ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮಾರಾಟ ಮೇಳ ಸಹಕಾರಿ
ರಾಮನಗರ: ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಪ್ರದರ್ಶನ ಹಾಗೂ ಮಾರಾಟ ಮೇಳಗಳು ಸಹಕಾರಿಯಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕೈಮಗ್ಗ, ಜವಳಿ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿಯಿಂದ ನಡೆದ ಕೈಮಗ್ಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ರೇಷ್ಮೆ ನಾಡು ವಸ್ತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾವು ಉತ್ಪಾದಿಸಿದ ವಸ್ತುಗಳನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುವ ಬದಲು ಮಾರಾಟ ಮೇಳಗಳಲ್ಲಿ ಭಾಗವಹಿಸಬೇಕು ಎಂದರು.
ನೇಕಾರರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಆರ್ಥಿಕ ನೆರವು, ಸಾಲ, ಸಬ್ಸಿಡಿಗಳನ್ನು ನೀಡುತ್ತಿದೆ. ನೇಕಾರರು ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ಕೃಷಿಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡಿರುವ ನಮ್ಮ ದೇಶದಲ್ಲಿ ನೇಕಾರಿಕೆಯನ್ನು ಉಪ ಕಸುಬನ್ನಾಗಿಸಿಕೊಂಡಿದ್ದರು. ಬೇಡಿಕೆ ಹೆಚ್ಚಾದಂತೆ ಕೆಲವರು ನೇಕಾರಿಕೆಯನ್ನೆ ಪ್ರಮುಖ ಕಸುಬನ್ನಾಗಿಸಿಕೊಂಡರು. ದೇಶದಲ್ಲಿ
ತಯಾರಾಗುತ್ತಿದ್ದ ಕೈಮಗ್ಗದ ವಸ್ತುಗಳಿಗೆ ಪ್ರಪಂಚದಾದ್ಯಂತ ಹೆಚ್ಚು ಬೇಡಿಕೆ ಇದೆ ಎಂದರು. ಇದನ್ನು ಸಹಿಸದ ಬ್ರಿಟಿಷರು ಭಾರತದಿಂದ ರಫ್ತಾಗುತ್ತಿದ್ದ ವಸ್ತುಗಳಿಗೆ ಹೆಚ್ಚಿನ ಸುಂಕ ವಿಧಿಸುವ ಮೂಲಕ ನೇಕಾರರು ತೊಂದರೆ ಅನುಭವಿಸುವಂತಾಯಿತು. ಸ್ವಾತಂತ್ರ್ಯ ನಂತರ ಬಂದ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದು ನೇಕಾರರ ಬದುಕನ್ನು ಹಸನುಗೊಳಿಸಲು ಪ್ರಯತ್ನಿಸಿವೆ ಎಂದು ವೆಂಕಟೇಶ್ ತಿಳಿಸಿದರು.
ಅತೀ ಹೆಚ್ಚು ರಫ್ತು: ಕೃಷಿ ಉತ್ಪನ್ನಗಳ ನಂತರ ಜವಳಿ ವಸ್ತುಗಳೇ ಅತೀ ಹೆಚ್ಚು ರಫ್ತಾಗುತ್ತಿವೆ. ಕಳೆದ 10 ವರ್ಷದಿಂದ ಜವಳಿ ಉದ್ಯಮದ ವಿದೇಶೀ ವಿನಿಮಯ ಗಳಿಕೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ನೇಕಾರರಿಗೆ ಸರ್ಕಾರ ನೀಡುತ್ತಿರುವ ಉತ್ತೇಜನಕಾರಿ ಕ್ರಮಗಳು ಇದಕ್ಕೆ ಕಾರಣವಾಗಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಬಾಲ್ಯನಾಯಕ್ ತಿಳಿಸಿದರು. ಗ್ರಾಹಕ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಲು ಬಯಸುತ್ತಾನೆ. ಗ್ರಾಹಕರ ಅಭಿರಚಿಗೆ ತಕ್ಕಂತಹ ಗುಣ ಮಟ್ಟದ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಬೇಕು ಎಂದರು ಅವರು ಕರೆ ನೀಡಿದರು. ನೇಕಾರರ ಸೇವಾ ಕೇಂದ್ರದ ಅಧಿಕಾರಿ ಜ್ಞಾನ ಪ್ರಕಾಶ್ ಮಾತನಾಡಿದರು. ಕುದೂರು ನೇಕಾರರ ಸಹಕಾರ ಸಂಘದ ಅಧ್ಯಕ್ಷ ಬಾಲಾರಾಜ್, ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರಬೀಂದ್ರ ಹಾಜರಿದ್ದರು.
ಪ್ರದರ್ಶನದಲ್ಲಿ ಸುಮಾರು 18 ಮಳಿಗೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ನೇಕಾರರಲ್ಲದೇ ಹೊರ ಜಿಲ್ಲೆಗಳಿಂದಲೂ ನೇಕಾರರು ಮಳಿಗೆಗಳನ್ನು ತೆರೆದಿದ್ದಾರೆ. ಈ ಮೇಳವು ಮಾ.1 ರಿಂದ 7ರವರೆಗೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

