ಬೆಂಗಳೂರು ಗ್ರಾಮಾಂತರ

ಖೋಟಾನೋಟು ಚಲಾವಣೆಗೆ ಕೊನೆ ಇಲ್ಲ

Published On :

ಕ.ಪ್ರ.ವಾರ್ತೆ  ರಾಮನಗರ  ಜೂ.19
ಅಂತಾರಾಷ್ಟ್ರೀಯ ಖೋಟಾ ನೋಟು ಜಾಲ ಸಿಕ್ಕಿಬಿದ್ದಿದ್ದರೂ ಖೋಟಾ ನೋಟುಗಳ ಚಲಾವಣೆಗೆ ಕೊನೆ ಇಲ್ಲದಾಗಿದೆ. ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೈತರಿಗೆ ಮಾಡಲಾದ ಬಟವಾಡೆಯಲ್ಲಿ ಬುಧವಾರ ಒಂದೇ ದಿನ 10ಕ್ಕೂ ಹೆಚ್ಚು ಖೋಟಾ ನೋಟುಗಳು ಪತ್ತೆಯಾಗಿವೆ.
ದೇಶದ ಅತಿ ದೊಡ್ಡ ರೇಷ್ಮೆ ಗೂಡು ಮಾರುಕಟ್ಟೆ ಕೇಂದ್ರಗಳಲ್ಲಿ ಒಂದಾಗಿರುವ ರಾಮನಗರ ಮಾರುಕಟ್ಟೆಯಲ್ಲಿ ಪ್ರತಿದಿನ ಕೋಟ್ಯಂತರ ರು. ವಹಿವಾಟು ನಡೆಯುತ್ತದೆ.  ತಮಗೆ ಪಾವತಿಸಿದ ಹಣದಲ್ಲಿ ಖೋಟಾ ನೋಟುಗಳು ಪತ್ತೆಯಾದ ಹಿನ್ನೆಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.  ಖೋಟಾ ನೋಟಿನ ಅನುಮಾನ ಮೂಡಿದ ಕೂಡಲೇ ಕೆಲ ರೈತರು ಸ್ವತಃ ಪರಿಶೀಲಿಸಿಕೊಂಡರು. ಆಗ ರು.1 ಸಾವಿರ ಮುಖ ಬೆಲೆಯ ಖೋಟಾ ನೋಟುಗಳು ಪತ್ತೆಯಾಗಿದ್ದು, ಈ ಕುರಿತು ಅಧಿಕಾರಿಗಳೆದುರು ಆಕ್ರೋಶ ವ್ಯಕ್ತಪಡಿಸಿದರು.  ತಕ್ಷಣ ಎಚ್ಚೆತ್ತ ಅಧಿಕಾರಿಗಳು ಸದರಿ ನೋಟುಗಳನ್ನು ವಾಪಸ್ ಪಡೆದು, ಅಸಲಿ ನೋಟುಗಳನ್ನು ಸಂದಾಯ ಮಾಡಿದರು. ಆದರೆ, ಖೋಟಾ ನೋಟುಗಳು ಪತ್ತೆಯಾಗಿರುವ ಕುರಿತು ಪೊಲೀಸ್ ದೂರು ದಾಖಲಿಸಲು ಮುಂದಾಗದಿರುವುದು ಅನುಮಾನಕ್ಕೆಡೆ ಮಾಡಿದೆ.
ಗೂಡು ಖರೀದಿಸುವ ರೀಲರ್‌ಗಳು ಮತ್ತು ವರ್ತಕರು ಪ್ರತಿ ನಿತ್ಯ ಮಾರುಕಟ್ಟೆ ಖಜಾನೆಗೆ ಹಣ ತಂದು ಹಾಕುತ್ತಾರೆ. ಅದರಲ್ಲಿ ಖೋಟಾ ನೋಟುಗಳು ಬಂದಿರುವ ಶಂಕೆ ಇದೆ. ನೋಟು ಪರೀಕ್ಷೆ ಮತ್ತು ಎಣಿಕೆ ಯಂತ್ರ ಇದ್ದಾಗ್ಯೂ ಬಳಕೆ ಮಾಡದೆ ಅಧಿಕಾರಿಗಳು ಲೋಪವೆಸಗಿದ್ದಾರೆ.  
ರೈತರಿಗೆ ಪಾವತಿಸಲಾದ ಹಣದಲ್ಲಿ ಖೋಟಾ ನೋಟು ಇರುವ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ತಮ್ಮಿಂದ ವಾಪಸ್  ಪಡೆದ ಖೋಟಾ ನೋಟನ್ನು ಅಧಿಕಾರಿಯು ಯಂತ್ರಕ್ಕೆ ಹಾಕಿ ಪರಿಶೀಲಿಸುತ್ತಿರುವ ದೃಶ್ಯವನ್ನು ರೈತರೊಬ್ಬರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.