ಕುತಂತ್ರ ರಾಜಕಾರಿಣಿಗಳಿಂದಾಗಿ ಪರಿಸರ ಸಂಪತ್ತು ಲೂಟಿ
ಕ.ಪ್ರ. ವಾರ್ತೆ ಮಾಗಡಿ ಮಾ.23
ಕುತಂತ್ರ ರಾಜಕಾರಿಣಿಗಳಿಂದಾಗಿ ನಾಡಿನ ಪರಿಸರ ಸಂಪತ್ತು ಲೂಟಿಯಾಗುತ್ತಿದೆ ಎಂದು ವಿಶ್ವ ಪರಿಸರ ಸಂರಕ್ಷಣೆ ವೇದಿಕೆಯ ರಾಜ್ಯಾಧ್ಯಕ್ಷ ಎಂ. ಕಾಳೇಗೌಡ ಆತಂಕ ವ್ಯಕ್ತಪಡಿಸಿದರು.
ಅವರು ಮಾಗಡಿ ಪಟ್ಟಣದ ಕೆಂಪೇಗೌಡ ಬಯಲು ರಂಗಮಂದಿರದ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ಸಂರಕ್ಷಣೆ ವೇದಿಕೆಯ ಜಿಲ್ಲಾ ಮತ್ತು ತಾಲೂಕು ಘಟಕದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಕಾಡು, ನಾಡಿನ ಸಂಪತ್ತು. ಆರೋಗ್ಯಕ್ಕಾಗಿಯಾದರೂ ಅರಣ್ಯ ಸಂಪತ್ತನ್ನು ಉಳಿಸಬೇಕಿದೆ. ಅರಣ್ಯ ಸಂಪತ್ತು ಉಳಿಯಬೇಕಾದರೆ ನಾಡಿನ ಪ್ರತಿಯೊಬ್ಬ ನಾಗರಿಕರು ಕನಿಷ್ಠ 2 ಸಸಿಗಳನ್ನು ಬೆಳೆಸಲು ಸಂಕಲ್ಪ ಮಾಡಬೇಕು. ಪರಿಸರ ಉಳಿದರೆ ಮಾತ್ರ ಮನುಕುಲ ಉಳಿವು ಎಂದರು.
ಮತದಾರರ ಜಾಗೃತಿ ವೇದಿಕೆಯ ಅಧ್ಯಕ್ಷ ಹಾಗು ಪತ್ರಕರ್ತ ಎಂ.ಜಿ.ಕಾರಟಗಿ ಮಾತನಾಡಿ ಪರಿಸರದ ಪ್ರಜ್ಞೆ ಇಲ್ಲದ ರಾಜಕಾರಿಣಿಗಳು ವಿಧಾನ ಸೌಧದಲ್ಲಿ ಕುಳಿತು ಆಡಳಿತ ನಡೆಸುತ್ತಿರುವುದರಿಂದ ನಮ್ಮ ಪರಿಸರದ ಮೇಲೆ ನಿರಂತರವಾಗಿ ದೌರ್ಜನ್ಯ, ಹಲ್ಲೆ ನಡೆಯುತ್ತಿದೆ. ಪರಿಸರ ಸಂರಕ್ಷಣೆ, ಜೀವನದ ರಕ್ಷಣೆಗೆ ಸ್ಫೂರ್ತಿದಾಯಕ ಎಂದರಲ್ಲದೆ ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಯಾಗಬೇಕು ಎಂಬ ಮಹತ್ವಕಾಂಕ್ಷೆಯ ಚಿಂತನೆಯಿಂದ ಮತದಾರರ ಜಾಗೃತಿ ವೇದಿಕೆ ಮೂಲಕ ಆಂದೋಲನ ನಿರತಂರವಾಗಿ ನಡೆಯಲಿದೆ ಎಂದರು.
ನಿರಂತರ ದೌರ್ಜನ್ಯ: ಪ್ರಕೃತಿ ಮಾತೆಯ ಮೇಲೆ ಮನುಷ್ಯರ ನಿರಂತರ ದೌರ್ಜನ್ಯದಿಂದ ತಾಪಮಾನದಲ್ಲಿ ಅಸಮತೋಲನ ಉಂಟಾಗಿದೆ. ಭೂತಾಯಿ ಒಡಲಿಗೆ ಪೆಟ್ಟು ಬೀಳುತ್ತಿದೆ. ಮನುಷ್ಯನ ದುರಾಸೆಗೆ ಕಾಡಿನ ಗಿಡಮರಗಳನ್ನು ನಾಶವಾಗುತ್ತಿದ್ದು, ಕಾಡುಪ್ರಾಣಿಗಳ ವಾಸ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿರುವುದರಿಂದ ಕಾಡಿನ ಪ್ರಾಣಿಗಳು ನಾಡಿನಲ್ಲಿ ಸಂಚರಿಸುವಂತಹ ಪರಿಸ್ಥಿತಿ ತಂದೊಡ್ಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಯುವ ಜನಾಂಗ ಎಚ್ಚೆತ್ತು ಪರಿಸರ ಸಂರಕ್ಷಣೆಗೆ ಮುಂದಾಬೇಕು. ಪರಿಸರ ಸಂರಕ್ಷಣೆ ನಾಡಿನ ಪ್ರತಿಯೊಬ್ಬರ ಹೊಣೆಯಾಗಬೇಕಿದೆ ಎಂದು ವಿಶ್ವ ಪರಿಸರ ಸಂರಕ್ಷಣೆ ವೇದಿಕೆಯ ಮಹಿಳಾ ಪ್ರಧಾನ ಕಾರ್ಯದರ್ಶಿ ರಾಧ ಶಾಂತಕುಮಾರ್ ಕರೆ ಕೊಟ್ಟರು.
ಸಹಕರಿಸಿ: ವೇದಿಕೆ ಕಾರ್ಯಾಧ್ಯಕ್ಷ ಗಂಗರಾಜು ಮಾತನಾಡಿ ಮರ ಕಡಿಯದಂತೆ, ಮರಳು ದಂಧೆ ನಡೆಸದಂತೆ ಕಡಿವಾಣ ಹಾಕಲು ವೇದಿಕೆ ಬದ್ಧವಾಗಿದೆ. ವೇದಿಕೆಯೊಂದಿಗೆ ಕೈಜೋಡಿಸಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರು ಸಹಕರಿಸಬೇಕು. ಈ ನಿಟ್ಟಿನಲ್ಲಿ ನಾಡನ್ನು ಹಸಿರನ್ನಾಗಿಸೋಣ ಎಂದರು. ಸಮಾಜಸೇವೆಗೆ ಜೀವನ ಮುಡುಪಾಗಿಡುವುದಾಗಿ ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್ ತಿಳಿಸಿದರು. ಇದೇ ವೇಳೆ ತುಮಕೂರಿನ ಸೋನಾ ಮೆಲೋಡಿಯಸ್ ತಂಡದ ವತಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಂಗವಾಗಿ ರೈತರಿಗೆ ಸಸಿಗಳನ್ನು ಸಹ ವಿತರಿಸಲಾಯಿತು.
ಪುರಸಭಾ ಸದಸ್ಯರಾದ ಕೆ.ವಿ. ಬಾಲು, ಶಿವಕುಮಾರ್, ವೇದಿಕೆಯ ರಂಗಸ್ವಾಮಿ, ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ವಿಜಯಸಿಂಹ, ವೇದಿಕೆ ತಾಲೂಕು ಅಧ್ಯಕ್ಷ ಪುರುಷೋತ್ತಮ್, ಟೌನ್ ಅಧ್ಯಕ್ಷ ಕುಮಾರ್, ಗಿರೀಶ್, ಗಾಯಕಿ ಮಂಜುಳ ಮೋಹನ್, ಮೋಹನ್ ಕುಮಾರ್, ಜಯಪ್ರಕಾಶ್ ರಮೇಶ್, ನರಸಿಂಹಮೂರ್ತಿ, ಗೋಪಾಲ್, ಜಯರಾಮು ವೆಂಕಟೇಶ್, ಸತೀಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

