ಬೆಂಗಳೂರು ಗ್ರಾಮಾಂತರ

ಮುದ್ದುರಾಜ್ ಯಾದವ್ ರಾಜಿನಾಮೆ ಖಚಿತ

Published On :

ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ   ರಾಮನಗರ   ಜೂ.13
ಜೆಡಿಎಸ್ ವರಿಷ್ಠರು ರೂಪಿಸಿದ್ದ ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರದನ್ವಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಮುದ್ದುರಾಜ್ ಯಾದವ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದು ಖಚಿತವಾಗಿದ್ದು, ಈ ಕುರಿತು 2-3 ದಿನದಲ್ಲಿ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.
ಒಪ್ಪಂದದಂತೆ ಅಧ್ಯಕ್ಷರ ಅವಧಿ ಈಗಾಗಲೇ ಆರು ತಿಂಗಳು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ರಾಜಿನಾಮೆ ಸಲ್ಲಿಸುವಂತೆ ಮುದ್ದುರಾಜ್ ಯಾದವ್ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮುದ್ದುರಾಜ್ ಯಾದವ್ ಅವರ ಪಾಲಿಗೆ ಗುರುವಾರ (ಜೂ.13) ನಡೆದದ್ದು ಕಡೆಯ ಸಾಮಾನ್ಯ ಸಭೆ ಎನ್ನಲಾಗಿದೆ. ಜೂ.15ಕ್ಕೆ ಪ್ರಗತಿ ಪರಿಶೀಲನಾ ಸಭೆ ಕರೆದಿದ್ದು, ಆ ಸಭೆಯ ತರುವಾಯ ಹುದ್ದೆಗೆ ವಿದಾಯ ಹೇಳಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.  
ಎಚ್ಡಿಕೆ ಜತೆ ಚರ್ಚೆ: ರಾಮನಗರಕ್ಕೆ ಗುರುವಾರ ಆಗಮಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಅಧ್ಯಕ್ಷ ಮುದ್ದುರಾಜ್ ಯಾದವ್ ಮತ್ತು ಸದಸ್ಯರು ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಸುದೀರ್ಘ ಸಮಾಲೋಚನೆ ಬಳಿಕ ಕುಮಾರಸ್ವಾಮಿ ಅವರು ಅಧ್ಯಕ್ಷರ ಪದತ್ಯಾಗಕ್ಕೆ ಸೂಚನೆ ನೀಡಿದ್ದಾರೆ.
22 ಸದಸ್ಯ ಬಲದ ಜಿ.ಪಂ.ನಲ್ಲಿ ಜೆಡಿಎಸ್ 12 ಸದಸ್ಯರೊಂದಿಗೆ ಸರಳ ಬಹುಮತ ಹೊಂದಿದೆ. ಪಕ್ಷದ ಸದಸ್ಯರು ಒಗ್ಗಟ್ಟು ಕಾಯ್ದುಕೊಳ್ಳಬೇಕು. ಯಾವ ಕಾರಣಕ್ಕೂ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು ಎಂದು ಕುಮಾರಸ್ವಾಮಿ ತಾಕೀತು ಮಾಡಿದ್ದಾರೆ.  ಈಗಾಗಲೇ ನಡೆದಿರುವ ಒಪ್ಪಂದದಂತೆಯೇ ಅಧ್ಯಕ್ಷ ಸ್ಥಾನಕ್ಕೆ ಮತ್ತೊಂದು ಬದಲಾವಣೆಯೂ ನಡೆಯಲಿದೆ. ಈ ವಿಷಯದಲ್ಲಿ ಗೊಂದಲಕ್ಕೆ ಅವಕಾಶ ಖಂಡಿತ ಬೇಡ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ವೇಳೆ ಸದಸ್ಯರು ಒಗ್ಗಟ್ಟಿನಿಂದ ಇರುವ ಬಗ್ಗೆ ಭರವಸೆ ನೀಡಿದ್ದಾರೆ.
ಒಡಂಬಡಿಕೆ ಸೂತ್ರ: ಜಿ.ಪಂ.ನಲ್ಲಿ ಎರಡನೇ 20 ತಿಂಗಳ ಅವಧಿಯ ಅಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ. 2012ರ ಅ.10ರಂದು ನಡೆದ ಚುನಾವಣೆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಲ್ಲಿ ಮುದ್ದುರಾಜಾ ಯಾದವ್, ಎಚ್.ಸಿ. ರಾಜು ಮತ್ತು ಸುಧಾ ರಾಜು ನಡುವೆ ಪೈಪೋಟಿ ಏರ್ಪಟ್ಟಿತ್ತು.
ಖುದ್ದು ಕುಮಾರಸ್ವಾಮಿ ಅವರೇ ಮಧ್ಯೆ ಪ್ರವೇಶಿಸಿ 20 ತಿಂಗಳ ಅವಧಿಯನ್ನು ಮೂವರಿಗೆ ಹಂಚಿಕೆ ಮಾಡುವ ಒಡಂಬಡಿಕೆ ಸೂತ್ರವನ್ನು ರೂಪಿಸಿದ್ದರು. ಮುಂದೆ ವಿಧಾನಸಭೆ ಚುನಾವಣೆ ಇರುವುದನ್ನು ಗಮನದಲ್ಲಿಟ್ಟುಕೊಂಡು, ಜಾತಿ ಆಧಾರದ ಮೇಲೆ ಅವಕಾಶ ಕಲ್ಪಿಸಲಾಗಿತ್ತು.
ಮಾಗಡಿ ಕ್ಷೇತ್ರದಲ್ಲಿ ಗೊಲ್ಲ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿ ಇದ್ದುದರಿಂದ ಆ ಸಮುದಾಯಕ್ಕೆ ಸೇರಿದ ಮುದ್ದುರಾಜ್ ಯಾದವ್ ಅವರನ್ನೇ ಮೊದಲಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಕೋರಿಕೆಗೆ ಕುಮಾರಸ್ವಾಮಿ ಸಮ್ಮತಿಸಿದ್ದರು.
ಅದರಂತೆ ಮೊದಲ ಅವಕಾಶ ಮುದ್ದುರಾಜ್ ಯಾದವ್ ಅವರಿಗೆ ಒಲಿದಿತ್ತು. ಇದೀಗ ತಿಗಳ ಸಮುದಾಯಕ್ಕೆ ಸೇರಿದ ರಾಮನಗರ ತಾಲೂಕು ಕೈಲಾಂಚ ಕ್ಷೇತ್ರದ ಎಚ್.ಸಿ.ರಾಜು ಅವರಿಗೆ 2ನೇ ಅವಕಾಶವನ್ನು ಕಲ್ಪಿಸುವ ನಿರ್ಧಾರವಾಗಿದೆ. ಬಾಲಕೃಷ್ಣ ಪಟ್ಟು ಹಾಕದಿದ್ದರೆ ರಾಜು ಅವರಿಗೇ ಮೊದಲ ಅವಕಾಶ ಲಭಿಸುತ್ತಿತ್ತು.
ಸುಧಾ ರಾಜು ಕಡೆಗೆ: ಕಡೆಯ 6 ತಿಂಗಳು ಅಧ್ಯಕ್ಷ ಸ್ಥಾನದ ಅವಕಾಶ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಕ್ಷೇತ್ರದ ಸದಸ್ಯೆ ಸುಧಾ ರಾಜು ಅವರ ಪಾಲಿಗೆ ಬರಲಿದೆ. ಪ್ರಾರಂಭದಲ್ಲಿ ಇವರಿಗೆ 10 ತಿಂಗಳು ಉಪಾಧ್ಯಕ್ಷ ಹುದ್ದೆ ನೀಡುವ ನಿರ್ಧಾರವಾಗಿತ್ತು.
ಆದರೆ, ತಮಗೆ ಅಧ್ಯಕ್ಷ ಹುದ್ದೆಯೇ ಬೇಕೆಂದು ಸುಧಾ ರಾಜು ಪಟ್ಟು ಹಿಡಿದಿದ್ದ ಪರಿಣಾಮ ಮುದ್ದುರಾಜ್ ಯಾದವ್ ಮತ್ತು ಎಚ್.ಸಿ.ರಾಜು ಅವರಿಬ್ಬರಿಗೆ ಹಂಚಿಕೆಯಾಗಿದ್ದ ಅಧ್ಯಕ್ಷ ಸ್ಥಾನದ ಅವಧಿಯನ್ನು ಮೂರು ಭಾಗ ಮಾಡಬೇಕಾಗಿ ಬಂದಿತು.
ಉಪಾಧ್ಯಕ್ಷ ಹುದ್ದೆ ಹಂಚಿಕೆ: ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಹುದ್ದೆಯನ್ನೂ ತಲಾ 10 ತಿಂಗಳಂತೆ ಇಬ್ಬರಿಗೆ ಹಂಚಲಾಗಿದೆ. ಮೊದಲ ಸರದಿಯು ಪರಿಶಿಷ್ಟ ಜಾತಿಗೆ ಸೇರಿದ ಸಾತನೂರು ಸದಸ್ಯೆ ಗೌರಮ್ಮ ಅವರಿಗೆ ಲಭಿಸಿದೆ. ಮುಂದಿನ ಸರದಿಯ ನಿರೀಕ್ಷೆಯಲ್ಲಿ ಮಾಜಿ ಅಧ್ಯಕ್ಷೆ ಬಿ.ವಿ. ಹಂಸಕುಮಾರಿ ಇದ್ದಾರೆ.
ಮೊದಲ 20 ತಿಂಗಳ ಅಧ್ಯಕ್ಷ ಹುದ್ದೆಯನ್ನೂ 3 ಮಂದಿಗೆ ಹಂಚಲಾಗಿತ್ತು. ಕಲ್ಪನಾ ಮಲ್ಲಿಕಾರ್ಜುನ ಗೌಡ ಅವಧಿ ಮೀರಿ ಮುಂದುವರದರೆ, ಯು.ಪಿ.ನಾಗೇಶ್ವರಿ ರಾಮಚಂದ್ರ ಪಕ್ಷದ ಆದೇಶವನ್ನೇ ಮೀರಿದ್ದರು. ಗೊಂದಲದ ಕಾರಣ ಹಂಸಕುಮಾರಿಗೆ ಒಂದೂವರೆ ತಿಂಗಳಷ್ಟೇ ಅಧ್ಯಕ್ಷ ಹುದ್ದೆ ಸಿಕ್ಕಿತ್ತು. ಅದನ್ನು ಸರಿದೂಗಿಸಲು ಈಗ 10 ತಿಂಗಳು ಉಪಾಧ್ಯಕ್ಷ ಹುದ್ದೆ ಕಲ್ಪಿಸಲಾಗುತ್ತಿದೆ.



ಆದೇಶಕ್ಕೆ ತಲೆಬಾಗುವೆ
ಪಕ್ಷದ ವರಿಷ್ಠರು ರೂಪಿಸಿರುವ ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧನಿದ್ದೇನೆ. ರಾಜಿನಾಮೆ ನೀಡುವ ದಿನದಂದೇ ವಿಷಯವನ್ನು ಸುದ್ದಿಗೋಷ್ಠಿ ಕರೆದು ಪ್ರಕಟಿಸುವೆ.
-ಕೆ.ಮುದ್ದುರಾಜ್ ಯಾದವ್, ಅಧ್ಯಕ್ಷ, ಜಿ.ಪಂ., ರಾಮನಗರ.


ವರಿಷ್ಠರ ನಿರ್ಧಾರಕ್ಕೆ ಬದ್ಧ
ನಾನು ಪಕ್ಷದ ಶಿಸ್ತಿನ ಸಿಪಾಯಿ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಕೆ.ರಾಜು ಮತ್ತು ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ. ಅಧಿಕಾರಕ್ಕಾಗಿ ಲಾಬಿ ನಡೆಸುವ ಪ್ರಶ್ನೆಯೇ ಇಲ್ಲ.
ಟಿ ಎಚ್.ಸಿ.ರಾಜು, ಅಧ್ಯಕ್ಷ ಸ್ಥಾನಾಕಾಂಕ್ಷಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.