ಆನೇಕಲ್ ಪುರಸಭೆ ಮಾದರಿಯಾಗಿಸಿ: ಶಾಸಕ ಶಿವಣ್ಣ
ಆನೇಕಲ್ಲು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪುರಸಭೆಯನ್ನು ಮಾದರಿ ಪುರಸಭೆಯನ್ನಾಗಿಸಲು ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಶಾಸಕ ಶಿವಣ್ಣ ಹೇಳಿದ್ದಾರೆ. ಅವರು ಪುರಸಭೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ ಆನೇಕಲ್ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಜನತೆ ತಾರತಮ್ಯ ರಹಿತ ನೀರು ಪೂರೈಕೆಗಾಗಿ ಮನವಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಸದಸ್ಯರು ಎಚ್ಚರಿಕೆ ವಹಿಸಬೇಕು. ಹಾಗೆಯೇ ತಮ್ಮಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ತಿಳಿಸಿದ್ದಾರೆ. ಪಟ್ಟಣದ ಕೆಲ ಭಾಗಗಳಿಗೆ ಹಾಗೂ ಬಲಾಢ್ಯರಿಗೆ ಹೆಚ್ಚು ನೀರು ಪೂರೈಕ ಆಗುತ್ತಿರುವ ಬಗ್ಗೆ ಲಿಖಿತ ದೂರು ಬಂದಿದೆ. ಹಾಗೆಯೇ ಸರ್ಕಾರಿ ಸ್ಥಳ ಒತ್ತುವರಿ ಬಗ್ಗೆಯೂ ಮಾಹಿತಿ ಇದೆ. ಅವೆಲ್ಲವನ್ನೂ ಮುಂದಿನ ದಿನಗಳಲ್ಲಿ ಸರಿಪಡಿಸಬೇಕೆಂದರು.
ವಾರಕ್ಕೆರಡು ಬಾರಿ ನೀರು: ನೀರು ವಿತರಣೆಯಲ್ಲಿ ಅನುಸರಿಸುತ್ತಿರುವ ತಾರತಮ್ಯ ಧೋರಣೆಯನ್ನು ಸರಿಪಡಿಸಿದಲ್ಲಿ ವಾರಕ್ಕೆರಡು ಬಾರಿ ಎಲ್ಲರಿಗೂ ನೀರು ಸಿಗುವ ಸಂಭವವಿದೆ. ಅಕ್ರಮ ಕೊಳಾಯಿ ಸಂಪರ್ಕ ಕಡಿತವನ್ನು ಈ ಕೂಡಲೇ ಜಾರಿ ಮಾಡದಿದ್ದಲ್ಲಿ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದೂ ಎಚ್ಚರಿಸಿದರು. ಹಾಲಿ ಇರುವ 30 ಕೊಳವೆ ಬಾವಿಯಲ್ಲಿ ಲಭ್ಯವಿರುವ ನೀರಿನ ಮಾಹಿತಿ ಜೊತೆ ಅವಶ್ಯವಿದ್ದಲ್ಲಿ ಶಾಸಕರ ನಿಧಿಯಿಂದ 10 ಕೊಳವೆ ಬಾವಿ ಕೊರೆಸಲು ಸಹಕಾರ ನೀಡುವುದಾಗಿ ಹೇಳಿದರು.
ಶೌಚಾಲಯ: ಪಟ್ಟಣದ ಜನ ಸಾಂದ್ರತೆ ಹೆಚ್ಚಿರುವ ಸ್ಥಳ ಹಾಗೂ ಬಸ್ ತಂಗು ನಿಲ್ದಾಣಗಳ ಬಳಿ ಶೌಚಾಲಯ ನಿರ್ಮಾಣ, ಚಿಕ್ಕ ಕೆರೆ ಕ್ರೀಡಾಂಗಣ ಅಭಿವೃದ್ಧಿ, ಉದ್ಯಾನವನ ನಿರ್ಮಾಣ, ಸ್ವಾಗತ ಕಮಾನುಗಳ ನಿರ್ಮಾಣ ಬಗ್ಗೆ ಸದಸ್ಯರಿಂದ ಸಲಹೆ ಬಂತು. ಸಭೆಯಲ್ಲಿ ಮುಖ್ಯಾಧಿಕಾರಿ ಸುಮಾ, ಸದಸ್ಯರಾದ ಪಿ. ಶಂಕರ್ಕುಮಾರ್, ಪದ್ಮನಾಭ, ಅಶ್ವತ್ಥನಾರಾಯಣ, ಮಲ್ಲಿಕಾರ್ಜುನ, ಭದ್ರರೆಡ್ಡಿ, ನರಸಿಂಹರೆಡ್ಡಿ, ಶ್ರೀನಿವಾಸ್, ಲಕ್ಷ್ಮಿಕಾಂತರಾಜು, ಸಿ.ಕೆ. ಹೇಮಲತಾ, ರೇಣುಕಾ, ಸವಿತಾ, ಮುನಾವರ್, ಮೋಹನ್, ಉಷಾ ಇದ್ದರು.
ವಿಶ್ವನಾಥ್ ನಾಪತ್ತೆ
ದೇವನಹಳ್ಳಿ: ಪ್ರಮುಖ ದಿನ ಪತ್ರಿಕೆಯ ದೇವನಹಳ್ಳಿ ವರದಿಗಾರರಾದ ಪಿ.ವಿಶ್ವನಾಥ್ ಅವರು ಧರ್ಮಸ್ಥಳಕ್ಕೆ ಹೋಗಿದ್ದು ಅಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ವಿಶ್ವನಾಥ್ ಜೂ. 24 ರಂದು ರಾತ್ರಿ ದೇವನಹಳ್ಳಿಯಿಂದ ಧರ್ಮಸ್ಥಳಕ್ಕೆ ಹೋಗಿದ್ದು 25 ರಂದು ಅಲ್ಲಿನ ಕೊಠಡಿಯಲ್ಲಿ ತಂಗಿದ್ದರೆಂದು ಹೇಳಲಾಗಿದೆ. ಅಲ್ಲಿಂದ ಒಂದು ಬಾರಿ ಮಾತ್ರ ಮೊಬೈಲ್ ಮೂಲಕ ಮನೆಯವರಲ್ಜತೆ ಮಾತನಾಡಿ ನಂತರ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಅವರ ಪತ್ನಿ ನಾಗರತ್ನಮ್ಮ ಬೆಳ್ತಂಗಡಿಗೆ ಹೋಗಿ ಅಲ್ಲಿನ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
'ಲಯನ್ಸ್ ಕ್ಲಬ್ ಸೇವೆ ಶ್ಲಾಘನೀಯ'
ಕನಕಪುರ: ಶಿಕ್ಷಣ, ಆರೋಗ್ಯ, ಸಮುದಾಯಸೇವೆ, ಪರಿಸರ ಸಂರಕ್ಷಣೆ, ಯುವಜನಕ್ರೀಡೆ ಹಾಗೂ ಮಕ್ಕಳ ಸೃಜನಶೀಲತೆಗೆ ಉತ್ತೇಜನ ಮೊದಲಾದ ಕ್ಷೇತ್ರದಲ್ಲಿ ಕನಕಪುರ ಲಯನ್ಸ್ ಕ್ಲಬ್ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಸತ್ಯನಾರಾಯಣಗುಪ್ತ ಹೇಳಿದ್ದಾರೆ. ಅವರು ಕನಕಪುರದ ಲಯನ್ಸ್ಭವನದ ಸಭಾಂಗಣದಲ್ಲಿ ನೂತನ ಅಧ್ಯಕ್ಷ ಕೆ.ಜಿ.ಸತೀಶ್ ಹಾಗೂ ತಂಡದವರಿಗೆ ಪದವಿಪ್ರದಾನ ನೆರವೇರಿಸಿ ಮಾತನಾಡುತ್ತಿದ್ದರು. ನಿಕಟಪೂರ್ವ ಅಧ್ಯಕ್ಷ ಬಿ.ಪಿ. ರವಿಪಾಲ್ ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷ ಕೆ.ಜಿ. ಸತೀಶ್ ಮಾತನಾಡುತ್ತಾ, ಕನಕಪುರ ಲಯನ್ಸ್ ನಡೆಸುತ್ತಿರುವ ಶಾಲೆಯಲ್ಲಿ ನೂರಾರು ಮಕ್ಕಳು ಉತ್ತಮ ಗುಣಾತ್ಮಕ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಯುವಜನರಿಗೆ ವ್ಯಕ್ತಿತ್ವ ವಿಕಸನ, ವೃತ್ತಿ ತರಬೇತಿ, ಪರಿಸರ ಸಂರಕ್ಷಣೆ ಮೊದಲಾದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಕಾರ್ಯದರ್ಶಿ ಅರುಣಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಪುರಸಭಾಸದಸ್ಯ ಕೆ.ಜಗನ್ನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಿವಮಾದು ಸ್ವಾಗತಿಸಿದರು. ಕೃಷಿ ಅಧಿಕಾರಿ ಎಂ. ವೆಂಕಟೇಶ್ ನಿರೂಪಿಸಿದರು.
ಹೇಮಾವತಿ ನೀರು: ಶಾಸಕರನ್ನು ಪ್ರಶ್ನಿಸಿ ಬಹಿರಂಗ ಪತ್ರ
ಮಾಗಡಿ: ಚುನಾವಣೆ ವೇಳೆ ಮತದಾರರಿಗೆ ಈ ಬಾರಿ ಗೆಲ್ಲಿಸಿದರೆ, ತಾಲೂಕಿಗೆ ಹೇಮಾವತಿ ನೀರು ಹರಿಸುವುದಾಗಿ ಹೇಳಿಕೊಂಡು ಮತ ಹಾಕಿಸಿಕೊಂಡ ಶಾಸಕ ಎಚ್.ಸಿ. ಬಾಲಕೃಷ್ಣ ಈಗೇನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿ, ಮತದಾರರ ಪರವಾಗಿ ಬಹಿರಂಗ ಪತ್ರ ಬರೆದಿರುವುದಾಗಿ ಹುಳ್ಳೇನಹಳ್ಳಿ ಗಿರಿಯಣ್ಣ ತಿಳಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ನೀವು ಇಲ್ಲಿಯವರೆಗೂ ಹೇಮಾವತಿ ನೀರಾವರಿ ಯೋಜನೆ ಕುರಿತು ತೆಗೆದುಕೊಂಡಿರುವ ಕ್ರಮದ ಬಗ್ಗೆ ನಿಮ್ಮಲ್ಲಿರುವ ಮಾಹಿತಿಯನ್ನು ಬಹಿರಂಗ ಪಡಿಸಬೇಕಿದೆ. ಮಾಹಿತಿಯಿಲ್ಲದಿದ್ದರೆ ಇನ್ನು ಮುಂದಾದರೂ ಹೇಮಾವತಿಯೊ ಅಥವಾ ಎತ್ತಿನ ಹೊಳೆಯ ಯೋಜನೆ ತರುವ ಬಗ್ಗೆ ಸೂಕ್ತ ಗಮನಹರಿಸಬೇಕು.ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಎಷ್ಟು ವರ್ಷಬೇಕು. ಈ ಬಾರಿಯ ಶಾಸಕತ್ವ ಸಾಕೇ, ಅಥವಾ ಈ ಯೋಜನೆ ಕಾರ್ಯಗತವಾಗುವವರೆವಿಗೂ ನಿಮ್ಮನ್ನೇ ಮತದಾರರಾದ ನಾವು ಚುನಾಯಿಸುತ್ತಿರಬೇಕೇ. ಈ ಎಲ್ಲಾ ಪ್ರಶ್ನೆಗಳಿಗೆ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಮಾಧ್ಯಮಗಳ ಮೂಲಕ ತ್ವರಿತವಾಗಿ ಉತ್ತರಿಸಬೇಕು ಎಂದು ಗಿರಿಯಣ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

