ಬೆಂಗಳೂರು ಗ್ರಾಮಾಂತರ

ವಿಶ್ವ ಕ್ಷಯರೋಗ ದಿನಾಚರಣೆ

Published On :

ರಾಮನಗರ: ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ನೀಡದಿದ್ದರೆ ಕ್ಷಯ ಮಾರಣಾಂತಿಕ ರೋಗವಾಗಿ ಪರಿಣಮಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ತಿಳಿಸಿದರು. ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಕ್ಷಯರೋಗ ಗುಣಪಡಿಸಬಲ್ಲ ಕಾಯಿಲೆಯಾಗಿದೆ ಎಂದರು. ಕ್ಷಯರೋಗಕ್ಕೆ ಎಲ್ಲಾ  ಡಾಟ್‌ಕೆಂದ್ರಗಳಲ್ಲಿ  ಉಚಿತವಾಗಿ ಔಷಧಿಗಳನ್ನು ನೀಡಲಾಗುತ್ತಿದೆ ಎಂದರು. ಜಿಲ್ಲಾ ಕ್ಷಯರೋಗ ಅಧಿಕಾರಿಗಳಾದ ಡಾ.ನಾಗಮೂರ್ತಿ, ಡಾ.ಜಿಯಾ ಉಲ್ಲಾ, ಶಿವನಂಜಯ್ಯ, ಡಿಇಒ ಟಿ.ಆರ್.ಪವಿತ್ರ, ಚಿಕಿತ್ಸಾ ಮೇಲ್ವಿಚಾರಕ ಶ್ರೀನಿವಾಸ್, ಪ್ರಯೋಗಶಾಲಾ ಮೇಲ್ವಿಚಾರಕ ನಾಗರಾಜು  ಮತ್ತು ತಂತ್ರಜ್ಞ ಸುದರ್ಶನ್ ಅವರನ್ನು ಗೌರವಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಧನ್ಯಕುಮಾರ್, ಎನ್‌ಆರ್‌ಹೆಚ್‌ಎಂ ನಿರ್ದೇಶಕ ಆರ್.ಆರ್.ಜೆನ್ನೂ, ಜಂಟಿ ನಿರ್ದೇಶಕ ಡಾ.ಸೂರ್ಯಕಾಂತ್, ಆರೋಗ್ಯ ಇಲಾಖೆ ಆಯುಕ್ತ ವಿ.ವಿ. ಪಾಟೀಲ್ ಮತ್ತಿತರರು ಹಾಜರಿದ್ದರು.

ಉಪ ಚುನಾವಣೆ: ನಾಲ್ವರು ಕಣಕ್ಕೆ
ನೆಲಮಂಗಲ:
ತಾಲೂಕಿನ ಅರಿಶಿನಕುಂಟೆ ತಾಲೂಕು ಪಂಚಾಯಿ ಕ್ಷೇತ್ರದ ಉಪಚುನಾವಣೆಗೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಕಣಕ್ಕಿಳಿದಿದ್ದಾರೆ.ಮಹಿಳಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್(ಐ) ನಿಂದ ಅಭ್ಯರ್ಥಿಯಾಗಿ ಎ.ಹನುಮಂತಮ್ಮ, ಬಿ.ಜೆ.ಪಿಯಿಂದ ಅಭ್ಯರ್ಥಿಯಾಗಿ ಬಿ.ಎಲ್.ಸುಮಲತಾ, ಜೆ.ಡಿ.ಎಸ್ ಅಭ್ಯರ್ಥಿಯಾಗಿ ವರಲಕ್ಷ್ಮಮ್ಮ, ಸ್ವತಂತ್ರ ಅಭ್ಯರ್ಥಿಯಾಗಿ ಹನುಮಂತಮ್ಮ ತಮ್ಮ ಬೆಂಬಲಿಗರೊಂದಿಗೆ ಬಂದು ನಾಮಪತ್ರಗಳನ್ನು  ಸಲ್ಲಿಸಿದ್ದಾರೆ.

ದಾಸಿಮಯ್ಯ ಜಯಂತಿ: ಪೂರ್ವಭಾವಿ ಸಭೆ
ದೊಡ್ಡಬಳ್ಳಾಪುರ:
ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಇಲ್ಲಿನ ದೇವಾಂಗ ಮಂಡಳಿ ಕಲ್ಯಾಣ ಮಂದಿರದಲ್ಲಿ ನಡೆಯಿತು.ದೇವಾಂಗ ಮಂಡಲಿ ನೇತೃತ್ವದಲ್ಲಿ ಗಾಯತ್ರಿ ಪೀಠ ಮಿತ್ರ ಬಳಗ, ಆಂಧ್ರ ದೇವಾಂಗ ಯೂತ್ಸ್ ಅಸೋಸಿಯೇಶನ್, ತೆಲುಗು ದೇವಾಂಗ ಸಂಘ, ಪದ್ಮಶಾಲಿ ಸಂಘ, ಸ್ವಕುಳಸಾಲಿ ಸಂಘ, ಪಟ್ಟಸಾಲಿ ಸಂಘ, ಕುರುಹಿನ ಶೆಟ್ಟಿ ಸಂಘ, ತೊಗಟವೀರರ ಸಂಘ, ಚೌಡೇಶ್ವರಿ ಮಹಿಳಾ ಮಂಡಲಿ, ಗಾಯತ್ರಿ ಮಹಿಳಾ ಮಂಡಲಿ ಸೇರಿದಂತೆ ನೇಕಾರ ಸಮುದಾಯದ ಹಲವು ಸಂಘಟನೆಗಳ ಸಹಕಾರದಲ್ಲಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ದೇವಾಂಗ ಮಂಡಲಿ ಉಪಾಧ್ಯಕ್ಷೆ ಕೆ.ಸಿ.ಗೌರಮ್ಮ, ಕಾರ್ಯದರ್ಶಿ ಎ.ಎಸ್.ಕೇಶವ, ಸಹ ಕಾರ್ಯದರ್ಶಿ ಸನಾತನಮೂರ್ತಿ, ಖಜಾಂಚಿ ಎಲ್.ಸಿ.ದೇವಕಿ, ನಗರಸಭಾ ಸದಸ್ಯರಾದ ಪಿ.ಸಿ.ಲಕ್ಷ್ಮೀನಾರಾಯಣ್, ಡಿ.ಎಂ.ಚಂದ್ರಶೇಖರ್, ಯಶೋಧಮ್ಮ, ಶಿವಶಂಕರ್, ಕೆ.ಜಿ.ರಘುರಾಂ, ಸಿ.ಜಯಲಕ್ಷ್ಮೀ, ಗಾಯತ್ರಿ ಪೀಠ ಮಿತ್ರ ಬಳಗದ ಅಧ್ಯಕ್ಷ ಶಿವಾನಂದ್, ಪದ್ಮಶಾಲಿ ಸಂಘದ ಲೋಕೇಶ್ ಮತ್ತಿತರರು ಭಾಗವಹಿಸಿದ್ದರು.

ಏ.19 ರಂದು ಸಾಮೂಹಿಕ ವಿವಾಹ
ಸೂಲಿಬೆಲೆ:
ಇಲ್ಲಿಗೆ ಸಮೀಪದ ಅನುಪಹಳ್ಳಿ ಗ್ರಾಮದಲ್ಲಿ  ವಿಶ್ವ ಭಾವೈಕ್ಯತಾ ಮಂಟಪ ಟ್ರಸ್ಟ್ ವತಿಯಿಂದ ಏ.19 ರಂದು ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ವಿವಾಹವಾಗುವ ವಧು, ವರರಿಗೆ ಉಚಿತವಾಗಿ ಮಂಗಳಸೂತ್ರ, ಬೆಳ್ಳಿಕಾಲುಂಗರ, ಬಟ್ಟೆಗಳನ್ನು ನೀಡಿ, ಸರ್ಕಾರದಿಂದ ಬರುವ 10 ಸಾವಿರ ಸಹಾಯಧನ ಕಲ್ಪಿಸಲು ಸಹಾಯ ಮಾಡಲಾಗುವುದು. ಆಸಕ್ತರು ವಧು,ವರರ ಮಾಹಿತಿಯನ್ನು ಏ.15ರೊಳಗೆ ನೋಂದಾಯಿಸಿಕೊಳ್ಳಲು ಕೋರಿದ್ದು, ಹೆಚ್ಚಿನ ಮಾಹಿತಿಗೆ ಮೊ.9945713974 ಸಂಪರ್ಕಿಸಲು ಕೋರಿದೆ.

ದೊಡ್ಡಬಳ್ಳಾಪುರ ಪಟ್ಟಣಕ್ಕೆ ಶರಣ ಸಂಸ್ಕೃತಿ ಮಹಾಯಾತ್ರೆ
ದೊಡ್ಡಬಳ್ಳಾಪುರ:
ಜಗಜ್ಯೋತಿ ಬಸವೇಶ್ವರರ ಜನ್ಮ ಶತಮಾನೋತ್ಸವ ಅಂಗವಾಗಿ ಬಸವ ಬಳಗ ವಿಶ್ವ ಶರಣ ಸಂಕುಲ ಎಂಬ ಅಭಿದಾನದಲ್ಲಿ ಕೈಗೊಂಡಿರುವ ನಿರ್ಣಯದಂತೆ ಬಸವನ ಬಾಗೇವಾಡಿಯಿಂದ ಆರಂಭವಾಗಿರುವ ಶರಣ ಸಂಸ್ಕೃತಿ ಮಹಾಯಾತ್ರೆ ಬುಧವಾರ ದೊಡ್ಡಬಳ್ಳಾಪುರಕ್ಕೆ ಆಗಮಿಸಿತು.
ಬಸವಾದಿ ಶರಣರ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ಬಿತ್ತರಿಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ತಾಲೂಕು ವೀರಶೈವ ಸೇವಾ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಈ ಯಾತ್ರೆ ನಗರಾದ್ಯಂತ ಸಂಚರಿಸಿತು. ಕರ್ನಾಟಕದ ಸಮಸ್ತ ವೀರಶೈವ ಮಹಾಸಭೆಯ ಘಟಕಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಘಟಕಗಳು, ರಾಷ್ಟ್ರೀಯ ಬಸವ ದಳ, ಬಸವ ಕೇಂದ್ರಗಳು ಸೇರಿದಂತೆ ವಿವಿಧ ಸಂಘಟನೆಗಳು ಈ ಮಹಾಯಾತ್ರೆಯಲ್ಲಿ ಭಾಗವಹಿಸಿರುವುದು ವಿಶೇಷ. 33 ದಿನಗಳ ಕಾಲ ನಡೆಯುವ ಯಾತ್ರೆ ಮಾ.13ರಿಂದ ಆರಂಭವಾಗಿದ್ದು, ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ತಲುಪಿದೆ. ಬಸವ ಜಯಂತಿ ವೇಳೆ ಈ ಯಾತ್ರೆಯು ಕೂಡಲಸಂಗಮಕ್ಕೆ ಹಿಂದಿರುಗಲಿದೆ.ಬೆಳಗ್ಗೆ ಇಲ್ಲಿನ ಬಸವ ಭವನ ಮುಂಭಾಗದಲ್ಲಿ ಯಾತ್ರೆಗೆ ಅದ್ಧೂರಿ ಸ್ವಾಗತ ನೀಡಲಾಯಿತು. ನಂತರ ತಾಲೂಕು ಕಚೇರಿ ವೃತ್ತದ ಮುಖಾಂತರ ವೀರಗಾಸೆ, ನಾದಸ್ವರ ಸೇರಿದಂತೆ ಸಾಂಸ್ಕೃತಿಕ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಜಾತ್ಯತೀತ ಶಕ್ತಿಗಳು ಒಂದಾಗುವ ಅನಿವಾರ್ಯ: ಚಂಪಾ
ಬೆಂಗಳೂರು:
ಶೋಷಿತರಿಗೆ ಅಧಿಕಾರ ಸಿಗಬೇಕಾದರೆ ಜಾತ್ಯತೀತ ಶಕ್ತಿಗಳು ಒಂದಾಗುವ ಅನಿವಾರ್ಯವಿದೆ ಎಂದು ಸಾಹಿತಿ ಡಾ.ಚಂದ್ರಶೇಖರ ಪಾಟೀಲ ಹೇಳಿದ್ದಾರೆ. ಪ್ರಜಾಪ್ರಗತಿ ರಂಗ ಪಕ್ಷ ನಗರದಲ್ಲಿ ಬುಧವಾರ ಏರ್ಪಡಿಸಿದ್ದ 'ಜನಧಿಕಾರಕ್ಕಾಗಿ ಜನಶಕ್ತಿ' ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಜಾಪ್ರಗತಿ ರಂಗ ಪಕ್ಷ ವಿಧಾನಸಭೆ ಚುನಾವಣೆ ಮೂಲಕ ಅಧಿಕಾರದತ್ತ ದಾಪುಗಾಲು ಇಡಬೇಕು. ಇದಕ್ಕಾಗಿ ಇತರ ಜಾತ್ಯತೀತ ಪಕ್ಷಗಳು ಬೆಂಬಲ ನೀಡಬೇಕಿದೆ. ಇದು ಸಾಕಾರವಾದರೆ ಮಾತ್ರ ರಾಜ್ಯದಲ್ಲಿ ಜನಪರ ಆಡಳಿತ ಸ್ಥಾಪನೆಯಾಗುತ್ತದೆ. ಅದರಿಂದ ಶೋಷಿತರೂ ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ ಎಂದು ಚಂಪಾ ಹೇಳಿದರು. ಪ್ರಜಾ ಪ್ರಗತಿ ರಂಗ ಪಕ್ಷದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ. ಕೇಂದ್ರ ಸರ್ಕಾರ ಕೂಡ ಭ್ರಷ್ಟಾಚಾರದಿಂದ ಹೊರತಲ್ಲ ಎಂದರು. ದೇವೇಗೌಡರು ಅಧಿಕಾರದಲ್ಲಿದ್ದಾಗ ಕಾವೇರಿ ಪರವಾಗಿ ಹೋರಾಟ ನಡೆಸದೆ ಈಗ ಕಣ್ಣೀರಿಡುತ್ತಿದ್ದಾರೆ. ಇವರ ನೇತೃತ್ವ ಪಕ್ಷದಿಂದ ಕೂಡ ರಾಜ್ಯದ ಜನ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಜಾತ್ಯತೀತ ಶಕ್ತಿಗಳು  ಒಂದಾಗಿರುವ ಪ್ರಜಾ ಪ್ರಗತಿ ರಂಗ ಪಕ್ಷ ಎಲ್ಲಾ ಪಕ್ಷಗಳಿಗೂ ಪರ್ಯಾಯವಾಗಿದೆ. ಈ ಪಕ್ಷ 224 ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತಿದ್ದು, 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲೂ ಪ್ರಬಲ ಸ್ಪರ್ಧೆ ನೀಡುತ್ತಿದೆ ಎಂದುಚಂದ್ರಶೇಖರ್ ಹೇಳಿದರು.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಅಬ್ದುಲ್ ಮಜೀದ್, ಭಾರತೀಯ ರಿಪಬ್ಲಿಕ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಮದಾಸ್ ಅಠವಳಿ, ಸಮತಾ ಸೈನಿಕ ದಳದ ಎಂ.ವೆಂಕಟಸ್ವಾಮಿ ಮಾತನಾಡಿದರು.

ನೂತನ ಡಿಸಿ ನವೀನ್‌ರಾಜ್ ಸಿಂಗ್ ಅಧಿಕಾರ ಸ್ವೀಕಾರ
ರಾಮನಗರ:
ಚುನಾವಣಾ ನೀತಿ ಸಂಹಿತೆ ಜಾರಿ ನಡುವೆಯೇ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಎತ್ತಂಗಡಿಯಾಗಿದ್ದು, ತೆರವಾದ ಜಾಗಕ್ಕೆ ನವೀನ್‌ರಾಜ್ ಸಿಂಗ್ ಅವರನ್ನು ಸರ್ಕಾರ ನೇಮಕಗೊಳಿಸಿದೆ. ವರ್ಗಾವಣೆ ಆದೇಶ ಹೊರ ಬೀಳುತ್ತಿದ್ದಂತೆಯೇ ನಗರಕ್ಕೆ ಆಗಮಿಸಿದ ನವೀನ್‌ರಾಜ್ ಸಿಂಗ್ ಅವರು ನಿರ್ಗಮನ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ. ಅಪರ ಡಿಸಿ ಅರ್ಚನಾ ಹಾಜರಿದ್ದರು. ಕರ್ನಾಟಕ ಕೇಡರ್‌ನ 98ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ನವೀನ್‌ರಾಜ್ ಸಿಂಗ್ ಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಅದಕ್ಕೂ ಮೊದಲು ಹಾಸನ ಜಿಲ್ಲಾಧಿಕಾರಿಯಾಗಿದ್ದರು.

ಜಿಪಂ ಉಪಕದನ: ಆರು ಜನ ಕಣದಲ್ಲಿ
ನೆಲಮಂಗಲ:
ತಾಲೂಕಿನ ಟಿ.ಬೇಗೂರು ಜಿಪಂ ಕ್ಷೇತ್ರದ ಉಪಚುನಾವಣೆಗೆ ಮಾರ್ಚ್ 27ರಂದು ನಾಮಪತ್ರ ಸಲ್ಲಿಸಿ ಅಂತಿಮವಾಗಿ 6 ಜನ ಉಮೇದುವಾರರು ಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ನಾಗರಾಜು, ಬಿ.ಜೆ.ಪಿಯಿಂದ ಅಭ್ಯರ್ಥಿಯಾಗಿ ಬಾಳೇಕಾಯಿ ನಾಗರಾಜು, ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳದಿಂದ ಬಿ.ಎಂ.ಎಲ್.ಕಾಂತರಾಜು, ಪಕ್ಷೇತರ ಅಭ್ಯರ್ಥಿಗಳಾಗಿ ಟಿ.ಬೇಗೂರಿನ ಬಿ.ಆರ್.ತಿಮ್ಮರಾಜು, ನಂಜಪ್ಪ, ಮುದ್ದರಂಗೇಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಕೊನೆಯ ದಿನ ಬಿ.ಜೆ.ಪಿ ಅಭ್ಯರ್ಥಿ ನಾಗರಾಜು ನಾಮಪತ್ರವನ್ನು ಚುನಾವಣಾಧಿಕಾರಿ ರಾಘವೇಂದ್ರ ಅವರಿಗೆ ಸಲ್ಲಿಸಿದರು.  

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ರಾಮನಗರ:
2011-12ನೇ ಸಾಲಿನಲ್ಲಿ ಪ್ರಥಮ ಬಿ.ಎ., ಬಿ.ಕಾಂ., ಎಂ.ಎ., ಎಂ.ಕಾಂ., ಸ್ಪೆಷಲ್ ಬಿಎಇಡಿ ಪದವಿಗಳಿಗೆ ಪ್ರವೇಶಾತಿ ಪಡೆದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಂದ ಮುಕ್ತ ಸಂಜೀವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 2012ನೇ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 50ರಷ್ಟು ಮತ್ತು ಅದಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ ಒಂದೇ ಬಾರಿಗೆ ತೇರ್ಗಡೆ ಹೊಂದಿರುವ ಕ.ರಾ.ಮು.ವಿ.ದಲ್ಲಿ ಹಾಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದಾರೆ.  ವಿದ್ಯಾರ್ಥಿ ಮತ್ತು ಪೋಷಕರ ವಾರ್ಷಿಕ ವರಮಾನ ರು.1 ಲಕ್ಷಕ್ಕಿಂತ ಹೆಚ್ಚಿರಬಾರದು. ಜು.1ಕ್ಕೆ 30 ವರ್ಷ ವಯೋವುತಿ ಮೀರಿರಬಾರದು. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅಂಕಪಟ್ಟಿ ಜತೆಗೆ ಆದಾಯ ಪ್ರಮಾಣ ಪತ್ರ, ಅಂಗವಿಕಲರಾಗಿದ್ದಲ್ಲಿ ಸಕ್ಷಮ ವೈದ್ಯಕೀಯ ತಜ್ಞರಿಂದ ಅಂಗವಿಕಲ ಪ್ರಮಾಣ ಪತ್ರ ತಪ್ಪದೇ ಲಗತ್ತಿಸಬೇಕು. ಅರ್ಜಿ ನಮೂನೆಯನ್ನು ಕ.ರಾ.ಮು.ವಿ. ವೆಬ್‌ಸೈಟ್ ಅಥವಾ ರಾಮನಗರ ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ನೋಂದಾಯಿತ ಅಂಚೆ, ಕೊರಿಯರ್ ಅಥವಾ ಖುದ್ದಾಗಿ ಉಪಕುಲಸಚಿವರು (ಪ್ರವೇಶಾತಿ ಕರ್ನಾಟಕ ರಾಜ್ಯ ಮುಕ್ತ ವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು-6) ಇವರಿಗೆ ಏ.6 ರೊಳಗೆ ಸಲ್ಲಿಸಬೇಕು.  ವಿವರಗಳಿಗೆ ರಾಮನಗರ ಪ್ರಾದೇಶಿಕ ಕಚೇರಿ, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಬಿ.ಎಂ.ರಸ್ತೆ, ವಿವೇಕಾನಂದ ನಗರ, ರಾಮನಗರ-562159 ಇಲ್ಲಿ ಖುದ್ದಾಗಿ ಅಥವಾ 080-2727443 ಸಂಪರ್ಕಿಸಿರಿ.

ಗುರುವಂದನಾ ಮಹೋತ್ಸವ ಇಂದು
ನೆಲಮಂಗಲ:
ತಾಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ ಮಾ.28ರ ಗುರುವಾರ ಬೆಳಗ್ಗೆ 11 ಗಂಟೆಗೆ ಗುರುವಂದನಾ ಮಹೋತ್ಸವ ಹಾಗೂ ಬಸವ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾತ್ರಿ 9ಕ್ಕೆ ಶ್ರೀ ಸಿದ್ಧಲಿಂಗೇಶ್ವರ ನಾಟಕ ಮಂಡಳಿಯ ಸಿದ್ಧಗಂಗಾ ಮಠದ ಕಲಾವಿದರಿಂದ ಶ್ರೀ ಜಗಜ್ಯೋತಿ ಬಸವೇಶ್ವರ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಅಭಿಮಾನಿಗಳು ಸಕಾಲಕ್ಕೆ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮೈಲನಹಳ್ಳಿ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.