ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ವಿದೇಶಿ ಬಂಡವಾಳ ದುರಂತ: ಪುಟ್ಟಸ್ವಾಮಿ
ಕ.ಪ್ರ. ವಾರ್ತೆ ರಾಮನಗರ ಜೂ.28
ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲೇ ಬಹು ಬ್ರಾಂಡ್ ಮಾರಾಟ ಮಳಿಗೆ ಯೋಜನೆ ನೆಲ ಕಚ್ಚುತ್ತಿರುವಾಗ ನಮ್ಮ ದೇಶದ ಚಿಲ್ಲರೆ ವ್ಯಾಪಾರ ಕ್ಷೇತ್ರದ ಮೇಲೆ ವಿದೇಶಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ನೀಡುತ್ತಿರುವುದು ದುರಂತವೇ ಸರಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಮುಖಂಡ ಸಿ.ಪುಟ್ಟಸ್ವಾಮಿ ಆರೋಪಿಸಿದರು.
ದೇಶದ ಚಿಲ್ಲರೆ ವ್ಯಾಪಾರಿಗಳನ್ನು ಬೀದಿಪಾಲು ಮಾಡುವಂತಹ ಕೆಲಸಕ್ಕೆ ಸರ್ಕಾರ ಯಾವ ಕಾರಣಕ್ಕೂ ಅವಕಾಶ ನೀಡಕೂಡದು. ಒಂದೊಮ್ಮೆ ಅವಕಾಶ ನೀಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಷಡ್ಯಂತ್ರಕ್ಕೆ ವಿರೋಧ: ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ನಡುವೆ ಸುಮಾರು 12 ಸಾವಿರ ಎಕರೆ ಪ್ರದೇಶದ ಕೃಷಿ ಭೂಮಿಯನ್ನು ಐಟಿಐಆರ್ ಯೋಜನೆಗೆ ನೀಡಲು ಮುಂದಾಗುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರವು ರೈತರು ಮತ್ತು ಕೃಷಿ ಸಂಸ್ಕೃತಿಯನ್ನು ನಾಶಪಡಿಸಲು ಹೊರಟಿದೆ ಎಂದು ಅವರು ಟೀಕಿಸಿದರು.
ಇಂಥದ್ದೊಂದು ಯೋಜನೆಗ ಅಪ್ಪಟ ಕೃಷಿ ಭೂಮಿ, ಜಲ ಮೂಲಗಳನ್ನು ಆಪೋಷನ ತೆಗೆದುಕೊಳ್ಳುವುದು ತಿಳಿಗೇಡಿ ನೀತಿಯಾಗುತ್ತದೆ. ಸರ್ಕಾರವು ರೈತಾಪಿ ಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು, ಉದ್ದೇಶಿತ ಯೋಜನೆಯನ್ನು ಕೈಬಿಡಬೇಕು ಎಂದು ಪುಟ್ಟಸ್ವಾಮಿ ಆಗ್ರಹಿಸಿದರು.
ರೈತ ವಿರೋಧಿ ಜಿಲ್ಲಾಡಳಿತ: ರಾಮನಗರ ಜಿಲ್ಲಾಡಳಿತವು ರೈತರ ಅಭ್ಯುದಯಕ್ಕಾಗಿ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ 10 ಎಕರೆ ಜಮೀನು ನೀಡಲು ಪ್ರಸ್ತಾವನೆ ಸಲ್ಲಿಸಿ 2 ವರ್ಷ ಕಳೆದರೂ ಕ್ರಮ ಕೈಗೊಂಡಿಲ್ಲ. ತೆಂಗು-ಕೊಬ್ಬರಿ ಖರೀದಿ ಕೇಂದ್ರ ಸ್ಥಾಪನೆಗೂ ಆಸಕ್ತಿ ವಹಿಸಿ ಎಂದು ಅವರು ಟೀಕಿಸಿದರು.
ನೀರಾ ಮತ್ತು ಎಳೆನೀರು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಪ್ರಸ್ತಾವನೆ ಮಂಡಿಸಿಲ್ಲ. ಭೀಕರ ಬರದಿಂದ ನಾಶವಾಗಿರುವ ತೆಂಗಿನ ಮರಗಳ ಸಮೀಕ್ಷೆ ನಡೆಸಿ, ಪರಿಹಾರ ನೀಡಿಲ್ಲ. ಕಲ್ಲು ಗಣಿಗಾರಿಕೆಯನ್ನು ಅಸುರಕ್ಷಿತ ಪ್ರದೇಶದಲ್ಲಿ ಮುಂದುವರೆಸಿರುವ ಹಿಂದೆ ಅನುಮಾನವಿದೆ ಎಂದು ಆರೋಪಿಸಿದರು.
ಕಸಾಯಿಖಾನೆ ಖಂಡಿತ ಬೇಡ: ರಾಮನಗರ ಜಿಲ್ಲೆಯ ಹಾರೋಹಳ್ಳಿ ಬಳಿ ಕಸಾಯಿಖಾನೆ ಸ್ಥಾಪನೆ ವಿರುದ್ಧದ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು. ಜಾನುವಾರುಗಳ ನಿರ್ನಾಮದ ಜತೆಗೆ ಕೃಷಿ, ಪರಿಸರ ಮತ್ತು ಜೀವ ವೈವಿಧ್ಯತೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕಸಾಯಿಖಾನೆ ನಮಗೆ ಖಂಡಿತ ಬೇಡ ಎಂದು ಅವರು ಆಗ್ರಹಿಸಿದರು.
ಹತ್ತಾರು ವರ್ಷಗಳಿಂದ ಸಾಗುವಳಿನಿರತ ರೈತರ ಭೂಮಿಯ ಸಕ್ರಮ, ಸಾಗುವಳಿ ಚೀಟಿ ವಿತರಣೆಗೆ ಕ್ರಮ ಆಗಬೇಕು. ಸ್ವಯಾರ್ಜಿತ, ಪಿತ್ರಾರ್ಜಿತ ಆಸ್ತಿಯ ಸ್ವತ್ತುಗಳನ್ನು ಪಂಚಾಯಿತಿ ಪಾರೀಖತ್ತಿನ ಆಧಾರದ ಸ್ವತ್ತುಗಳ ಮಾಲೀಕತ್ವ ಬದಲಾಗಬೇಕು. ಅಪ್ಪನ ಆಸ್ತಿಯನ್ನು ಮಕ್ಕಳು ಹಣ ಕಟ್ಟಿ ಖಾತೆ ಮಾಡಿಸಿಕೊಳ್ಳಬೇಕಾದ ಅವಿವೇಕದ ತೀರ್ಮಾನ ರದ್ದಾಗಬೇಕು ಎಂದರು.
ಇನ್ನೂ ಸಿಗದ ಪರಿಹಾರ: ಅಧಿಕಾರಿಗಳ ಕ್ರೌರ್ಯದಿಂದ ಮಿನಿ ವಿಧಾನಸೌಧ ಕಚೇರಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈತ ಗಂಗಯ್ಯ ಕುಟುಂಬಕ್ಕೆ ಪರಿಹಾರ ವಿತರಣೆ ಇನ್ನೂ ಆಗಿಲ್ಲ. ಇದು ಜಿಲ್ಲಾಡಳಿತದ ಅಸಡ್ಡೆಗೆ ಸಾಕ್ಷಿಯಾಗಿದೆ ಎಂದು ಪುಟ್ಟಸ್ವಾಮಿ ಕಿಡಿ ಕಾರಿದರು.
ಗ್ರಾಮ ಲೆಕ್ಕಾಧಿಕಾರಿಗಳ ಕೊರತೆ ನೀಗಿಸಬೇಕು. ವೃಷಭಾವತಿಯ ಕೊಳಚೆ ನೀರನ್ನು ಸಂಪೂರ್ಣ ಶುದ್ಧೀಕರಿಸಿದ ಬಳಿಕವಷ್ಟೇ ಕೆರೆ-ಕಟ್ಟೆ, ನದಿಗಳಿಗೆ ಹರಿಸಬೇಕು. ಮರಳುಗಾರಿಕೆಯಿಂದ ಆಗಿರುವ ಶಾಶ್ವತ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ, ವಸ್ತುಸ್ಥಿತಿಯ ವರದಿಯನ್ನು ಜನತೆ ಮುಂದಿಡಬೇಕು ಎಂದರು.
ಗಣಿ ಸಂಪತ್ತಿನ ಲೂಟಿಯಲ್ಲಿ ಶಾಮೀಲಾಗಿರುವ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಸಕ್ತ ಮುಂಗಾರಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಸಿ. ಲಕ್ಷ್ಮಣಸ್ವಾಮಿ, ಮುಖಂಡರಾದ ಸಂಪತ್ಕುಮಾರ್, ಕುಮಾರಸ್ವಾಮಿ, ಹೊಂಬಾಳೇಗೌಡ, ಬೈರೇಗೌಡ, ಎಂ.ಪುಟ್ಟಸ್ವಾಮಿ, ಕುಂಬಾಪುರ ಬಾಬು, ಮಂಜುನಾಥ್, ದುಂಡಯ್ಯ, ಕೃಷ್ಣಪ್ಪ, ನಂಜಪ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

