8 ಅಭ್ಯರ್ಥಿಗಳ ಹಣೆಬರೆಹ ಇಂದು ನಿರ್ಧಾರ
ದೊಡ್ಡಬಳ್ಳಾಪುರ: ಭಾನುವಾರ ನಡೆಯುತ್ತಿರುವ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 8 ಮಂದಿ ಅಭ್ಯರ್ಥಿಗಳ ಹಣೆಬರೆಹ ನಿರ್ಧಾರವಾಗಲಿದೆ. ತೀವ್ರ ಕುತೂಹಲ ಕೆರಳಿಸಿರುವ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಗಳು ಪ್ರತಿಷ್ಠೆ ಪಣಕ್ಕಿದ್ದರೆ, ಕೆಲ ಅಭ್ಯರ್ಥಿಗಳು ಅಸ್ತಿತ್ವದ ಉಳಿವಿಗಾಗಿ ಸ್ಪರ್ಧೆಯಲ್ಲಿರುವುದು ನಿಚ್ಚಳವಾಗಿದೆ.
ಗೆಲವು ಎಲ್ಲರ ಗುರಿಯಾಗಿದ್ದರೂ ಗೆಲ್ಲುವ ಅಭ್ಯರ್ಥಿ ಹಣೆಬರೆಹ ನಿರ್ಧರಿಸುವುದು ಸೋಲುವ ಅಭ್ಯರ್ಥಿ ಎಂಬುದು ಈ ಬಾರಿಯ ವಿಶೇಷ. ಯಾರು ಎಷ್ಟು ಮತ ಪಡೆಯುತ್ತಾರೆ ಎಂಬುದು ಗೆಲ್ಲುವ ಕುದುರೆಯ ಓಟಕ್ಕೆ ಪುಷ್ಟಿಕೊಡುವ ಪ್ರಮುಖ ಅಂಶ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಬಾರಿಯ ಚುನಾವಣಾ ಅಖಾಡದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ಪ್ರಬಲ ಸ್ಪರ್ಧೆ ಇದೆ. ಜೊತೆಗೆ ಕೆಜೆಪಿ, ಸಿಪಿಐ(ಎಂ), ಬಿಎಸ್ಪಿ, ಬಿಎಸ್‌ಆರ್ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಕೂಡ ಅಖಾಡದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ವೇದಿಕೆ ಸಜ್ಜಾಗಿದೆ.
ಭವಿಷ್ಯ ನಿರ್ಧಾರ: ಬಿಜೆಪಿಯಿಂದ ಸ್ಪರ್ಧಿಸಿರುವ ಹಾಲಿ ಶಾಸಕ ಜೆ.ನರಸಿಂಹಸ್ವಾಮಿ, ಕಾಂಗ್ರೆಸ್‌ನಿಂದ ಅಖಾಡ ಪ್ರವೇಶಿಸಿರುವ ಅಪ್ಪಕಾರನಹಳ್ಳಿ ಟಿ.ವೆಂಕಟರಮಣಯ್ಯ, ಜೆಡಿಎಸ್‌ನಿಂದ ಅದೃಷ್ಟ ಪರೀಕ್ಷೆಗೆ ಸಜ್ಜಾಗಿರುವ ಸಿ.ಚನ್ನಿಗಪ್ಪ, ಜೆಡಿಎಸ್ ಟಿಕೆಟ್ ವಂಚಿತರಾಗಿ ಬಂಡಾಯವೆದ್ದು ಪಕ್ಷೇತರವಾಗಿ ಸ್ಪರ್ಧಿಸಿರುವ ಬಿ.ಮುನೇಗೌಡ, ಕೆಜೆಪಿಯಿಂದ ಸ್ಪರ್ಧೆಯಲ್ಲಿರುವ ಚಿತ್ರಸಾಹಿತಿ ವಿ.ನಾಗೇಂದ್ರಪ್ರಸಾದ್, ಸಿಪಿಐ(ಎಂ)ನ ಸ್ಪರ್ಧಿ, ಕಾರ್ಮಿಕ ಹೋರಾಟಗಾರ ಆರ್.ಚಂದ್ರತೇಜಸ್ವಿ, ಬಿಎಸ್ಪಿಯ ಪುರುಷೋತ್ತಮ್, ಬಿಎಸ್‌ಆರ್‌ನ ಕುಮಾರ್ ಸೇರಿದಂತೆ 8 ಮಂದಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಮೂರು ಬಾರಿ ಪ್ರತಿನಿಧಿಸಿದ ಗೌರವ: ನರಸಿಂಹಸ್ವಾಮಿ ಸತತ 3 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಸಿ.ಚನ್ನಿಗಪ್ಪ 2008ರಲ್ಲಿ ನರಸಿಂಹಸ್ವಾಮಿ ವಿರುದ್ಧ ಪ್ರಬಲ ಸ್ಪರ್ಧೆಯೊಡ್ಡಿ ಸೋಲುಂಡಿದ್ದರು. ಉಪಚುನಾವಣೆಯಲ್ಲಿ ಬಿ.ಮುನೇಗೌಡ ಸ್ಪರ್ಧಿಸಿ 3ನೇ ಸ್ಥಾನ ಪಡೆದಿದ್ದರು. ಉಳಿದಂತೆ ಸಿಪಿಐ (ಎಂ)ನ ಚಂದ್ರತೇಜಸ್ವಿ, ಬಿಎಸ್ಪಿಯ ಪುರುಷೋತ್ತಮ್ ಮತ್ತು ಬಿಎಸ್‌ಆರ್‌ನ ಕುಮಾರ್ ಈ ಮೂವರೂ 2ನೇ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನ ಟಿ.ವೆಂಕಟರಮಣಯ್ಯ ಮತ್ತು ಕೆಜೆಪಿಯ ನಾಗೇಂದ್ರಪ್ರಸಾದ್‌ಗೆ ಇದು ಮೊದಲ ಚುನಾವಣೆ. ಹೀಗಾಗಿ ಅದೃಷ್ಟ ಪರೀಕ್ಷೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಅರಿಯಲು ಮೇ 8ರವೆರೆಗೆ ಕಾಯಬೇಕಷ್ಟೆ.
ಹಣದ ಹೊಳೆ: ಕ್ಷೇತ್ರದಲ್ಲಿ ಈಗಾಗಲೇ ಮತದಾರರ ಓಲೈಕೆ ಬಹುತೇಕ ಕೊನೆಯ ಹಂತದಲ್ಲಿದ್ದು, ಪ್ರಮುಖ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಸ್ಪರ್ಧಿಗಳು ತಮ್ಮ ಕಾರ್ಯಕರ್ತರ ಮೂಲಕ ಮತದಾರರ ಮನೆಬಾಗಿಲಿಗೆ ಪ್ರತಿ ಮತಕ್ಕೆ 500, 400, 200 ರು.ಗಳಂತೆ ಹಣ ಹಂಚುತ್ತಿದ್ದಾರೆ. ಜೊತೆಗೆ ಹೆಂಡದ ಹಂಚಿಕೆ ಕೂಡ ಎಗ್ಗಿಲ್ಲದೆ ನಡೆಯುತ್ತಿದೆ. ಪಕ್ಷೇತರ ಅಭ್ಯರ್ಥಿಗಳು ಕೂಡ ಹಣ ಹಂಚಿಕೆಯಲ್ಲಿ ಹಿಂದೆ ಬಿದ್ದಿಲ್ಲ ಎಂಬುದು ವಿಶೇಷ. ಕ್ಷೇತ್ರದಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಕೋಟಿಗಟ್ಟಲೆ ಹಣ ಹರಿಯುತ್ತಿರುವುದು ಹೇಗೆ ಎಂಬುದು ಪ್ರಜ್ಞಾವಂತ ಮತದಾರರ ಪ್ರಶ್ನೆಯಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಆಯೋಗ ಮಹತ್ವದ ಪಾತ್ರ ವಹಿಸಿದ್ದರೂ ಚುನಾವಣಾ ಹಿಂದಿನ ದಿನ ಈ ರೀತಿಯಾಗಿ ಹಣ ಹಂಚಿಕೆ ಮಾಡುವುದನ್ನು ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಆಯೋಗ ಯೋಚಿಸಬೇಕು ಎಂದು ಅನೇಕ ಸಂಘಟನೆಗಳು ಮತ್ತು ಪ್ರಾಜ್ಞ ಮತದಾರರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

