ರಕ್ತದಾನಕ್ಕಿಂತ ಮಿಗಿಲಾದ ದಾನ ಮತ್ತೊಂದಿಲ್ಲ
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಜೂ.14
ಮನುಷ್ಯ ವಿಧ ವಿಧವಾಗಿ ದಾನ, ಧರ್ಮಗಳನ್ನು ಮಾಡಬಹುದು. ಆದರೆ, ಮತ್ತೊಬ್ಬ ರ ಜೀವ ಉಳಿಸುವಂತಹ ರಕ್ತದಾನ ಮಾಡುವುದಕ್ಕಿಂತ ಬೇರೊಂದು ದಾನ ಇಲ್ಲ ಎಂದು ಜಿಪಂ ಸಿಇಒ ಡಾ.ಎಂ.ವಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗುರುಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ 'ವಿಶ್ವ ರಕ್ತದಾನ ದಿನಾಚರಣೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದ ಮೂಲಕ ಅಪಘಾತಕ್ಕೆ ಒಳಗಾದವರು, ರಕ್ತ ಹೀನತೆ, ಕ್ಯಾನ್ಸರ್ ಪೀಡಿತರು, ಗರ್ಭಿಣಿಯರ ಪ್ರಾಣ ಉಳಿಸುವುದಕ್ಕೆ ನೆರವಾಗಬಹುದು ಎಂದು ಅಭಿಪ್ರಾಯಪಟ್ಟರು.
ಅರಿವಿನ ಕೊರತೆ ನೀಗಿಸಿ: ರಕ್ತದಾನದ ಬಗ್ಗೆ ಇರುವ ಮೌಢ್ಯತೆ ಮತ್ತು ಅರಿವಿನ ಕೊರತೆ ನಿವಾರಿಸುವ ಮೂಲಕ ರಕ್ತದಾನದ ಪ್ರಮಾಣ ಹೆಚ್ಚಿಸಲು ವಿದ್ಯಾವಂತರು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಉತ್ಪಾದನೆ ಸಾಧ್ಯವಿಲ್ಲ: ರಕ್ತ ಕೃತಕ ಉತ್ಪಾದನೆ ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯರ ದೇಹದಲ್ಲಿ 5-6 ಲೀಟರ್ ರಕ್ತವಿದ್ದು, ಒಬ್ಬ ರಕ್ತದಾನಿಯು ಒಮ್ಮೆ 350 ಎಂಎಲ್ ಮಾತ್ರ ರಕ್ತ ನೀಡುತ್ತಾರೆ. ಇದು ಕೇವಲ 48 ಗಂಟೆಗಳಲ್ಲಿ ಉತ್ಪತ್ತಿ ಆಗುವುದರಿಂದ ಮನುಷ್ಯನಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಹಾಗೂ ಆರೋಗ್ಯವು ವೃದ್ಧಿಸುವುದಾಗಿ ತಿಳಿಸಿದರು.
ಪ್ರತಿಯೊಬ್ಬರು ರಕ್ತದಾನ ಮಾಡುವುದಲ್ಲದೇ ಕುಟುಂಬ ಸದಸ್ಯರು ಮತ್ತು ಸಮಾಜದ ಇತರರನ್ನು ಇದಕ್ಕೆ ಪ್ರೇರೇಪಿಸಬೇಕು. 98 ಬಾರಿ ರಕ್ತದಾನ ಮಾಡಿರುವ ತಾಲೂಕಿನ ಮುಖಂಡ ಕಾಂತರಾಜ್ಪಟೇಲ್ ಉತ್ತಮ ಮಾರ್ಗ ಹಾಕಿಕೊಟ್ಟಿದ್ದಾರೆ ಎಂದು ವೆಂಕಟೇಶ್ ತಿಳಿಸಿದರು.
ದಿನಾಚರಣೆ ಮಹತ್ವ: ಸಮಾಜವು ಹಲವಾರು ಜಯಂತಿಗಳನ್ನು ಹಿಂದಿನಿಂದಲೂ ಆಚರಿಸಿಕೊಂಡು ಬಂದಿದೆ. ರಕ್ತದಾನ ದಿನಾಚರಣೆಯನ್ನು ಇತ್ತೀಚೆಗೆ ಎಲ್ಲಡೆ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಾನರಸಿಂಹ ತಿಳಿಸಿದರು.
ಇಂದು ರಕ್ತದಾನ ಮಾಡುವರಲ್ಲಿ ಶೇಕಡ 90 ಪುರುಷರು ಹಾಗೂ ಶೇಕಡ 10 ಸ್ತ್ರೀಯರಿದ್ದಾರೆ. ಸ್ರೀ ರಕ್ತದಾನಿಗಳ ಕಡಿಮೆಯಾಗಲು ಅವರಲ್ಲಿನ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವುದೇ ಕಾರಣ. ರಕ್ತ ಪಡೆದು ಸಂಸ್ಕರಿಸಿದ ನಂತರವಷ್ಟೆ ಅವಶ್ಯಕತೆ ಇರುವ ರೋಗಿಗಳಿಗೆ ನೀಡಲಾಗುವುದು. ಇಂದು ರಕ್ತದಾನವು ಬಹಳ ಪ್ರಾಧಾನ್ಯತೆ ಪಡೆದಿದೆ
ಎಂದರು.
ನೆಗೆಟಿವ್ ಕೊರತೆ: ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇ.65ರಷ್ಟು ಮಂದಿ ಪಾಸಿಟಿವ್ ರಕ್ತದ ಗುಂಪಿನವರಿದ್ದು, ನೆಗೆಟಿವ್ ರಕ್ತದ ಗುಂಪಿನವರ ಸಂಖ್ಯೆ ಕಡಿಮೆ ಇದೆ. ಬೇಡಿಕೆಯಷ್ಟು ರಕ್ತ ಲಭ್ಯವಾಗುತ್ತಿಲ್ಲ. ಹೀಗಾಗಿ ದಾನಿಗಳನ್ನು ಪ್ರೇರೇಪಿಸಿ, ಹೆಚ್ಚು ಪ್ರಮಾಣದಲ್ಲಿ ರಕ್ತದಾನ ಆಗುವಂತೆ ಮಾಡಬೇಕು ಎಂದು ರಕ್ತದಾನಿ ಕಾಂತರಾಜ್ ಪಟೇಲ್ ತಿಳಿಸಿದರು.
ರಕ್ತದಾನಿಗಳು ಬಹಳಷ್ಟು ಜೀವಿಗಳನ್ನು ಉಳಿಸಿದ್ದಾರೆ. ಬೇರೆಯವರಿಗೆ ರಕ್ತ ಕೊಡುವ ಮೂಲಕ ನಮ್ಮ ಆರೋಗ್ಯ ಸುಧಾರಣೆ ಕಾಣುವುದು. ರಕ್ತದಾನದ ಬಗ್ಗೆ ಬಹಳಷ್ಟು ಜನ ತಪ್ಪು ಕಲ್ಪನೆ ಹೊಂದಿರುವರು. ಇದನ್ನು ಹೋಗಲಾಡಿಸಿ ರಕ್ತದಾನದ ಮಹತ್ವದ ಅರಿವು ಮೂಡಿಸಿ ಸ್ವಯಂ ಪ್ರೇರಿತ ರಕ್ತದಾನ ಮಾಡುವಂತ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಘುನಾಥ್ ಅಧ್ಯಕ್ಷತೆ ವಹಿಸಿದ್ದರು. ರಾಮನಗರ ರೋಟರಿ ಸಂಸ್ಥೆ ಅಧ್ಯಕ್ಷ ಸುರೇಶ್, ಬಿಡದಿ ಸೆಕ್ರೆಡ್ ಸಂಸ್ಥೆ ನಿರ್ದೇಶಕಿ ಫಿಲೋಮಿನಾ, ಪ್ರಾಂಶುಪಾಲ ಬಿಂದುಸಾರ, ಬಿವಿಪಿ ಅಧ್ಯಕ್ಷ ರಂಗಸ್ವಾಮಿ, ಲಯನ್ಸ್ ಸಂಸ್ಥೆ ಅಧ್ಯಕ್ಷ ಕರೀಮಾ
ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

