ಇಂದು ಪುರಸ್ಕಾರ
ದೊಡ್ಡಬಳ್ಳಾಪುರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಮತ್ತು ಬಮೂಲ್ ರೈತ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ 2012-13ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ.30ರ ಭಾನುವಾರ ಬೆಳಗ್ಗೆ 10 ಗಂಟೆಗೆ ಇಲ್ಲಿನ ಬೆಸೆಂಟ್ ಪಾರ್ಕ್ನಲ್ಲಿ ನಡೆಯಲಿದೆ. ಬಮೂಲ್ ನಿರ್ದೇಶಕ ಎನ್.ಹನುಮಂತೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಲಿದ್ದಾರೆ. ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಪ್ರತಿಭಾ ಪುರಸ್ಕಾರ ವಿತರಿಸಲಿದ್ದಾರೆ. ಜನಶ್ರೀ ಭೀಮಾ ಯೋಜನೆಯ ವಿದ್ಯಾರ್ಥಿ ವೇತನದ ಚೆಕ್ಕುಗಳನ್ನು ಬಮೂಲ್ ಅಧ್ಯಕ್ಷ ಸಿ.ಮಂಜುನಾಥ್ ವಿತರಿಸಲಿದ್ದಾರೆ. ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಜೆ.ನರಸಿಂಹಸ್ವಾಮಿ ಭಾಗವಹಿಸಲಿದ್ದಾರೆ.
ನೋಟ್ಬುಕ್ ವಿತರಣೆ
ಮಾಗಡಿ: ತಾಲೂಕಿನ ಮಾಡಬಾಳ್ ಸರ್ಕಾರಿ ಶಾಲೆಯ 1 ರಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ತಿರುಮಲೆ ವಿಜಯ ಬ್ಯಾಂಕ್ ಶಾಖಾ ಸಿಬ್ಬಂದಿ ನಾಗರತ್ನ ವಿತರಿಸಿದರು ಎಂದು ಗ್ರಾಮದ ಯುವ ಮುಖಂಡ ಜಯಣ್ಣ ತಿಳಿಸಿದ್ದಾರೆ.
ನವವಿಧ ಸಂಗೀತ ಸಂಗಮ ಕಾರ್ಯಕ್ರಮ
ರಾಮನಗರ: ಓಂ ಜೈಶ್ರೀ ಟ್ರಸ್ಟ್ ವಾರ್ಷಿಕೋತ್ಸವದ ಅಂಗವಾಗಿ ನವವಿಧ ಸಂಗೀತ ಸಂಗಮ ಕಾರ್ಯಕ್ರಮವನ್ನು ಜೂ.30ರ ಬೆಳಗ್ಗೆ 10ಕ್ಕೆ ನಗರದ ಸ್ಫೂರ್ತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಮರಿದೇವರು ಉದ್ಘಾಟಿಸುವರು. ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ಶೇಷಾದ್ರಿ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ದೇವರಾಜು, ಮಂಡ್ಯ ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಭಾಗವಹಿಸುವರು.
ಹೊಸಕೋಟೆ: ನಾಳೆ ಸಾಹಿತ್ಯ ಸಮ್ಮೇಳನ
ಹೊಸಕೋಟೆ: ಇಲ್ಲಿಯ ಜಿಕೆಬಿಎಂಎಸ್ ಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಶ್ರಯದಲ್ಲಿ 3ನೇ ಕನ್ನಡ ಸಾಹಿತ್ಯ ಸಮೇಳನ ಜೂ.29ರಂದು ನಡೆಯಲಿದೆ. ಸಮ್ಮೇಳನ ಅಧ್ಯಕ್ಷರನ್ನಾಗಿ ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ. ಎನ್.ಬಿ. ಚಂದ್ರಮೋಹನ್ ಅವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷತೆಯನ್ನು ಶಾಸಕ ಎನ್.ನಾಗರಾಜ್ ವಹಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಜನಪದ ಕಲಾ ತಂಡಗಳೊಂದಿಗೆ ಸಮೇಳನ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ. 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸಮ್ಮೇಳನ ಉದ್ಘಾಟಿಸುವರು. ಸಂಜೆ 4.30ಕ್ಕೆ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ.
ಉಚಿತ ಸಾಮೂಹಿಕ ವಿವಾಹ: ಸೂಚನೆ
ಕನಕಪುರ: ಇಲ್ಲಿನ ಕೆಂಗೇರಿ ಬಸ್ ನಿಲ್ದಾಣ ಸಮೀಪದ ಶ್ರೀ ಕೃಷ್ಣಪ್ರಿಯ ಕಲ್ಯಾಣ ಮಂಟಪದಲ್ಲಿ ಕನಕಪುರದ ಸಮಾನ ಮನಸ್ಕರ ಒಕ್ಕೂಟದಿಂದ ಆ.8ರಂದು ಉಚಿತ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ಹೆಸರು ನೋಂದಣಿಯಾದ ವಧು-ವರರಿಗೆ ಉಚಿತ ಮಾಂಗಲ್ಯ, ಸೀರೆ, ರವಿಕೆ, ಕಾಲುಂಗುರ, ಮೂಗುತಿ, ಪಂಚೆ, ಶಲ್ಯ, ಷರ್ಟು ನೀಡಲಾಗುವದು. ಶಾಸ್ತ್ರೋಕ್ತವಾಗಿ ವಿವಾಹದ ವಿಧಿವಿಧಾನ ನೆರವೇರಿಸಲಾಗುವುದು. ಆಸಕ್ತರು ತಮ್ಮ ವಿಳಾಸ, ಭಾವಚಿತ್ರ, ವಯಸ್ಸಿನ ದಾಖಲೆಗಳೊಂದಿಗೆ ಕುಮಾರಸ್ವಾಮಿ, ಸಾಗರ್ ಸ್ಟುಡಿಯೋ, ಕನಕಪುರ ಅಥವಾ ನರಸಿಂಹೇಗೌಡ, ಹುಲಿಬೆಲೆ ಇವರಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
'ಪ್ರವಾಸೋದ್ಯಮ ಕೇಂದ್ರವಾಗಿ ಶಿವಗಂಗೆ ಅಭಿವೃದ್ಧಿ'
ನೆಲಮಂಗಲ: ತಾಲೂಕಿನ ದಕ್ಷಿಣಕಾಶಿ ಶಿವಗಂಗೆಯು ಬೆಂಗಳೂರು ಗ್ರಾಮಾಂತರ ಜಿಲ್ಲಯ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸುವುದಾಗಿ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ತಿಳಿಸಿದರು. ತಾಲೂಕಿನ ಶಿವಗಂಗೆಯಲ್ಲಿ ಶುಕ್ರವಾರ 1 ಕೋಟಿ ವೆಚ್ಚದ ಯಾತ್ರಿ ನಿವಾಸದ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶೀಘ್ರದಲ್ಲಿಯೇ 1.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪ್ರವಾಸಿ ಮಂದಿರವನ್ನು ಉದ್ಘಾಟನೆ ಮಾಡಿ ಶಿವಗಂಗೆ ಬೆಟ್ಟಕ್ಕೆ ಬರುವ ಭಕ್ತರ ಅನುಕೂಲಕ್ಕೆ ನೀಡಲಾಗುವುದು ಎಂದರು. ಬೆಟ್ಟಕ್ಕೆ ಬರುವ ಭಕ್ತರಿಗೆ ಇಲ್ಲಿ ಹೇಳಿಕೊಳ್ಳುವಷ್ಟು ಅನುಕೂಲಗಳಿಲ್ಲ. ಬೆಟ್ಟದ ಮೇಲಿರುವ ಶ್ರೀಗಂಗಾಧರೇಶ್ವರ ಸ್ವಾಮಿ, ಸ್ವರ್ಣಾಂಬ, ಮರಿಹೊನ್ನಮ್ಮ, ಅಗಸ್ತ್ಯತೀರ್ಥ, ಒಳಕಲ್ಲು ತೀರ್ಥಗಳಿಗೆ ಪ್ರತಿನಿತ್ಯ ಸಾಕಷ್ಟು ಭಕ್ತರು ಬೆಟ್ಟಕ್ಕೆ ಆಗಮಿಸುತ್ತಾರೆ. ಅವರಿಗೆ ಇಲ್ಲಿ ಹೆಚ್ಚಿನ ಅನುಕೂಲ ಆಸನ ವ್ಯವಸ್ಥೆ ಮಾಡಿ ಪೂಜೆಗೆ ಅನುಕೂಲ ಮಾಡಲಾಗುವುದು ಎಂದು ಹೇಳಿದರು. ಈ ಸಂದರ್ಭ ತಾ.ಪಂ. ಸದಸ್ಯರಾದ ಎಸ್.ಟಿ. ಸಿದ್ದರಾಜು, ವೀರಯ್ಯ, ಸೋಂಪುರ ಜಿ.ಪಂ.ಸದಸ್ಯೆ ಸುನಂದ ಶಿವಕುಮಾರ್, ಡಿಎಸ್ಎಸ್ ಸಂಚಾಲಕ ಹನುಮಂತರಾಜು, ಸಹಾಯಕ ನಿರ್ದೇಶಕ ಆರ್.ಪ್ರಕಾಶ್, ಗುತ್ತಿಗೆದಾರ ಗೋವಿಂದರಾಜು ಇದ್ದರು.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ
ದೊಡ್ಡಬಳ್ಳಾಪುರ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದ್ದಾರೆ. ತಾಲೂಕಿನ ಕನಸವಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಶಾಸಕನಾಗಿ ಆಯ್ಕೆಯಾದ ನಂತರ ಮೊದಲ ಬಾರಿ ಕನಸವಾಡಿ ಕಾಲೇಜಿಗೆ ಭೇಟಿ ನೀಡಿ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿದ್ದೇನೆ ಎಂದರು. ಸರ್ಕಾರಿ ಶಾಲಾ -ಕಾಲೇಜುಗಳನ್ನು ಉನ್ನತಮಟ್ಟಕ್ಕೆ ತಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಾದರೆ ಸರ್ಕಾರಿ ಅನುದಾನದ ಜೊತೆಗೆ ಸ್ಥಳೀಯ ದಾನಿಗಳೂ ಕೈ ಜೋಡಿಸಬೇಕು. ಕಾಲೇಜು-ಪ್ರೌಢಶಾಲೆಗಳಲ್ಲಿನ ಶೌಚಾಲಯ, ಕುಡಿಯುವ ನೀರು ಮತ್ತಿತರ ಸೌಕರ್ಯಗಳಿಗೆ ಕೊರತೆಯಾಗದಂತೆ ಗಮನಹರಿಸಲಾಗುವುದು ಎಂದರು. ಜಿ.ಪಂ. ಮಾಜಿ ಅಧ್ಯಕ್ಷ ಸಿ.ಡಿ. ಸತ್ಯನಾರಾಯಣಗೌಡ, ಕೊಳಚೆ ನಿರ್ಮೂಲನಾ ಮಂಡಲಿ ಮಾಜಿ ನಿರ್ದೇಶಕ ದಯಾನಂದಸ್ವಾಮಿ, ಕಾಲೇಜಿನ ಪ್ರಾಂಶುಪಾಲ ರಾಜಶೇಖರಯ್ಯ, ಪ್ರೌಢಶಾಲೆ ಮುಖ್ಯಶಿಕ್ಷಕ ನಾಗೇಶ್, ಸ್ಥಳೀಯ ಮುಖಂಡ ಪ್ರಕಾಶ್, ಗಿರೀಶ್, ಲಕ್ಷ್ಮೀಪತಯ್ಯ, ವಿಜಯಕುಮಾರ್, ಶಿವಣ್ಣ, ಆನಂದ್, ಉಪನ್ಯಾಸಕರಾದ ಗೋವಿಂದರಾಜು, ಹನುಮೇಗೌಡ, ವೃಂದಮ್ಮ, ಮಂಗಳ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

