ಯಶಸ್ವಿನಿ ಯೋಜನೆ ಜಾರಿಗೆ ಬಮೂಲ್ ಬದ್ಧ
ಕ.ಪ್ರ. ವಾರ್ತೆ, ಆನೇಕಲ್, ಜೂ.20
ಸ್ಥಗಿತಗೊಂಡಿದ್ದ ಯಶಸ್ವಿನಿ ಯೋಜನೆಗೆ ಮರುಚಾಲನೆ ನೀಡಲು ಬಮೂಲ್ ಬದ್ಧವಾಗಿದೆ. ಈ ಬಗ್ಗೆ ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಿ ಬಜೆಟ್ನಲ್ಲಿ ಸಾಕಷ್ಟು ಹಣ ಮೀಸಲಿಡುವಂತೆ ಮನವಿ ಮಾಡಲಾಗುವುದು ಎಂದು ಸಹಕಾರ ಸಚಿವ ಎಚ್. ಎಸ್. ಮಹಾದೇವ ಪ್ರಸಾದ್ ತಿಳಿಸಿದ್ದಾರೆ.
ಅವರು ಆನೇಕಲ್ ತಾಲೂಕು ಬಮೂಲ್ ಏರ್ಪಡಿಸಿದ್ದ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಜನಶ್ರೀ ಬಿಮಾ ಯೋಜನೆಯ ಚೆಕ್ಗಳನ್ನು ವಿತರಿಸಿ ಮಾತನಾಡಿ
ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗದಿ ಮಾಡಿದ ಮೊತ್ತ ಕಡಿತದಿಂದ ಯಶಸ್ವಿನಿ ಯೋಜನೆ ನೋಂದಣಿ ಕಾರ್ಯ ಸ್ಥಗಿತವಾಗಿತ್ತು. ಜುಲೈ 30ರೊಳಗೆ ನವೀಕರಣ ಹಾಗೂ ನೂತನ ಸದಸ್ಯರ ನೋಂದಣಿಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಹಿಂದಿನ ಅವಧಿಯಲ್ಲಿ ಯಶಸ್ವಿನಿ ಕಾರ್ಡ್ದಾರರಿಗೆ ನೂರಾರು ಆಸ್ಪತ್ರೆಯಲ್ಲಿ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನು ಮುಂದೆಯೂ ಇನ್ನಷ್ಟು ವಿಸ್ತಾರವಾದ ಚಿಕಿತ್ಸೆ ದೊರೆಯುವಂತೆ ಮಾಡಲಾಗುವುದು. ಯಶಸ್ವಿನಿ ರೋಗಿಗಳನ್ನು ವಿಶೇಷ ಅಕ್ಕರೆಯಿಂದ ನೋಡುವಂತೆ, ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಮೊತ್ತ ವಿಸ್ತರಣೆ ಬಗ್ಗೆಯೂ ಚರ್ಚಿಸಲಾಗುವುದು ಎಂದರು.
ಹಾಲು ಒಕ್ಕೂಟ ಪ್ರತಿ ಲೀಟರ್ ಹಾಲಿಗೆ ರೂ. 4 ಪ್ರೋತ್ಸಾಹ ಧನ ನೀಡುತ್ತಿದ್ದು ಹೆಚ್ಚು ಹಾಲು ಉತ್ಪಾದನೆಗೆ ಕಾರಣವಾಗಿದೆ. ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್ನಲ್ಲಿ ಪ್ರತಿ ದಿನ ಹಾಲು ದೊರೆಯುವ ಯೋಜನೆಗೆ ಚಾಲನೆ ನೀಡಲಾಗುವುದು.
ಸಹಕಾರ ಕ್ಷೇತ್ರದಲ್ಲಿ ರೈತ ಅಭ್ಯುದಯಕ್ಕೆ ಯೋಜನೆಗಳಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಆರ್ಥಿಕ ಸ್ಥಿತಿ ಉತ್ತಮ: ಶಾಸಕ ಬಿ. ಶಿವಣ್ಣ ಮಾತನಾಡಿ ಹೈನು ಮತ್ತು ರೇಷ್ಮೆಯಂತಹ ಕುಲ ಕಸುಬುಗಳನ್ನು ರೈತರು ನಿರಂತರ ಮಾಡುವ ಮೂಲಕ ಆರ್ಥಿಕ ಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಬಮೂಲ್ ನಿರ್ದೇಶಕ ಆರ್. ಕೆ. ರಮೇಶ್ ಮಾತನಾಡಿ ರಾಸುಗಳ ತಪಾಸಣೆ, ಪೌಷ್ಟಿಕ ಆಹಾರ, ಮೇವು ಕಟಾವು ಯಂತ್ರ ಸೇರಿದಂತೆ ಸಬ್ಸಿಡಿ ಇರುವ ಯೋಜನೆಗಳ ಸದುಪಯೋಗಪಡಿಸಿಕೊಂಡು ಉತ್ತಮ ಹಾಲು ಇಳುವರಿ ಮಾಡಬೇಕು.
ರೈತರಿಗಾಗಿ ಬಮೂಲ್ ಅನೇಕ ಕಲ್ಯಾಣ ಯೋಜನೆ ರೂಪಿಸಿದೆ. ರೈತ ಮಕ್ಕಳ ವಿದ್ಯಾಭ್ಯಾಸಕ್ಕೂ ಪ್ರೋತ್ಸಾಹ ಧನ ನೀಡುತ್ತಿದೆ. ಸರ್ಕಾರಿ ಸಂಸ್ಥೆ ಬಮೂಲ್ ಜೊತೆ ರೈತರು ಪ್ರಗತಿ ಹೊಂದಬೇಕೆಂದರು.
ನಗರ ಜಿಪಂ ಮಾಜಿ ಅಧ್ಯಕ್ಷ ಹೆಚ್. ಎಸ್. ಬಸವರಾಜು, ಡಾ. ಟಿ. ಗುರುಲಿಂಗಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯರು, ತಾಲೂಕು ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯ್ತಿ ಸದಸ್ಯರು ಮುಖಂಡರಾದ ಜಿಗಣಿ ಕೃಷ್ಣಪ್ಪ, ಕಂಟ್ರಾಕ್ಟರ್ ಕೃಷ್ಣಷ್ಣ ಮೂರ್ತಿ, ಅಚ್ಯುತರಾಜು, ಸಿ.ಆರ್. ಮನೋಹರ್, ರಾಮೋಜಿಗೌಡ, ಚಂದ್ರಪ್ಪ, ರಾಜಣ್ಣ, ಎನನ್ಬಿಐ ನಾಗರಾಜ್ ಸೇರಿದಂತೆ ಅನೇಕ ಮುಖಂಡರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

