ವಿದ್ಯೆ, ವಿನಯ, ವೈಚಾರಿಕತೆ ಮೂಡಿಸುತ್ತದೆ
ಕ.ಪ್ರ. ವಾರ್ತೆ ಚನ್ನಪಟ್ಟಣ ಮಾ.16
ವಿದ್ಯೆ, ವಿನಯ ಮತ್ತು ವೈಚಾರಿಕತೆಯನ್ನು ಮೂಡಿಸಿ ಮಾನವನನ್ನು ಪರಿಪೂರ್ಣ ನಾಗರಿಕನನ್ನಾಗಿಸುತ್ತದೆ ಎಂದು ಉಚ್ಚ ನ್ಯಾಯಾಲಯದ ನ್ಯಾ. ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯ ಪಟ್ಟರು.
ಪಟ್ಟಣದ ಖಾಸಗಿ ಬಸಸ್ನಿಲ್ದಾಣದಲ್ಲಿ ನಡೆದ ರಾಜ್ಯಮಟ್ಟದ ಸಮುದಾಯ ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಜ್ಞಾನದಿಂದ ನಮ್ಮ ಬೌದ್ಧಿಕ ಬೆಳವಣಿಗೆ ವೃದ್ಧಿಯಾಗಿ, ಪ್ರಜ್ಞೆ ನೈತಿಕತೆ ಮೂಡುತ್ತದೆ ಆಗ ನಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳುವ ಜತೆಗೆ ಇತರ ಹಕ್ಕುಗಳ ಬಗ್ಗೆಗೂ ಗೌರವ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಎಂದರು.
ಮಾನವನ ಮೂಲಭೂತ ಅಗತ್ಯತೆಗಳಲ್ಲಿ ಶಿಕ್ಷಣಕ್ಕೂ ಪ್ರಮುಖವಾದ ಸ್ಥಾನವಿದೆ, ನಾಗರಿಕ ಸಮಾಜವನ್ನು ನಿರ್ಮಿಸುವ ಶಿಕ್ಷಣ ವ್ಯವಸ್ಥೆಗೆ ನಾವೆಲ್ಲ ಹೆಚ್ಚಿನ ಕಾಳಜಿ ನೀಡಬೇಕಿದೆ ಎಂದರು.
ಬ್ರಿಟಿಷರು ಭಾರತದಲ್ಲಿ ಸಮೂಹಿಕ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದ ಬಳಿಕ ನಮ್ಮ ದೇಶದ ಶಿಕ್ಷಣ ರಂಗ ಸುಧಾರಿಸಿದ್ದು, 19ನೇ ಶತಮಾನದಲ್ಲಿ ಶೇ.90ರಷ್ಟಿದ್ದ ಅನಕ್ಷರತೆ ಇದೀಗ ಶೇ.74 ರಷ್ಟು ಸಾಕ್ಷರತೆಯಾಗಿ ಮಾರ್ಪಟಾಗಿದೆ. ಈ ನಿಟ್ಟಿನಲ್ಲಿ ಬ್ರಿಟಿಷರು ನಮ್ಮದೇಶಕ್ಕೆ ಮಹತ್ತರವಾದ ಕೊಡುಗೆ ನೀಡಿದ್ದಾರೆ ಎಂದರು.
ಮಾಹಿತಿ ತಂತ್ರಜ್ಞಾನ, ವಿಜ್ಞಾನ, ಆಹಾರ ಉತ್ಪಾದನೆ ಕ್ಷೇತ್ರಗಳಲ್ಲಿ ದೇಶ ಇಂದು ವಿಶ್ವದ 10 ಸ್ಥಾನಗಳಲ್ಲಿ ತಾನೂ ಪಾಲು ಪಡೆದುಕೊಂಡಿದೆ ಶೈಕ್ಷಣಿಕ ವಲದಲ್ಲಿ ನಮ್ಮ ದೇಶ ವರ್ಷದಿಂದ ವರ್ಷಕ್ಕೆ ಕ್ರಾಂತಿ ನಡೆಸುತ್ತಿದೆ ಎಂದರು.
ಶೈಕ್ಷಣಿಕ ವಲಯಕ್ಕೂ: ಜಾಗತೀಕರಣದ ಕರಾಳ ಹಸ್ತ ಇಂದು ಶೈಕ್ಷಣಿಕ ವಲಯಕ್ಕೂ ಚಾಚಿದ್ದು ಇದರ ಪರಿಣಾಮ ಶಿಕ್ಷಣದಲ್ಲಿ ಖಾಸಗೀಕರಣ ಹೆಚ್ಚಾಗಿದೆ. ದೇಶದ ಎಲ್ಲರಿಗೂ ಶಿಕ್ಷಣವನ್ನು ಮೂಲಭೂತ ಹಕ್ಕಾಗಿಸಿ, ಉಚಿತವಾಗಿ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದ್ದು, ಮಾನವನ ಕನಿಷ್ಠ ಅಗತ್ಯತೆಗಳನ್ನು ಪೂರೈಸಲು ಸರ್ಕಾರಗಳು ಮುಂದಾಗಬೇಕೆಂದರು.
ಶಿಕ್ಷಣ ಮೂಲಭೂತ ಹಕ್ಕಾಗಬೇಕು, ಎಲ್ಲರಿಗೂ ಸಮಾನ ಶಿಕ್ಷಣ, ಗುಣಾತ್ಮಕ ಶಿಕ್ಷಣ ದೊರಕಿಸಿಕೊಡಲು ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದ ಅವರು, ಮಕ್ಕಳಿಗೆ ತ್ಯಾಗ, ದಯೆ, ಕರುಣೆ, ಅಹಿಂಸೆ ಮುಂತಾದ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಲು ಶಾಲೆಗಳು ಮುಂದಾಗಬೇಕು, ಹಾಗೆಯೇ ಮಕ್ಕಳು ಸವಾಲನ್ನು ಹಿಮ್ಮೆಟ್ಟಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು. ಪುಸ್ತಕ ಬಿಡುಗಡೆಗೊಳಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ಜಿ.ನಾಯಕ್ ಮಾತನಾಡಿ, ಸಾಕಷ್ಟು ಸವಾಲುಗಳ ನಡುವೆ ನಮ್ಮ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ ಎಂದರು.
ಉತ್ತಮ ಬೆಳವಣಿಗೆ: ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಗೆ 15 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದು, ಎಲ್ಲಾ ಮಾದರಿಯ ಶಾಲೆಗಳಲ್ಲಿ ಶೇ.25ರಷ್ಟು ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಸುಧಾರಣೆ ಮಾಡಿದರೆ, ಮುಚ್ಚುವ ಪರಿಸ್ಥಿತಿ ಎದುರಾಗುವುದಿಲ್ಲ, ಸರ್ಕಾರಗಳು ಶಿಕ್ಷಕರಿಗೆ ಸರಿಯಾದ ವೇತನ ಹಾಗೂ ಸವಲತ್ತುಗಳನ್ನು ನೀಡುತ್ತಿಲ್ಲ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕಾಗಿರುವ ಅವಶ್ಯಕತೆ ಎಂದರು.
ರಾಷ್ಟ್ರೀಯ ಕಾನೂನು ಶಾಲೆಯ ಮುಖ್ಯಸ್ಥ ಡಾ. ನಿರಂಜನಾರಾದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆಯ ಅಧ್ಯಕ್ಷ ಗೋವಿಂದರಾಜು ವೇದಿಕೆ ಚಟುವಟಿಕೆಗಳ ವರದಿ ಮಂಡಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಜಯಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್, ಜಿ.ಪಂ.ಉಪಾಧ್ಯಕ್ಷೆ ಗೌರಮ್ಮ, ಸದಸ್ಯ ರಘುಕುಮಾರ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಾವಳ್ಳಿ ಶಂಕರ್, ಮುಖಂಡರಾದ ಸಿಂ.ಲಿಂ.ನಾಗರಾಜು, ಮೆಹದವಿಯ ಮೂಮೆಂಟ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಯಾಕೂಬ್ ಇಸಾಕಿ ಮುಂತಾದವರು ಉಪಸ್ಥಿತರಿದ್ದರು.
ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ಪದಾಧಿಕಾರಿಗಳು ಡಾ.ರಾಜ್ ನೇತ್ರ ಸಂಗ್ರಹಣಾ ಸಂಸ್ಥೆಗೆ ನೇತ್ರದಾನ ಮಾಡುವ ಮೂಲಕ ವಿನೂತನವಾಗಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಮನ್ವಯ ವೇದಿಕೆ ವಕ್ತಾರ ವೆಂಕಟೇಶ್ ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿ ಎನ್.ಎಂ.ಶಂಭೂಗೌಡ ಹಕ್ಕೊತ್ತಾಯ ಮಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

