ಕ.ಪ್ರ.ವಾರ್ತೆ ಕನಕಪುರ ಮಾ.30
ಕನಕಪುರವನ್ನು ಕನಕನಗರವನ್ನಾಗಿಸಿರುವ ತಮ್ಮ ಐದುವರ್ಷಗಳ ಸಾಧನೆಯನ್ನು ಕಣ್ಣಾರೆ ಕಂಡಿರುವ ಮತದಾರರು ನಿಶ್ಚಿತವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುವುದರಲ್ಲಿ ಅನುಮಾನವಿಲ್ಲ, ಚುನಾವಣೆ ಏನಿದ್ದರೂ ಜೆಡಿಎಸ್ನವರಿಗೆ ಮಾತ್ರ ಎಂದು ಶಾಸಕ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಅವರು ಕೋಡಿಹಳ್ಳಿ ಗ್ರಾಮದ ಡಿಕೆಎಸ್ಫಾರಂ ಹೌಸ್ನಲ್ಲಿ ಹೊಸದುರ್ಗ, ಕೋಡಿಹಳ್ಳಿ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷಕ್ಕೆ ಸೇರ್ಪಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕ್ಷೇತ್ರದ ಅಭಿವೃದ್ಧಿಯನ್ನು ಸಹಿಸದ ಜೆಡಿಎಸ್ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಾ ಜನರನ್ನು ಎತ್ತಿಕಟ್ಟಿ ಕೀಳು ಮಟ್ಟದ ರಾಜಕೀಯ ನಡೆಸುತ್ತಿದೆ. ಹತಾಶ ಮನೋಭಾವದಿಂದ ಅಧಿಕಾರಿಗಳಿಗೂ ಕಿರುಕುಳ ನೀಡುತ್ತಿದ್ದಾರೆ. ಸದಾ ಸುಳ್ಳು ಹೇಳುತ್ತಾ ಮುಗ್ಧ ಗ್ರಾಮೀಣ ಜನರನ್ನು ಸದಾ ವಂಚಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಕುಟುಕಿದ ಡಿ.ಕೆ. ಶಿವಕುಮಾರ್, ಬಿಜೆಪಿ ಸಚಿವರಾಗಿದ್ದ ಯೋಗೇಶ್ವರ್ ತಮ್ಮ ವಿರುದ್ಧ ದೂರುದಾಖಲಿಸಿದ್ದ ಘಟನೆಯನ್ನು ಜನರು ಇನ್ನೂ ಮರೆತಿಲ್ಲ. ಈಗ ಚುನಾವಣಾ ಪ್ರಚಾರಕ್ಕೆ ತಮ್ಮ ಭಾವಚಿತ್ರ ಹಾಗೂ ಹೆಸರನ್ನು ಬಳಸುತ್ತಿದ್ದಾರೆ. ತಾಲೂಕಿನ ಜನರಿಗೆ ಶುದ್ಧ ಕುಡಿಯುವ ನೀರು ಹಾಗೂ ಸರ್ಕಾರದ ಸವಲತ್ತುಗಳನ್ನು ಕಲ್ಪಿಸಿಕೊಡುವ ತಮ್ಮ ಹೋರಾಟ ನಿರಂತರವಾಗಿರುತ್ತದೆ. ವಿಪಕ್ಷಗಳ ಟೀಕೆಗೆ ಅಂಜಿ ಯಾವುದೇ ಕಾರಣಕ್ಕೆ ಹಿಂಜರಿಯುವುದಿಲ್ಲ ಎಂದು ಹೇಳಿದರು.
ಹಗಲಿರುಳು ದುಡಿದಿದ್ದೇನೆ: ಯುವ ಮುಖಂಡ ಡಿ.ಕೆ.ಸುರೇಶ್ ಮಾತನಾಡಿ, ಅಧಿಕಾರದ ಆಸೆಗಾಗಿ ತಾವು ಕನಕಪುರ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತಿಲ್ಲ. ಶಾಸಕ ಡಿಕೆ ಶಿವಕುಮಾರ್ ಅವರು ಏಕಮೇವಾದ್ವಿತೀಯ ನಾಯಕರಾಗಿರುವುದಕ್ಕೇ ತಮ್ಮ ಶ್ರಮ ಮೀಸಲು. ಹಲವಾರು ಬಾರಿ ಅವಕಾಶಗಳು ಕೂಡಿಬಂದಾಗಲೂ ರಾಜಕೀಯ ನಿರಾಕರಿಸಿದ್ದೇನೆ ಎಂದರು.
ಪಕ್ಷದಿಂದ ಸವಲತ್ತುಗಳನ್ನು ಪಡೆದು ವಂಚಿಸುವುದು, ಧಮಕಿ ಹಾಕುವುದನ್ನು ಎಂದಿಗೂ ಸಹಿಸಲಾಗುವುದಿಲ್ಲ. ಜೀವವನ್ನು ಪಣವನ್ನಾಗಿಟ್ಟು ಕಾರ್ಯಕರ್ತರನ್ನು ರಕ್ಷಿಸುತ್ತೇನೆ. ಕನಕಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಏಕೈಕ ಗುರಿ ಎಂದು ಡಿ.ಕೆ.ಸುರೇಶ್ನುಡಿದರು.
ಸಭೆಯನ್ನು ಉದ್ದೇಶಿಸಿ ಜಿಪಂ ಸದಸ್ಯ ಇಕ್ಬಾಲ್ಹುಸೇನ್, ಚಿಕ್ಕಮುಕ್ಕೋಡ್ಲು ಗಣೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಸಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಸಿದ್ಧರಾಜು, ಎಂ.ಡಿ.ವಿಜಯದೇವ್, ವಿಶ್ವನಾಥ್, ಕೆ.ಎಂ.ರಾಜೇಂದ್ರ ಮಾತನಾಡಿದರು.
ಕೊಳಗೊಂಡನಹಳ್ಳಿ, ಹೊಸದುರ್ಗ, ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ಐದುನೂರಕ್ಕೂ ಹೆಚ್ಚುಮಂದಿ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.