಕೆ ತಾಲೂಕಿನಿಂದ 30 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದು, ತಾಲೂಕಿನ ಮತದಾರರ ಜತೆಗೆ ರಾಜ್ಯದ ವಿವಿಧ ಭಾಗಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದವರು ತಿಳಿಸಿದರು.
ಈ ಕಾರ್ಯಕ್ರಮ ರಾಜ್ಯ ರಾಜಕಾರಣದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದು ತಿಳಿಸಿದ ಯೋಗೇಶ್ವರ್ ಈ ಸಮಾರಂಭಕ್ಕೆ ತಾಲೂಕಿನ ಸ್ವಾಭಿಮಾನಿ ಮತದಾರರು ಸಾಕ್ಷಿಯಾಗಬೇಕೆಂದು ಅವರು ತಿಳಿಸಿದರು.
ದೇವೇಗೌಡರ ವಿರುದ್ಧ ಆರೋಪ: ನನಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಪ್ಪಿಸಿದ ಮಾಜಿ ಪ್ರಧಾನಿ ದೇವೇಗೌಡರು ಮುಲಾಯಂ ಸಿಂಗ್ ಯಾದವ್ ಜತೆ ಮಾತನಾಡಿ ಸಮಾಜವಾದಿ ಪಕ್ಷದ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದರು. ಆದರೆ ಅಖಿಲೇಶ್ ಯಾದವ್ ನನ್ನನ್ನು ನಂಬಿ ಟಿಕೆಟ್ ನೀಡಿದರು. ಅವರ ನಂಬಿಕೆಯನ್ನು ನಾನು ಹುಸಿ ಗೊಳಿಸಿಲ್ಲ ಎಂದು ದೇವೇಗೌಡರ ವಿರುದ್ಧ ಆರೋಪಿಸಿದರು.
ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ: ರಾಷ್ಟ್ರ ಮಟ್ಟದಲ್ಲಿ ನಮ್ಮ ಪಕ್ಷ ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು ರಾಜ್ಯದಲ್ಲಿ ಸಹ ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಯೋಗೇಶ್ವರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾ.ಪಂ ಮಾಜಿ ಸದಸ್ಯ ಪ್ರಮೋದ್, ಸಮಾಜವಾದಿ ಪಕ್ಷದ ಮುಖಂಡ ಕರಿಯಪ್ಪನ ದೊಡ್ಡಿ ಶಿವಣ್ಣ, ತಿಮ್ಮೇಶ್ ಪ್ರಭು ಇನ್ನು ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

