ಚಕಿತಗೊಳಿಸಿದ ಬೆಟ್ಟಿಂಗ್ ಭರಾಟೆ
ಮತ್ತೀಕೆರೆ ಜಯರಾಮ್
ರಾಮನಗರ: ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ಅಭ್ಯರ್ಥಿಗಳ ಹಣೆ ಬರಹ ನಿರ್ಧರಿಸಿದ್ದಾಗಿದೆ. ಮತಯಂತ್ರಗಳು ಸ್ಟ್ರಾಂಗ್ ರೂಂ ಸೇರಿ ಸುರಕ್ಷವಾಗಿವೆ. ಹಿಂದೆಂದೂ ಕಂಡರಿಯದ ಮಟ್ಟಿಗೆ ಹಣ, ಮದ್ಯ, ಬಳುವಳಿಗಳ ಥೈಲಿ ಹರಿದ ಈ ಚುನಾವಣೆಯಲ್ಲಿ ಬೆಟ್ಟಿಂಗ್ ಭರಾಟೆ ಐಪಿಎಲ್ ಟಿ 20 ಕ್ರಿಕೆಟ್ಗಿತಲೂ ಮಿಗಿಲಾಗಿ ನಡೆಯುತ್ತಿದೆ. ಯಾವ ಪಕ್ಷಕ್ಕೆ ಬಹುಮತ ಲಭಿಸಲಿದೆ, ಪಕ್ಷವಾರು ಪಡೆಯುವ ಸ್ಥಾನಗಳು, ಅಭ್ಯರ್ಥಿಗಳ ಸೋಲು-ಗೆಲವಿನ ಮೇಲೆ ಭಾರಿ ಮೊತ್ತದ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಪ್ರತಿ ಪೌರ ಸಂಸ್ಥೆ ವ್ಯಾಪ್ತಿಯಲ್ಲೂ ಬಾಜಿಯ ಸರಾಸರಿ ಮೊತ್ತ ರು.1 ಕೋಟಿ ದಾಟಿದ್ದು, ಭಾನುವಾರವ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ. ಅಭ್ಯರ್ಥಿಗಳು ಗೌಣ: ರಾಮನಗರ ಜಿಲ್ಲೆಯ 4 ಪೌರ ಸಂಸ್ಥೆಗಳ ಚುನಾವಣೆ ಅಖಾಡ ಜಿದ್ದಾಜಿದ್ದಿನಿಂದ ಕೂಡಿತ್ತು. ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿರುವ ಪ್ರಸಕ್ತ ಚುನಾವಣೆಯಲ್ಲಿ ಅಭ್ಯರ್ಥಿಗಳು ಇಲ್ಲ ಗೌಣವಾಗಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಮುಖಂಡರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹೋರಾಟ ನಡೆಸಿದ್ದಾರೆ.
ಚನ್ನಪಟ್ಟಣ ನಗರಸಭೆ ಚುನಾವಣೆ ರಣಾಂಗಣವು ಪಕ್ಷಾಂತರಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಮತ್ತು ಕ್ಷೇತ್ರಾಂತರಿ ಶಾಸಕಿ ಅನಿತಾ ಕುಮಾರಸ್ವಾಮಿ ಸೆಣೆಸಿನ ಸೆಮಿಫೈನಲ್ ಆಗಿದೆ. ಇನ್ನು ಕನಕಪುರದಲ್ಲಿ ತೆರೆಮರೆ ಸ್ನೇಹಿತರೆನಿಸಿದ ಮಾಜಿ ಸಚಿವದ್ವಯರಾದ ಡಿ.ಕೆ.ಶಿವಕುಮಾರ್ ಮತ್ತು ಪಿ.ಜಿ.ಆರ್.ಸಿಂಧ್ಯಾ ಇದೇ ಮೊದಲ ಬಾರಿ ನೇರ ಸಮರ ಸಾರಿದ್ದಾರೆ. ರಾಮನಗರದಲ್ಲಿ ಜೆಡಿಎಸ್ ಪಾಳಯಕ್ಕೆ ಎಚ್.ಡಿ.ಕುಮಾರಸ್ವಾಮಿ ನಾಮಬಲವೇ ಶ್ರೀರಕ್ಷೆ. ಕುಮಾರಸ್ವಾಮಿ ಭದ್ರಕೋಟೆಗೆ ಲಗ್ಗೆ ಇಡಲು ಹೊರಟಿರುವ ಕಾಂಗ್ರೆಸ್ ಮುಖಂಡ ಮರಿದೇವರು ಪಾಲಿಗೆ ಇದು ಕಿರು ಪರೀಕ್ಷೆ. ಮಾಗಡಿಯಲ್ಲಿ ಪ್ರಾಬಲ್ಯ ಮೆರೆಯಲು ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಕೆಪಿಸಿಸಿ ಸದಸ್ಯ ಎ.ಮಂಜುನಾಥ್ ಕಸರತ್ತು ನಡೆಸಿದ್ದಾರೆ. ಮಾಗಡಿಯಲ್ಲಿ ಪರಾಕಾಷ್ಠೆಗೆ: ಜಿಲ್ಲೆಯ ಮಟ್ಟಿಗೆ ಅತಿ ಕಡಿಮೆ ಸ್ಥಾನಗಳಿರುವ ಮಾಗಡಿ ಪುರಸಭೆ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಸದ್ಯದ ಮಟ್ಟಿಗೆ ಬೆಟ್ಟಿಂಗ್ ಭರಾಟೆ ಅಲ್ಲಿ ಪರಾಕಾಷ್ಠೆಗೆ ಮುಟ್ಟಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡ ಮತ್ತು ಜೆಡಿಎಸ್ ಜಿ.ಪಂ. ಸದಸ್ಯರೊಬ್ಬರು ಮಧ್ಯಸ್ಥಿಕೆದಾರರ ಮೂಲಕ ರು.30 ಲಕ್ಷ ಬಾಜಿ ಕಟ್ಟಿದ್ದಾರೆ.
23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್ ಪಕ್ಷದ ಸ್ಥಾನಗಳಿಗೆ ಮೇಲೆ ಬೆಟ್ಟಿಂಗ್ ನಡೆದಿದೆ. 15 ಸ್ಥಾನ ಗೆಲ್ಲಲಿದೆ ಎಂದು ಜೆಡಿಎಸ್ ಮುಖಂಡ ಮತ್ತು ಅಷ್ಟು ಸ್ಥಾನ ಗೆಲ್ಲಲಾಗದು ಎಂದು ಕಾಂಗ್ರೆಸ್ ಮುಖಂಡ ಬಾಜಿ ಕಟ್ಟಿದ್ದಾರೆ. ಎರಡೂ ಕಡೆಯವರು ಈಗಾಗಲೇ ಮಧ್ಯಸ್ಥಿಕೆದಾರರಿಗೆ ಹಣ ಒಪ್ಪಿಸಿದ್ದಾಗಿದೆ.
ಇದೇ ಪುರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 22ರಲ್ಲಿ ಜೆಡಿಎಸ್ ಅಭ್ಯರ್ಥಿ ನರಸಿಂಹಮೂರ್ತಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶಿವಕುಮಾರ್, 15ನೇ ವಾರ್ಡ್ನಲ್ಲಿ ಸ್ಪರ್ಧಿಸಿರುವ ಜೆಡಿಎಸ್ ರೂಪೇಶ್ ಮತ್ತು ಕಾಂಗ್ರೆಸ್ನ ಮಂಜುನಾಥ್ ಫಲಿತಾಂಶದ ಮೇಲೆ ಭಾರಿ ಬೆಟ್ಟಿಂಗ್ ನಡೆದಿದೆ. ಜೆಡಿಎಸ್ ಕಡೆಯಿಂದ ಸೋಡಿ ನೀಡಲಾಗುತ್ತಿದೆ.
ಇತರೆಡೆ ಬಾಜಿ ನೋಡ: ಚನ್ನಪಟ್ಟಣ ನಗರಸಭೆಯ 2, 5, 10, 22 ಮತ್ತು 31ನೇ ವಾರ್ಡ್ಗಳು ಪ್ರತಿಷ್ಠೆಯ ಕಣಗಳಾಗಿವೆ. ಇದೇ ವಾರ್ಡ್ಗಳಲ್ಲಿ ಬೆಟ್ಟಿಂಗ್ ಭರಾಟೆ ತೀವ್ರವಾಗಿದೆ. ನಗರಸಭೆ ಚುಕ್ಕಾಣಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೂ ಭಾರಿ ಮೊತ್ತದ ಬಾಜಿ ಕಟ್ಟಲಾಗುತ್ತಿದೆ. ಬೆಟ್ಟಿಂಗ್ ಅನುಪಾತ ಸಮನಾಗಿಯೇ ಇದೆ. ರಾಮನಗರ ನಗರಸಭೆಯ ಚುಕ್ಕಾಣಿ ಹಿಡಿದೇ ತೀರುವುದಾಗಿ ಕಾಂಗ್ರೆಸ್ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಜೆಡಿಎಸ್ ಕೂಡ ಆಶಾವಾದಿಯಾಗಿದೆ. ಇಲ್ಲಿನ ಗಲ್ಲಿ ಗಲ್ಲಿಯಲ್ಲೂ ಬಾಜಿಯದ್ದೇ ಸದ್ದು. ವಾರ್ಡ್ ಸಂಖ್ಯೆ 2,7, 8, 27, 30ರಲ್ಲಿ ಬೆಟ್ಟಿಂಗ್ ವ್ಯವಹಾರ ಅಧಿಕ ಪ್ರಮಾಣದಲ್ಲಿದೆ. ಮದಗಜಗಳ ಗುದ್ದಾಟದ ಅಖಾಡವಾಗಿರುವ ಕನಕಪುರ ಪುರಸಭೆಯಲ್ಲೂ ಬಾಜಿ ಆಟ ಕಮ್ಮಿಯೇನಲ್ಲ. ಪುರಸಭೆಯ 2, 5, 17 ಹಾಗೂ 18ರ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದ್ದು, ಅಲ್ಲಿ ಹೆಚ್ಚು ಮೊತ್ತವನ್ನು ಬಾಜಿಗೆ ಒಡ್ಡಲಾಗುತ್ತಿದೆ. ಹಿಂದೆಂದೂ ಕಾಣದಷ್ಟು ಗಬ್ಬೆದ್ದಿರುವ ಚುನಾವಣೆ ವ್ಯವಸ್ಥೆಯಲ್ಲಿ ಬಾಜಿಯ ಭರಾಟೆಯೂ ನಿರಾತಂಕವಾಗಿದೆ.
ರಾಜಕಾರಣಿಗಳೇ
ಬಾಜಿದಾರರು...
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ 2004, 2008ರ ಸಾರ್ವತ್ರಿಕ ಚುನಾವಣೆ, 2009 ಮತ್ತು 2011ರ ಮರು ಚುನಾವಣೆಯಲ್ಲಿ ಭಾರಿ ಮೊತ್ತದ ಬೆಟ್ಟಿಂಗ್ ವ್ಯವಹಾರ ನಡೆದಿತ್ತು.
ಅಲ್ಲಿ ರಾಜಕಾರಣಿಗಳು, ಅದರಲ್ಲೂ ಸ್ಪರ್ಧಾ ಕಣದಲ್ಲಿದ್ದವರೂ ಬೇನಾಮಿ ಹೆಸರಲ್ಲಿ ಬಾಜಿಗೆ ಹಣ ಹೂಡಿದ್ದರು.
ಅ ಚುನಾವಣೆ ತರುವಾಯ ರಾಮನಗರ ಜಿಲ್ಲೆ ಕಂಡಿರುವ ಅತಿ ದೊಡ್ಡ ಮಟ್ಟದ ಬಾಜಿ ವ್ಯವಹಾರ ಪ್ರಸಕ್ತ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಜೋರಾಗಿಯೇ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

