ಕೃಷಿ ಚಟುವಟಿಕೆಗೆ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಸಿದ್ಧ
ಕ.ಪ್ರ. ವಾರ್ತೆ ರಾಮನಗರ ಜೂ.15
ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ರೈತರು ಈಗಾಗಲೇ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಸಸ್ಯ ಸಂರಕ್ಷಣಾ ಔಷಧಿಗಳನ್ನು ಪೂರೈಸಲು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಸನ್ನದ್ಧವಾಗಿದೆ.
ಜಿಲ್ಲೆಯ ರೈತರಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯನ್ನು ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಮೂಲಕ ಬೇಕಾದ ರಸಗೊಬ್ಬರ ದಸ್ತಾನನ್ನು ಬಿಡದಿಯ ಆರ್ಎಪಿಸಿಎಂಎಸ್ನಲ್ಲಿ ದಸ್ತಾನು ಮಾಡಲಾಗಿದ್ದು, ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಣೆ ಮಾಡಲಾಗುವುದು.
ರಸಗೊಬ್ಬರ ಬೆಲೆಗಳನ್ನು ಕಡಿತಗೊಳಿಸುವಂತೆ ಕೇಂದ್ರ ಸರ್ಕಾರವು ರಸಗೊಬ್ಬರ ತಯಾರಿಕಾ ಸಂಸ್ಥೆಗಳಿಗೆ ಸೂಚನೆ ನೀಡಿರುವ ಮೇರೆಗೆ ಬೆಲೆ ಕಡಿಮೆ ಮಾಡಿದ್ದು, ರಸಗೊಬ್ಬರ ಮಾರಾಟಗಾರರು ಹಾಗೂ ವಿತರಕರು ನಿಗದಿಪಡಿಸಿರುವ ಎಂಆರ್ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಿರುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಸಭೆ ಕರೆದು ಮಾರಾಟಗಾರರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ರೈತರು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷಿಸಿ, ತಾವು ಬೆಳೆಯುವ ಬೆಳೆಗಳಿಗೆ ಅಗತ್ಯವಿರುವ ರಸಗೊಬ್ಬರಗಳನ್ನು ಮಾತ್ರ ನೀಡಬೇಕು. ಯೂರಿಯಾ ರಸಗೊಬ್ಬರದ ಬೆಲೆ ಕಡಿಮೆ ಇದೆ ಎಂದು ಅದನ್ನೇ ಹೆಚ್ಚಾಗಿ ಬಳಸಿದರೆ ಮುಂದೊಂದು ದಿನ ಭೂಮಿ ಚೌಳಾಗಿ ಪರಿವರ್ತನೆಗೊಂಡು, ಬೆಳೆ ಬೆಳೆಯಲು ಸಾಧ್ಯವಾಗದಂತಾಗುತ್ತದೆ. ಈ ಅಂಶವನ್ನು ಕೃಷಿ ಅಧಿಕಾರಿಗಳು ರೈತರಿಗೆ ಮನದಟ್ಟು ಮಾಡಿಕೊಡಬೇಕು ಎಂದರು.
ಬೆಲೆ ಪ್ರಕಟ: ಕೃಷಿ ನಿರ್ದೇಶನಾಲಯವು ರಸಗೊಬ್ಬರ ಗರಿಷ್ಠ ಮಾರಾಟ ಬೆಲೆಯನ್ನು ಪ್ರಕಟಿಸಿದ್ದು, ಅದರಂತೆ ಮಾರಾಟ ಮಾಡಲು ಮಾರಾಟಗಾರರಿಗೆ ಸೂಚಿಸಲಾಗಿದೆ. ಅಲ್ಲದೆ, ಕೃತಕ ಅಭಾವ ಸೃಷ್ಟಿಸುವುದು, ಗರಿಷ್ಠ ದರ ಮೀರಿ ಮಾರಾಟ ಮಾಡುವುದು ತಿಳಿದು ಬಂದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ರಸಗೊಬ್ಬರ ಮಳಿಗೆಗಳಲ್ಲಿರುವ ದಾಸ್ತಾನು ವಿವರ ಗ್ರಾಹಕರಿಗೆ ತಿಳಿಯುವಂತೆ ನಮೂದಿಸಬೇಕು. ಮಾರಾಟ ದರ ನಮೂದಿಸಿರಬೇಕು. ಕೃಷಿ ಇಲಾಖೆಯ ರಸಗೊಬ್ಬರ ಪರಿವೀಕ್ಷಕರು ಆಗಿಂದ್ದಾಗ್ಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆಗೆ ಒಳಪಡಿಸಬೇಕು. ಅಲ್ಲದೇ ನಿಗದಿತ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವಂತೆ ಕೃಷಿ ಹಾಗು ಸಹಕಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಬಾರಿಯ ಮುಂಗಾರಿಗೆ ಅಗತ್ಯವಿರುವ ಬಿತ್ತನೆ ಬೀಜ ದಾಸ್ತಾನು ಇರುವುದಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಣ್ಣಯ್ಯ, ಸಮರ್ಪಕ ವಿತರಣೆಗೆ ಸಹಕಾರ ಸಂಘಗಳಿಗೆ ಸೂಚನೆ ನೀಡಿರುವುದಾಗಿ ಸಹಕಾರ ಸಂಘಗಳ ಉಪನಿಭಂದಕ ನರಸಿಂಹಮೂರ್ತಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

