ಬೆಂಗಳೂರು ಗ್ರಾಮಾಂತರ

ಕಾರಿಡಾರ್ ಕಡೆ; ನಾಡಿನತ್ತ ಆನೆಗಳ ನಡೆ

Published On :

ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ಕಾಡಿನಲ್ಲಿರಬೇಕಾದ ಆನೆಗಳು  ನಾಡಿಗೆ ದಾಳಿ ಇಡುತ್ತಿರುವುದೇಕೆ?
ಅರಣ್ಯದಲ್ಲಿ ಆಹಾರದ ಕೊರತೆ ಒಂದೆಡೆಯಾದರೆ ಆನೆಗಳು ಓಡಾಡುವ ಜಾಗದಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿರುವುದು ಇದಕ್ಕೆ ಕಾರಣ. ಜೊತೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯತನವೂ ಆನೆಗಳು ಕಾಡು ಬಿಟ್ಟು ಬರಲು ದಾರಿಯಾಗುತ್ತಿದೆ.
ಅರಣ್ಯ ಇಲಾಖೆ ಅನೆ ಕಾರಿಡಾರ್ ಕಡೆ ಕಣ್ಣು ಹಾಯಿಸುತ್ತಿಲ್ಲ. ಜತೆಗೆ ಕಾರಿಡಾರ್ ಸಮೀಪ ರೈತರು ಕಬ್ಬು ಮತ್ತು ಬಾಳೆಯಂಥ ಬೆಳೆ ಹಾಕುತ್ತಿದ್ದಾರೆ. ಇದರಿಂದ ಆಕರ್ಷಿತವಾದ ಆನೆಗಳು ಬೆಳೆಯ ರುಚಿ ನೋಡಲು ಓಡೋಡಿ ಬರುತ್ತಿವೆ. ಕಳೆದೊಂದು ವಾರದಲ್ಲಿ ಬೆಂಗಳೂರು ಸೇರಿದಂತೆ ಕೋಲಾರ, ಮಾಲೂರು, ಹಾಸನ, ಕೊಡಗು ಜಿಲ್ಲೆಯ ಅನೇಕ ಕಡೆ ಆನೆ ಅವಾಂತರಗಳು ನಡೆದು ಸಾವು, ನೋವು ಸಂಭವಿಸಿವೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಇಲಾಖೆ ಪ್ರತಿವರ್ಷ ಸ್ಯಾಟಲೈಟ್ ಸಹಾಯದಿಂದ ಆನೆ ಕಾರಿಡಾರ್ ಎಲ್ಲಿ, ಹೇಗಿದೆ? ಎಂದು ಪರಿಶೀಲಿಸಬೇಕು. ಹಾಗೆಯೇ ಖಾಸಗಿ ಪ್ರದೇಶಗಳಲ್ಲಿರುವ ಅರಣ್ಯದ ಕಾರಿಡಾರ್ ಮೇಲೂ ಕಣ್ಣಿಟ್ಟಿರಬೇಕು. ಆದರೆ, ಅರಣ್ಯ ಇಲಾಖೆ ಬಹುತೇಕ ಕಡೆ ಕಾರಿಡಾರ್ ಸಮೀಕ್ಷೆಯನ್ನೇ ನಡೆಸಿಲ್ಲ. ಅದರಲ್ಲೂ ಇಲಾಖೆ ವ್ಯಾಪ್ತಿಯಿಂದ ಹೊರಗಿರುವ ಅರಣ್ಯದತ್ತ ತಿರುಗಿಯೂ ನೋಡಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ಕಟ್ಟಡ, ತೋಟ, ರಸ್ತೆಗಳು ನಿರ್ಮಾಣವಾಗಿ ಕಾರಿಡಾರ್ ಸ್ವರೂಪವೇ ಬದಲಾಗುತ್ತಿದೆ.
ಇನ್ನು ಕಾರಿಡಾರ್‌ನಲ್ಲಿ ಆನೆ ಸಾಗಲು ಇರುವ ತೊಂದರೆ ನಿವಾರಿಸಲು ಮತ್ತು ನಾಡಿಗೆ ನುಗ್ಗಿದ ಆನೆಗಳನ್ನು ಮುಂದೆ ಸಾಗುವಂತೆ ಮಾಡಲು ಇಲಾಖೆ ಗ್ರಾಮಸ್ಥರ ಸಹಕಾರ ಪಡೆಯಬೇಕು. ಆದರೆ ಕೆಲವು ವರ್ಷಗಳಿಂದ ಈ ಕಾರ್ಯಾಚರಣೆ ಕೂಡ ನಿರೀಕ್ಷಿತ ರೀತಿಯಲ್ಲಿ ನಡೆಯುತ್ತಿಲ್ಲ.
ಅನೆ ಹಾಗೂ ಇತರ ಪ್ರಾಣಿಗಳು ನಾಡಿನೊಳಗೆ ಬಂದಾಗ ಇಲಾಖೆ ಕಾರ್ಯಾಚರಣೆಗೆ ಸಹಕಾರ ಪಡೆಯಲೆಂದೇ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸಮಿತಿಗಳನ್ನೂ ರಚಿಸಲಾಗಿದ್ದು, ಸಮಿತಿಯಲ್ಲಿ ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಗ್ರಾಮಗಳ ಮುಖಂಡರು, ಇಲಾಖೆ ಅಧಿಕಾರಿಗಳೂ ಇರುತ್ತಾರೆ. ಈ ಸಮಿತಿ ಕಾಲಾಕಾಲಕ್ಕೆ ಸಭೆ ನಡೆಸಿ ಆನೆ ಕಾರಿಡಾರ್‌ನಲ್ಲಿ ಇರುವ ಅಡಚಣೆ ನಿರಾರಿಸಬೇಕು.
ಆದರೆ, ಅನೇಕ ಗ್ರಾಮಗಳಲ್ಲಿ ಈ ಸಮಿತಿಯೇ ರಚನೆಯಾಗಿಲ್ಲ. ರಚನೆಯಾಗಿರುವ ಕಡೆ ಸಮಿತಿಗಳು ಕ್ರಿಯಾಶೀಲವಾಗಿಲ್ಲ. ಇದೇ ಅಲ್ಲದೆ ಗ್ರಾಮಮಟ್ಟದಲ್ಲಿ ಪರಿಸರ ಅಭಿವೃದ್ಧಿ ಸಮಿತಿಗಳನ್ನೂ ರಚಿಸಬೇಕು. ಇವು ಬಹುತೇಕ ಅಸ್ತಿತ್ವದಲ್ಲೇ ಇಲ್ಲ.
ಹೀಗಾಗಿ ಆನೆ ಕಾರಿಡಾರ್ ಬಗ್ಗೆಯಾಗಲಿ, ಇತರ ವನ್ಯಜೀವಿಗಳು ನಾಡು ಪ್ರವೇಶ ಮಾಡುವ ಬಗ್ಗೆಯಾಗಲಿ ಗ್ರಾಮಸ್ಥರಿಗೆ ಅರಿವಿಲ್ಲದೆ ಅನಾಹುತುಗಳು ನಡೆಯುತ್ತಿವೆ.


ಅರಣ್ಯದಲ್ಲಿ ಇನ್ನೂ ಬರ

ಬರ ಕಾಡನ್ನು ಇನ್ನೂ ಕಾಡುತ್ತಿದೆ. 2 ವರ್ಷಗಳಿಂದ ಮಳೆಯಾಗದೆ ಕಾಡಿನಲ್ಲಿ ಪ್ರಾಣಿಗಳಿಗೆ ನೀರು ಸಿಗುತ್ತಿಲ್ಲ. ಬಂಡೀಪುರ ಮತ್ತು ನಾಗರಹೊಳೆಯ ಅನೇಕ ಕಡೆ ಪ್ರಾಣಿಗಳಿಗೆ ಹೊರಗಿನಿಂದ ನೀರು ಪೂರೈಸಲಾಯಿತು. ಆದರೆ, ಆ ಭಾಗದಲ್ಲಿ ಕೆರೆಕಟ್ಟೆಗಳಲ್ಲಿ ನೀರು ನಿಲ್ಲುವಷ್ಟು ಮಳೆಯಾಗಿಲ್ಲ.
ಇದಕ್ಕಿಂತ ಮುಖ್ಯವಾಗಿ ಆನೆ, ಜಿಂಕೆಗಳು ಹೆಚ್ಚು ಇಷ್ಟಪಡುವ ಸಸ್ಯಗಳಾದ ಕವಲ್, ದಿಂಡಿಗ, ಗ್ರೀಡ್, ಸಾಗುವಾನಿ ತೊಗಟೆ, ಬಿದಿರು ಬಳ್ಳಿಗಳು ಕಾಡಿನಲ್ಲಿ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿವೆ. ಇದರಿಂದ ಕೂಡ ಆನೆಗಳು ಆಹಾರ ಅರಸಿ ಹೋಗುತ್ತಿವೆ ಎಂದು ನಿವೃತ್ತ ಹಿರಿಯ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ಹೇಳುತ್ತಾರೆ.
ಕಾಡಿನಲ್ಲಿ ನೀರು ಸಂಗ್ರಹಿಸುವ ಮತ್ತು ಕಾಡಿನ ಆಯ್ದ ವನ್ಯಜೀವಿ ಮುಕ್ತ ಪ್ರದೇಶದಲ್ಲಿ ಕವಲ್, ದಿಂಡಿಗ, ಗ್ರೀಡ್, ಸಾಗುವಾನಿ, ಬಿದಿರು ಬೆಳೆಯಲೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಇಲಾಖೆ ಹಿಂದಿನ ಸಚಿವರು ಈ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಕಾಡಿನಲ್ಲಿ ನೀರು, ಆಹಾರ ಬರ ನಿವಾರಣೆ ಆಗಲೇ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.


ಆನೆ ಕಾರಿಡಾರ್‌ನಲ್ಲಿ ಕಟ್ಟಡಗಳು ಮತ್ತು ಇತರ ನಿರ್ಮಾಣಗಳು ಹೆಚ್ಚಾಗಿ ಆನೆಗಳು ದಿಕ್ಕು ತಪ್ಪಿ ನಾಡಿನೆಡೆಗೆ ನುಗ್ಗುತ್ತಿವೆ. ಕಾರಿಡಾರ್ ಮೇಲೆ ನಿಗಾ ವಹಿಸುವ ಕೆಲಸ ಮಾಡಿದ್ದೇವೆ. ಇನ್ನೂ ಆಗಬೇಕಿತ್ತು. ಖಾಸಗಿ ಪ್ರದೇಶದಲ್ಲಿರುವ ಕಾರಿಡಾರ್‌ನಲ್ಲಿ ನಿಗಾ ವಹಿಸಲಾಗಿಲ್ಲ. ಇದರಿಂದ  ಅನೇಕ ಕಡೆ ಮರಗಳೂ ನಾಶವಾಗಿ ಕಾರಿಡಾರ್ ಸ್ವರೂಪವೇ ಬದಲಾಗಿ ಆನೆಗಳು ದಿಕ್ಕುತಪ್ಪುತ್ತಿವೆ.
 ಟಿ ದೀಪಕ್ ಸಿಂಗ್, ಹೆಚ್ಚುವರಿ ಪಿಸಿಸಿಎಫ್ ಪ್ರಧಾನ ಮುಖ್ಯ ಆರಣ್ಯ ಸಂರಕ್ಷಣಾಧಿಕಾರಿ



ಆನೆ ನೋಡಲು ಬಂದವರಿಗೆ ಲಾಠಿ ರುಚಿ
ಅರಣ್ಯಇಲಾಖೆ  ಸಿಬ್ಬಂದಿ ಚದುರಿದ ಆನೆಗಳ ಗುಂಪು ಒಂದಾಗಿಸಲು ಹರ ಸಾಹಸಪಡುತ್ತಿದ್ದರು. ಆದರೆ ಜನರ ಕಿರುಚಾಟದಿಂದ ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆಗೆ ತೊಡಕುಂಟಾಗಿತ್ತು. ಸಾಕಷ್ಟು ಬಾರಿ ಆನೆಗಳ ಹಿಂಡಿನ ಸಮೀಪ ಹೋಗಬಾರದೆಂದು ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದರೂ ಜನ ಕಿವಿಗೊಡಲಿಲ್ಲ. ಈ ಹಿನ್ನೆಲೆಯಲ್ಲಿ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಆನೆಗಳಿಗಿಂತ ಜನರನ್ನು ನಿಯಂತ್ರಿಸುವುದೇ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಹುಸ್ಕೂರು ಕೆರೆಯಿಂದ ಹೊರಬಂದ ಆನೆಗಳು ಅರಣ್ಯ ಇಲಾಖೆಯ ಜಾಲಿ ಮರಗಳ ತೋಪಿನಲ್ಲಿ ಆಶ್ರಯ ಪಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.