ಬೆಂಗಳೂರು ಗ್ರಾಮಾಂತರ

ಖೋಟಾನೋಟು ಜಾಲ ಭೇದಿಸಿದ ಪೊಲೀಸರು

Published On :

ಕ.ಪ್ರ.ವಾರ್ತೆ ಟಿ ರಾಮನಗರ ಟಿ ಜೂ.18
ಅಂತಾರಾಷ್ಟ್ರೀಯ ಖೋಟಾ ನೋಟು ಜಾಲವನ್ನು ಭೇದಿಸಿರುವ ಜಿಲ್ಲೆಯ ಕನಕಪುರ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, ರು.4.20 ಲಕ್ಷದ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ರು.1 ಸಾವಿರ, ರು.500 ಮುಖ ಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿರುವ ಜಾಲದಲ್ಲಿ ಬಾಂಗ್ಲಾದ ಒಬ್ಬಳು ಮತ್ತು ಜಾರ್ಖಂಡ್ ರಾಜ್ಯದ ಆರು ಮಂದಿ ಸೇರಿದ್ದಾರೆ. ಅವರೆಲ್ಲ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ವಾಸವಿದ್ದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ತಿಳಿಸಿದರು.
ಬಾಂಗ್ಲಾದ ಮಹಿಳೆ ಸಾಯಿಕುಲ್‌ಕೋಂ ಮಹಮದ್ ಅನ್ವರ್, ಜಾರ್ಖಂಡ್ ರಾಜ್ಯದ ಸಹನಾರ ಗಾಜಿ, ಖಾದೀಜಾ ಬೀಬಿ, ತಾಜುದ್ದೀನ್, ಗುಲಾಮ್ ಶೇಖ್, ಉಸ್ಮಾನ್ ಆಲಿ ಲಷ್ಕರ್, ಅಜರ್ ಶೇಖ್ ಬಂಧಿತ ಆರೋಪಿಗಳು. ಅವರಿಂದ 5 ಮೊಬೈಲ್  ಸೇರಿದಂತೆ ರು.10 ಲಕ್ಷ ಮೌಲ್ಯದ ವಸ್ತುಗಳನ್ನು  ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಆರ್ಥಿಕ ಭಯೋತ್ಪಾದನೆ: ಪ್ರಕರಣದ ಸಮಗ್ರ ತನಿಖೆ ನಡೆಸಲಾಗಿದ್ದು, ಖೋಟಾ ನೋಟು ಜಾಲದಲ್ಲಿ ಬಾಂಗ್ಲಾ ದೇಶದ ನಂಟು ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಇದನ್ನು ಭಾರತದ ಮೇಲೆ ನಡೆಯುತ್ತಿರುವ ಆರ್ಥಿಕ ಭಯೋತ್ಪಾದನೆ ಪ್ರಕರಣವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ಕನಕಪುರ ಪಟ್ಟಣ ಮತ್ತು ತಾಲೂಕಿನಾದ್ಯಂತ ಕೆಲ ದಿನಗಳಿಂದ ಖೋಟಾ ನೋಟು ಚಲಾವಣೆ ಮಿತಿ ಮೀರಿತ್ತು. ಹಲಸಿನಮರದದೊಡ್ಡಿ ಗ್ರಾಮದ ಬೇಕರಿಯೊಂದರಲ್ಲಿ ಆರೋಪಿಗಳ ಪೈಕಿ ಸಹನಾರ ಗಾಜಿ ಮತ್ತು ಖಾದೀಜಾ ಬೀಬಿ ರು.500ರ ನೋಟು ನೀಡಿ ತಂಪು ಪಾನೀಯದ ಬಾಟಲಿ ಖರೀದಿಸಿದ್ದರು.
ನೋಟಿನ ಬಗ್ಗೆ ಅನುಮಾನಗೊಂಡ ಬೇಕರಿ ಮಾಲೀಕ ಅದನ್ನು ಪರಿಶೀಲಿಸಲಾಗಿ ಖೋಟಾ ನೋಟು ಎನ್ನುವುದು ರುಜುವಾತಾಯಿತು. ತಕ್ಷಣ ಆತ ಕನಕಪುರ ಪೊಲೀಸರಿಗೆ ದೂರು ನೀಡಿದ. ಆತ ನೀಡಿದ ಚಹರೆ ಆಧರಿಸಿ ಹುಡುಕಾಟ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಜಾಲದ ವಿವರ ಬಯಲಾಯಿತು ಎಂದು ಅಗ್ರವಾಲ್ ತಿಳಿಸಿದರು.
ರು. 60 ಕೋಟಿ ಶಂಕೆ : ಆರೋಪಿಗಳ ವಿಚಾರಣೆಯಿಂದಾಗಿ ಖೋಟಾ ನೋಟಿನ ಜಾಲಕ್ಕೆ ಬಾಂಗ್ಲಾ ದೇಶದ ನಂಟು ಇರುವುದು ಸ್ಪಷ್ಟವಾಯಿತು. ಅಲ್ಲಿಂದ ನೋಟುಗಳನ್ನು ಮುದ್ರಿಸಿ, ಕಮೀಷನ್ ಆಧಾರದ ಮೇಲೆ ಚಲಾವಣೆಗೆ ಬಿಡಲಾಗಿದೆ. ದಂಧೆಯಲ್ಲಿ ಜಾರ್ಖಂಡ್ ರಾಜ್ಯದವರನ್ನೇ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ ಎಂದು ಎಸ್ಪಿ ವಿವರಣೆ ನೀಡಿದರು.
ಪ್ರಕರಣ ತನಿಖೆ ಸಂಬಂಧ ರಚಿಸಲಾಗಿದ್ದ ಪೊಲೀಸರ ತಂಡವು ಜಾರ್ಖಂಡ್ ರಾಜ್ಯಕ್ಕೂ ತೆರಳಿ ವಿಚಾರಣೆ ನಡೆಸಿದೆ. ಅಂದಾಜು ಪ್ರಕಾರ ರು.60 ಕೋಟಿಯಷ್ಟು ಖೋಟಾ ನೋಟುಗಳ ಚಲಾವಣೆ ನಮ್ಮ ದೇಶದಲ್ಲಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಇದ್ದು, ಆರೋಪಿಗಳ ಬಂಧನ ಮತ್ತು ದಂಧೆಯ ನಿಗ್ರಹಕ್ಕೆ ಅಂತಾರಾಜ್ಯ ಮಟ್ಟದಲ್ಲಿ ವಿಶೇಷ ತಂಡ ರಚನೆಗಾಗಿ ಉನ್ನತ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅವರು ಹೇಳಿದರು.
ಮೋಸ್ಟ್ ವಾಂಟೆಡ್ : ದೇಶದಲ್ಲಿ ಈ ಖೋಟಾ ನೋಟು ಜಾಲದ ರೂವಾರಿಯು ಜಾರ್ಖಂಡ್ ಮೂಲದ ವಾಸಿಂ. ಆತ ಮುಂಬೈ ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ. ಸದ್ಯ ಪ್ರಮುಖ ಆರೋಪಿ ವಾಸಿಂ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಬಲೆ ಬೀಸಿರುವುದಾಗಿ ಅಗ್ರವಾಲ್ ತಿಳಿಸಿದರು.  
ಬಾಂಗ್ಲಾದಿಂದ ಕಳ್ಳ ಮಾರ್ಗದಲ್ಲಿ ರು.1 ಸಾವಿರ, ರು.500ರ ಖೋಟಾ ನೋಟುಗಳನ್ನು ವಾಸಿಂ ತನ್ನ ಸಹಚರರ ಸಹಾಯದೊಂದಿಗೆ ತಂದು, ತನ್ನದೇ ಆದ ಗ್ಯಾಂಗ್ ಮೂಲಕ ಚಲಾವಣೆಗೆ ಬಿಟ್ಟಿದ್ದಾನೆ ಎಂದರು. ಗೋಷ್ಠಿಯಲ್ಲಿ ಡಿವೈಎಸ್ಪಿಗಳಾದ ರಾಮಕೃಷ್ಣ, ಧರಣೇಂದ್ರ, ಕನಕಪುರ ಪಿಎಸ್ಸೈ ಅಶೋಕ್ ಇತರರಿದ್ದರು.
ಇತರೆ ಪ್ರಕರಣಗಳು: ವಿವಿಧ ಕಳ್ಳತನ ಪ್ರಕರಣಗಳನ್ನ ಪತ್ತೆ ಹಚ್ಚಿರುವ ರಾಮನಗರ ಜಿಲ್ಲಾ ಪೊಲೀಸರು ರು.2.50  ಲಕ್ಷ ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿ, ರು.6 ಲಕ್ಷ ಮೌಲ್ಯದ 14 ಕೆಜಿ ಬೆಳ್ಳಿಯ ಗಟ್ಟಿ,  ಒಂದು ಮಾರುತಿ ಒಮ್ನಿ  ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಗಳಲ್ಲಿ 3 ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಅಂತಾರಾಜ್ಯ ಕಳ್ಳರಾಗಿದ್ದಾರೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.