ಬೆಂಗಳೂರು ಗ್ರಾಮಾಂತರ

ಪ್ರತಿಭಟನೆಯಲ್ಲೂ ಕುಂಡಲಿನಿ ಧ್ಯಾನ

Published On :

ಕ.ಪ್ರ.ವಾರ್ತೆ ರಾಮನಗರ  ಮಾ.10
ವಿವಾದಿತ ಸ್ವಾಮಿ ನಿತ್ಯಾನಂದ ಬಿಡದಿಯ ತನ್ನ ಧ್ಯಾನಪೀಠದಲ್ಲಿ ಭಾನುವಾರ ಕನ್ನಡಪರ ಸಂಘಟನೆಯ ಪ್ರತಿಭಟನೆ ನಡುವೆಯೂ ಮಹಾ ಶಿವರಾತ್ರಿ ಪ್ರಯುಕ್ತ ಕುಂಡಲಿನಿ ಧ್ಯಾನ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆ ನಡೆಸಿದ್ದಾರೆ.
ಕುಂಡಲಿನಿ ಧ್ಯಾನ ಮತ್ತು ಮಹಾ ಶಿವರಾತ್ರಿ ಪ್ರಯುಕ್ತದ ಧಾರ್ಮಿಕ ಆಚರಣೆಗೆ ಆಯ್ದ ಮಾಧ್ಯಮಗಳಿಗೆ ಧ್ಯಾನಪೀಠದಿಂದ ಆಹ್ವಾನ ನೀಡಲಾಗಿತ್ತು. ಪ್ರತಿಭಟನೆ ಜತೆಗೆ ವಿವಾದಕ್ಕೆ ಗುರಿಯಾಗುವ ಭೀತಿಯಿಂದ ಕಡೆ ಗಳಿಗೆಯಲ್ಲಿ ಸದರಿ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿದೆ. ಭಾನುವಾರ ರಾತ್ರಿಯಿಡೀ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿದಿವೆ.
ಕಾರ್ಯಕ್ರಮ ಸಂಬಂಧ ಇ-ಮೇಲ್ ಮೂಲಕ ಆಯ್ದ ದೃಶ್ಯ ಮಾಧ್ಯಮ ಸಂಸ್ಥೆಗಳಿಗೆ ಆಹ್ವಾನ ಸಂದೇಶ ನೀಡಲಾಗಿತ್ತು. ಏನೇ ಆಚರಣೆಗಳಿದ್ದರೂ ಧ್ಯಾನಪೀಠದ ಒಳಗೆ ಗುಟ್ಟಾಗಿ ನಡೆಯಲಿ ಎನ್ನುವ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಆಶ್ರಮದವರು ಮಾಧ್ಯಮದವರಿಗೆ ಫೋನಾಯಿಸಿ, ಕಾರ್ಯಕ್ರಮಕ್ಕೆ ಬರುವುದು ಬೇಡವೆಂದು ತಿಳಿಸಿದ್ದಾರೆ ಎನ್ನಲಾಗಿದೆ.
ನಿತ್ಯಾ ವರಸೆಗಳು: ಧ್ಯಾನಪೀಠದಲ್ಲಿ ಪ್ರತಿ ವರ್ಷ ಕುಂಡಲಿನಿ ಧ್ಯಾನ ನಡೆಯುವಾಗಲೂ ಸ್ವಘೋಷಿತ ದೇವಮಾನವ ನಿತ್ಯಾನಂದ ನಾನಾ ವರೆಸಗಳನ್ನು ತೆಗೆಯುವುದು ಮಾಮೂಲಾಗಿದೆ. ಅನುಯಾಯಿಗಳಿಂದ ಅಡ್ಡ ಪಲ್ಲಕ್ಕಿ ಉತ್ಸವ, ಪಾದ ಮತ್ತು ಪಾದುಕೆಗಳ ಪೂಜೆ, ಮಹಾ ಮಂಗಳಾರತಿ ಮಾಡಿಸಿಕೊಳ್ಳುತ್ತಾರೆ.
ಒಂದೊಂದು ಪೂಜೆ, ಆಚರಣೆಗೂ ನಾನಾ ವೇಷ ತೊಡುವುದು, ಚಿನ್ನದ ಕಿರೀಟ ಧಾರಣೆ ನಡೆಯುತ್ತದೆ. ಭಕ್ತರು ಪುಂಗಿಯ ನಾದಕ್ಕೆ ನಾಗರದಂತೆ ತಲೆದೂಗುವುದು ಹೊಸದೇನಲ್ಲ. ಒಮ್ಮೊಮ್ಮೆ ಹುಚ್ಚೆದ್ದು ಕುಣಿಯುವುದೂ ಉಂಟು. ಇಂತೆಲ್ಲಾ ಆಚರಣೆಗಳು ಈ ಬಾರಿಯೂ ನಡೆದಿವೆ. ನಾನಾ ರಾಜ್ಯ, ವಿದೇಶಗಳಿಂದಲೂ ನಿತ್ಯಾ ಭಕ್ತರು ಇಲ್ಲಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.
ಮಹಾಲಿಂಗೇಶ್ವರ ಮಠದ ಮೇಲೆ ಕಣ್ಣಿಟ್ಟ ನಿತ್ಯಾನಂದ ರಾಜ್ಯದ ಅತಿ ದೊಡ್ಡ ಸಮುದಾಯವಾದ ವೀರಶೈವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕುಂಡಲಿನಿ ಧ್ಯಾನ ಮತ್ತು ಧಾರ್ಮಿಕ ಆಚರಣೆಗಳೊಂದಿಗೆ ಮಹಾ ಶಿವರಾತ್ರಿ ಆಚರಣೆ ಗಮನ ಸೆಳೆದಿದೆ.
ಆಶ್ರಮದಲ್ಲಿ ಒಂದು ವರ್ಷದ ಮಟ್ಟಿಗೆ ಯಾವುದೇ ಧಾರ್ಮಿಕ ಆಚರಣೆ ನಡೆಸುವುದಿಲ್ಲ ಎಂದು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ನಿತ್ಯಾನಂದ ಮುಚ್ಚಳಿಕೆ ಬರೆದುಕೊಟ್ಟಿದ್ದರು. ವರ್ಷ ತುಂಬುವ ಮುನ್ನವೇ ಖುದ್ದು ಕುಂಡಲಿನಿ ಧ್ಯಾನ ಆಯೋಜಿಸಿದ್ದಾರೆ. ಧ್ಯಾನಪೀಠದ ಒಳಗೆ ಏನೆಲ್ಲಾ ನಡೆಯುತ್ತಿದೆ ಎನ್ನುವ ಬಗ್ಗೆಯೂ ಜಿಲ್ಲಾಡಳಿತ
ಮತ್ತು ಪೊಲೀಸ್ ಇಲಾಖೆ ಗಮನ ನೀಡುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.