ಚನ್ನಪಟ್ಟಣ: ಚುನಾವಣಾ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವ ತಾಲೂಕು ಆಡಳಿತ ರಾಜಕೀಯ ಮುಖಂಡರು ಮತ್ತು ಸಂಭವನೀಯ ಅಭ್ಯರ್ಥಿಗಳ ಪ್ರವಾಸ, ಪ್ರಚಾರ ಸಭೆಯ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದೆ. ಚುನಾವಣೆಗೆ 36 ದಿನ ಬಾಕಿ ಉಳಿದಿರುವಾಗಲೇ ಕ್ಷೇತ್ರಲ್ಲಿ ಚುನಾವಣಾ ಜ್ವರ ತೀವ್ರಗೊಂಡಿರುವುದನ್ನು ಮನಗಂಡಿರುವ ಚುನಾವಣಾಧಿಕಾರಿಗಳು ಮಾದರಿ ನೀತಿ ಸಂಹಿತೆಯ ಪಾಲನೆಗೆ ಅಧಿಕಾರಿಗಳ ದಂಡನ್ನು ಹಳ್ಳಿಗಳೆಡೆಗೆ ಅಟ್ಟಿದೆ. ತಾಲೂಕಿನ ಕೆಲ ಗ್ರಾ.ಪಂ ಕೆಂದ್ರಗಳಲ್ಲಿ ಪಕ್ಷದ ಮುಖಂಡರ ಸಭೆ ನಡೆಸಲು ಮುಂದಾದ ಅನಿತಾಕುಮಾರಸ್ವಾಮಿ ಜತೆ ತೆರಳಿದ್ದ ಮುಖಂಡರ ವಾಹನಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾದಗ ಜೆಡಿಎಸ್ ಮುಖಂಡರು ಮತ್ತು ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.