ಅಪಾಯಕಾರಿ ತಂತಿ ಬೇಲಿ ಅಳವಡಿಕೆ
-ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ ರಾಮನಗರ ಜೂ.25
ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರಿನ ಐಜೂರು ವೃತ್ತದ ಬಳಿ ಹದಗೆಟ್ಟಿದ್ದ ಸಂಚಾರಿ ವ್ಯವಸ್ಥೆಯನ್ನು ಸುಧಾರಿಸುವ ಭರಾಟೆಯಲ್ಲಿ ಪೊಲೀಸರು ರಸ್ತೆ ವಿಭಜಕಕ್ಕೆ ಅಪಾಯಕಾರಿ ತಂತಿ ಬೇಲಿ ಅಳವಡಿಸುವ ಮೂಲಕ ಅವಾಂತರ ತಂದೊಡ್ಡಿದ್ದಾರೆ.
ಐಜೂರು ವೃತ್ತದಿಂದ ದಕ್ಷಿಣದ ಕಡೆಗೆ ಸುಮಾರು 30 ಮೀ. ದೂರವರೆಗೆ ಪಾದಚಾರಿಗಳು ರಸ್ತೆ ದಾಟುವುದಕ್ಕೆ ಆಗದಂತೆ ವಿಭಜಕಕ್ಕೆ ಅವೈಜ್ಞಾನಿಕ ತಂತಿ ಬೇಲಿಯನ್ನು ನಾಲ್ಕು ದಿನದ ಹಿಂದಷ್ಟೇ ಅಳವಡಿಸಲಾಗಿದೆ. ಈ ಪರಿಣಾಮ ಸಾಕಷ್ಟು ಮಂದಿಗೆ ಗಾಯಗಳಾಗಿವೆ.
ಜಾನುವಾರುಗಳು ಮತ್ತು ಅನ್ಯರು ಪ್ರವೇಶಿಸದಂತೆ ಜಮೀನಿಗೆ ತಂತಿ ಬೇಲಿ ಅಳವಡಿಕೆ ಮಾಡಲಾಗುತ್ತದೆ. ಆದರೆ, ಇಲ್ಲಿ ಪೊಲೀಸರು ಸಂಚಾರಿ ವ್ಯವಸ್ಥೆ ಸುಗಮಗೊಳಿಸಲು ತಂತಿ ಬೇಲಿ ಅಳವಡಿಸಿ ಪ್ರಯಾಣಿಕರು ಮತ್ತು ಪಾದಚಾರಿಗಳನ್ನು ಅಪಾಯಕ್ಕೆ ದೂಡಿರುವುದು ವಿಪರ್ಯಾಸದ ಸಂಗತಿ.
ರಾತ್ರಿ ಹೆಚ್ಚು ಅಪಾಯ: ವಿಭಜಕಕ್ಕೆ ತಂತಿ ಬೇಲಿ ಅಳವಡಿಸಿರುವ ಬಗ್ಗೆ ಪೊಲೀಸ್ ಇಲಾಖೆಯು ಯಾವುದೇ ಸೂಚನಾ ಫಲಕವನ್ನು ಹಾಕಿಲ್ಲ. ತಂತಿ ಬೇಲಿ ಅಳವಡಿಸಿದ ಪ್ರಾರಂಭದ ಎರಡು ರಾತ್ರಿ ಅದು ಕಾಣದೆ ಪಾದಚಾರಿಗಳು ವಿಭಜಕ ದಾಟಲು ಹೋಗಿ ಗಾಯ ಮಾಡಿಕೊಂಡಿದ್ದರು.
ಇದರಿಂದ ಎಚ್ಚೆತ್ತ ಪೊಲೀಸರು ತಂತಿ ಬೇಲಿ ಇರುವಷ್ಟು ದೂರ ಸಣ್ಣದೊಂದು ಕೆಂಪು ಪಟ್ಟಿಯನ್ನೇನೋ ಹಾಕಿದೆ. ರಾತ್ರಿ ವೇಳೆ ಪಟ್ಟಿ ಕಾಣುತ್ತದೆಯೇ ಹೊರತು ತಂತಿ ಬೇಲಿಯಲ್ಲ. ಹೀಗಾಗಿ ಅಪಾಯ ಈಗಲೂ ತಪ್ಪಿಲ್ಲ. ಹೊಸಬರ ಪಾಡು ಹೇಳತೀರದಾಗಿದೆ.
ಹೊಸಬರು ಗೊತ್ತಿಲ್ಲದೆ ಇಲ್ಲಿ ರಸ್ತೆ ದಾಟಲು ಹೋಗಿ ಬಟ್ಟೆಬರೆ ಹರಿದುಕೊಂಡಿದ್ದಲ್ಲದೆ ಮೈಕೈಗೆ ಗಾಯ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ತಂತಿ ಬೇಲಿ ತಡೆದು ರಸ್ತೆಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ವಾಹನಗಳು ಬಾರದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಗ್ನಲ್ ದಾಟಲಾಗದು: ಇಲ್ಲಿರುವ ವೃತ್ತದಲ್ಲಿ ಸ್ವಯಂ ನಿರ್ವಹಣೆಯ ಸೋಲಾರ್ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿದೆ. ನಾಲ್ಕು ರಸ್ತೆಗಳಲ್ಲದೆ, ಸಂಪರ್ಕ ರಸ್ತೆಗಳೂ ಕೂಡುವ ಈ ಸ್ಥಳದಲ್ಲಿ ಅದೆಷ್ಟೋ ವಾಹನಗಳ ಚಾಲಕರು ಸಿಗ್ನಲ್ ಗಮನಿಸದೆಯೇ ಅಡ್ಡಾದಿಡ್ಡಿ ಚಾಲನೆ ಮಾಡುತ್ತಿರುತ್ತಾರೆ.
ಈ ಕಾರಣಕ್ಕೆ ಸಿಗ್ನಲ್ ಬಳಿ ಪಾದಚಾರಿಗಳು ತಮ್ಮ ಜೀವವನ್ನು ಮುಷ್ಟಿಯಲ್ಲಿಟ್ಟುಕೊಂಡು ರಸ್ತೆ ದಾಟಬೇಕಿದೆ. ಇದೆಲ್ಲ ಸಮಸ್ಯೆಗೆ ಪರಿಹಾರ ಕಂಡು ಹಿಡಿದು, ಆ ಬಳಿಕವಷ್ಟೇ ವಿಭಜಕಕ್ಕೆ ವೈಜ್ಞಾನಿಕ ಮತ್ತು ಸುಸಜ್ಜಿತ ತಡೆಗೋಡೆ ನಿರ್ಮಿಸಬಹುದಿತ್ತು. ಆದರೆ, ತಂತಿ ಬೇಲಿಗೆ ಮೊರೆ ಹೋಗಲಾಗಿದೆ.
ವಿದ್ಯಾರ್ಥಿಗಳು, ಮಧ್ಯ ವಯಸ್ಕರು ಸಹಿತ ಸಾಕಷ್ಟು ಜನರು ತಂತಿ ಬೇಲಿಯ ನಡುವೆ ಇಲ್ಲವೇ ಅದರ ಮೇಲೆ ಜಿಗಿದು ರಸ್ತೆ ದಾಟುತ್ತಿದ್ದಾರೆ. ಈ ವೇಳೆ ಮುಂದಕ್ಕೆ ಮುಗ್ಗರಿಸಿದರೂ ಅಥವಾ ಹಿಂದಕ್ಕೆ ಜಾರಿ ಬಿದ್ದರೂ ವಾಹನಗಳ ಚಕ್ರದಡಿಗೆ ಸಿಲುಕುವ ಅಪಾಯ ತಪ್ಪಿದ್ದಲ್ಲ.
ಬ್ಯಾರಿಕೇಡ್ ಅವಾಂತರ: ಬೆಂಗಳೂರು-ಮೈಸೂರು ನಡುವೆ ಇರುವ ನಗರ, ಪಟ್ಟಣಗಳ ಪೈಕಿ ಅತಿ ಹೆಚ್ಚು ವಾಹನ, ಜನ ನಿಬಿಡವಾಗಿರುವುದು ರಾಮನಗರದ ಐಜೂರು ವೃತ್ತ. ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭದ ಬಳಿಕವಂತೂ ಇಲ್ಲಿನ ಸಂಚಾರ ಅವ್ಯವಸ್ಥೆಯ ಆಗರವಾಗಿದೆ.
ರಾಮನಗರ ನಗರದ ವ್ಯಾಪ್ತಿಯಲ್ಲಿ ಹೆದ್ದಾರಿ ಪಕ್ಕದಲ್ಲಿ ಸುಗಮ ಸಂಚಾರದ ಉದ್ದೇಶದಿಂದ ನಿರ್ಮಿಸಿರುವ ಸರ್ವೀಸ್ ರಸ್ತೆಯು ವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡಿದೆ. ಸರ್ವೀಸ್ ರಸ್ತೆಯಿಂದ ಸಂಚಾರ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದ್ದು, ಒಂದು ಮಾಡಲು ಹೋದರೆ ಮತ್ತೊಂದು ಎಡವಟ್ಟಾಗುತ್ತಿದೆ.
ಐಜೂರು ವೃತ್ತದ ಬಳಿ ತಂತಿ ಬೇಲಿ ಅಳವಡಿಸಿರುವಷ್ಟೂ ದೂರ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯನ್ನು ಬಂದ್ ಮಾಡಲಾಗಿದೆ. ಅದಕ್ಕಾಗಿ ಅಳವಡಿಸಿರುವ ಬ್ಯಾರಿಕೇಡ್ಗಳು ಗಾಳಿ ಮತ್ತು ವಾಹನಗಳ ಹಾವಳಿಯಿಂದ ಉರುಳಿ ಆಗಾಗ್ಗೆ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿವೆ.
ಕೆಳ ಸೇತುವೆ ಅಗತ್ಯ: ಐಜೂರು ವೃತ್ತದಲ್ಲಿನ ಸಂಚಾರಿ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಸರ್ವೀಸ್ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ, ವಿಭಜಕಕ್ಕೆ ತಂತಿ ಬೇಲಿ ನಿರ್ಮಾಣವೇ ಪರಿಹಾರವಲ್ಲ. ಈ ನಿಟ್ಟಿನಲ್ಲಿ ವೈಜ್ಞಾನಿಕ ಚಿಂತನೆಯೊಂದಿಗೆ ಸೂಕ್ತ ಯೋಜನೆ ರೂಪಿಸುವುದು ಅಗತ್ಯ.
ಈ ವೃತ್ತದ ಮಾರ್ಗವಾಗಿ ಹೆದ್ದಾರಿಯಲ್ಲಿ ಸುಗಮ ಸಂಚಾರ, ಪಾದಚಾರಿಗಳ ಸುರಕ್ಷತೆ ಮತ್ತು ಸಂಚಾರ ಅವ್ಯವಸ್ಥೆಗೆ ಮುಕ್ತಿ ಸಿಗಬೇಕಿದ್ದರೆ ಇಲ್ಲೊಂದು ಕೆಳ ಸೇತುವೆ ನಿರ್ಮಾಣ ಮಾಡಬೇಕೆನ್ನುವ ಹಲವು ವರ್ಷಗಳ ಬೇಡಿಕೆ ಈಡೇರಬೇಕಿದೆ.
ಹೀಗೆ ಶಾಶ್ವತ ಪರಿಹಾರ ಕಂಡು ಹಿಡಿಯುವವರೆಗೆ ವಿಭಜಕಕ್ಕೆ ತಂತಿ ಬೇಲಿ ಅಳವಡಿಕೆಯಂತಹ ಅಪಾಯಕಾರಿ ಪ್ರಯೋಗವನ್ನು ಕೈಬಿಟ್ಟು, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ಪರ್ಯಾಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುಂದಾಗಬೇಕು.
ರಾಮನಗರದ ಐಜೂರು ವೃತ್ತದಲ್ಲಿ ಸಂಚಾರಿ ವ್ಯವಸ್ಥೆ ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ತಂತಿ ಬೇಲಿ ಅಳವಡಿಕೆಯಿಂದ ಆಗುತ್ತಿರಬಹುದಾದ ಅಪಾಯ, ಅನಾನುಕೂಲತೆಗಳ ಬಗ್ಗೆ ಪರಿಶೀಲಿಸಿ ಪರ್ಯಾಯ ಕ್ರಮಕ್ಕೆ ಮುಂದಾಗಲು ಅಧಿಕಾರಿಗಳಿಗೆ ಸೂಚಿಸಲಾಗುವುದು.
-ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

