ಬೆಂಗಳೂರು ಗ್ರಾಮಾಂತರ

ವೃದ್ಧ ರೈತನ ಆಸೆ ಮಣ್ಣಾಗುವ ಮುನ್ನ ಈಡೇರಿಕೆ

Published On :

-ಮತ್ತೀಕೆರೆ ಜಯರಾಮ್
ರಾಮನಗರ:
ಸರ್ಕಾರಿ ವ್ಯವಸ್ಥೆಗೆ ಬಲಿಯಾದ ವೃದ್ಧ ರೈತನ ಕಡೆಯ ಆಸೆ ಅವರು  ಮಣ್ಣಾಗುವ ಮುನ್ನ ಈಡೇರಿದೆ. ಆರು ವರ್ಷದಿಂದ ಸತಾಯಿಸಿದ್ದ ಅಧಿಕಾರಿಗಳು ಆತ ಸತ್ತ ಮೇಲೆ ಅರ್ಜಿ ಕೈಗೆತ್ತಿಕೊಂಡು ಆರೇಳು ನಿಮಿಷದಲ್ಲೇ ಜಮೀನು ಸರ್ವೆ ಮುಗಿಸಿ, ಪ್ರಕರಣಕ್ಕೆ ಎಳ್ಳುನೀರು ಬಿಟ್ಟಿದ್ದಾರೆ.
ಜಮೀನು ಸರ್ವೆ ಪ್ರಕರಣ ಸಂಬಂಧ ಅಧಿಕಾರಿಗಳ ಧೋರಣೆಗೆ ಬೇಸತ್ತು ಗಂಗಯ್ಯ ಅವರು ಶುಕ್ರವಾರ ನಗರದ ಮಿನಿ ವಿಧಾನಸೌಧದ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ರೈತ ಸಂಘ, ವಿವಿಧ ಪಕ್ಷ ಮತ್ತು ಸಂಘಟನೆಗಳಿಂದ ಚಳವಳಿ ಭುಗಿಲೆದ್ದು, ವಿಕೋಪಕ್ಕೆ ತಿರುಗುವ ಸ್ಥಿತಿ ಎದುರಾಯ್ತು.
ಅಧಿಕಾರಿಗಳು ತಡವಾಗಿಯಾದರೂ ಎಚ್ಚೆತ್ತುಕೊಂಡು, ಆರು ವರ್ಷದಿಂದ ಧೂಳು ಹಿಡಿಯುತ್ತಿದ್ದ ಕಡತದಿಂದ ಗಂಗಯ್ಯನ ಅರ್ಜಿ ಹೊರ ತೆಗೆದಿದ್ದಾರೆ. ಶನಿವಾರ ಬೆಳಗ್ಗೆಯೇ ತಾಳವಾಡಿಯ ಜಮೀನು ಅಳತೆಗೆ ಇಳಿದು, ಸರ್ವೆ ನಂ.165ರ ಪೈಕಿ ಗಂಗಯ್ಯ ಅವರಿಗೆ ಸೇರಿದ 27 ಗುಂಟೆ ಜಮೀನಿನ ಸರ್ವೆ ಮುಗಿಸಿ, ಹದ್ದುಬಸ್ತು ನಿಗದಿಪಡಿಸಿದರು.
ತಹಸೀಲ್ದಾರ್ ಹನುಮಂತರಾಯಪ್ಪ, ಸರ್ವೆ ಅಧೀಕ್ಷಕ ಮತ್ತು ಸಿಬ್ಬಂದಿಯು ಪೊಲೀಸ್ ರಕ್ಷಣೆಯೊಂದಿಗೆ ಈ ಕೆಲಸವನ್ನು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಬಳಿಕ ಜಮೀನಿನ ನಕಾಶೆ ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಲಾಯಿತು. ಈ ಕೆಲಸ ಎಂದೋ ಆಗಿದ್ದರೆ ಗಂಗಯ್ಯ ಅವರ ಪ್ರಾಣ ಉಳಿಸಬಹುದಿತ್ತು.
ಶವ ಸಾಗಿಸಿದರು: ಗಂಗಯ್ಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ರೈತ ಸಂಘ ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಆವರಣದಲ್ಲಿ ಜಮಾಯಿಸಿ, ಪ್ರತಿಭಟನೆ ಪ್ರಾರಂಭಿಸಿದ್ದರು. ಶನಿವಾರ ಪ್ರತಿಭಟನೆ ತೀವ್ರಗೊಳ್ಳುವುದನ್ನು ಮನಗಂಡ ಜಿಲ್ಲಾಡಳಿವು ಗಂಗಯ್ಯ ಅವರ ಕಳೆಬರವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಸದ್ದಿಲ್ಲದೆ ಸಾಗಿಸಿತು.
ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಚಳವಳಿ ಮುಂದುವರೆದಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆನ್ನುವ ಪಟ್ಟು ಸಡಿಲಿಸಲಿಲ್ಲ. ಗಂಗಯ್ಯ ಅರ್ಜಿ ಪ್ರಕರಣದ ತನಿಖೆ ನಡೆಸಲು ಸಮ್ಮತಿಸಿದ ಜಿಲ್ಲಾಡಳಿತವು ಜಿಲ್ಲಾಸ್ಪತ್ರೆ ವೈದ್ಯ ಡಾ.ಅಮರನಾಥ್ ಅಮಾನತಿಗೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಘೋಷಿಸಿತು. ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೂ ಶಿಫಾರಸು ಮಾಡಲಾಯಿತು. ಇದೆಲ್ಲದರ ಬಳಿಕ ಪ್ರತಿಭಟನೆ ಅಂತ್ಯಗೊಂಡಿತು.
ಸಂಜೆ ಶವ ಪರೀಕ್ಷೆ: ಇತ್ತ ಪ್ರತಿಭಟನೆ ಅಂತ್ಯವಾದ ಬಳಿಕ ಅತ್ತ ರಾಜರಾಜೇಶ್ವರಿ ಆಸ್ಪತ್ರೆ ಶವಾಗಾರದಲ್ಲಿ ಗಂಗಯ್ಯ ಅವರ ಶವ ಪರೀಕ್ಷೆ ನಡೆಸಲಾಯಿತು. ಚಿಕಿತ್ಸೆ ನೀಡಿರುವ ವೈದ್ಯರ ನಿರ್ಲಕ್ಷ್ಯ ಆರೋಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶವ ಪರೀಕ್ಷೆಯ ವೀಡಿಯೋ ರೆಕಾರ್ಡಿಂಗ್ ಮಾಡಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಮೂಲತಃ ರಾಮನಗರ ತಾಲೂಕು ಜಾಲಮಂಗಲದ ಗಂಗಯ್ಯ ಅವರು ಮಾಗಡಿಯಲ್ಲಿ ವಾಸವಿದ್ದರು. ಮೃತರ ಪುತ್ರಿ ವಾಸವಿರುವ ಲಕ್ಷ್ಮೀಪುರ ಗ್ರಾಮದಲ್ಲಿ ಗಂಗಯ್ಯ ಅಂತ್ಯಕ್ರಿಯೆ ಸಂಜೆ ಬಳಿಕ ನೆರವೇರಿತು. ಕರಾಳ ಅಂತ್ಯ ಕಂಡ ರೈತನ ಸಾವಿನ ಪ್ರಕರಣ ರಾಮನಗರ ಜಿಲ್ಲಾಡಳಿತದ ಪಾಲಿಗೆ ಕಪ್ಪು ಚುಕ್ಕೆಯಾಗಿದೆ.

ರೈತ ಗಂಗಯ್ಯ ಬಲಿ ಪ್ರಕರಣ ವಿವಿಧ ಸಂಘಟನೆಗಳ ಆಕ್ರೋಶ
ರಾಮನಗರ:
ಕಂದಾಯ ಅಧಿಕಾರಿಗಳ ಕಿರುಕುಳಕ್ಕೆ ರೈತ ಗಂಗಯ್ಯ ಬಲಿಯಾದ ಪ್ರಕರಣದ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು, ರೈತ ಸಂಘದ ಬಣಗಳು ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.  
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್, ಭೂ ಮಾಪನ ಅಧಿಕಾರಿಗಳು ಮತ್ತು ವೈದ್ಯರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಕೊಲೆ ಕೇಸು ದಾಖಲಿಸಿ: ರೈತ ಗಂಗಯ್ಯ ಸಲ್ಲಿಸಿದ್ದ ಅರ್ಜಿ ಮೇರೆಗೆ ಭೂ ಮಾಪನ, ನಕಾಶೆ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸದ ಅಧಿಕಾರಿಗಳು ಆ ವ್ಯಕ್ತಿ ಸಾವಿಗೆ ನೇರ ಕಾರಣರಾಗಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಆರು ವರ್ಷವಾದರೂ ರೈತನ ಅರ್ಜಿ ವಿಲೇವಾರಿ ಆಗಿಲ್ಲ. ಮುಖ್ಯಮಂತ್ರಿ ಸಚಿವಾಲಯದಿಂದ ಸೂಚನೆ ಬಂದಿದ್ದಾಗ್ಯೂ ಪ್ರಯೋಜನವಾಗಿಲ್ಲ ಎನ್ನುವುದನ್ನು ಗಮನಿಸಿದರೆ, ಈ ಹಿಂದೆ ಯಾವುದೋ ಕಾಣದ ಕೈ ಕೆಲಸ ಮಾಡಿದೆ. ಪ್ರಕರಣದ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಗೋಳು ಕೇಳೋರಿಲ್ಲ: ರಾಜ್ಯದಲ್ಲಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರ ಗೋಳು ಕೇಳೋರು ಇಲ್ಲದಂತಾಗಿದೆ. ಚುನಾಯಿತ ಸರ್ಕಾರವು ಅಧಿಕಾರಿಗಳಿಗೆ ಲಗಾಮು ಹಾಕುವಲ್ಲಿ ವಿಫಲವಾಗಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕಿಡಿ ಕಾರಿದರು.
ಪ್ರಕರಣದಲ್ಲಿ ಉಪ ವಿಭಾಗಾಧಿಕಾರಿ ವೈಫಲ್ಯ ಎದ್ದು ಕಾಣುತ್ತಿದೆ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ತಕ್ಷಣ ಸೇವೆಯಿಂದ ಅಮಾನತುಪಡಿಸಬೇಕು. ಚಿಕಿತ್ಸೆ ನೀಡುವಲ್ಲಿ ವಿಫಲರಾದ ವೈದ್ಯರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಶಾಸಕ ಆರೋಪ:  ರಾಮನಗರ ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದೆ. ತಾವೊಬ್ಬ ಶಾಸಕರಾಗಿದ್ದುಕೊಂಡು ಜನಪರ ಕೆಲಸಗಳ ವಿಷಯದಲ್ಲಿ ನೀಡುವ ಸೂಚನೆಯನ್ನೂ ಪಾಲಿಸುತ್ತಿಲ್ಲ. ಇಂತಹ ಅಧಿಕಾರಿಗಳಿಗೆ ಜನರೇ ಬುದ್ಧಿ ಕಲಿಸಬೇಕು ಎಂದು ಶಾಸಕ ಕೆ.ರಾಜು ಹೇಳಿದರು.  
ಬಾರುಗೋಲು ಹಿಡಿಯಿರಿ: ಗಂಗಯ್ಯ ಆತ್ಮಹತ್ಯೆ ಪ್ರಕರಣವು ಅಧಿಕಾರಿ ವರ್ಗಕ್ಕೆ ಎಚ್ಚರಿಕೆಯಾಗಿದೆ. ಇನ್ನೂ ಬೇಜವಬ್ದಾರಿಯಿಂದ ನಡೆದುಕೊಂಡರೆ ರೈತರು ಆತ್ಮಹತ್ಯೆ ಮೊರೆ ಹೋಗದೆ ಬಾರುಗೋಲು ಹಿಡಿದು, ಅಧಿಕಾರಿಗಳನ್ನು ಥಳಿಸಲು ಮುಂದಾಗಬೇಕು ಎಂದು ರೈತ ಮುಖಂಡ ರಾಮು ಕರೆ ನೀಡಿದರು.
ಅಪರ ಡಿಸಿ ಭರವಸೆ: ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೃತ ಗಂಗಯ್ಯ ಸಲ್ಲಿಸಿದ್ದ ಅರ್ಜಿಯನ್ನು ತಕ್ಷಣ ವಿಲೇವಾರಿ ಮಾಡಲಾಗುವುದು. ಚಿಕಿತ್ಸೆ ನೀಡುವಲ್ಲಿ ವಿಫಲರಾದ ಆರೋಪ ಎದುರಿಸುತ್ತಿರುವ ವೈದ್ಯರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ  ಭರವಸೆ ನೀಡಿದರು.
ಇದೇ ವೇಳೆ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕೆನ್ನುವ ಕೂಗು ಕೇಳಿ ಬಂದಾಗ, ಈ ವಿಷಯದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮರಿದೇವರು, ಕೆ.ರಮೇಶ್, ಜಯಣ್ಣ, ಬಿಜೆಪಿ ಮುಖಂಡ ಪಿ. ನಾಗರಾಜು, ಸಿ.ಪುಟ್ಟಸ್ವಾಮಿ, ಲಕ್ಷ್ಮಣಸ್ವಾಮಿ ಭಾಗವಹಿಸಿದ್ದರು.

ಕಡೆಗೂ ಬಾರದ ಜಿಲ್ಲಾಧಿಕಾರಿ
ರಾಮನಗರದಲ್ಲಿ ಪ್ರತಿಯೊಂದು ಗಂಭೀರ ಸಮಸ್ಯೆ ಎದುರಾದಾಗಲೂ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ದೂರ ಉಳಿಯುತ್ತಾರೆ. ಗಂಗಯ್ಯ ಆತ್ಮಹತ್ಯೆ ಮಾಹಿತಿ ದೊರೆತಾಗ ಅವರು ಕೇಂದ್ರ ಸ್ಥಾನದಲ್ಲೇ ಇದ್ದರು. ಆಸ್ಪತ್ರೆಗೆ ತೆರಳಿ ಕಳೆಬರದ ಅಂತಿಮ ದರ್ಶನ ಪಡೆಯುವ ಗೋಜಿಗೆ ಹೋಗಲಿಲ್ಲ.
ಆಸ್ಪತ್ರೆ ಎದುರು ಪ್ರತಿಭಟಿಸುತ್ತಿದ್ದ ರೈತರ ದೂರು-ದುಮ್ಮಾನ ಕೇಳುವುದಕ್ಕೂ ಮುಂದಾಗಲಿಲ್ಲ. ತಮ್ಮ ಬದಲು ಅಪರ ಡಿಸಿ ಎಂ.ಎಸ್.ಅರ್ಚನಾ ಅವರನ್ನು ಸಾಗ ಹಾಕಿದರು. ಈ ಬಗ್ಗೆ ಸ್ವತಃ ಶಾಸಕ ಕೆ.ರಾಜು ಸಹಿತ ಪ್ರತಿಭಟನಾಕಾರರು ಕಿಡಿ ಕಾರಿದ್ದಾರೆ.

ಮತ್ತೊಂದು ಆತ್ಮಹತ್ಯೆ ಯತ್ನ
ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ವೇಳೆ ವಾಸು ಎಂಬ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಆ ಕಟ್ಟಡದ 2ನೇ ಮಹಡಿಯಿಂದ ಕೆಳಕ್ಕೆ ಹಾರಲು ಯತ್ನಿಸಿದಾಗ ಪೊಲೀಸರು ತಡೆದಿದ್ದಾರೆ. ಬಳಿಕ ವಾಸು ಅವರನ್ನು ಸಂತೈಸಿ, ಕಳುಹಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.