ಬೆಂಗಳೂರು ಗ್ರಾಮಾಂತರ

ಮಾಗಡಿಯಲ್ಲಿ ಶಾಂತಿಯುತ ಶೇ.74 ಮತದಾನ

Published On :

ಕ.ಪ್ರ.ವಾರ್ತೆ   ಮಾಗಡಿ   ಮೇ 5
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಶೇ.74 ರಷ್ಟು ಮತದಾನ ನಡೆದಿರುವುದಾಗಿ ಉಪ ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ್ ಡಾ. ಬಿ.ಆರ್. ಹರೀಶ್ ನಾಯಕ್ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಮತದಾನ ಬಹಳ ಬಿರುಸಿನಿಂದ ನಡೆದಿತ್ತು. ಮತ ಚಲಾಯಿಸಲು ಗುಂಪು, ಗುಂಪಾಗಿ ಆಗಮಿಸಿದ ಮತದಾರರು ಸರದಿ ಸಾಲಿನಲ್ಲಿ ನಿಂತು, ಬಹಳ ಹುರುಪಿನಿಂದ ತಮ್ಮ ಹಕ್ಕನ್ನು ಚಲಾಯಿಸಿದರು.  ಮಧ್ಯಾಹ್ನದ ವೇಳೆ ಮತದಾನ ಮಂದಗತಿಯಲ್ಲಿ ಸಾಗಿತ್ತು. ಜೆಡಿಎಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ತಮ್ಮ ಸ್ವಗ್ರಾಮ ಹುಲೀಕಟ್ಟೆಯ ಮತಗಟ್ಟೆಯಲ್ಲಿ ಬೆಳಗ್ಗೆ 8.25 ಕ್ಕೆ ಮತ ಚಲಾಯಿಸಿದರು. ಅವರ ತಾಯಿ ಶಾರದಮ್ಮ, ಪತ್ನಿ ರಾಧ ಬಾಲಕೃಷ್ಣ, ಚಿಕ್ಕಪ್ಪ ಎಚ್.ಜಿ.ನಾರಾಯಣಸ್ವಾಮಿ, ಬಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್. ಅಶೋಕ್ ಸೇರಿದಂತೆ ಇತರೆ ಸದಸ್ಯರು ಹುಲೀಕಟ್ಟೆ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು, ಪತ್ನಿ ಲಕ್ಷ್ಮೀ ಮಂಜುನಾಥ್ ಬಿಡದಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಕೆಜೆಪಿ ಅಭ್ಯರ್ಥಿ ಎಚ್.ಎಂ. ಕೃಷ್ಣಮೂರ್ತಿ ಹುಚ್ಚಹನುಮೇಗೌಡನಪಾಳ್ಯದಲ್ಲಿ ಮತದಾನ ಮಾಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ಸ್ವಗ್ರಾಮದ ಬಾಚೇನಹಟ್ಟಿ ಪಂಚಾಯ್ತಿಯಲ್ಲಿ ಮತ ಚಲಾಯಿಸಿದರು.
ಶತಾಯುಷಿಗಳ ಮತದಾನ..: ಆಶ್ರಮವೊಂದರ ಶತಾಯುಷಿ ಸಾದ್ವಿ ನಾರಾಯಣಮ್ಮ(105) ಮಾಗಡಿ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರೆ, ದುಡುಪನಹಳ್ಳಿ ಗ್ರಾಮದ ಲಕ್ಷ್ಮಮ್ಮ (106) ಅವರು ಬಾಚೇನಹಟ್ಟಿ ಮತಗಟ್ಟೆಗೆ ಆಗಮಿಸಿ ಉತ್ಸಾಹದಿಂದ ಮತದಾನ ಮಾಡಿದರು.  ಕ್ಷೇತ್ರದ ಒಟ್ಟು 288 ಮತಗಟ್ಟೆಗಳಲ್ಲೂ ಮತಯಂತ್ರಗಳು ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದ್ದು, ಎಲ್ಲಿಯೂ ಲೋಪದೋಷಗಳು ಕಂಡು ಬಂದಿಲ್ಲ. ಚುನಾವಣಾ ವಿಚಕ್ಷಣ ದಳ ತಂಡಗಳು ಆಗಾಗ್ಗೆ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದುದು ಕಂಡು ಬಂತು.  ಕ್ಷೇತ್ರದಲ್ಲಿ ವ್ಯಾಪಕ ಪೊಲೀಸ್ ಬಿಗಿ ಬಂದೋಬಸ್ತು ಏರ್ಪಡಿಸಿದ್ದರಿಂದ, ಗವಿನಾಗಮಂಗಲ ಇತರೆಡೆ ಸಣ್ಣಪುಟ್ಟ ಹೊರತುಪಡಿಸಿದರೆ ಅಂತಹ ಅಹಿತಕರ ಘಟನೆ ನಡೆದಿಲ್ಲ.
ಮತ ಚಲಾಯಿಸದ ಮಾಜಿ ಸಚಿವ...: ಮಾಗಡಿ ವಿಧಾನ ಸಭಾ ಕ್ಷೇತ್ರದ ಹೊಸಪೇಟೆ ಗ್ರಾಮದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಹೆಸರು ಮತಪಟ್ಟಿಯಲಿದ್ದರೂ ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಹಕ್ಕನ್ನು ಚಲಾಯಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.