ಬೆಂಗಳೂರು ಗ್ರಾಮಾಂತರ

ಬಾಡೂಟ, ಕಾಂಚಾಣ ಆಟ

Published On :

ಕ.ಪ್ರ. ವಾರ್ತೆ   ರಾಮನಗರ   ಮೇ 5-
ಚುನಾವಣಾ ಆಯೋಗದ ಬಿಗಿ ಕ್ರಮದಿಂದ ಬಳುವಳಿಗಳ ಹಂಚಿಕೆಗಷ್ಟೇ ಕೊಂಚ ಮಟ್ಟಿನ ಕಡಿವಾಣ ಬಿದ್ದಿತು. ಎಲ್ಲೆಡೆ ಹಣದ ಹೊಳೆಯೇ ಹರಿದಿದ್ದು, ಮತಗಟ್ಟೆ ಹೊರಗೂ ಕಾಂಚಾಣ ಮಹಿಮೆ ಮುಂದುವರೆದಿತ್ತು. ಕೆಲವೆಡೆ ಬಾಡೂಟದ ಗಮಲು ಮೂಗಿಗೆ ಬಡಿಯುತ್ತಿತ್ತು.  
ಅಲ್ಲಲ್ಲಿ ಸಣ್ಣ ಮೊತ್ತವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರೆ, ದೊಡ್ಡ ಮೊತ್ತದ ಹಣ ಮತದಾರರ ಮನೆಗಳಿಗೆ ಸರಾಗವಾಗಿ ತಲುಪಿದೆ. ಈ ಬಾರಿ ಬಹುತೇಕ ಕಡೆ ಮತದಾನದ ಮುನ್ನಾ ರಾತ್ರಿಯೇ ಹಣದ ಬಟವಾಡೆ ನಡೆದಿದೆ.
ಪ್ರಮುಖ ಅಭ್ಯರ್ಥಿಗಳು ತಲಾವಾರು ರು.200 ರಿಂದ 500ರವರೆಗೂ ಹಣ ಹಂಚಿಕೆ ಮಾಡಿದ್ದಾರೆನ್ನುವ ಮಾತು ರಾಜಕೀಯ ವಲಯದಲ್ಲಿ ಪ್ರಸ್ತಾಪವಾಗುತ್ತಿದೆ. ಪ್ರತಿ ಕ್ಷೇತ್ರದಲ್ಲೂ ಅಧಿಕಾರಿಗಳ ದಂಡು ಬೀಡು ಬಿಟ್ಟಿದ್ದಾಗ್ಯೂ ಮತಕ್ಕಾಗಿ ಹಣ ಸ್ವೀಕರಿಸಿದ ಯಾವೊಬ್ಬ ವ್ಯಕ್ತಿ ಮೇಲೂ ಪ್ರಕರಣ ದಾಖಲಾಗದಿರುವುದು ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಶನಿವಾರ ರಾತ್ರಿಯಿಡೀ ರಾಜಕೀಯ ಕಾರ್ಯಕರ್ತರ ಬರುವಿಕೆಗಾಗಿ ಹಲವೆಡೆ ಮತದಾರರು ಕದ ತೆರೆದು ಕಾಯುತ್ತಿದ್ದರು. ಅಲ್ಲಲ್ಲಿ ವಸ್ತುಗಳ ಬಳುವಳಿ, ಕೂಪನ್ ಮೂಲಕ ಕೋಳಿ ಅಥವಾ ಮಾಂಸ ಸರಬರಾಜು ನಡೆದಿರುವ ಬಗ್ಗೆ ಮಾಹಿತಿಗಳು ಹೊರ ಬರಲಾರಂಭಿಸಿವೆ.
ಬಾಡೂಟದ ಗಮಲು: ಮತಗಟ್ಟೆ ಹೊರಗೆ ಮತಯಾಚನೆಗೆ ಸೇರಿದ್ದ ಕಾರ್ಯಕರ್ತರು ಮತ್ತು ಅಲ್ಲಲ್ಲಿ ಮತದಾರರಿಗೆ ಪ್ರಾಯೋಜಿತ ಬಾಡೂಟ ವ್ಯವಸ್ಥೆ ಎಗ್ಗಿಲ್ಲದೆ ನಡೆದಿದೆ. ಈ ಬಾರಿ ರಾಜಾರೋಷವಾಗಿ ಅಡುಗೆ ಸಿದ್ಧಪಡಿಸಿ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲು ಮಾತ್ರವೇ ಸಾಧ್ಯವಾಗಲಿಲ್ಲ. ಸ್ಥಳೀಯವಾಗಿರುವ ಮಾಂಸಾಹಾರಿ ಹೋಟೆಲ್, ಗೌಪ್ಯ ಸ್ಥಳಗಳಲ್ಲಿ ಅಡುಗೆಯನ್ನು ಸಿದ್ಧಪಡಿಸಿ ಪ್ಯಾಕೆಟ್ ಮೂಲಕ ಸರಬರಾಜು ಮಾಡಲಾಗಿದೆ. ಅಲ್ಲಲ್ಲಿ ಇದು ಗಮನಕ್ಕೆ ಬಂದಿದ್ದರೂ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಧಿಕಾರಿಗಳು ಪ್ರಕರಣ ದಾಖಲಿಸಲಾಗದೆ ಕೈ ಚಲ್ಲಿದ್ದೂ ಉಂಟು.
ಪ್ರಮಾಣದ ಹಾವಳಿ: ಹಣ ಹಂಚಿಕೆ ಮಾಡುವ ಹಂತದಲ್ಲಿ ರಾಜಕೀಯ ಕಾರ್ಯಕರ್ತರು ಮತ್ತು ಅಭ್ಯರ್ಥಿ ಬೆಂಬಲಿಗರು ಮತದಾರರಿಂದ ಆಣೆ, ಪ್ರಮಾಣ ಮಾಡಿಸಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಶೇಕಡ 75ಕ್ಕೂ ಅಧಿಕ ಮತದಾರರಿಗೆ 2-3 ಅಭ್ಯರ್ಥಿ ಕಡೆಯಿಂದ ಹಣ ಕೈ ಸೇರಿದೆ. ಬಳುವಳಿಗಳು ಸೀಮಿತ ಪ್ರದೇಶದಲ್ಲಿ ಭಾನುವಾರ ನಸುಕಿನಲ್ಲಿ ಮನೆಗಳನ್ನು ತಲುಪಿವೆ.  ಚನ್ನಪಟ್ಟಣ ಕ್ಷೇತ್ರ ಹೊರತಾಗಿ ಉಳಿದ ಮೂರು ಕ್ಷೇತ್ರಗಳಲ್ಲಿ ಕಳೆದ ಚುನಾವಣೆಗಿಂತ ದುಪ್ಪಟ್ಟು ಹಣ ಮತದಾರರಿಗೆ ಲಭ್ಯವಾಗಿದೆ. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಖಾತೆಗೆ ನಗದು ಜಮೆ ಮಾಡಿದರೆ ಸಿಕ್ಕಿ ಬೀಳುವ ಸಂಭವವಿದ್ದ ಕಾರಣ ಸ್ಥಳೀಯ ಕಾರ್ಯಕರ್ತರ ಮೂಲಕ ನೇರವಾಗಿ ತಲುಪಿಸಲಾಗಿದೆ.
ಮದ್ಯದ ದಾಸ್ತಾನು: ಚುನಾವಣೆ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಒಣ ದಿನದಲ್ಲಿ ಮದ್ಯ ದಾಸ್ತಾನು, ಸಾಗಣೆ ಮತ್ತು ಸರಬರಾಜು ನಿಷೇಧಿಸಲಾಗಿತ್ತು.
ಮದ್ಯದಂಗಡಿಗಳ ಕದ ಮುಚ್ಚುವ ಮುನ್ನವೇ ಎಲ್ಲೆಡೆ ಅಭ್ಯರ್ಥಿಗಳ ಬೆಂಬಲಿಗರು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡಿದ್ದರು. ಗೌಪ್ಯ ಸ್ಥಳಗಳಲ್ಲಿ ಸಂಗ್ರಹಿಸಿದ್ದ ಮದ್ಯವನ್ನು ಮತದಾನದ ದಿನ ಮತ್ತು ಮುನ್ನಾ ದಿನ ಮತದಾರರಿಗೆ ಹಂಚಿದ್ದಾರೆ. ಹಲವು ಮತಗಟ್ಟೆಗಳಲ್ಲಿ ಮದ್ಯದ ನಿಶಾಬಾಜಿಯಲ್ಲಿ ತೇಲಾಡುವವರು ಸಾಕಷ್ಟಿದ್ದರು. ಆಯೋಗ ಚಾಪೆ ಕೆಳಗೆ ನುಗ್ಗಿದರೆ, ರಾಜಕೀಯ ವ್ಯವಸ್ಥೆಯಲ್ಲಿರುವ ಮಂದಿ ರಂಗೋಲಿ ಕೆಳಗೆ ನುಸುಳಿದ್ದಾರೆ.
ಈ ಜಿಲ್ಲಾದ್ಯಂತ ನಡೆದಿರುವ ಅಕ್ರಮಗಳಿಗೆ ಲೆಕ್ಕವೇ ಇಲ್ಲ. ಹಣ, ಬಳುವಳಿ, ಮದ್ಯದ ಹಂಚಿಕೆ ಮತ್ತು ಮತದಾರರ ಮೇಲೆ ವಾಮ ಮಾರ್ಗದಿಂದ ಪ್ರಭಾವ ಬೀರುವ ಕೆಲಸಗಳಿಗೆ ಸಾಕ್ಷ್ಯ ಅಲಭ್ಯ. ಹೀಗಾಗಿ ಎಷ್ಟೇ ಜಾಗತಿ ಮೂಡಿಸಿದರೂ ಪ್ರಯೋಜನವಾಗಿಲ್ಲ.



ಚಾಲಾಕಿ ಏಜೆಂಟರು
ಅಲ್ಲಲ್ಲಿ ಕೆಲ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತಗಟ್ಟೆ ಏಜೆಂಟರಾಗಲು ಪಕ್ಷೇತರರು, ರೇಸ್‌ನಲ್ಲಿ ಇರದ ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳಿಂದ ಏಜೆಂಟ್ ಫಾರಂ ಪಡೆದುಕೊಂಡಿದ್ದರು. ಇಂತಹ ನಿದರ್ಶನಗಳು ಮಾಗಡಿ, ಚನ್ನಪಟ್ಟಣ ಸಹಿತ ಎಲ್ಲೆಡೆ ಕಂಡು ಬಂದಿವೆ.  ಮಾಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖ ಪಕ್ಷವೊಂದರ ಪ್ರಭಾವಿ ಮುಖಂಡರು ಅನ್ಯ ಪಕ್ಷದ ಏಜೆಂಟ್ ಫಾರಂ ಪಡೆದುಕೊಂಡು, ತಮ್ಮ ಪಕ್ಷದ ಪರವಾಗಿ ಮತಗಟ್ಟೆಯಲ್ಲಿ ಧ್ವನಿಯಾಗಿದ್ದರು. ಇಂತಹ ಚಾಲಾಕಿ ಕೆಲಸನಿರತ ಕಾರ್ಯಕರ್ತರು ಚನ್ನಪಟ್ಟಣ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿದ್ದರು.


ಮತಗಟ್ಟೆ ಬಳಿ ಬಂದ ಕುಮಾರಸ್ವಾಮಿ
ರಾಮನಗರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲವಿಗಾಗಿ ಹೋರಾಟ ನಡೆಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ಮಾಗಡಿ ಕ್ಷೇತ್ರದಲ್ಲಿ ಮತ ಚಲಾಯಿಸಿ ತಮ್ಮ ಸ್ಪರ್ಧೆಯ ರಾಮನಗರ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು.  ಬಹಿರಂಗ ಪ್ರಚಾರ ಅಂತ್ಯಕ್ಕೆ ಮುನ್ನಾ ದಿನ ಮಾಗಡಿ ಕ್ಷೇತ್ರದಲ್ಲಿ ರೋಡ್ಶೋ ಮುಗಿಸಿದ್ದ ಕುಮಾರಸ್ವಾಮಿ ರಾಮನಗರದಲ್ಲಿ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆ ವೇಳೆ ಬಸ್ ನಿಲ್ದಾಣ ಬಳಿಯ ಐಜೂರು ವೃತ್ತದಲ್ಲಿ ತೆರೆದ ವಾಹನವೇರಿ ಹತ್ತು ನಿಮಿಷ ಭಾಷಣ ಮಾಡಿದ್ದರು.  ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮೆರವಣಿಗೆ ನಡೆಸಿದ್ದನ್ನು ಹೊರತುಪಡಿಸಿದರೆ ಐಜೂರು ವಣತ್ತದಲ್ಲಿ ಮಾಡಿದ 10 ನಿಮಿಷದ ಭಾಷಣವಷ್ಟೇ ಈ ಬಾರಿಯ ಅವರ ಚುನಾವಣಾ ಪ್ರಚಾರವಾಗಿತ್ತು.  


ಪ್ರಯಾಣಿಕರ ಪರದಾಟ
ಸಾರಿಗೆ ಬಸ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಂಡಿದ್ದ ಹಿನ್ನೆಲೆಯಲ್ಲಿ ಹೆದ್ದಾರಿ ಸಹಿತ ಗ್ರಾಮೀಣ ಮಾರ್ಗಗಳಲ್ಲಿ ಪ್ರಯಾಣಿಕರು ಪರದಾಡಿದರು. ಹೆದ್ದಾರಿಯಲ್ಲೇ ಬಸ್ ಟಾಪ್ ಪ್ರಯಾಣ ಕಂಡುಬಂದಿತು.

- ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.