ಬೆಂಗಳೂರು ಗ್ರಾಮಾಂತರ

ಸಹಕಾರ ಸಂಘಗಳು ರಾಜಕೀಯದಿಂದ ಮುಕ್ತವಾಗಿರಲಿ

Published On :

ಕ.ಪ್ರ. ವಾರ್ತೆ ರಾಮನಗರ  ಜೂ.28
ಸಹಕಾರ ಸಂಘಗಳು ರಾಜಕೀಯದಿಂದ ಮುಕ್ತವಾಗಿರಬೇಕು. ಹಾಗಾದಾಗ ಮಾತ್ರ ಸಹಕಾರ ಸಂಘಗಳ ಜತೆಗೆ ರೈತರೂ ಆರ್ಥಿಕವಾಗಿ ಸದೃಢರಾಗಬಹುದು ಎಂದು ಕೆಎಂಎಫ್ ನಿರ್ದೇಶಕ ಪಿ. ನಾಗರಾಜು ಕರೆ ನೀಡಿದರು.
ತಾಲೂಕಿನ ಗುಂಗರಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೃಷಿ ಚಟುವಟಿಕೆ ಜತೆಗೆ ಹೈನುಗಾರಿಕೆಗೂ ಒತ್ತು ನೀಡುವ ಮೂಲಕ ಆರ್ಥಿಕ ಮಟ್ಟವನ್ನು ಉತ್ತಪಡಿಸಿಕೊಳ್ಳಬೇಕು ಎಂದು ಸಲಹೆಯಿತ್ತರು.  
ಹೈನುಗಾರಿಕೆಯು ಗ್ರಾಮೀಣ ಜನರ ಜೀವನಕ್ಕೆ ಆಧಾರವಾಗಿದೆ. ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಹೈನುಗಾರಿಕೆ ಅವಲಂಬಿಸಿವೆ. ರಾಜ್ಯದಲ್ಲಿ ಪ್ರತಿ ನಿತ್ಯ ಉತ್ಪಾದನೆ ಆಗುತ್ತಿರುವ 54 ಲಕ್ಷ ಲೀಟರ್ ಹಾಲು ಪೈಕಿ ಹಳೆ ಮೈಸೂರು ಭಾಗದ ಪಾಲು ಸುಮಾರು 40 ಲಕ್ಷ ಲೀಟರ್ ಎಂದರು.
ಕಲಬೆರಕೆ ಮಾಡಬೇಡಿ: ರೈತರು ಯಾವುದೇ ಕಾರಣಕ್ಕೂ ಹಾಲನ್ನು ಕಲಬೆರಕೆ ಮಾಡಬಾರದು. ಸಹಕಾರ ಸಂಘಗಳ ಮೂಲಕ ಉತ್ತಮ ಗುಣಮಟ್ಟದ ಹಾಲನ್ನೇ ಪೂರೈಸಬೇಕು. ಆಡಳಿತ ಮಂಡಳಿ ಸದಸ್ಯರು ರೈತರ ಜತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಹೊರ ದೇಶಗಳಲ್ಲಿ ಪ್ರತಿ ನಿತ್ಯ 50ರಿಂದ 60 ಲೀಟರ್ ಹಾಲು ಕೊಡುವ ಹಸುಗಳ ತಳಿ ಅಭಿವೃದ್ಧಿಪಡಿಸಿದ್ದಾರೆ. ಅಲ್ಲಿ ಒಂದು ಹಸು ನೀಡುವ ಹಾಲನ್ನು ನಮ್ಮ ದೇಶದಲ್ಲಿ 4-5 ಹಸುಗಳು ನೀಡುತ್ತವೆ. ನಮ್ಮಲ್ಲೂ ತಳಿ ಅಭಿವೃದ್ಧಿಗೆ ಒತ್ತು ನೀಡುವುದು ಅಗತ್ಯ ಎಂದು ತಿಳಿಸಿದರು.   
ಮರುಪಾವತಿಗೆ ಒತ್ತು ನೀಡಿ: ರೈತರು ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು, ನಿಗದಿತ ಕಾಲಮಿತಿಯೊಳಗೆ ಮರು ಪಾವತಿ ಮಾಡಬೇಕು. ಇದರಿಂದ ಸಹಕಾರ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಅಶೋಕ್ ಕರೆ ನೀಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದಿಂದ ರೈತರ ಆರ್ಥಿಕಾಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಸುಗಳಿಗೆ ಜೀವವಿಮೆ, ಜನಶ್ರೀ ಬೀಮಾ ಯೋಜನೆ, ಹಾಲು ಉತ್ಪಾದಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಹಿತ ಇತರೆ ಸೌಲಭ್ಯ ನೀಡಲಾಗುತ್ತಿದೆ ಎಂದು ಬಮೂಲ್‌ನ ವ್ಯವಸ್ಥಾಪಕ ನಿರ್ದೇಶಕ ಗುರುಲಿಂಗಯ್ಯ ವಿವರಿಸಿದರು.
ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ. ಮಂಜುನಾಥ್, ಶ್ರೀಕ್ಷೇತ್ರ ಧರ್ಮಸ್ಥಳದ ವ್ಯವಸ್ಥಾಪಕ ನಿರ್ದೇಶಕ ಜಯರಾಮು ನೆಲ್ಲಿತ್ತಾಯ, ಕೆಪಿಸಿಸಿ ಸದಸ್ಯ ಎ. ಮಂಜುನಾಥ್, ಜಿ.ಪಂ. ಸದಸ್ಯೆ ಮಂಜುಳಾ ಮರಿದೇವರು, ಭಾರತಿ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಉಪಾಧ್ಯಕ್ಷ ಕೆ. ಚಂದ್ರಯ್ಯ, ಪಿಡಿಒ ವೆಂಕಟೇಶ್, ಗುಂಗರಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಬೋರಲಿಂಗೇಗೌಡ, ಗ್ರಾ.ಪಂ. ಸದಸ್ಯ ಚನ್ನೇಗೌಡ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.