ಬಿಡದಿಗೆ ಸದ್ಯಕ್ಕೆ ತಪ್ಪಿದ ಬೆಂಗಳೂರು ಕಸ ಸಮಸ್ಯೆ
-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜೂ.27
ಬೆಂಗಳೂರಿನ ಕಸಕ್ಕೆ ರಾಮನಗರದ ಬಿಡದಿ ಭಾಗವನ್ನು ತೊಟ್ಟಿಯನ್ನಾಗಿಸುವ ಹುನ್ನಾರ ಸದ್ಯಕ್ಕೆ ತಪ್ಪಿದೆ. ಆದರೆ, ಇದೇ ಜಿಲ್ಲೆಯ ಹಾರೋಹಳ್ಳಿ ಬಳಿ ಕಸಾಯಿಖಾನೆ ಸ್ಥಾಪಿಸುವ ಷಡ್ಯಂತ್ರ ಮುಂದುವರಿದಿದೆ. ಈ ವಿರುದ್ಧದ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಜನಪ್ರತಿನಿಧಿಗಳ ಮೌನ ಸಂಶಯಕ್ಕೆ ಎಡೆಮಾಡಿದೆ.
ಬೆಂಗಳೂರಿಗೆ ಪರ್ಯಾಯವಾಗಿ ರಾಮನಗರ ಜಿಲ್ಲೆಯನ್ನು ಅಭಿವೃದ್ಧಿಪಡಿಸುತ್ತೇವೆ ಎನ್ನುವ ಭರವಸೆಯ ಹೊಳೆಯನ್ನು ರಾಜಕಾರಣಿಗಳು ಹರಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಆಗುತ್ತಿರುವುದೇ ಬೇರೆ. ಬೆಂಗಳೂರಿಗೆ ಬೇಡವಾದದ್ದನ್ನು ಮಾತ್ರ ರಾಮನಗರದ ಮೇಲೆ ಹೇರುವ ಸಂಚು ನಡೆಯುತ್ತಿದೆಯಷ್ಟೇ. ಈ ವಿಷಯದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಯತ್ನ, ಬೆಂಗಳೂರು ಕಲುಷಿತದಿಂದ ತುಂಬಿದ ವೃಷಭಾವತಿ ಹರಿವು, ವಿಷಯುಕ್ತ ರಾಸಾಯನಿಕ ಮತ್ತು ಬಣ್ಣದ ಕಾರ್ಖಾನೆಗಳು ಹೀಗೆ ಬೆಂಗಳೂರಿಗೆ ಬೇಡವಾದವು ರಾಮನಗರದಲ್ಲಿ ನೆಲೆಯೂರುತ್ತಿವೆ. ಇದರಲ್ಲಿ ಕಸಾಯಿಖಾನೆ ಸ್ಥಾಪನೆಯೂ ಸೇರಿದೆ.
ಕೆರಳಿದ ಜನತೆ: ಕಸಾಯಿಖಾನೆಯನ್ನು ಈ ಮುನ್ನ ಹೊಸಕೋಟೆ, ದೇವನಹಳ್ಳಿ, ಆನೇಕಲ್ ತಾಲೂಕುಗಳಲ್ಲಿ ಸ್ಥಾಪನೆಗೆ ಮುಂದಾದಾಗ ಕೆರಳಿದ್ದ ಅಲ್ಲಿನ ಜನತೆ ಆಚೆಗಟ್ಟಿದ್ದರು. ಬಳಿಕ ಬಿಬಿಎಂಪಿಯ ವಕ್ರದೃಷ್ಟಿಗೆ ಒಳಗಾಗಿದ್ದೇ ಹಾರೋಹಳ್ಳಿಯ ಸಿದ್ದಾಪುರ ಬಳಿಯ ಪ್ರದೇಶ. ಎರಡು ವರ್ಷದ ಹಿಂದೆ ಇಲ್ಲಿ ಕಸಾಯಿಖಾನೆ ಸ್ಥಾಪಿಸುವ ಪ್ರಯತ್ನ ನಡೆದಿದೆ. ಅದಾಗಲೇ ಘಟಕ ಪ್ರಾರಂಭಕ್ಕೆ ಬಂದ ಅಧಿಕಾರಿಗಳ ತಂಡವನ್ನು ಹಾರೋಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಓಡಿಸಿದ್ದರು. ಪೊಲೀಸ್ ಬಿಗಿ ಬಂದೋಬಸ್ತ್ನಡುವೆಯೂ ಪ್ರತಿರೋಧ ಒಡ್ಡುವಲ್ಲಿ ಜನತೆ ಯಶಸ್ವಿಯಾಗಿದ್ದರು. ಅಲ್ಲಿಂದೀಚೆಗೆ ನಿರಂತರ ಹೋರಾಟ ನಡೆದುಕೊಂಡೇ ಬಂದಿದೆ. ಕಸಾಯಿಖಾನೆ ಬೇಡ ಎನ್ನುವ ಹಾರೋಹಳ್ಳಿ ಭಾಗದ ಜನರ ಒಕ್ಕೊರಲಿನ ಕೂಗು ಕೇಳಿಯೂ ಕೇಳಿಸದಂತೆ ಸರ್ಕಾರ ಜಾಣಕಿವುಡುತನ ಪ್ರದರ್ಶಿಸುತ್ತಿದೆ. ದಿನ ದಿನಕ್ಕೆ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ.
ಪ್ರತಿಕೂಲ ಅಂಶಗಳು: ಹಾರೋಹಳ್ಳಿ ಸುತ್ತಮುತ್ತ ಕೈಗಾರಿಕೆಗಳ ಸ್ಥಾಪನೆ ಬಳಿಕ ಇಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ಒಂದೊಮ್ಮೆ ಇಲ್ಲಿ ಕಸಾಯಿಖಾನೆ ಸ್ಥಾಪನೆಯಾದರೆ ಈ ಭೂಮಿಗೆ ಬೇಡಿಕೆ ಇರಲಾರದು. ಸ್ಥಳೀಯ ಕೈಗಾರಿಕೆಗಳು ಜಾಗ ಖಾಲಿ ಮಾಡಬಹುದು ಎನ್ನುವ ಆತಂಕ ಕಸಾಯಿಖಾನೆ ಸ್ಥಾಪನೆ ವಿರುದ್ಧದ ಹೋರಾಟಗಾರರನ್ನು ಕಾಡುತ್ತಿದೆ. ಕಸಾಯಿಖಾನೆಯಿಂದ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ. ಪರಿಸರಕ್ಕೆ ಹಾನಿ ಉಂಟಾಗುವ ಆತಂಕವಿದೆ. ಸದ್ಯಕ್ಕೆ 40 ಎಕರೆಯಲ್ಲಿ ಸ್ಥಾಪನೆಗೆ ಉದ್ದೇಶಿಸಿರುವ ಕಸಾಯಿಖಾನೆಯನ್ನು ಮುಂದೆ ಇನ್ನೂ ವಿಸ್ತರಿಸಬಹುದು ಎನ್ನುವ ಸಂಶಯವು ಸ್ಥಳೀಯರನ್ನು ಕಾಡುತ್ತಿದೆ. ಕಸಾಯಿಖಾನೆಯಲ್ಲಿ ದನದ ಮಾಂಸವನ್ನು ಡಬ್ಬಕ್ಕೆ ತುಂಬಿ ದೊಡ್ಡ ಮಳಿಗೆಗಳಿಗೆ ಸರಬರಾಜು ಮತ್ತು ವಿದೇಶಗಳಿಗೆ ರಫ್ತು ಮಾಡುವ ಉದ್ದೇಶವಿದೆ. ಇದರಿಂದ ಸ್ಥಳೀಯವಾಗಿ ಚಿಲ್ಲರೆ ವ್ಯಾಪಾರ ಇಲ್ಲವೇ ಇಲ್ಲ. ಎಲ್ಲವೂ ಹೈಟೆಕ್ ಆಗಿರುವುದರಿಂದ ಉದ್ಯೋಗ ಸೃಷ್ಟಿಯೂ ಇಲ್ಲವೆನ್ನುವ ದೂರುಗಳಿವೆ. ಹೇಳಿ ಕೇಳಿ ರಾಮನಗರ ಜಿಲ್ಲೆಯ ಅಪ್ಪಟ ಕೃಷಿ ಪ್ರದೇಶ. ಇಲ್ಲಿ ಗೋವುಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಇದೇ ಭಾಗದಲ್ಲಿ ಕಸಾಯಿಖಾನೆ ಪ್ರಾರಂಭಗೊಂಡರೆ ಕೃಷಿ ಕೆಲಸಕ್ಕೆ ದುಡಿಯಲು ದನಗಳು ಸಿಗದಂತಾಗಬಹುದು ಎನ್ನುವ ಚಿಂತೆಯೂ ಇಲ್ಲಿನ ರೈತರನ್ನು ಕಾಡುತ್ತಿದೆ.
ತುಟಿಪಿಟಿಕ್ ಎನ್ನುತ್ತಿಲ್ಲ: ರಾಮನಗರ ಜಿಲ್ಲೆಯಲ್ಲಿ ಘಟಾನುಘಟಿ ರಾಜಕಾರಣಿಗಳಿದ್ದಾರೆ. ಕಳೆದ ಎರಡು ವರ್ಷದಿಂದ ಯಾಮೊಬ್ಬ ನಾಯಕರೂ ಕಸಾಯಿಖಾನೆ ಸ್ಥಾಪನೆ ಪರ ಇಲ್ಲವೇ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಜನ ನಾಯಕರು ಅಡ್ಡಗೋಡೆ ಮೇಲಿನ ದೀಪದಂತೆ ವರ್ತಿಸುತ್ತಿರುವ ಹಿಂದಿನ ಮರ್ಮ ನಿಗೂಢವಾಗಿದೆ. ಕಸಾಯಿಖಾನೆ ಸ್ಥಾಪಿಸಲು ಉದ್ದೇಶಿಸಿರುವ ಪ್ರದೇಶವು ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ರಾಮನಗರ ಕ್ಷೇತ್ರಕ್ಕೆ ಸೇರಿದೆ. ಇಷ್ಟಾಗಿಯೂ ಅವರು ಕಸಾಯಿಖಾನೆ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿಲ್ಲ. ಈ ಕುರಿತ ಟೀಕೆಗಳಿಗೂ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.
ಇನ್ನು, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್ ಅರಣ್ಯ ಗಣಿಗಾರಿಕೆ ತಡೆಗೆ ವ್ಯರ್ಥ ಪ್ರಯತ್ನ ನಡೆಸಿದರು. ಒಮ್ಮೆಯೂ ಕಸಾಯಿಖಾನೆ ವಿರುದ್ಧ ಧ್ವನಿ ಎತ್ತಲಿಲ್ಲ. ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಈ ಹೋರಾಟದ ಕಡೆ ತಿರುಗಿಯೂ ನೋಡುತ್ತಿಲ್ಲ. ಈಚೆಗೆ ರಾಮನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಬಳಿ ಕಸಾಯಿಖಾನೆ ವಿರೋಧಿ ಹೋರಾಟಗಾರರು ವಿಷಯ ಪ್ರಸ್ತಾಪಿಸಿದಾಗ ಅವರೂ ಸ್ಪಂದಿಸಲಿಲ್ಲ. ಇದೆಲ್ಲವನ್ನೂ ಗಮನಿಸಿದರೆ ರಾಜಕಾರಣಿಗಳ ನಡೆ ಸಂಶಯಕ್ಕೆಡೆ ಮಾಡುತ್ತದೆ.
ಕಸಾಯಿಖಾನೆ ಸ್ಥಾಪನೆ ಬೇಡ
ಬೈರಮಂಗಲ ಕೆರೆ ಕಟ್ಟಿದಾಗ ಮುಂದೊಂದು ದಿನ ಇದು ಕೊಳಚೆಯಿಂದ ತುಂಬಿಕೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅಂತೆಯೇ ಕಸಾಯಿಖಾನೆ ಸ್ಥಾಪನೆಯು ಮುಂದೊಂದು ದಿನ ಹಾರೋಹಳ್ಳಿ ಭಾಗಕ್ಕೆ ಮಾರಕವಾಗಿ ಪರಿಣಮಿಸುವ ಆತಂಕವಿದೆ. ಹೀಗಾಗಿ ಕಸಾಯಿಖಾನೆ ರಾಮನಗರ ಜಿಲ್ಲೆ ವ್ಯಾಪ್ತಿಗೆ ಬೇಡವೇ ಬೇಡ.
- ಗೋವಿಂದಯ್ಯ, ಕಸಾಯಿಖಾನೆ ವಿರೋಧಿ ಹೋರಾಟಗಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

