ಸುಮಾ ಹೋರಾಟ ಕೊನೆಗೂ ಸುಖಾಂತ್ಯ
ಕ.ಪ್ರ.ವಾರ್ತೆ ರಾಮನಗರ ಜೂ.19
ಸುಮಾ ಮಗನಿಗಾಗಿ ನಡೆಸಿದ ಹೋರಾಟ ಕಡೆಗೂ ಸುಖಾಂತ್ಯ ಕಂಡಿದೆ. ಮಕ್ಕಳ ರಕ್ಷಣಾ ಸಮಿತಿ ಮಧ್ಯಸ್ಥಿಕೆಯಲ್ಲಿ ಮಗ ಪ್ರಜ್ವಲ್ ಮಮತೆಯ ಮಡಿಲು ಸೇರಿದ್ದಾನೆ.
ಇದು, ಬೆಂಗಳೂರಿನಲ್ಲಿ 2005ರಲ್ಲಿ ನಡೆದ ಕಾಲ್ಸೆಂಟರ್ ಉದ್ಯೋಗಿ ಪ್ರತಿಭಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ರಾಮನಗರದ ನಂಜಾಪುರ ಗ್ರಾಮದ ಶಿವಕುಮಾರ್ ಪತ್ನಿ ಸುಮಾ ಮತ್ತು ಮಗ ಪ್ರಜ್ವಲ್(7) ಒಂದಾದ ಕತೆ.
ಪ್ರಜ್ವಲ್ನನ್ನು ತನ್ನ ನಾದಿನಿ ಕೆಂಪಾಜಮ್ಮ (ಶಿವಕುಮಾರ್ ಅಕ್ಕ) ಕಳೆದ ಮೂರು ವರ್ಷದ ಹಿಂದೆ ಕರೆದೊಯ್ದು, ಸಾಕುತ್ತಿದ್ದಾರೆ. ಆತನನ್ನು ನನ್ನ ವಶಕ್ಕೆ ಕೊಡಿಸಿ ಎಂದು ಸುಮಾ ಪೊಲೀಸರು ಮತ್ತು ಮಕ್ಕಳ ರಕ್ಷಣಾ ಸಮಿತಿ ಮೊರೆ ಹೋಗಿದ್ದರು.
ಹೋರಾಟದ ಹಾದಿ: ಸದ್ಯ ಕನಕಪುರ ತಾಲೂಕಿನ ಕೆರೆಮೇಗಳದೊಡ್ಡಿಯ ತನ್ನ ಅಜ್ಜಿ ಮನೆಯಲ್ಲಿರುವ ಸುಮಾ ತನಗೆ ಮಗು ಕೊಡಿಸಿ ಎಂದು ಕಳೆದ ಕೆಲ ದಿನಗಳಿಂದ ಹೋರಾಟ ನಡೆಸಿದ್ದಳು. ಮೊನ್ನೆಯಷ್ಟೇ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಸೂಚನೆಯಂತೆ ಅಧೀನ ಅಧಿಕಾರಿಗಳು ಕೆಂಪಾಜಮ್ಮ ವಶದಲ್ಲಿದ್ದ ಪ್ರಜ್ವಲ್ನನ್ನು ಮಂಗಳವಾರ ಮಕ್ಕಳ ರಕ್ಷಣಾ ಸಮಿತಿ ವಶಕ್ಕೆ ಒಪ್ಪಿಸಿದ್ದರು. ಪ್ರಕರಣ ಹಿನ್ನೆಲೆಯಲ್ಲಿ ಬುಧವಾರ ಸಮಿತಿ ಸಭೆ ನಡೆಯಿತು.
ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ವಶದಲ್ಲಿದ್ದ ಪ್ರಜ್ವಲ್ ತನ್ನ ತಾಯಿ ಸುಮಾಳನ್ನು ಅಮ್ಮ ಎನ್ನುವ ಬದಲು ಹೆಸರಿಡಿದು ಕರೆಯುತ್ತಿದ್ದನು. ತನ್ನನ್ನು ಸಾಕುತ್ತಿರುವ ಅತ್ತೆ, ಮಾವನನ್ನೇ ಅಪ್ಪ-ಅಮ್ಮ ಎನ್ನುತ್ತಿದ್ದನು. ಕೆಂಪಾಜಮ್ಮ ತಾನು ಸಾಕುತ್ತಿರುವ ಪ್ರಜ್ವಲ್ನನ್ನು ಬಿಟ್ಟುಕೊಡಲು ನಿರಾಕರಿಸಿದ್ದರು.
ಸಮಿತಿಯ ವಿಚಾರಣೆ: ಅಧ್ಯಕ್ಷ ಸಿ.ವಿ.ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ರಕ್ಷಣಾ ಸಮಿತಿ ಸಭೆಯಲ್ಲಿ ಸುಮಾ ದೂರಿನ ವಿಚಾರಣೆ ಕೈಗೆತ್ತಿಕೊಳ್ಳಲಾಯಿತು. ಸುಮಾ, ಮಗು ಪ್ರಜ್ವಲ್, ಆತನನ್ನು ಸಾಕುತ್ತಿರುವ ಕೆಂಪಾಜಮ್ಮ, ಅಜ್ಜಿ ಕೆಂಪಮ್ಮ ಸೇರಿದಂತೆ ಸಂಬಂಧಿಸಿದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು.
ಈ ಹಂತದಲ್ಲಿ ಕೆಂಪಮ್ಮ (ಶಿವಕುಮಾರ್ ತಾಯಿ) ನನಗೆ ನನ್ನ ಮೊಮ್ಮಗ ಪ್ರಜ್ವಲ್ ಬೇಕು. ನನ್ನ ಮಗ ಜೈಲಿನಲ್ಲಿದ್ದಾನೆ. ಇಳಿ ವಯಸ್ಸಿನಲ್ಲಿ ಮೊಮ್ಮಗನನ್ನಾದರೂ ನೋಡಿಕೊಂಡು ಇರುತ್ತೇನೆ. ಅದಕ್ಕೆ ಅವಕಾಶ ಕಲ್ಪಿಸಬೇಕು. ಬೇಕಿದ್ದರೆ ಸುಮಾ ಕೂಡ ಬಂದು ನಮ್ಮೊಂದಿಗೆ ಇರಲಿ ಎಂದು ಅವಲತ್ತುಕೊಂಡರು.
ಪ್ರಜ್ವಲ್ ಭವಿಷ್ಯದ ದೃಷ್ಟಿಯಿಂದ ಆತನನ್ನು ನನ್ನ ವಶದಲ್ಲೇ ಬಿಡಬೇಕು ಎಂದು ಕೆಂಪಾಜಮ್ಮ ಮತ್ತು ನಾಗೇಶ್ ದಂಪತಿ ಮನವಿ ಮಾಡಿದರು. ಮಗನನ್ನು ಬೇರೆಯವರ ಬಳಿ ಬಿಡಲು ಒಪ್ಪದ ಸುಮಾ ಆತ ನನಗೇ ಬೇಕು ಎನ್ನುವ ಹಕ್ಕೊತ್ತಾಯ ಮಂಡಿಸಿದರು.
ಮಹತ್ವದ ನಿರ್ಧಾರ: ವಿಚಾರಣೆ ಬಳಿಕ ಅಧ್ಯಕ್ಷ ಸಿ.ವಿ.ಜಾರ್ಜ್, ಸದಸ್ಯರಾದ ಪ್ರೊ.ಶಿವಲಿಂಗಯ್ಯ, ಬಿ.ಕೃಷ್ಣಮೂರ್ತಿ, ಜೆ.ಜಯಪ್ರಕಾಶ್, ಸತ್ಯನಾರಾಯಣ, ರತ್ನಮ್ಮ, ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿ ರಾಧಾ ಅವರನ್ನು ಒಳಗೊಂಡ ಸಮಿತಿಯು ಮಗು ತಾಯಿಯ ಮಡಿಲು ಸೇರುವುದೇ ಸೂಕ್ತವೆಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿತು.
ಈ ಹಂತದಲ್ಲಿ ಕೆಂಪಮ್ಮ, ಕೆಂಪಾಜಮ್ಮ ಗೋಳಾಡಿದರು. ಆದರೆ, ಮಗನನ್ನು ಮಡಿಲು ಸೇರಿಸುವ ಮಹತ್ವದ ತೀರ್ಮಾನ ಹೊರ ಬೀಳುತ್ತಿದ್ದಂತೆಯೇ ಆನಂದದಿಂದ ಸುಮಾ ಕಣ್ಣಾಲಿಗಳು ತುಂಬಿ ಬಂದವು. ಕೆಲ ಹೊತ್ತಿನಲ್ಲೇ ಪ್ರಜ್ವಲ್ನನ್ನು ಸುಮಾ ವಶಕ್ಕೆ ಒಪ್ಪಿಸಲಾಯಿತು.
ಮಗುವನ್ನು ವಶಕ್ಕೆ ಪಡೆದುಕೊಂಡ ಸಂಬಂಧ ಪತ್ರಕ್ಕೆ ಸಹಿ ಹಾಕಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಾ, ತನ್ನ ಈ ಹೋರಾಟದಲ್ಲಿ ಯಶಸ್ಸು ಕಾಣಲು ನೆರವಾದ ಮಾಧ್ಯಮ ಮತ್ತು ಸ್ವಯಂ ಸೇವಾ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

